ಕಾವ್ಯಸಂಗಾತಿ
ಕವಿತೆ ನಗುತ್ತದೆ
ಅನುರಾಧಾ ಶಿವಪ್ರಕಾಶ್
.
ಎದೆಯ ತುಂಬಿದ ಮಾತುಗಳು
ಭಾವಗಳು ಉಕ್ಕಿಸಿ ಹರಿದಾಗ
ಖಾಲಿ ಹಾಳೆಯಲಿ ಪ್ರಸವಿಸಿ
ಮಡಿಲ ಮಗುವ ಕಂಡಂತೆ
ಗರ್ವ ಪಟ್ಟುಕೊಂಡಾಗಲೆಲ್ಲಾ
ನನ್ನ ಕವಿತೆ ನಗುತ್ತದೆ
ಯಾರದೋ ಗತ ಜೀವನ್ದ ಚರಿತ್ರೆ
ಯಾರದೋ ನಿತ್ಯ ನೋವಿನ ಕತೆ
ಇನ್ಯಾರದೋ ನಲಿವಿನ ಚಿಲುಮೆ
ಸಾಲುಗಟ್ಟಲೆ ಬರೆದು ಎಸೆದಾಗ
ಭಾವ ತುಂಬಿದೆನೆಂಬ ಹಮ್ಮಿನಲಿ
ನನ್ನ ಕವಿತೆ ನಗುತ್ತದೆ
ಭಾವ ಭಾರವನೆಲ್ಲಾ
ಇಳಿಸಿ ಹಾಯಾಗಿ
ಹಗುರಾಗಿ ಮನ ಹೂವಾಗಿ
ಆನಂದದಮಲಿನಲಿ ತೇಲುತಿರೆ
ಇನ್ಯಾರದೋ ನಾಲಿಗೆಗೆ
ಅಗ್ಗದ ಸರಕಾದಾಗಲೂ
ನನ್ನ ಕವಿತೆ ನಗುತ್ತದೆ
ಕಟ್ಟೆಯೊಡದ ಭಾವಗಳೆಲ್ಲಾ
ಕೊನೆಗೊಮ್ಮೆ ಮರಳಿ ಬಂದು
ಮತ್ತದೇ ನನ್ನದೇ ಲೇಖನಿಯ
ಕೈಗೆತ್ತಿಕೊಂಡಾಗ …….
ಆಹಾ!! ಅದೆಂತ ಅನುಭೂತಿ!!
ನನ್ನದೇ ಭಾವಗಳು ಪದಕಿಳಿದಾಗ
ನನ್ನದೇ ಕವಿತೆ ನನ್ನೊಡನೆ ನಗುತ್ತದೆ