ಅಂಕಣ ಸಂಗಾತಿ

ಗಜಲ್ ಲೋಕ

ರೇಣುಕಾತಾಯಿಯವರ

ಮಮತಾಮಯಿ ಗಜಲ್ ಯಾನ

ರೇಣುಕಾ ತಾಯಿಯವರ ಮಮತಾಮಯಿ ಗಜಲ್ ಯಾನ….

ನನ್ನ ಗಜಲ್ ಪ್ರೇಮಿಗಳೆ ಹೇಗಿದ್ದೀರಾ, ಸಬ್ ಕೈರಿಯತ್ ಹೈನಾ..!! ಇಂದು ಮತ್ತೊಮ್ಮೆ ಗಜಲ್ ಗೋರಿಯೊಂದಿಗೆ ತಮ್ಮ ಮುಂದೆ ಹಾಜರಾಗಿದ್ದೇನೆ, ತಮ್ಮೊಂದಿಗೆ ಗಜಲ್ ಮಮತೆಯನ್ನು ಹಂಚಿಕೊಳ್ಳಲು ; ಜೊತೆ ಜೊತೆಗೆ ಹೆಜ್ಜೆ ಹಾಕಲು… ಮತ್ತೇಕೆ ವಿಳಂಬ, ಬೇಗ ಬೇಗ ಬನ್ನಿ…!!

ಹೆಸರಿಗೇ ಸೂರ್ಯನು ಹೊಳೆಯಲು ಬರುವುದಿಲ್ಲ

ಮೋಡವೆಂದು ಅಡ್ಡಾಡುತಾರೆ ಸುರಿಯಲು ಬರುವುದಿಲ್ಲ

ವಿನೀತಾ ಗುಪ್ತಾ

       ವಿಜ್ಞಾನದ ಆವಿಷ್ಕಾರ ವಿಶ್ವವನ್ನು ಅಂಗೈಯೊಳಗೆ ಬಂಧಿಸಿದೆ. ಜೊತೆ ಜೊತೆಗೆ ಭಾವನೆಗಳಿಗೆ ವ್ಯವಹಾರದ ಮುಖವಾಡವನ್ನು ತೊಡಿಸುತ್ತಿದೆ. ಮನುಷ್ಯ ಮನುಷ್ಯರಾಗಿ ಉಳಿಯದೆ ದಾನವರಾಗಿ ಬದಲಾಗುತಿದ್ದಾರೆ. ದಾನವೀಯತೆಯನ್ನು ಮಾನವೀಯತೆಯನ್ನಾಗಿ ಪರಿವರ್ತಿಸುವ ಕಲೆ ಇರುವುದು ಮಾತ್ರ ಸಾಂಸ್ಕೃತಿಕ ಕಲೆಗಳಿಗೆ..!! ಆ ಕಲೆಗಳಲ್ಲಿ ‘ಅಕ್ಷರದ ತೊಟ್ಟಿಲು’ ಜೋಗುಳವನ್ನಾಡುತ್ತ ಪ್ರೀತಿಯನ್ನು ಹಂಚುತ್ತಾ ಬಂದಿದೆ. ಗದ್ಯ ಉಪದೇಶದಂತೆ ಫೀಲ್ ಆದರೆ ಪದ್ಯ ನಮ್ಮ ಮನದ ಭಾವನೆಗಳ ಮೆರವಣಿಗೆಯಂತೆ ಮನಸ್ಸಿಗೆ ಮುದ ನೀಡುತ್ತದೆ. ಈ ಕಾರಣಕ್ಕಾಗಿಯೇ ಮನುಷ್ಯ ಸದಾ ಗುನುಗುತ್ತಿರುತ್ತಾನೆ ಎಂದನಿಸುತ್ತದೆ!! ಪ್ರತಿಯೊಂದು ಭಾಷೆಯು ತನ್ನ ಪ್ರಾದೇಶಿಕತೆ, ಭೌಗೋಳಿಕ ಲಕ್ಷಣ, ಪರಂಪರೆಯ ಹಿನ್ನೆಲೆಯಲ್ಲಿ ರೂಪುಗೊಂಡಿರುತ್ತದೆ. ಯೂನಿಕನೆಸ್, ಭಿನ್ನತೆ, ವಿಭಿನ್ನತೆ, ಲಾಲಿತ್ಯ, ಮೃದುತ್ವವನ್ನು ಮೈಗೂಡಿಸಿಕೊಂಡು ಕಾವ್ಯದಲ್ಲಿ ಆವಿರ್ಭವಿಸುತ್ತದೆ. ಅಂತೆಯೇ ‘ಕಾವ್ಯ’ವೆ ಬರಹಗಾರರ ಮೊದಲ ಆಯ್ಕೆಯಾಗಿರುತ್ತದೆ. ಪ್ರಪಂಚದ ನುಡಿಗಳಲ್ಲಿಯೆ ‘ಉರ್ದು’ ತುಂಬಾ ಮಿಠಾಸ್ ನಿಂದ ಕೂಡಿದ ಹೆಣ್ಣು ಭಾಷೆಯಾಗಿದೆ. ಈ ಭಾಷೆಯನ್ನು ಕೇಳುತ್ತಿದ್ದರೆ ಕೇಳುಗ ತನಗೆ ಅರಿವೆಯಿಲ್ಲದಂತೆ ಅದರ ಮೆದುತ್ವಕ್ಕೆ ಫಿದಾ ಆಗುತ್ತಾನೆ. ಇಂಥಹ ಭಾಷೆಯಲ್ಲಿ ಮೈದಳೆದ ‘ಗಜಲ್’ ಇಡೀ ಮನುಕುಲವನ್ನೆ ಸಂಮೋಹನಗೊಳಿಸಿದೆ, ರಸಿಕರನ್ನು ಪಾಗಲ್ ಮಾಡಿದೆ. ಇಂಥಹ ಗಜಲ್ ಸಹಜವಾಗಿಯೇ ಉರ್ದುವಿನಲ್ಲಿ ಬೇಗಂ ಸಾಹೇಬಾ ಆಗಿ ಎಲ್ಲರ ಹೃದಯದ ಮೇಲೆ ಸವಾರಿ ಮಾಡುತಿದ್ದಾಳೆ. ಆ ಸವಾರಿ ನಮ್ಮಲ್ಲಿಯೂ ಮುಂದುವರೆದು ಕನ್ನಡದಲ್ಲಿ ಮಗಳಾಗಿ ನೆಲೆಯೂರುತಿದ್ದಾಳೆ. ಕನ್ನಡ ಸಾರಸ್ವತ ಲೋಕದಲ್ಲಿ ಅರಳಿದ, ಅರಳುತ್ತಿರುವ ಗಜಲ್ ಗೋ ಅವರು ಗಜಲ್ ಭುವನೇಶ್ವರಿಯನ್ನು ಪ್ರೀತಿಸುತಿದ್ದಾರೆ, ಪೋಷಿಸುತ್ತಿದ್ದಾರೆ. ಆ ಗಜಲ್ ಒಲವಿನ ಧಾರೆಯಲ್ಲಿ ಮೀಯುತ್ತಿರುವವರಲ್ಲಿ ಡಾ. ರೇಣುಕಾತಾಯಿ ಸಂತಬಾ ಅವರೂ ಒಬ್ಬರು!

        ‘ರೇಮಾಸಂ’ ಎಂಬ ವಿಶೇಷ ಕಾವ್ಯನಾಮದಿಂದ ಕನ್ನಡ ಸಾರಸ್ವತ ಲೋಕದಲ್ಲಿ ಚಿರಪರಿಚಿತರಾಗಿರುವ ಡಾ. ರೇಣುಕಾತಾಯಿ. ಎಂ.ಸಂತಬಾ ಅವರು ದಿ.ಶ್ರೀ ಮಾರುತಿರಾವ್ ಬಿ ಸಂತಬಾ ಹಾಗೂ

ದಿ.ಶ್ರೀಮತಿ ಕಮಲಾಬಾಯಿ ಎಂ.ಸಂತಬಾ ರವರ ನೆಚ್ಚಿನ ಮಗಳಾಗಿ ಜನಿಸಿ, ಸದ್ಯ ಹುಬ್ಬಳ್ಳಿಯಲ್ಲಿ ವಾಸವಾಗಿರುವ ಇವರು ಪ್ರಸ್ತುತವಾಗಿ ರಾಯನಾಳದ ಸರಕಾರಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಉಪ ಪ್ರಾಂಶುಪಾಲರಾಗಿ, ಹಿಂದಿ ಭಾಷಾ ಅಧ್ಯಾಪಕಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ವಿಶೇಷವಾಗಿ ಶೈಕ್ಷಣಿಕ ರಂಗದಲ್ಲಿ ಗುರುತಿಸಿಕೊಂಡಿರುವ ಇವರು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(DSERT) ಬೆಂಗಳೂರಿನಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾಗಿ CCE ‘ಸಾಧನ’ ಹಾಗೂ ಗುರುಚೇತನಾ ಕಾರ್ಯಕ್ರಮಗಳ ಅಡಿಯಲ್ಲಿ ಶಿಕ್ಷಕರಿಗಾಗಿ ಅನೇಕ ಮಾಡ್ಯೂಲ್ ಗಳ ರಚನಾ ಕಾರ್ಯದಲ್ಲಿ ಭಾಗವಹಿಸಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾಮಟ್ಟ, ರಾಜ್ಯಮಟ್ಟ ಹಾಗೂ ಅಂತರರಾಜ್ಯ ಮಟ್ಟದ ಉಪನ್ಯಾಸ ಗಳಲ್ಲಿ ಭಾಗವಹಿಸಿ ಕನ್ನಡ, ಹಿಂದಿ ಭಾಷೆಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ, ಸಾಹಿತ್ಯಿಕ ಹಾಗೂ ಶೈಕ್ಷಣಿಕ ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದಾರೆ ; ಜೊತೆ ಜೊತೆಗೆ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕರಿಗೆ ಅನೇಕ ತರಬೇತಿಗಳನ್ನ ನೀಡುತ್ತ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ, ಸಲ್ಲಿಸುತ್ತಿದ್ದಾರೆ. ಸಮಾಜೋಮುಖಿ ಸೇವಾ ಕಾರ್ಯ ಹಾಗೂ ವಿಶೇಷವಾಗಿ ಶ್ರೀ ಸತ್ಯ ಸಾಯಿ ಸೇವಾ ಕಾರ್ಯದಲ್ಲಿ ತೊಡಗಿರುವ ಶ್ರೀಯುತರು ಸಂಗೀತ, ಸಾಹಿತ್ಯ, ಪೇಂಟಿಂಗ್ ಹಾಗೂ ಕವನ-ಗಜಲ್ ಗಳ ವಾಚನ-ಗಾಯನಗಳಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ‘ಕಣ್ಣ ರೆಪ್ಪೆಯ ಅಹವಾಲು’, ‘ಸಾಂಸ್ – ಏ -ಗಜಲ್’, ಎನ್ನುವ ಎರಡು ಕೃತಿಗಳನ್ನು ಸಾಹಿತ್ಯಿಕ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇದರೊಂದಿಗೆ ಹಿಂದಿ ಭಾಷೆಯ ಪುಸ್ತಕವೊಂದು ಅಚ್ಚಿನಲ್ಲಿದೆ.

       ಮಾತೃ ಹೃದಯಿ, ಸದಾ ಆಧ್ಯಾತ್ಮಿಕ ಲೋಕದಲ್ಲಿ ವಿಹರಿಸುತ್ತಿರುವ ‘ರೇಮಾಸಂ’ನವರು ತಮ್ಮ ಸಾಹಿತ್ಯಿಕ, ಸಾಂಸ್ಕೃತಿಕ ಕೊಡುಗೆಗಳಿಂದ ರಾಜ್ಯದ ಹಲವಾರು ಸಂಘ ಸಂಸ್ಥೆಗಳ ಗೌರವ, ಸತ್ಕಾರಕ್ಕೆ ಭಾಜನರಾಗಿದ್ದಾರೆ.‌ ಶ್ರೀ ಸತ್ಯಸಾಯಿ ಆಲ್ ಇಂಡಿಯಾ ಬಾಲ ವಿಕಾಸ ಅಲ್ಯೂಮಿನೈ ಎಂಬ ರಾಷ್ಟ್ರೀಯ ಪ್ರಶಸ್ತಿ, ನ್ಯಾಷನಲ್ ಏಕ್ಸಲೆನ್ಸ್ ಅವಾರ್ಡ್, ಶಿಕ್ಷಣ ಇಲಾಖೆ ವತಿಯಿಂದ ತಾಲೂಕು ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಹಾಗೂ ವಿವೇಕಾನಂದ ಅಸೋಸಿಯೇಷನ್, ರೋಟರಿ ಸಂಸ್ಥೆಗಳಿಂದ “Nation Builder Award” ಪ್ರಶಸ್ತಿ… ಮುಂತಾದವುಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

       ಅನುಭವದ ಕುಲುಮೆಯಲ್ಲಿ ಪ್ರೀತಿಯ ಸ್ಪರ್ಶದಿಂದ ಉಸುರುವ ಪಿಸುಮಾತುಗಳೆ ಗಜಲ್. ಮನಸು-ಮನಸುಗಳನ್ನು, ಮನಸು-ಕನಸುಗಳನ್ನು ಬೆಸೆಯುವ ಅದಮ್ಯ ಚೇತನ ಶಕ್ತಿ ಇದಕ್ಕಿದೆ. ನೋವಿನಲ್ಲೂ ನಗುವುದನ್ನು ಕಲಿಸುವ ಉಸ್ತಾದ್, ಒಡೆದ ಹೃದಯಗಳಿಗೂ ಸಾಂತ್ವನ ಹೇಳುವ ಸಾಕಿ ; ಪ್ರೀತಿಯಲ್ಲೆ ದೇವರನ್ನು ಸಾಕ್ಷಾತ್ಕಾರಗೊಳಿಸುವ ಸೂಫಿಯ ಅನುಭಾವ ಗಜಲ್ ಗೆ ಇದೆ. ಅನುಭಾವ ಎಂಬುದು ಭಾವನೆಯ ಪಕ್ವತೆಯೇ ಹೊರತು ಕೇವಲ ಅಧ್ಯಾತ್ಮದ ಒಣ ಚರ್ಚೆಯಲ್ಲ. ಪ್ರೀತಿಯ ಅನಂತತೆಯನ್ನು, ಪ್ರಣಯದ ತೀವ್ರತೆಯನ್ನು, ವಿರಹದ ಆರ್ದ್ರತೆಯನ್ನು ಗಜಲ್ ಏಕಕಾಲಕ್ಕೆ ಅಭಿವ್ಯಕ್ತಿಸುತ್ತದೆ. ಪ್ರೇಮ ಕಬ್ಬಿನಂತೆ ಸಿಹಿಯಾದುದು. ಯಾವ ಕಡೆಯಿಂದ ತಿಂದರೂ ಅದು ಸಿಹಿಯನ್ನೆ ಕೊಡುತ್ತದೆ. ಅದರ ಸಿಹಿಯಲ್ಲಿ ಯಾವುದೇ ಏರುಪೇರು ಇರುವುದಿಲ್ಲ. ಈ ಗಜಲ್ ಕೂಡ ಹಾಗೆಯೇ. ಯಾವುದೇ ವಿಷಯವನ್ನು ಒಳಗೊಂಡಿದ್ದರೂ ಅದು ಪ್ರೀತಿಯನ್ನೆ ಪ್ರತಿಪಾದಿಸುತ್ತದೆ. ಇಂತಹ ಗಜಲ್ ರಚನೆಕಾರರು ದಿನದಿಂದ ದಿನಕ್ಕೆ ಪ್ರಬುದ್ಧರಾಗುತಿದ್ದಾರೆ. ಅವರುಗಳಲ್ಲಿ ಡಾ. ರೇಣುಕಾತಾಯಿಯವರ ಗಜಲ್ ಗಳನ್ನು ಉಲ್ಲೇಖಿಸದಿರಲು ಹೇಗೆ ಸಾಧ್ಯ? ಇವರ ಗಜಲ್ ಗಳಲ್ಲಿ ಮನಸ್ಸಿನ ಪಿಸುಮಾತುಗಳಿವೆ, ಅಧ್ಯಾತ್ಮದ ಹೊಂಗಿರಣಗಳಿವೆ, ಲೌಕಿಕತೆಯ ಬಿಂಬವಿದೆ, ಸಂಸ್ಕೃತಿಯ ಚಿತ್ತಾರವಿದೆ. ಕೆಲವೊಂದು ಗಜಲ್ ಗಳು ವ್ಯಕ್ತಿ ಪರಿಚಯವನ್ನು ಮಾಡಿಸುತ್ತವೆ. ‘ತಾಯಿ’ ಎಂಬ ಇವರ ತಖಲ್ಲುಸನಾಮ ಮಮತೆಯ ಮಳೆಗೆರೆಯುತ್ತವೆ.‌ ಸ್ತ್ರೀ ಸಂವೇದನೆಯ ಕೋಮಲತೆ, ಮಾಧುರ್ಯ ಇವರ ಗಜಲ್ ಗಳಲ್ಲಿದ್ದು ಓದುಗರನ್ನು ಸೆಳೆಯುತ್ತವೆ.

ಕಾಮವ ಅಳಿಸಿ ಮಮತೆಯನು ಹರಸು ದೇವನೇ

ಮೋಹವ ಮಣಿಸಿ ಭಕುತಿಯನು ಕರುಣಿಸು ದೇವನೇ

ಅನುಭಾವ ಎಂಬುದು ಅಂತರಂಗದ ರತ್ನ. ಇದು ಕೇವಲ ಪಾರಮಾರ್ಥಿಕ ಮಾತ್ರವಲ್ಲ, ಲೌಕಿಕವನ್ನು ಬೆಳೆಸುವ, ಬೆಳಗಿಸುವ ಸಾಧನವಾಗಿದೆ. ಅನುಭವದ ಪಕ್ವತೆಯೇ ಅನುಭಾವಕ್ಕೆ ಕಾರಣವಾಗುತ್ತದೆ. ಗಜಲ್ ಗೋ ಅವರು ವಿಶಾಲವಾದ ಬದುಕಿನ ಅನುಭವವನ್ನು ಹೊಂದಿರುವುದು ಈ ಮೇಲಿನ ಷೇರ್ ನಿಂದ ಮನವರಿಕೆಯಾಗುತ್ತದೆ. ‘ಕಾಮ’ ಎನ್ನುವಂತದ್ದು ಪುರುಷಾರ್ಥಗಳಲ್ಲಿ ಒಂದಾಗಿದ್ದರೂ ಸಹ ಇಂದು ಅದರ ಬಳಕೆ ಮಾತ್ರ ಪಶುಗಳಿಗೂ ತಲೆತಗ್ಗಿಸುವಂತಿದೆ! ಮೃಗೀಯ ಕಾಮವನ್ನೆ ಗಂಡಸ್ತನ ಎಂದುಕೊಂಡವರ, ಎಂದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂಥಹ ಕಾಮವನ್ನು ಆಳಿಸಿ ಎಲ್ಲರಲಿ ತಾಯಿಯ ಮಮತೆಯನ್ನು, ಅರಿಷಡ್ವರ್ಗಗಳಲ್ಲಿ ಒಂದಾದ ‘ಮೋಹ’ವನ್ನು ಮಣಿಸಿ ಭಕುತಿಯನ್ನು ಕರುಣಿಸು ಎಂದು ದೇವರಲ್ಲಿ ಮೊರೆಯಿಟ್ಟಿದ್ದಾರೆ. ಈ ಷೇರ್ ನಲ್ಲಿ ಭಕ್ತಿಯ ಛಾಯೆ ದಟ್ಟವಾಗಿ ಆವರಿಸಿದೆ.

ಪುಣ್ಯಭುವಿಯಲಿತಾಯಿಯು ಸೇವೆಯೇ ಪರಮ ಧರ್ಮವೆಂದಳು

ನಿಸ್ವಾರ್ಥಕೆ ಜಗವೇ ಸುಶೃತರಿಗೆಲ್ಲ ವಂದಿಸಿತಲ್ಲ ಕಾಣದ ಸೂಕ್ಷ್ಮಾಣು

೨೦೨೦ ರ ಆರಂಭದಲ್ಲಿ ಕೊರೊನಾ ಎನ್ನುವ ಸೂಕ್ಷ್ಮಾಣು ಇಡೀ ಮನುಕುಲವನ್ನೇ ತಲ್ಲಣಿಸಿ ಪ್ರಪಂಚದಾದ್ಯಂತ ಸೂತಕ ಆವರಿಸುವಂತೆ ಮಾಡಿತು. ಮನುಷ್ಯನಿಗೆ ಬುದ್ಧಿ ಕಲಿಸಿತು, ಮನುಷ್ಯನ ಕರಾಳ ಮುಖವನ್ನು ಪರಿಚಯಿಸಿತು ಎಂದೆಲ್ಲ ನಾವು ನಮ್ಮ ಬಾಯಿ ಚಪಲವನ್ನು ತೀರಿಸಿಕೊಂಡಾಗ್ಯೂ ಸಾವು-ನೋವಿನ ಭೀಕರತೆ ಮರೆಯಲಾದೀತೆ..!! ಇಂದು ಕೊರೊನಾ ಹಾವಳಿ ತಗ್ಗಿದೆಯಾದರೂ ಮುಂದೆ ಯಾವಾಗ ಧುತ್ತೆಂದು ನಮಗೆ ಎದುರಾಗುತ್ತದೊ ಎನ್ನುವ ಆತಂಕದಲ್ಲಿ ನಾವುಗಳು ಜೀವನವನ್ನು ಸಾಗಿಸುತ್ತಿರುವುದು ಸುಳ್ಳಲ್ಲ. ಈ ಮೇಲಿನ ಷೇರ್ ನಲ್ಲಿ ಗಜಲ್ ಗೋ ಅವರ ತಖಲ್ಲುಸನಾಮ ‘ತಾಯಿ’ ತುಂಬಾ ಅರ್ಥಪೂರ್ಣವಾಗಿ ಬಳಕೆಯಾಗಿದೆ. ‘ತಾಯಿಯು ಸೇವೆಯೇ ಪರಮ ಧರ್ಮವೆಂದಳು’ ಎಂಬುದು ಇಂದಿನ ಅಗತ್ಯತೆ ಹಾಗೂ ಧರ್ಮದ ವ್ಯಾಖ್ಯಾನವಾಗಿದೆ. ಈ ಷೇರ್ ನ ಸಾನಿ ಮಿಸ್ರಾವಂತೂ ಮನುಷ್ಯನ ಜೀವನವನ್ನು ತಾತ್ವಿಕತೆಯೊಂದಿಗೆ ಪ್ರತಿಧ್ವನಿಸುತ್ತದೆ. ಇಲ್ಲಿ ಗಜಲ್ ಗೋ ಅವರ ಸಾಮಾಜಿಕ ಬದ್ಧತೆ, ಸಾಮಾಜಿಕ ಕಳಕಳಿ ವ್ಯಕ್ತವಾಗಿದೆ.‌

          ಗಜಲ್ ಎಂಬುದು ಹೃದ್ಯವಾಗಿದ್ದು, ಆಕರ್ಷಣೆ; ಕುತೂಹಲದಿಂದ ಕೂಡಿರುತ್ತದೆ, ಕೂಡಿರಬೇಕು. ಇದು ತಿಳಿ ಹೇಳುವ ಉಪದೇಶವಲ್ಲ, ಸ್ಪಷ್ಟಪಡಿಸುವ ಒಣವರದಿಯಲ್ಲ; ಆಜ್ಞಾಪಿಸುವ ರಾಜಾಜ್ಞೆಯಂತೂ ಅಲ್ಲವೇ ಅಲ್ಲ.‌ ಇದು ಹೃದಯಗಳನ್ನು ಬೆಸೆಯುವ ಮಂತ್ರದಂಡ. ಇಂಥಹ ಹತ್ತು ಹಲವಾರು ಗಜಲ್ ಗಳು ಡಾ. ರೇಣುಕಾತಾಯಿ ಎಂ. ಸಂತಬಾ ಅವರಿಂದ ರಚನೆಗೊಳ್ಳಲಿ, ಅವುಗಳು ಸಂಕಲನಗಳಲ್ಲಿ ರೂಪ ಪಡೆಯಲಿ ಎಂದು ತುಂಬು ಹೃದಯದಿಂದ ಶುಭ ಕೋರುತ್ತೇನೆ.

ಜ್ಞಾನಿಗಳಿಗೆ ಜ್ಞಾನ ಮಾರ್ಗದಲ್ಲಿ ಅವನ ರಹಸ್ಯ ಬಲು ಗಂಭೀರ

ಆದರೂ ಪ್ರೇಮಿಗಳ ನೋವಿಗೆ ಅವನು ಅಮೃತ, ಮುಲಾಮು

ಸೂಫಿ ಹಕೀಂ ಸಿನಾಯಿ

ವಾಚ್ ಕಡೆಗೆ ನೋಡುತಿದ್ದೀರಾ..ಸರಿ, ಸರಿ. ಸಮಯ ಆಯ್ತು, ಮುಗಿಸುವೆ ; ಸ್ವಲ್ಪ ಮಂದಹಾಸದ ಬೆಳಕು ಚೆಲ್ಲಬಾರದೆ..! ಇವಾಗ ಹೋಗಿ, ಮತ್ತೆ ಮುಂದಿನ ವಾರ, ಗುರುವಾರ ತಮ್ಮ ಮುಂದೆ ಬಂದು ನಿಲ್ಲುವೆ, ಗಜಲ್ ಪ್ರೇಮಿಗಳ ಸುಂದರ ಹೆಜ್ಜೆ ಗುರುತುಗಳೊಂದಿಗೆ!! ನಿರೀಕ್ಷಿಸುವಿರಲ್ಲವೆ… ಗೊತ್ತು, ನನ್ನನ್ನು ಸ್ವಾಗತಿಸಲು ಸಿದ್ಧರಿರುವಿರೆಂದು. ಹೋಗಿ ಬರುವೆ, ಬಾಯ್, ಟಾಟಾ.. ಸೀ ಯುವ್..!!

ಎಲ್ಲರಿಗೂ ತುಂಬು ಹೃದಯದ ವಂದನೆಗಳು..


ಡಾ. ಮಲ್ಲಿನಾಥ ಎಸ್. ತಳವಾರ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top