ಕಾವ್ಯಸಂಗಾತಿ
ಜನ್ಮ
ಅನಿತಾ
ಜಗದಲಿ ಜನ್ಮವೆತ್ತ ಜಂಭ,
ಒಳ್ಳೆತನದ ಪರದೆಯ ಹಿಂದಿತ್ತು
ಆರಾಧಿಸುವ, ಅಭಿಮಾನಿಸುವ ಸಾಲಲಿ
ಒಂಟಿಯಾಗಿ ನಿಲ್ಲುವ ಹಾದಿಯಲ್ಲಿತ್ತು!
ಲೋಕದ ಕನಸುಗಳ ಜೀವನದ ಹೂದಾನಿಯಲಿ
ಕಟ್ಟಿಟ್ಟು ದಿನವೂ ನೀರೆರೆಯುವ ಸಂಭ್ರಮ,
ಜನ್ಮ, ಜನ್ಮದಲೂ ಆತ್ಮದ ಹೆಸರು
ಅಚ್ಚಳಿಯದೆ, ಹಚ್ಚ ಹಸಿರಲಿ ಮಿಂದೇಳಿಸಬೇಕೆಂದ ಸಂತಸ!
ನಾನ್ಯಾರೆಂದು ತಿಳಿಯುವ ಮೊದಲೇ..
ಪ್ರಶ್ನೆಗೆ ಉತ್ತರ..
ಮುಗಿದಿತ್ತು ಒಂದಾರು ಜನ್ಮದ ಅವತಾರ!
ಕೊನೆ ಎಂಬಂತೆ ಬಂದು ನಿಂತಿಹೆನು
ಸಪ್ತ ಹುಟ್ಟೆಂಬ ಆವರಣದಲಿ
ಮನದಲಿ ಹುಟ್ಟಿದ ಅಜ್ಞಾನದ ಕಳೆಗಳ ಕಿತ್ತು ಪ್ರೀತಿಸುವ, ಬೆಲೆ ನೀಡುವ ಬೆಳೆಗೆ
ಫಲವತ್ತಾದ ನೆಲೆಯ ಅನಾವರಣದಲಿ!