ಅಂಕಣ ಸಂಗಾತಿ
ನೆನಪಿನದೋಣಿಯಲಿ
ಕೈತುತ್ತು

ಕೈತುತ್ತು ಕೊಟ್ಟವಳೇ ಐ ಲವ್ ಯೂ ಮೈ ಮದರ್ ಇಂಡಿಯಾ
ತುತ್ತಾ….ಮುತ್ತಾ……
ಏನಪ್ಪಾ ಲಲಿತ ಪ್ರಬಂಧ ಬರೀ ಎಂದರೆ ಚಲನಚಿತ್ರ ಗೀತೆ ಹಾಡ್ತಿದ್ದಾಳೆ ಇವಳು ಅಂತ ಆಶ್ಚರ್ಯನಾ? ಅಲ್ಲೇ ಇರೋದ್ರೀ ಸ್ವಾರಸ್ಯ. ಎರಡರಲ್ಲೂ ಇರುವ ಸಾಮಾನ್ಯ ಪದ ಗುರುತಿಸಿ . ಹೌದು ತುತ್ತು ಕೈತುತ್ತು ..ನಾನು ಬರೆಯ ಹೊರಟಿರುವ ವಿಷಯ ಇದೇ. ಪ್ರಪಂಚದ ಯಾವ ಪಂಚತಾರಾ ಹೋಟೆಲಿನ ಪರಮೋಚ್ಚ ತಿನಿಸಿಗಿಂತ ಹೆಚ್ಚಿನ ರುಚಿ ಅದು ಅಮ್ಮನ ಕೈತುತ್ತಿನದು. ಬಲ್ಲವರೇ ಬಲ್ಲರು ಅದರ ರುಚಿ .
ಬದುಕಿನ ಈ ಹೋರಾಟವೇ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಅಲ್ಲವೇ? ಅಮ್ಮನ ಹಾಲನ್ನು ಬಿಟ್ಟು ಬೇರೆ ಘನ ಆಹಾರ ಕೊಡುವ ಆ ಸಂದರ್ಭದಲ್ಲಿ ಅಮ್ಮನ ಹಾಲಿನ ರುಚಿಯೊಂದಿಗೆ ಮಗು ಕೈ ತುತ್ತಿನ ರುಚಿಯನ್ನು ಶುರು ಮಾಡುತ್ತದೆ. ಹೊಸ ಆಹಾರದ ವಿಸ್ಮಯ ಲೋಕದ ಕಡೆಗೆ ಕಂದನ ಪಯಣದ ಪ್ರಥಮ ಹೆಜ್ಜೆಯೇ ಈ ಕೈತುತ್ತು .ಆಗ ತಾನೇ ಗಟ್ಟಿ ಆಹಾರ ತಿನ್ನಲು ಆರಂಭಿಸುವ ಮಗುವಿಗೆ ಚೆನ್ನಾಗಿ ಕೈಯಲ್ಲಿ ಮಿದ್ದ ಬಿಸಿ ಅನ್ನಕ್ಕೆ ಒಂದೆರಡು ಮಿಳ್ಳೆ ಘಮಘಮ ತುಪ್ಪ ಹಾಕಿ ಚಿಟಿಕೆ ಉಪ್ಪು ಸೇರಿಸಿ ಕಲಿಸಿ ಪುಟ್ಟ ಪುಟ್ಟ ಉಂಡೆ ಮಾಡಿ ಬೊಚ್ಚು ಬಾಯಿಗೆ ಇಟ್ಟಾಗ ಆಹಾ! ಆ ರುಚಿ. ಇದು ಅಮ್ಮ ಮೊದಲು ತಿನ್ನಿಸುವ ಕೈತುತ್ತು. ಕಂಕುಳಲ್ಲಿ ಮಗುವನ್ನೆತ್ತಿಕೊಂಡು ಎಡಗೈಯಲ್ಲಿ ಅನ್ನದ ಬಟ್ಟಲಿಟ್ಟುಕೊಂಡು ತಿನ್ನಿಸುವ ದೃಶ್ಯ. ಹೊರಗಿನ ಪ್ರಾಣಿ ಪಕ್ಷಿಗಳನ್ನು ತೋರಿಸುತ್ತಾ ರಾತ್ರಿಯಾದರೆ ಚಂದಮಾಮನನ್ನು ತೋರಿಸುತ್ತಾ ಉಣ್ಣಿಸುವ ಅಮ್ಮಂದಿರು. ಬೆರಗಿನ ಕಣ್ಣುಗಳಿಂದ ಪ್ರಪಂಚ ನೋಡುವ ಕೂಸು ಕಂದಮ್ಮಗಳು. ನಾವು ಚಿಕ್ಕವರಿದ್ದಾಗ ಮನೆ ಮನೆಯಲ್ಲೂ ಕಾಣುತ್ತಿದ್ದ ದೃಶ್ಯ. ಹಿಂದಿನ ಎಷ್ಟೋ ಸಂಗತಿಗಳಂತೆ ಮರೆಯಾಗುತ್ತಿರುವ ನೋಟಗಳಲ್ಲೊಂದು. ಆರೋಗ್ಯ ಶುಚಿತ್ವ ಎಂಬೆಲ್ಲಾ ಹೆಸರಿಂದ ಕೈಯಲ್ಲಿ ತಿನ್ನಿಸದೇ ಎಲ್ಲಾ ಸ್ಪೂನ್ ಫೀಡಿಂಗ್ .ಹಾಗೆಯೇ ಜೀವನವೂ ಬರೀ ಸ್ಪೂನ್ ಫೀಡಿಂಗ್ ಆಗುತ್ತಾ ಹೋಗುತ್ತಿರುವುದು, ಯಾವುದನ್ನೇ ಆಗಲಿ ನಿಧಾನವಾಗಿ ಆಸ್ವಾದಿಸುವ ಮನಸ್ಸಾಗಲಿ ವ್ಯವಧಾನವಾಗಲಿ ಇರದಿರುವುದು ಆಧುನಿಕತೆಯ ಅಭಿಶಾಪವೇ?
ಇನ್ನು ಎಲ್ಲರ ಜೊತೆ ಕುಳಿತು ಊಟ ಮಾಡಬೇಕೆನ್ನುವ ಚಿಕ್ಕ ಮಗುವಿಗೆ ಜತೆಯಲ್ಲಿ ಕೂರಿಸಿ ಚಿಕ್ಕ ಮುಂಗೈಗೆ ಪುಟ್ಟ ಪುಟ್ಟ ತುತ್ತಿಟ್ಟಾಗ ತಾನೇ ತಿನ್ನುವ ಸಂಭ್ರಮದಲ್ಲಿ ಮುಖಕ್ಕೆ ಮೆತ್ತಿಕೊಂಡು ಸುತ್ತೆಲ್ಲ ಚೆಲ್ಲಾಡಿ ಉಣ್ಣುವ ಆ ಸೊಗಸಿಗೆ ಬೆಲೆ ಕಟ್ಟಲಾದೀತೆ? ಸ್ವತಂತ್ರವಾಗಿ ತಿನ್ನುವ ರೂಢಿ ಕಲಿಸುವ ಈ ಕೈ ತುತ್ತು ಮಗುವಿಗೆ ಪಾಠವೂ ಕೂಡ . ಅಮ್ಮನ ತುತ್ತು ಅಪ್ಪನ ತುತ್ತು ಅಜ್ಜಿ ತುತ್ತು ತಾತನ ತುತ್ತು ಅಕ್ಕ ಅಣ್ಣಂದಿರ ತುತ್ತು ಎಂದೆಲ್ಲಾ ಹೇಳಿ ತಿನ್ನಿಸುವಾಗ ಬಾಂಧವ್ಯಗಳ ಪರಿಚಯವೂ ಅಲ್ಲೇ ಆಗುತ್ತದೆ .ಇಂದಿನ ಈ ಕಾಲದಲ್ಲಿ ಈಗಿನ ಎಲ್ಲ ವಿಷಯಗಳಂತೆ ತಿನ್ನುವುದು ಕೂಡ ಯಾಂತ್ರಿಕ. ಅವಸರದಲ್ಲಿ ಬೆಳಿಗ್ಗೆ, ಟಿವಿ ಅಥವಾ ಮೊಬೈಲ್ ಸಾಂಗತ್ಯದಲ್ಲಿ ರಾತ್ರಿಯೂಟ ತಿನ್ನಿಸುವ ಕೆಲಸವಷ್ಟು ಮುಗಿದರೆ ಸಾಕೆಂದು ಮಗುವಿನ ಕೈಯಲ್ಲಿ ಮೊಬೈಲ್ ಕೊಟ್ಟು ಚಮಚದಲ್ಲಿ ಬಾಯಿಗೆ ಹಿಡಿಯುವ ಕ್ರಿಯೆಯಲ್ಲಿ ತಾನು ತಿನ್ನಿಸಿದ್ದೇನು ಎಂದು ಅಮ್ಮನಿಗೂ ತಿಳಿದಿರುವುದಿಲ್ಲ ಮಗುವಿಗಂತೂ ಮೊದಲೇ ಗೊತ್ತಾಗುವುದಿಲ್ಲ ಎಲ್ಲರೂ ಒಟ್ಟಿಗೆ ಊಟಕ್ಕೆ ಕುಳಿತುಕೊಳ್ಳುವ ರಿವಾಜೇ ತಪ್ಪಿ ಹೋಗಿರುವುದು ಬರೀ ನ್ಯೂಕ್ಲಿಯರ್ ಸಂಸಾರಗಳೇ ತುಂಬಿರುವುದು ನಾಗರಿಕತೆಯ ದುರಂತವೆನ್ನಬಹುದು.
ಇರುವುದನ್ನು ಹಂಚಿ ತಿನ್ನುವಂತಹ ಸಂದರ್ಭದಲ್ಲಿ ಕೈತುತ್ತು ತುಂಬಾನೇ ಅನುಕೂಲ ಸಿಂಧುವಾಗಿತ್ತು. ಈಗ ಅಂತಹ ಸಂದರ್ಭಗಳು ಕಡಿಮೆಯೇ .
ಇನ್ನು ನಮ್ಮಲ್ಲಿ ಪ್ರಚಲಿತವಿರುವ ಕೈತುತ್ತಿನ ವಿಷಯಕ್ಕೆ ಬರುತ್ತೇನೆ . ಒಬ್ಬರು ಒಂದು ದೊಡ್ಡ ಪಾತ್ರೆಯಲ್ಲಿ ಅನ್ನ ಕಲಿಸಿ ಸುತ್ತ ಅರ್ಧ ಚಂದ್ರಾಕೃತಿಯಲ್ಲಿ ಕುಳಿತವರಿಗೆ ದೊಡ್ಡ ಅಥವಾ ಚಿಕ್ಕ ತುತ್ತುಗಳನ್ನಾಗಿ ಮಾಡಿ ಅಂಗೈಗೆ ಕೊಡುವುದು ಕೈಯಿಂದ ನೇರವಾಗಿ ಆ ತುತ್ತುಗಳನ್ನು ತಿನ್ನುವುದು ಇದಕ್ಕೆ ಕೈತುತ್ತು ಎನ್ನುವುದು. ಈ ರೀತಿ ಕೈ ತುತ್ತಿನಲ್ಲಿ ಸಾಮಾನ್ಯ ತಟ್ಟೆಯಲ್ಲಿ ಹಾಕಿಕೊಂಡು ತಿನ್ನುವುದಕ್ಕಿಂತ ಸ್ವಲ್ಪ ಹೆಚ್ಚೇ ಸೇರುತ್ತದೆ . ಹಾಗಾಗಿ ನನ್ನ ಅಮ್ಮ ಬೆಳಗಿನ ಅನ್ನ ಹೆಚ್ಚಾಗಿರುವಾಗ ರಾತ್ರಿ ಹೊತ್ತು ನಮಗೆ ಕೈತುತ್ತಿನ ಆಮಿಷ ತೋರಿಸುತ್ತಿದ್ದರು. ಅನ್ನವನ್ನು ಒಂದು ಡಬರಿಗೆ ಹಾಕಿ ಅದರ ಮೇಲೆ ಹುಳಿ ಒಂದಿಷ್ಟು ಎಣ್ಣೆ ಅಥವಾ ತುಪ್ಪ ಹಾಕಿ ಕಲಸಿ ದೊಡ್ಡ ಮಕ್ಕಳಿಗೆ ದೊಡ್ಡ ತುತ್ತು ಚಿಕ್ಕಮಕ್ಕಳಿಗೆ ಚಿಕ್ಕ ತುತ್ತು ಹೀಗೆ ವಿಂಗಡಿಸಿ ಕೊಡುತ್ತಿದ್ದಾಗ ಆದೇನು ರುಚಿ! ಒಂದಾಗಿ ಕುಳಿತು ತಿನ್ನುವುದಕ್ಕೋ ಅಮ್ಮನ ಕೈರುಚಿಗೋ ಒಂದೆರಡು ತುತ್ತು ಹೆಚ್ಚಾಗಿಯೇ ಇಳಿಯುತ್ತಿತ್ತು . ಪಾತ್ರೆಯಲ್ಲಿ ಉಳಿದ ಕಡೆ ತುತ್ತು ಹಾಕುವಾಗ “ಬಳಿದವರ ಭಾಗ್ಯ” ಎನ್ನುತ್ತಿದ್ದ ನುಡಿಗಳು ಇನ್ನೂ ಕಿವಿಯಲ್ಲಿ ರಿಂಗಣಿಸುತ್ತಿವೆ . ಮನೆಗೆ ತುಂಬಾ ಜನ ಬಂದಾಗಲೂ ಅಷ್ಟೇ ರಾತ್ರಿಯ ಊಟಕ್ಕೆ ಬಯಸಿ ಬಯಸಿ ಕೈ ತುತ್ತು ಹಾಕಿಸಿಕೊಳ್ಳುತ್ತಿದ್ದೆವು. ಎಷ್ಟು ಪಾಂಗಿತವಾಗಿ ಅಂತೀರಿ. ಮೊದಲು ತೊಕ್ಕು, ಉಪ್ಪಿನಕಾಯಿರಸ, ಚಟ್ನಿಪುಡಿ, ಅನ್ನದಪುಡಿ ಯಾವುದಾದರೂ ಒಂದರಲ್ಲಿ ಕಲಿಸಿದ ಪಿಡಚೆಯನ್ನ ನಂತರ ಹುಳಿಯೋ ಕೂಟೋ ಅದರ ಅನ್ನ ತಿಳಿಸಾರಿದ್ದರೆ ಅದರದೊಂದು ಒಬ್ಬೆ ಮತ್ತೆ ಕಡೆಗೆ ಮೊಸರನ್ನ . ಕೈತುತ್ತಿನ ಮೋಹ ಒಂದಾದರೆ ಜೊತೆಗೆ ತಟ್ಟೆಗಳನ್ನು ತೊಳೆಯುವ ಶ್ರಮ ಕಡಿಮೆ ಅನ್ನೋದು ಇನ್ನೊಂದು ಸ್ವಾರ್ಥ. ಏಕೆಂದರೆ ದೊಡ್ಡ ಮಗಳಾಗಿದ್ದರಿಂದ ತಟ್ಟೆ ತೊಳೆಯುವುದು ನನಗೆ ಬೀಳುತ್ತಿದ್ದ ಕರ್ಮ.( ಆದರೆ ಅದನ್ನು ಬಾಯಿಬಿಟ್ಟು ಹೇಳದೆ ಕೈತುತ್ತಿಗೆ ದುಂಬಾಲು ಬೀಳುತ್ತಿದ್ದೆ. ಅದು ನನ್ನ ಅಂದಿನ ಡಿಪ್ಲೊಮಸಿ.
ಇನ್ನು ಕೆಲವೊಮ್ಮೆ ಬೇಸಿಗೆಯ ರಾತ್ರಿಗಳಲ್ಲಿ ಅಂಗಳದಲ್ಲೇ ರಾತ್ರಿಯ ಹೆಚ್ಚಿನ ಸಮಯ.ಅಲ್ಲೇ ಕೈತುತ್ತು ಹಾಕಿಸಿಕೊಳ್ಳುವುದು ಸಹ ಇಷ್ಟವಾದ ಕೆಲಸ. ಬೆಳದಿಂಗಳಿನ ಭೋಜನ ಏರ್ಪಾಡಾದರಂತೂ ಮೆನು ಕೈತುತ್ತಿಗೆ ಹೊಂದುವಂತಹ ಅಡುಗೆಯೇ ಇರುತ್ತಿತ್ತು. ಮುಖ್ಯವಾಗಿ ಬಿಸಿಬೇಳೆಬಾತು. ಅಕ್ಕಪಕ್ಕದವರು ಸೇರಿ ಅದಂತೂ ಕೈತುತ್ತಿನ ಹಬ್ಬವೇ. ಆ ಕೈ ತುತ್ತಿನ ರುಚಿ ಹತ್ತಿದ ಗೆಳತಿಯರು ಊಟಕ್ಕೆ ಉಳಿದರೆ ಅಮ್ಮನಿಗೆ ಕೈತುತ್ತು ಕೊಡುವಂತೆ ಕೇಳುತ್ತಿದ್ದುದು ನಮಗಷ್ಟೇ ಅಲ್ಲದೆ ಅಮ್ಮನಿಗೂ ಹೆಮ್ಮೆಯ ವಿಷಯವಾಗಿತ್ತು. ಸಾಕ್ಷಾತ್ ಅನ್ನಪೂರ್ಣೇಶ್ವರಿಯೆ ಆಗಿದ್ದ ಅಮ್ಮ ಕೊಡುತ್ತಿದ್ದ ಕೈ ತುತ್ತನ್ನು ನನ್ನ ಗೆಳತಿಯರು ಇಂದಿಗೂ ಭೇಟಿಯಾದಾಗಲೆಲ್ಲ ನೆನಪಿಸಿಕೊಳ್ಳುತ್ತಿರುತ್ತಾರೆ .
ಕೈತುತ್ತು ಅಂದರೆ ಅಜ್ಜಿ ಮನೆ ಮರೆಯಲೇ ಸಾಧ್ಯವಿಲ್ಲ. ಎರಡಕ್ಕೂ ಒಂಥರಾ ಅವಿನಾಭಾವ ಸಂಬಂಧ. ನಮ್ಮ ಅಮ್ಮನ ತಾಯಿ ಮನೆ ಅವರು ಒಟ್ಟು ಏಳು ಮಂದಿ ಸೋದರ ಸೋದರಿಯರು. ಅವರ ಮಕ್ಕಳುಗಳು ನಾವು ಹಾಗೂ ಅತ್ತೆಯ ತಾಯಿ ಮನೆ ಕಡೆಯ ಮಕ್ಕಳು ಎಲ್ಲ ಸೇರಿ ೨೦_೨೫ ಜನ ವಾನರ ಸೈನ್ಯ. ಒಂದೇ ಪಂಕ್ತಿಗೆ ತಟ್ಟೆಗಳು ಸಾಲವು .ಸುಮ್ಮನೆ ಎಲೆಗೆ ಹಣ ದಂಡ ಎಂದು ಪ್ರತಿ ರಾತ್ರಿಯೂ ಕೈತುತ್ತು .ಅಲ್ಲದೆ ಸಾಮಾನ್ಯ ಬೇಸಿಗೆಯಲ್ಲೇ ನಾವು ಹೋಗುತ್ತಿದ್ದುದು. ಮಹಡಿಯ ಬಿಸಿಲು ಮಚ್ಚು (ಈಗಿನ ಬಾಲ್ಕನಿ) ನಲ್ಲಿ ಮಕ್ಕಳ ಕೈತುತ್ತಿನ ಕಾರ್ಯಕ್ರಮ . ಅಲ್ಲಿಯೂ ಎರಡು ತಂಡ ಮಾಡಿ ಅಮ್ಮ ಚಿಕ್ಕಮ್ಮ ದೊಡ್ಡಮ್ಮ ಅತ್ತೆಯರು ದೊಡ್ಡ ದೊಡ್ಡ ಬೇಸನ್ನಿನಲ್ಲಿ ಕಲಸಿ ತಂದು ಕೈತುತ್ತು ಕೊಡುತ್ತಿದ್ದ ದೃಶ್ಯ ಇನ್ನೂ ಕಣ್ಣಿಗೆ ಕಟ್ಟುತ್ತಿದೆ. ಯಾರು ಹೆಚ್ಚು ಚೆಲ್ಲದೆ ತಿನ್ನುವವರೋ ಅವರಿಗೆ ಬಹುಮಾನ ಅಂತಿದ್ದ ಚಿಕ್ಕಮ್ಮ ಸಾಕು ಸಾಕು ಎಂದರೂ ಇನ್ನೊಂದು ತುತ್ತು ಎಂದು ಬಲವಂತ ಮಾಡುತ್ತಿದ್ದ ದೊಡ್ಡಮ್ಮ ಇದೆಲ್ಲಾ ನೆನೆಸಿಕೊಂಡಾಗ ಕಣ್ಣಂಚಿನಲ್ಲಿ ನೀರು ತಾನಾಗಿ ಜಿನುಗುತ್ತದೆ. ಒಬ್ಬರಿಗೊಬ್ಬರು ಪೈಪೋಟಿಯಲ್ಲಿ ತಿನ್ನುತ್ತಿದ್ದುದು, ನಾನು ಮೊದಲು ನೀನು ಮೊದಲು ಎಂಬ ಸ್ಪರ್ಧೆ, ಬೆರಳ ಸಂದಿಯಿಂದ ಸಾರನ್ನ ಮೊಸರನ್ನದಿಂದ ರಸ ಸುರಿದು ಮೊಳಕೈ ತನಕ ಬರುತ್ತಿದ್ದುದು, ಒಬ್ಬರ ಮುಖ ಇನ್ನೊಬ್ಬರ ಅವಸ್ಥೆ ನೋಡಿ ನಗುತ್ತಿದ್ದದು ನೆನೆಸಿಕೊಂಡರೆ ಈಗಲೂ ಮುಗುಳ್ನಗೆ ತೇಲುತ್ತದೆ .ಮರೆಯಲೇ ಆಗದ ಸವಿಸಮಯಗಳು ಅವು .
ನಾವುಗಳು ದೊಡ್ಡವರಾಗಿ ಕೆಲಸಕ್ಕೆ ಸೇರಿದ ಮೇಲೂ ಮದುವೆಯಾದ ಮೇಲೂ ಆಲೂಗಡ್ಡೆ ಈರುಳ್ಳಿ ಹುಳಿ ಹಿದಕವರೇ ಮೇಲೋಗರ ಕೂಟು ಇಂಥದುವುಗಳನ್ನು ಮಾಡಿದಾಗಲೆಲ್ಲಾ ಎಲ್ಲರೂ ಒಟ್ಟಾಗಿ ಸೇರಿದಾಗಲೂ ಅಮ್ಮ ನಮ್ಮನ್ನು ಅಳಿಯಂದಿರನ್ನು ಕೂಡಿಸಿ ಕೈತುತ್ತು ಹಾಕುತ್ತಿದ್ದರು .ಅಮ್ಮ ಹೋದ ಮೇಲೆ ಕೈ ತುತ್ತು ಮರೆತೇ ಹೋಗಿದೆ .
ಈಗಲೂ ತೊಕ್ಕು ಉಪ್ಪಿನಕಾಯಿರಸದಂತ ಪಿಡಚೆ ಅನ್ನ ತಿನ್ನುವಾಗಲೆಲ್ಲಾ ನನ್ನ ಪತಿ ಒಬ್ಬರೇ ಆದರೂ ಕುಳಿತು ಕೈತುತ್ತು ಹಾಕಿಸಿಕೊಂಡು ತಿನ್ನುತ್ತಾರೆ. ಸ್ವಲ್ಪವಾದರೂ ಸಂಪ್ರದಾಯ ಉಳಿಸುತ್ತಿದ್ದೇನೆ ಅಂತ ಸಮಾಧಾನ ಆಗುತ್ತೆ.
ಇದೇನಪ್ಪ ಊಟ ಮಾಡುವುದು ಅದನ್ನು ತಟ್ಟೆಯಲ್ಲಿ ತಿನ್ನಲಿ ಕೈ ತುತ್ತಾದರೂ ತಿನ್ನಲಿ ಅದೇನೋ ಪ್ರಬಂಧ ಬರೆಯುವಷ್ಟು ದೊಡ್ಡ ವಿಷಯವೇ ಅಂದುಕೊಳ್ಳಬಹುದು. ಇಲ್ಲಿ ಊಟಕ್ಕಿಂತ ಹೆಚ್ಚು ಪ್ರಮುಖವಾಗುವುದು ಮಾಯವಾಗುತ್ತಿರುವ ಪದ್ಧತಿಗಳು ಆಚರಣೆಗಳು ಅವು ಕಲಿಸಿಕೊಡುತ್ತಿದ್ದ ಹಂಚಿ ತಿನ್ನುವ ಪದ್ಧತಿ, ಪರಸ್ಪರ ಸಹಕಾರ ಮನೋಭಾವ, ಹೊಂದಿ ಬಾಳುವ ಪ್ರವೃತ್ತಿ . ಎಲ್ಲರೊಡನೆ ಕಳೆಯುವ ಕ್ವಾಲಿಟಿ ಟೈಮ್, ತಿನ್ನುವ ಆಹಾರವನ್ನು ಆಸ್ವಾದಿಸಿ ತಿನ್ನುವ ಬಗೆ ಒಬ್ಬರ ಇಷ್ಟ ಅಇಷ್ಟಗಳನ್ನು ಇನ್ನೊಬ್ಬರು ಅರಿಯುತ್ತಿದ್ದುದು. ಈಗ ಅವೆಲ್ಲ ತಿಳಿಯುವ ಪ್ರಸಂಗವೇ ಬರುತ್ತಿಲ್ಲ . ಬೇರೆ ಕಸಿನ್ಸ್ ಬಿಡಿ ಮನೆಯಲ್ಲಿ ಜೊತೆ ಸದಾ ಇರುವವರ ಬಗ್ಗೆಯೇ ನಮಗೇನೂ ತಿಳಿದಿರುವುದಿಲ್ಲ . ಬೆಳಿಗ್ಗೆ ಶಾಲೆ ಅಥವಾ ಕಚೇರಿಗೆ ಹೋಗುವ ಗಡಿಬಿಡಿ . ಏನೋ ಒಂದಷ್ಟು ತುರುಕಿಕೊಂಡು ಓಡುವುದು. ಮಧ್ಯಾಹ್ನ ಕಟ್ಟಿಕೊಂಡು ಹೋದ ಬುತ್ತಿಯೂಟ. ರಾತ್ರಿಯ ಊಟವಾದರೂ ಒಟ್ಟಿಗೆ ಮಾತನಾಡುತ್ತಾ ಮಾಡುವರೇ? ದೂರದರ್ಶನ ಅಥವಾ ಮೊಬೈಲ್ ನೋಡಿಕೊಂಡು ಊಟ ಮಾಡುವಾಟ. ಮನುಷ್ಯ ಮನುಷ್ಯರ ಒಡನಾಟಕ್ಕಿಂತ ಯಂತ್ರಗಳ ವಿದ್ಯುನ್ಮಾನ ಉಪಕರಣಗಳ ಸಾಂಗತ್ಯವೇ ಹೆಚ್ಚು ಹಿತ ಎನಿಸುತ್ತಿದೆಯೇನೋ. ನಮ್ಮ ಕಣ್ಮುಂದೆಯೇ ನಡೆಯುತ್ತಿರುವ ಕಾಲಘಟ್ಟದ ಈ ಬದಲಾವಣೆಗಳನ್ನು ಕಂಡಾಗ ಕಾಲಾಯ ತಸ್ಮೈ ನಮಃ ಎಂದೆನಿಸಿದರೂ ಪರಿವರ್ತನೆ ಮಾಡುವುದು ಕಷ್ಟ ಆದರೆ ಅಸಾಧ್ಯವಲ್ಲ ಅಲ್ಲವೇ ಎಂದು ಅನ್ನಿಸುತ್ತದೆ. ಮೊದಮೊದಲು ಒಪ್ಪಲು ಮೊಂಡಾಟವಾದರೂ ಪ್ರಿಯವಾದಂತೆ ಕೊಂಡಾಟವೂ ಆಗಬಹುದು.
ಇತ್ತೀಚೆಗೆ ನಮ್ಮ ಮನೆಯಲ್ಲಿ ಗೆಳತಿಯರು ಸೇರಿದಾಗ ಹಿದಕಬೇಳೆ ಮೇಲೋಗರವನ್ನು ನಾನೇ ಬಲವಂತ ಮಾಡಿ ಎಲ್ಲರಿಗೂ ಕೈ ತುತ್ತು ಹಾಕಿದೆ . ಕೆಲವರಿಗೆ ಅದು ಹೊಸ ಅನುಭವವಾದರೂ ಇಷ್ಟಪಟ್ಟರು. ತಮ್ಮ ಮನೆಗಳಲ್ಲಿಯೂ ಪ್ರಾರಂಭಿಸುವೆವು ಎಂದರು . ಇದೇನು ಅತಿಶಯದ ವಿಷಯವಲ್ಲ. ಆದರೆ ಬಾಲ್ಯ ಅಜ್ಜಿ ಮನೆ ಅಮ್ಮ ಎಂದಾಗಲೆಲ್ಲ ನೆನಪಿಗೆ ಬರುವ ಈ ಕೈತುತ್ತು ಮರೆತು ಹೋಗಬಾರದು ಕಾಲಗರ್ಭದಲ್ಲಿ ಹೂತು ಹೋಗಬಾರದು ಅನ್ನುವುದು ನನ್ನ ಅಭಿಲಾಶೆ . ಇದಕ್ಕೆ ನೀವೇನಂತೀರಿ ? ಹೂ ಅಂತೀರಾ ಊಹೂಂ ಅಂತೀರಾ ?
ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು