ಗಜಲ್ ಜುಗಲ್ ಬಂದಿ

ಕಾವ್ಯ ಸಂಗಾತಿ

ಅಶೋಕ ಬಾಬು ಟೇಕಲ್ ಮತ್ತು ಆಸೀಫಾ

ಗಜಲ್ ಜುಗಲ್ ಬಂದಿ

pastel colors

ಗಜಲ್

ಬುವಿಯಂಥ ದಯಾಮಯಿ ಮನದವಳು ನನ್ನರಸಿ
ಬೆಳ್ಮುಗಿಲ ಅಂಬರದಂಥ ಆಸರೆಯವಳು ನನ್ನರಸಿ

ಒಂದಿನಿತು ಒತ್ತಾಸೆಗಳಿಗೆ ಬೊಗಸೆ ಒಡ್ಡಿ ನಿಂದವಳಲ್ಲ
ಮಂದಾರ ಕೇದಿಗೆ ಪುಷ್ಪದಂಥ ಚೆಲುವೆಯವಳು ನನ್ನರಸಿ

ಜಗವೇ ತನ್ನೆದುರು ಶರಣಾಗುವಂತೆ ಜೊತೆಯಾದವಳು
ಬಾಳ ಹಾದಿಯ ಏರಿಳಿತಗಳಿಗೆ ಎದೆಯೊಡ್ಡಿದವಳು ನನ್ನರಸಿ

ತವರು ತಲೆಯೆತ್ತಿ ನಡೆವಂತೆ ಆರತಿ, ಕೀರ್ತಿ ದೀಪ ಬೆಳಗಿದವಳು
ಚೆಂಗುಲಾಬಿಯಂತೆ ಒಲುಮೆಗೆ ಗರಿಮೆ ಮೂಡಿಸಿದವಳು ನನ್ನರಸಿ

ಹಗಲಿರುಳೆನ್ನದೆ ಪ್ರತಿ ಚಡಪಡಿಕೆಗೂ ಭಾವ ಬೆಸೆದು ಸಲುಹಿದಳು
ಅಬಾಟೇ ಹೃದಯ ಮಂದಿರ ಆರಾಧ್ಯ ದೈವವಾದವಳು ನನ್ನರಸಿ

****

ಅಶೋಕ ಬಾಬು ಟೇಕಲ್

ಗಜಲ್

ಅಂಧಕಾರದ ಬದುಕಿನಲ್ಲಿ ಬೆಳಕಾಗಿ ಬಂದವಳು ನನ್ನರಸಿ
ಕೈಹಿಡಿದು ಜಗದಲ್ಲಿ ಜೊತೆಯಾಗಿ ನಿಂದವಳು ನನ್ನರಸಿ

ಒನಪು ಒಯ್ಯಾರದ ರತಿ,ಅತಿ ಸುಂದರೀ ನನ್ನ ಒಡತಿ
ನನ್ನೊಳಗೆ ನೆಲೆಯಾಗಿ ಉಸಿರಾಗಿ ನಿಂತವಳು ನನ್ನರಿಸಿ

ಮುಂಜಾನೆಯ ಮಂಜು ಸಂಜೆಯ ಹೊನ್ನಾವರ ಕೆಂಪು
ಮುಳ್ಳು ಹಾದಿಗೂ ಹೂ ಹಾಸಿ ಹೆಜ್ಜೆ ಇಟ್ಟವಳು ನನ್ನರಸಿ

ಚಂದ್ರನಿಗೂ ಮೀರಿದ ಬೆಳದಿಂಗಳು ಅವಳ ಮೊಗದಲಿ
ನೋವಿನಲ್ಲಿ ನಲುಗಿದರೂ ಮುನಿಯದವಳು ನನ್ನರಸಿ

ಪ್ರೀತಿಯ ಮಳೆಯಲ್ಲಿ ನೆನೆಸಿ ಬಿಸಿಯುಸಿರ ಸೋಕಿಸುವಳು
ಆಸೀಯ ಮನದಂಗಳದ ಮಲ್ಲಿಗೆಯ ಕಂಪಿನವಳು ನನ್ನರಸಿ

****

ಆಸೀಫಾ


One thought on “ಗಜಲ್ ಜುಗಲ್ ಬಂದಿ

Leave a Reply

Back To Top