ಅಂಕಣ ಸಂಗಾತಿ

ಕಾವ್ಯದರ್ಪಣ

ಕಾವ್ಯ ಪ್ರವೇಶಕ್ಕೆ ಮುನ್ನ

ಪ್ರೀತಿ ಇಲ್ಲದ ಮೇಲೆ

 ಹೂವು ಅರಳೀತು ಹೇಗೆ

 ಮೋಡ ಕಟ್ಟೀತು ಹೇಗೆ ?”

 ಎಂಬ ಜಿ.ಎಸ್. ಶಿವರುದ್ರಪ್ಪನವರ ಕವಿತೆ ಪ್ರೀತಿಯ ಶ್ರೇಷ್ಠತೆಯನ್ನು ಸಾರಿ ಸಾರಿ ಹೇಳುತ್ತದೆ. ಪ್ರೀತಿ ಎಂಬುದು ಎರಡು ಮನಸ್ಸುಗಳ ಅನುಬಂಧ, ಪದಗಳಿಗೆ ನಿಲುಕದ ಅನುಭೂತಿ, ಪ್ರೀತಿಯೆಂಬುದು ಒಂದು ಸಂವೇದನೆ. ಇದನ್ನು ಅನುಭವಿಸಿಯೇ ಅರಿಯಬೇಕು. ಇದೊಂದು ಭಾವನಾತ್ಮಕ ಹೆಣಿಗೆ. ಪ್ರೀತಿಗೆ ಜಯ ಸಿಕ್ಕರೆ ಅಂದರೆ ನೈಜ ಪ್ರೀತಿಯನ್ನು ನಾವು ಪಡೆದರೆ ಆಗಸವೆಂಬ ಪ್ರೇಮಲೋಕದಲ್ಲಿ ಖುಷಿ ಖುಷಿಯಾಗಿ ಹಕ್ಕಿಯಂತೆ ಸರಾಗವಾಗಿ ಹಾರುತ್ತೇವೆ. ಒಂದು ವೇಳೆ ಸೋತರೆ ಅಂದರೆ ಪ್ರೀತಿ ಎಂಬ ಮಾಯೆಗೆ ಮರುಳಾಗಿ ಪ್ರೀತಿಯ ನಾಟಕವನ್ನು ನಂಬಿ ಅದರಿಂದೆ ಹೋದರೆ ದುಃಖವೆಂಬ ಪ್ರಪಾತಕ್ಕೆ ಬೀಳುತ್ತೇವೆ. ಕಂದಕ ಎಷ್ಟಿರುತ್ತದೆ? ಹೇಗಿರುತ್ತದೆ? ಎಂದರೆ ನಿಜಕ್ಕೂ ನಾವು ಅದರಿಂದ ಹೊರಬರಲು ತೊಳಲಾಡಬೇಕಾಗುತ್ತದೆ.

ಸಫಲವಾದ ಪ್ರೀತಿ, ಪ್ರೇಮರಾಗವಾಗಿ ಗುನುಗುತ್ತಿದ್ದರೆ, ವಿಫಲವಾದ ಪ್ರೀತಿ ಶೋಕಸಾಗರದಲ್ಲಿ ಮುಳುಗಿಸುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಹಾಗಿದ್ದು ಮನುಷ್ಯ ಪ್ರೀತಿಯ ಮೋಸದಲ್ಲಿ ಸಿಲುಕಿ ರೋಧಿಸುವ ಘಟನೆಗಳಿಗೇನೂ ಕೊರತೆಯಿಲ್ಲ. ಇದರಲ್ಲಿ ಪ್ರೀತಿಸಿದವರ ತಪ್ಪೇನಿದೆ ಹೇಳಿ ? ಅದೇನು ದೈಹಿಕವಾದುದಲ್ಲ ನೋಡಿ  ಗುರುತಿಸಲು. ಮನಸ್ಸಿನೊಳಗಿನ ಭಾವವನ್ನು ತಿಳಿಯಲು ಸಾಧ್ಯವೇ? ಆದರೆ ಪ್ರೀತಿಯ ಭಾವತೀವ್ರತೆಯಲ್ಲಿ ಮುಳುಗಿರುವವರಿಗೆ ಇದು ನಾಟಕ, ತೋರಿಕೆಯ ಪ್ರೀತಿ, ಅವಕಾಶವಾದಿತನ ಎಂದು ತಿಳಿದರೆ ತಿಳಿನೀರ ಕೊಳವಾಗಿದ್ದ ಅವರ ಮನಸ್ಸು ಏಕಾಏಕಿ ಆರ್ಭಟಿಸುವ ಅಲೆಗಳೊಡಗೂಡಿದ ಕಡಲಾಗಿ ಉಕ್ಕುತ್ತದೆ. ಇದನ್ನು ಶಾಂತಗೊಳಿಸುವ ಪರಿ ಕಲ್ಪನೆಗೂ ಮೀರಿದ್ದು.

ನಿಷ್ಕಲ್ಮಶವಾದ ಪ್ರೀತಿಗೆ ಕೊನೆ ಮೊದಲಿಲ್ಲ. ಪ್ರೀತಿಯೆಂಬುದು ನೊಂದ ಜೀವಕ್ಕೆ ತಂಪೆರೆವ ಸಂಜೀವಿನಿಯಂತೆ‌. ಪ್ರೇಮಲೋಕಕ್ಕೆ

ಅಮೃತದಾಯಿನಿಯಿದ್ದಂತೆ.ಇಂತಹ ಪ್ರೀತಿ ತಾಯ ಎದೆಹಾಲಂತೆ ಪರಿಶುದ್ದವಾದುದು.ಅದರೊಳಗೆ ಎಂದಿಗೂ ಮೋಸ ವಂಚನೆ ಕಪಟಗಳು ಜೊತೆ ಆಗಬಾರದು. 

ಕವಿ ಪರಿಚಯ

ವಾಣಿ ಭಂಡಾರಿ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ಬೈರಾಪುರದವರು. ಇವರು ಕನ್ನಡ ಎಂ.ಎ. ಪದವೀಧರರಾಗಿದ್ದು ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸಂಗೀತಾಭ್ಯಾಸ ಜ್ಯೋತಿಷ್ಯ ಅಧ್ಯಯನವನ್ನು ಮಾಡಿದ್ದಾರೆ.

ಸಾಹಿತ್ಯದಲ್ಲಿ ಅಪಾರ ಒಲವಿರುವ ಇವರು ಭಾವಗೀತೆ, ಕಥೆ ,ಕವನ, ನ್ಯಾನೋ ಕಥೆ, ಕಾದಂಬರಿ, ಚುಟುಕು, ಲೇಖನಗಳು, ಅಂಕಣ, ಶಾಹಿರಿ, ಗಜಲ್, ಆಧುನಿಕ ವಚನಗಳು ಸೇರಿದಂತೆ ಹಲವಾರು ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡುತ್ತಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕವನ ವಾಚನ ಹಾಗೂ ಉಪನ್ಯಾಸಗಳನ್ನು ನೀಡಿದ ಕೀರ್ತಿ ಇವರದು. ಆಕಾಶವಾಣಿ ರೇಡಿಯೋ ಸಂದರ್ಶನಕ್ಕೂ ಪಾತ್ರರಾಗಿದ್ದಾರೆ.

ಇವರ “ಸಂತೆಯೊಳಗಿನ ಧ್ಯಾನ” ಕೃತಿಯು ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಆಯ್ಕೆಗೊಂಡು ಓದುಗರ ಕೈಸೇರಿವೆ. ಇವರ ಮತ್ತಷ್ಟು ಕೃತಿಗಳು ಅಚ್ಚಿಗಾಗಿ ಸಿದ್ಧಗೊಂಡು ಕಾದು ಕುಳಿತಿವೆ. ಶೀಘ್ರವಾಗಿ ಇವೆಲ್ಲವೂ ಓದುಗರ ಕೈ ಸೇರಿ ಸಾಹಿತ್ಯಾಸಕ್ತರ ಮನ ತಣಿಸಲಿ ಎಂದು ಆಶಿಸೋಣ.

ಕವಿತೆಯ ಆಶಯ

ಇಲ್ಲಿ ಏಕಾಂತದ ನೀರವತೆ ಆವರಿಸಿದಾಗಿನ ನಲ್ಲೆಯ ಮನದಾಳದ ವಿರಹ ವೇದನೆಯನ್ನು, ನಲ್ಲನ ಮೋಸದ ಕೃತ್ಯವನ್ನು ಈ ಕವಿತೆಯಲ್ಲಿ ಕಾಣಬಹುದು. ಪ್ರೀತಿಯ ಸಹವಾಸದಲ್ಲಿ ಮುಳುಗಿ ಅದು ಮೊಸವೆಂದು ಅರಿವಾದಾಗ ಮನವು ಮಸಣವಾಗಿ, ಪ್ರೀತಿ ಸಮಾಧಿಯಾಗಿ, ಅವಳ ಮನಸ್ಸು ಒಡೆದು ಹೃದಯ ಚಿತ್ರವಾಗುವ ನೋವಿನ ಪರಿಯನ್ನು ಈ ಕವಿತೆಯಲ್ಲಿ ಕಾಣಬಹುದು.

ನಕಲಿ ಪ್ರೀತಿಗೆ ಸಿಕ್ಕಿ ಅಸಲಿ ಪ್ರೇಮ ಭಾವಗಳು ರೋದಿಸುತ್ತವೆ. ಪ್ರೀತಿಸಿದ  ನಲ್ಲ ನಂಬಿಕೆಗೆ ಕಳಂಕ  ತಂದು ನಲ್ಲೆಯನ್ನು ಒಂಟಿಯಾಗಿಸಿದ್ದಾನೆ. ಅವಳನ್ನು ಪ್ರೀತಿಯಲ್ಲಿ ಬೀಳಿಸಿ ಬಣ್ಣ ಬಣ್ಣದ ನುಡಿಗಳನ್ನಾಡುತ್ತಾ ಯಾಮಾರಿಸಿದ ಅವನ ನಡೆ ಇವಳ ಆಂತರ್ಯಕ್ಕಿಳಿದು ಚೂರಿಯಂತೆ ಇರಿಯುತ್ತಿದೆ.

ಒಲವಿನ ಲೋಕದಲ್ಲಿ ವಿಹರಿಸಿ ಅದು ಸುಳ್ಳು ಪ್ರೀತಿ ಎಂದು ತಿಳಿದು ನಲ್ಲೆ ತನ್ನೆಲ್ಲಾ ಭಾವಗಳನ್ನು ಸುಟ್ಟು ಪ್ರೀತಿಗೆ ಇತಿಶ್ರೀ ಹಾಡಿ ಬಯಸುವ ಲಹರಿಯನ್ನು ಕಾಣಬಹುದು. ಇದೊಂದು ನೊಂದು ಬೆಂದ ಹುಡುಗಿಯ ಸ್ವಗತವಾಗಿದೆ. ಅವನ ಮೋಸದಿಂದ ಪ್ರೀತಿ ಬೆತ್ತಲಾಗಿದೆ. ಪಾವಿತ್ರತೆ ಕಳೆದುಕೊಂಡಿದೆ. ಪ್ರೀತಿಯ ತೆಕ್ಕೆಗೆ ಬೀಳುವ ಮೊದಲು ಆಲೋಚಿಸಬೇಕು ಎಂಬ ಸಂದೇಶವಿದೆ.

ಮನಸಾರೆ ಅವನನ್ನು ಪ್ರೀತಿಸಿದ್ದು ತಪ್ಪಾಯಿತು. ಈಗದು ಅವಳಿಗೆ ಉರುಳಾಗಿ ಕಂಟಕಪ್ರಾಯವಾಗಿ ಉಸಿರುಗಟ್ಟಿಸುತ್ತಿದೆ. ಅವನಲ್ಲಿ ಇದ್ದುದು ಕೇವಲ ಮೋಹ ಪ್ರೀತಿಯಲ್ಲ ಎಂಬುದು ಈ ಕವಿತೆಯಲ್ಲಿ ಬಿಂಬಿತವಾಗಿದೆ .ಅಪಾರ್ಥದಿಂದ ಸಂಬಂಧ ಹಳಸಿದ ರೀತಿ ಶೋಚನೀಯ. ನಲ್ಲನಿಲ್ಲದ ಬದುಕಿನ ಅವಳ ಕಸಿವಿಸಿಯನ್ನು  ಈ ಕವಿತೆಯಲ್ಲಿ ಕಾಣಬಹುದು.

ಕಾರಣವಿಲ್ಲದೇ ಇವನು ದೂರಸರಿದು ಅಶಾಶ್ವತ ಜಗದಲ್ಲಿ ಶಾಶ್ವತ ಪ್ರೀತಿಯನ್ನು ನಷ್ಟ ಮಾಡಿಸಿದ ಪರಿಯನ್ನು ಅಮೋಘವಾಗಿ ಕವಿತೆಯ ಮೂಲಕ ಚಿತ್ರಿಸಿದ್ದಾರೆ.

ಕವಿತೆಯ ಶೀರ್ಷಿಕೆ

ಒಂಟಿತನ

ಈ ಕವಿತೆಯಲ್ಲಿ ಪ್ರೇಮಿಯೊಬ್ಬಳ ಏಕಾಂತದ ನೋವನ್ನು ಕಾಣಬಹುದು. ಅವನನ್ನು ಅತಿಯಾಗಿ ಪ್ರೀತಿಸಿ ನಂಬಿ ಅವನು ಅವಳ ಪ್ರೀತಿಗೆ ಯೋಗ್ಯನಲ್ಲ ಎಂದು ತಿಳಿದಾಗ ಅವಳ ಮನದೊಳಗೆ ಕಾಡಿದ ಭಾವವೇ ಒಂಟಿತನ. ಇದುವರೆಗೂ ಜಂಟಿಯಾಗಿದ್ದವಳು ಈಗ ಒಬ್ಬಂಟಿಯಾಗಿದ್ದಾಗ ಹಿಂದಿನ ನೆನಪುಗಳು ಅವಳನ್ನು ಏಕತಾನತೆಯಲ್ಲಿ ಮುಳುಗಿಸಿ ಸುಟ್ಟು ‌ಕರಕಲಾಗಿಸಿವೆ. ಅವಳ ಒಂಟಿ ಭಾವದಲ್ಲಿ ಮೂಡಿದ ಕವಿತೆಯಿದು ಆದ್ದರಿಂದ ಈ ಕವಿತೆಗೆ ಒಂಟಿತನ ಶೀರ್ಷಿಕೆ ಒಪ್ಪವಾಗಿ ಒಪ್ಪಿದೆ.

ಕವಿತೆ ವಿಶೇಷಣೆ

ಒಂಟಿತನ

ನಿನ್ನ ನೆನಪೇ ಒಂದು ಸುಡುಗಾಡು

ಸುಡಲು ಬೇರೇನು ಬೇಕಿಲ್ಲ

ನೊಂದು ಬೆಂದು ಸುಟ್ಟು

ಕರಕಲಾಗಿ ಬೂದಿಯಾದಾಗಲೂ

ನೀ ಮತ್ತೆ ಮತ್ತೆ ಮಸಣವೇ“.

ಇಲ್ಲಿ ಪ್ರಿಯನ ನೆನಪಿನಲ್ಲಿ ಪ್ರಿಯತಮೆಯ ವಿರಹದ, ಮೋಸದ ಆಲಾಪನೆಯನ್ನು ಕಾಣಬಹುದು. ಪ್ರೀತಿಯ ನೆನಪುಗಳು ಬದುಕಿನ ಜೀವಾಳ. ಆದರೆ ಆ ನೆನಪುಗಳೀಗ ಸುಡುವ ಬೆಂಕಿಯಾಗಿವೆ. ಧಗಧಗಿಸುವ ಜ್ವಾಲೆಯಾಗಿವೆ. ಕಟ್ಟಿದ  ಪ್ರೇಮ ಗೋಪುರ ದಡಕ್ಕನೆ ಕುಸಿದಿದೆ. ಕಂಡ ಕನಸುಗಳೆಲ್ಲ ನುಚ್ಚು ನೂರಾಗಿ ಮೌನದ ಸೊಲ್ಲು ಪ್ರಿಯವಾಗಿ, ಮಾತಿನ ಮನೆಗೆ ಬೀಗ ಜಡಿದಿದೆ. ಇಲ್ಲಿ ಕವಯತ್ರಿಯು, ಪ್ರಿಯತಮೆಯ ನಿಟ್ಟುಸಿರನ್ನು, ಮನದ ಯಾತನೆಯನ್ನು ಓದುಗರ ಮುಂದಿಡುತ್ತಾರೆ. ಇಲ್ಲಿ ನಲ್ಲ ನಲ್ಲೆಯರು ಜೊತೆಯಾಗಿ ಕಳೆದ ಕ್ಷಣಗಳು, ಪ್ರೀತಿಯ ಕನಸುಗಳು ಜಾರಿ ನೆನಪುಗಳು ಸುಡುಗಾಡಂತೆ ಭಾಸವಾಗುತ್ತವೆ.

ಸುಡುಗಾಡು ಸತ್ತ ಶವಗಳನ್ನು ಬೇಯಿಸುವ ತಾಣ. ಇಲ್ಲಿ ಕವಯತ್ರಿ ಪ್ರೀತಿಗಿದ್ದ ನಂಬಿಕೆ ಕಳೆದುಕೊಂಡು ಭಾವಹೀನವಾಗಿದೆ. ಎನ್ನುವ ಮೂಲಕ ಪ್ರೀತಿಯನ್ನು ಕಳೆದುಕೊಂಡ ಜೀವವು ಹೆಣದಂತೆಯೇ. ಹಾಗಾಗಿ ಇಲ್ಲಿ ಸುಡುವುದು ದೇಹವನ್ನಷ್ಟೇ ಅಲ್ಲ ಪ್ರೇಮದ ಭಾವಗಳನ್ನು ಕೂಡ ಎನ್ನುತ್ತಾರೆ.

ನೀ ಪ್ರೀತಿಗೆ ಮೋಸ ಮಾಡಿ ನಾನು ಅದರೊಳು ನೊಂದು-ಬೆಂದು ಸುಟ್ಟು ಕರಕಲಾಗಿ ಬೂದಿಯಾಗಿರುವೆ. ಅನುಕ್ಷಣ ನಿನ್ನ ನೆನಪಲ್ಲಿ ಚಿತ್ರಹಿಂಸೆ ಪಡುವೆ. ನಿನ್ನ ಮೋಸ ಕಣ ಕಣದಲ್ಲೂ ಬೆರೆತು, ಅಣು ಅಣುವಾಗಿ ಅನುಗಾಲ ಕೊಲ್ಲುತ್ತಿದೆ ಎನ್ನುತ್ತಾರೆ. ನನ್ನ ಹೃದಯದೊಳು ಕಟ್ಟಿದ ನೆನಪಿನ ಗಡಿಗೆಯ ನಿಲುವು ಕಳಚಿ ಬೀಳುತ್ತಿದೆ ನಿರೀಕ್ಷೆಗಳು ಹುಸಿಯಾಗಿ, ಮೋಸ ಜಾಲದ ಕುರುಹುಗಳು ಹಸಿಯಾಗಿ ಕಾಲಗರ್ಭದೊಳು ಲೀನವಾಗುತ್ತಿವೆ. ವೇದನೆಯ ಮಡು ಹಗಲಿರುಳು ಕಾಡುತ್ತಿದೆ. ಅರಿವಿದ್ದೋ ಇಲ್ಲದೆಯೋ ಹೃದಯದಲ್ಲಿ ನಿನ್ನೊಳು ಸೆರೆಯಾದೆ. ಅದಕ್ಕಾಗಿ ನಾನಿಂದು ನೋವನ್ನು ಅನುಭವಿಸುತ್ತಿದ್ದೇನೆ ಎಂಬ ಕವಿ ಭಾವವನ್ನ ಕಾಣಬಹುದು.

ನೀನು ನನ್ನ ಮನದೊಳು ಸುಟ್ಟು ಬೂದಿಯಾದ ಮೇಲೆ ನಿನ್ನ ನೆನೆದಷ್ಟು ಅದು ಮಸಣವೆ ಸರಿ ಎನ್ನುತ್ತಾರೆ.

ಏನಿತ್ತು ನಿನ್ನಲ್ಲಿ ಒಳಗೊಳುವಂತಹದ್ದು

ಬಂದೆ ಮಿಡಿದಂತೆ ನಟಿಸಿ

ಮಿಟುಕಾಡಿ ಬತ್ತಿ ಹಚ್ಚಿ

ಹಾಕದೆ ಎಣ್ಣೆಯ

ಉರಿಸಿಬಿಟ್ಟೆಯಲ್ಲ.

ಸಿಲುಕಿ ನೆನಪುಗಳ ಜಾಲದಲಿ

ಒದ್ದಾಡುವಾಗೆಲ್ಲ ಮೀನಂತೆ

ನಿನ್ನ ಬೊಗಸೆ ಪ್ರೀತಿಗೆ ಕೈಚಾಚಿದ್ದು

ಮರೀಚಿಕೆಯಾಯ್ತು

ನಲ್ಲನ ಚಕ್ರವ್ಯೂಹದಲ್ಲಿ ಸಿಲುಕಿ ಬಂಧಿಯಾದ ಭಾವಗಳ ಅನಾವರಣ ಕಾಣಬಹುದು. ಪ್ರೀತಿಯು ಯಾವಾಗ ಎಲ್ಲಿ ಹೇಗೆ ಸಂಭವಿಸುತ್ತದೆ ಎಂದು ಹೇಳಲಾಗದು‌ ಅದಕ್ಕಾಗಿಯೆ ಪ್ರೀತಿ ಕುರುಡು ಎಂದಿರುವುದು. ಅವನ ಅಪ್ಪುಗೆಯಲ್ಲಿ ಸೆಳೆತವಿದೆ. ನೋಟದಲ್ಲಿ ಹರಿತವಿದೆ. ಜೀವನಪೂರ್ತಿ ಅವನ ತೋಳಬಂದಿ ಯಾಗಿರಬೇಕೆಂಬ ಕನಸು ಹೇರಳವಾಗಿದೆ. ಪ್ರೀತಿಯ ಮುಂದೆ ಜಗತ್ತು ಶೂನ್ಯವೆಂದು ನಂಬಿದ್ದಾಳೆ. ಸಂತಸದ ಬಾಳ ದಾರಿಯಲ್ಲಿ ನಡೆಯುವ ಕನಸು ಕಾಣುತ್ತಿದ್ದಾಳೆ.

ಆದರೆ ಈಗ ಅವನ ಗುಣ ಸ್ವಭಾವಗಳು ಇವಳಿಗೆ ಅರಿವಾಗಿವೆ ಪ್ರೀತಿಗೆ ನಂಬಿಕೆಯೇ ಅಡಿಪಾಯ. ಅದೀಗ ಕುಸಿದಿದೆ. ಅವಳ ಭಾವಗಳಿಗೆ ಅವನ ನಡವಳಿಕೆ ಬಲವಾದ ಪೆಟ್ಟು ಕೊಟ್ಟಿದೆ. ಅಪಾರ್ಥಗಳಿಗೆ ಜಾಗ ನೀಡದ ಪ್ರೀತಿಯ ಮಹಲಿನಲ್ಲಿ ಅಪನಂಬಿಕೆಗಳು ತಾಂಡವಾಡುತ್ತಿವೆ.ಪ್ರೀತಿಯ ಗೆಲುವಿಗೆ ಕಾರಣವಾಗುವ ಯಾವ ಲಕ್ಷಣಗಳು ಈಗ ಅವಳಿಗೆ ಕಾಣುತ್ತಿಲ್ಲ.ಭರವಸೆಯ ಬಾಗಿಲುಗಳು ಮುಚ್ಚಿಕೊಂಡಿವೆ.

ಪ್ರೀತಿಯೆಂದರೆ ಎರಡು ದೇಹಗಳ ಮಿಲನವಲ್ಲ. ಎರಡು ಪವಿತ್ರ ಮನಸ್ಸುಗಳ ಸಮ್ಮಿಲನ ಎಂದು ಭಾವಿಸಿದ ಇವಳ ಆಶಾಗೋಪುರ ಮಾಯಜಿಂಕೆಯಂತೆ ಭಾಸವಾಗುತ್ತಿದೆ.ಕೈತಪ್ಪಿದ ಪ್ರೀತಿ  ನೋವು ಕೊಡುತ್ತಿದೆ. ನುಂಗಲಾರದ ತುತ್ತಾಗಿ ಕಾಡುತ್ತಿದೆ. ಅವನು ಮನಸ್ಸಿಗೆ ಮಾಡಿದ ಗಾಯವನ್ನು ಮರೆಯಲಾಗದೆ ದುಃಖಿಸುತ್ತಿದ್ದಾಳೆ

ಇಲ್ಲಿ ತನ್ನ ಸಖನನ್ನು ಪ್ರಶ್ನಿಸುತ್ತಾಳೆ. ಏನಿತ್ತು ನಿನ್ನಲ್ಲಿ ಒಳಗೊಳ್ಳುವಂತದ್ದು.ಯಾವ ಗುಟ್ಟನ್ನು ಮನದಲ್ಲಿಟ್ಟುಕೊಂಡು ನನ್ನ ಬಳಿ ಪ್ರೀತಿಗಾಗಿ ಬಂದೆ. ನಾನು ಸತ್ಯವೆಂದು ನಂಬಿ ಪ್ರೇಮಾರಾಧನೆ ಮಾಡಿದೆ. ನಿಜವಾಗಿ ಪ್ರೀತಿಸಿದಂತೆ ಪ್ರೀತಿಯ ತುಡಿತ ಮಿಡಿತವಿರುವಂತೆ ನೀನು ನಟಿಸಿದೆ. ನೀನೊಬ್ಬ ಪ್ರೀತಿಯ ನಾಟಕವಾಡುವ ನಟ ಭಯಂಕರ ಎನ್ನುತ್ತಾರೆ.

ನಂಬಿಕೆ ವಿಶ್ವಾಸಗಳೆಂಬ ತೈಲವನೆರೆದು, ಕಾಳಜಿ ಭರವಸೆ ಆಶಾವಾದಗಳೆಂಬ ಬತ್ತಿಯನ್ನು ಹಾಕಿ, ಪ್ರೀತಿಯೆಂಬ ಜ್ಯೋತಿಯನ್ನು ಹಚ್ಚಬೇಕಿದೆ. ನೀನು ಯಾವ ಎಣ್ಣೆಯನ್ನು ಹಾಕದೆ ಪ್ರೀತಿಗೆ ಮೀಟುಕಾಡಿ ಅಂದರೆ ಬೆಂಕಿಯ ಕಿಡಿಯನ್ನು ಹಚ್ಚಿ, ಬತ್ತಿ ಎಣ್ಣೆಗಳಿಲ್ಲದೆ ಪ್ರೀತಿಯನ್ನು ಉರಿಸಿಬಿಟ್ಟೆಯಲ್ಲ ಎನ್ನುತ್ತಾರೆ. ಇಲ್ಲಿ ಪ್ರೀತಿಗಾದ ಮೋಸವನ್ನು ಅದ್ಭುತವಾದ ಪದೇ ಭಾವಗಳಲ್ಲಿ ಮನಮಿಡಿಯುವಂತೆ ಕಟ್ಟಿಕೊಟ್ಟಿದ್ದಾರೆ.

ಪ್ರೀತಿಯೆಂಬ ಗಾಳದಲ್ಲಿ ಸಿಕ್ಕ ಮೀನು ನಾನಾಗಿದ್ದೆ .ನಿನ್ನ ಒಲವಿನ ನೆನಪುಗಳಲ್ಲಿ, ನಿನ್ನ ನೆನಪುಗಳ ಕನವರಿಕೆಯಲ್ಲಿ ಮುಳುಗಿದ್ದು ನಾನು ಅಕ್ಷರಶಃ ನಿನ್ನೊಳು ಲೀನವಾಗಿದ್ದು, ಅದು ನೆನಪಾಗೆ ಉಳಿದಾಗ ನಾನು ನೀರಿನಿಂದ ಹೊರತೆಗೆದ ಮೀನಿನಂತೆ ಆಗಿ ನನ್ನ ಮನಸ್ಸು ನೀನಿಲ್ಲದೆ ವಿಲವಿಲ ಒದ್ದಾಡಿತು. ನಾನೇನು ನಿನ್ನಿಂದ ಸಕಲೇಶ್ವರಗಳನ್ನು ಬಯಸಲಿಲ್ಲ. ನಾನು ಆಸೆ ಪಟ್ಟಿದ್ದು ನಿನ್ನ ಒಂದು ಬೊಗಸೆ ಪ್ರೀತಿಯನ್ನು. ಆದರೆ  ನನ್ನ ಪಾಲಿಗೆ ಅದು ಮರಿಚಿಕೆಯಾಗಿದೆ ಎಂದು ಪರಿಪರಿಯಾಗಿ ರೋಧಿಸುತ್ತಾಳೆ‌

ನಿನ್ನ ಕಾಮಾಲೆ ಭಾವಕೆ.

ಹಾದರದ ಮನಕೆ ಚಾದರವ

ಹೊದಿಸೊ ನಾಟಕದೊಳಗೆ

ಬೆಂದಿದ್ದು ಮುಖಮಲ್ಲೆ.

ಏಳುತೂಕದ ಮಲ್ಲೆ ನೆನಪುಗಳು

ಮಕಾಡೆ ಮಲಗಿ

ರೋದಿಸಿದ್ದು ಸುಡುಗಾಡಲ್ಲೆ

ಕಾಮಲೆ ಕಣ್ಣಿಗೆ ಲೋಕವೆಲ್ಲಾ ಹಳದಿ. ಎನ್ನುವ ನಾಣ್ಣುಡಿಯಂತೆ ನಿನ್ನ ಮನಸ್ಸು ಅಪವಿತ್ರವಾಗಿದೆ. ಚಂಚಲವಾಗಿದೆ. ಇದರಿಂದ ನೀನು ನನ್ನನ್ನು ನಂಬುತ್ತಿಲ್ಲ. ನನ್ನ ಪ್ರೀತಿ ಪರಮ ಪವಿತ್ರವಾದರೂ ನೀನು ಅದನ್ನು ನಿನ್ನದೆ ದೃಷ್ಟಿಕೋನದಲ್ಲಿ ನೋಡುತ್ತಿದ್ದೀಯಾ ಎನ್ನುತ್ತಾ ನಿನ್ನದು ವ್ಯಭಿಚಾರಿ ಮನಸ್ಸು ಆದರೆ ಅದು ಗೋಚರಿಸದಂತೆ ಅದಕ್ಕೆ ಚಾದರವನ್ನು ಹೊದಿಸಿ ನಾಟಕವಾಡುತ್ತಿದ್ದೆ ಎನ್ನುತ್ತಾರೆ.

ನಿನ್ನ ವಿಕೃತ ಮನಸ್ಸಿಗೆ ರೇಷ್ಮೆಯ ಜರತಾರಿಯಿಂದ ಅಲಂಕೃತವಾದ ವಸ್ತ್ರವನ್ನು ಹೊದಿಸಿರುವೆ. ಅಂದರೆ ನಿನ್ನ ನೈಜತೆಯನ್ನು ಮರೆಮಾಡಿ ಬಣ್ಣಬಣ್ಣದ ಮಾತುಗಳಾಡಿ ಬೆರಗುಗೊಳಿಸಿ, ತೊಟ್ಟು ಮುಖವಾಡ ಯಾರಿಗೂ ಕಾಣದಂತೆ ಬಚ್ಚಿಟ್ಟಿರುವೆ. ಆದರೆ ಈ ರಂಗಿನಾಟದಲ್ಲಿ ಬೆಂದು ಬಲಿಯಾಗಿದ್ದು ಅಮಾಯಕಿಯಾದ ನಾನು ಎಂದು ತನ್ನ ಮನದ ನೋವನ್ನು ಈ ಸಾಲುಗಳ ಮೂಲಕ ಹೊರ ಹಾಕಿದ್ದಾರೆ.

ನನ್ನ ಮನದ ಅಭಿಲಾಷೆಗಳು ಅಭೀಪ್ಸೆಗಳು ಏಳು ತೂಕದ ಮಲ್ಲೆಯಂತೆ ಪ್ರಪುಲ್ಲವಾಗಿ ಅರಳಿ  ಒಲವ ತೋಟದಲ್ಲಿ ಸುಗಂಧವನ್ನು ಸೂಸುತಿದ್ದವು. ಆದರೆ ನಿನ್ನಗಲಿಕೆಯಿಂದ ಈ ಎಲ್ಲಾ ನೆನಪುಗಳು ಮಕಾಡೆ ಮಲಗಿ ಈಡೇರದ ದುರ್ಗತಿಗೆ ಸುಡುಗಾಡಲ್ಲಿ ರೋಧಿಸುತ್ತಿವೆ. ಇಲ್ಲಿ ಸುಡುಗಾಡು ಮನಸ್ಸಿಗೆ ರೂಪಕವಾಗಿ ಮೂಡಿಬಂದಿದೆ.

ಬೆಳದಿಂಗಳ ರಾತ್ರಿಗೆ

ಸೋರಿದ್ದು ಕನಸಲ್ಲ

ತಿದ್ದಿ ತೀಡಿದ ನನಸುಗಳ ನಕ್ಷತ್ರಪುಂಜ

ತಣ್ಣನೆ ತಂಪಿರುಳಿಗೆ

ಕದ್ದಿಂಗಳಂತಹ ನೆನಪಮಾಲೆಗೆ

ಕೊರಳೊಡ್ಡಿದೆ ಇರುಳು.

ಕೈಚಾಚಿ ಅಪ್ಪಿ ಮುದ್ದಾಡಿದ

ಕೈಯೊಳಗು ಮನದೊಳಗೂ

ನಶೆಯ ಗುಡಾಣ

ಮತ್ತಿನಲೂ ಬಿತ್ತಿದಬೀಜ

ಹಸನ ಪಸೆ ಒಡೆಯಲಿಲ್ಲ

ಪಸೆ ಆರಿಸಿ ರಸ ಹೀರಿದ ತೂತು

ಪ್ರೀತಿಯೊರತೆ ಚಿಮ್ಮಿಸದೆ

ನಖಶಿಖಾಂತ ಉರಿದು ಸುಡಾಗಿದೆ

ಪ್ರೀತಿಯಲ್ಲಿ ಮುಳುಗಿದ ಪ್ರೇಮಿಗಳು ಚಂದಿರನೂರಿನಲ್ಲಿ ವಿಹರಿಸಿದ ಪರಿ ಅನನ್ಯ. ಬೆಳದಿಂಗಳು ಪ್ರೇಮಿಗಳಿಗೆ ಸೊಗಸೊ ಸೊಗಸು. ಹುಣ್ಣಿಮೆ ರಾತ್ರಿಯಲ್ಲಿ ಬರೆದ ಪ್ರೇಮ ಕವಿತೆಗಳು ಅಮೋಘ. ಹಾಡಿದ ಪ್ರೇಮಗೀತೆಗಳು ತಂಗಾಳಿಯಲ್ಲಿ ಮಧುರ ಕ್ಷಣಗಳಾಗಿ ಅಮರವಾಗಿವೆ. ಅಂತಹ ಬೆಳದಿಂಗಳ ರಾತ್ರಿಯಲ್ಲಿ ಪ್ರೇಮಿಗಳು ಜೊತೆಯಾಗಿ ತಮ್ಮದೇ ಆದ ಕನಸುಗಳನ್ನು ಕಂಡಿದ್ದಾರೆ. ಅಲ್ಲಿ ಕಂಡ ಸಾವಿರ ಕನಸುಗಳು ಸೋತಿವೆ ಎಂದು ಗೋಗರೆಯುತ್ತ ಸ್ವತಹ ತಾವೇ ಕಂಡ, ತಾವೇ ಸೃಷ್ಟಿಸಿಕೊಂಡ, ತಾರಾಮಂಡಲದ ಕನಸುಗಳನ್ನು ನನಸು ಮಾಡಿಕೊಳ್ಳಲು ಪ್ರೇಮಿಗಳು ಹಾತೊರೆಯುತ್ತಿದ್ದರು.

ಇಲ್ಲಿ ತಂಪಾದ ಇರುಳಿಗೆ ಪ್ರೇಮಿಗಳ ನೆನಪ ಮಾಲೆ ಕದ್ದಿಂಗಳಾಗಿದೆ. ಅಂದರೆ ಕೃಷ್ಣಪಕ್ಷವಾಗುತ್ತಿದೆ. ಇಲ್ಲಿ ಚಂದ್ರಮ ಮಬ್ಬಾಗುತ್ತಾ ಹೋಗುವಂತೆ ಇವರ ಸಿಹಿ ಸವಿನೆನಪುಗಳು ಮನದಿಂದ ದೂರಸರಿದು ಕತ್ತಲ ಕೂಪದಲ್ಲಿ ಮುಳುಗಿಸುತ್ತಿವೆ ಎಂಬ ಆತಂಕ ವ್ಯಕ್ತವಾಗಿದೆ.

ಮನಃಸ್ಪೂರ್ತಿಯಾಗಿ ಪ್ರೀತಿಯನ್ನು ಒಪ್ಪಿಕೊಂಡು ಅಪ್ಪಿಕೊಂಡು ಆರಾಧಿಸುವೆ ಎಂದು ಭಾವಿಸಿದ ಗೆಳತಿಗೆ ಭ್ರಮನಿರಸನವಾಗಿದೆ. ಈ ಪ್ರೀತಿ ಕೇವಲ ಅಮಲಾಗಿ ಕಂಡಿದೆ ಅವನ ದೃಷ್ಟಿಯಲ್ಲಿ. ಅವನ ಮನದೊಳಗೆ ನಿಜ ಪ್ರೀತಿ ಕಾಣುತ್ತಿಲ್ಲ. ಕೇವಲ ಪ್ರೀತಿಯ ನಶೆಯ ಬಂಧಿಯಾಗಿದ್ದಾನೆ.

ಬೈಗು ಬೆಳಗು ಬಾನುಭುವಿಯು

ನೆತ್ತಿಯೆತ್ತರ ಹತ್ತಿ ಕುಳಿತರೂ

ಸುಡುವ ನೆನಪ ಕಿಚ್ಚಿಗೆ ಒಂಟಿತನವೆ

ಉಪ್ಪು ಖಾರ ಮೆಣಸು.

ಮತ್ತೆಂದು ಮರಳಿ ಬಾರದಿರು

ಸುಟ್ಟ ನೆನಪು ಬೂದಿಯಷ್ಟೆ

ತೇಲಿಬಿಡುವೆ

ಪ್ರೀತಿಯ ಮತ್ತಿನಲ್ಲಿ ಬಿತ್ತಿದೆ ಬೀಜವಾದರೂ ಸರಿಯಾಗಿ ತೇವವನ್ನು‌ ಹೀರಿಕೊಂಡು ಅಂದರೆ ಒಲವನ್ನು ಅರ್ಥಮಾಡಿಕೊಂಡು ಸರಿಯಾಗಿ ಚಿಗುರಲಿಲ್ಲ. ಬೆಳೆಯಲಿಲ್ಲ ಎನ್ನುವ ಕವಯತ್ರಿ ಪ್ರೀತಿಯ ಒರತೆ ಚಿಮ್ಮಿಸದೆ ಅಡಿಯಿಂದ ಮುಡಿಯವರೆಗೆ ಉರಿದು ಸುಡಾಗಿದೆ ಎನ್ನುತ್ತಾರೆ. ಒಟ್ಟಾರೆ ಒಂಟಿತನದ ಸಿಹಿ ಕಹಿ ನೆನಪುಗಳು ಈ ಕವನದ ಮೂಲಕ ಸೊಗಸಾಗಿ ಮೂಡಿ ಬಂದಿವೆ. ಅಭಿನಂದನೆಗಳು.

ಕವಿತೆಯಲ್ಲಿ ನಾ ಕಂಡ ಕವಿ ಭಾವ

ಈ ಕವಿತೆಯಲ್ಲಿ ಕವಯತ್ರಿ ಒಂಟಿತನದ ಬೇಗುದಿಯನ್ನು, ಕಳೆದುಕೊಂಡ ಪ್ರೀತಿಯನ್ನು, ನೆನಪುಗಳ ಕಾವನ್ನು ತನ್ನದೇ ಆದ ವಿಶಿಷ್ಟ ರೂಪಕಗಳ ಮೂಲಕ ಸೊಗಸಾಗಿ ಕಟ್ಟಿ‌ ಓದುಗರ ಮುಂದಿಟ್ಟಿದ್ದಾರೆ.ಇಲ್ಲಿ ಪ್ರೀತಿಯ ಕಗ್ಗೊಲೆಯನ್ನು ತಣ್ಣನೆಯ ಪ್ರತಿರೋಧದ ಮೂಲಕ ಅಭಿವ್ಯಕ್ತಪಡಿಸಿದ್ದಾರೆ. ಮೋಸದ ಕರಾಳ ರೂಪದ ದರ್ಶನವನ್ನು ಬಣ್ಣಬಣ್ಣವಾಗಿ ಚಿತ್ರಿಸಿದ್ದಾರೆ. ಪ್ರೀತಿಯ ತೊಳಲಾಟವನ್ನು, ವಂಚನೆಯ ತೀವ್ರತೆಯನ್ನು ಕಠಿಣ ಪದಗಳಲ್ಲಿ ಬರೆಯುತ್ತ , ಮೋಸಗಾರರಿಗೆ ಚಡಿಯೇಟು ಕೊಟ್ಟು, ಪ್ರೇಮಿಸುವ ಅವರಿಗೆ ನೈಜ ಒಲವನರಿಯಲು ಮಾರ್ಗದರ್ಶಿ ದೀವಿಗೆಯಾಗಿ ಕವಿತೆ ಮೂಡಿಬಂದಿದೆ.

ತನ್ನ ಪ್ರೇಮತೋಟದಲ್ಲಿ ನಿಂತು, ಪ್ರೀತಿಗೆ ಬೆಂಕಿ ಬಿದ್ದ ಪರಿಯನ್ನು ಚರ್ಚಿಸುತ್ತಾ ಸಾಗಿದ್ದಾರೆ. ಇವರು ಬೆಂಕಿಯಂತಹ ಕಥಾ ವಸ್ತುವನ್ನಿಟ್ಟುಕೊಂಡು, ಸುಡುವ ಕೆಂಡದ ಕೆನ್ನಾಲಿಗೆಯಲ್ಲಿ ಕುಳಿತಿದ್ದರೂ, ತಂಪಾದ ಮಂಜುಗಡ್ಡೆಯಂತೆ ಮೋಸಗಾರರಿಗೆ ಪೆಟ್ಟು ಕೊಡುತ್ತಾರೆ. ಮಂಜುಗಡ್ಡೆ ತಂಪೆಂದ ಮಾತ್ರಕ್ಕೆ ಅದರಲ್ಲಿ ತೀವ್ರತೆ ಇಲ್ಲವೆಂದಲ್ಲ. ಇವರ ಆಕ್ರೋಶವು ಸಹಾ ಹಾಗೆ ಸಾತ್ವಿಕವಾಗಿ ಪ್ರೀತಿಯ ಮೋಸಗಾರರಿಗೆ ಪಾಠ ಕಲಿಸುತ್ತದೆ.

ಇವರ ಕವನ ಕಟ್ಟುವ ಕಸುಬುದಾರಿಕೆ ಮೆಚ್ಚುವಂತದ್ದು. ಇಲ್ಲಿ ಪದಗಳಲ್ಲಿ ಭಾವಾವೇಶ ವ್ಯಕ್ತವಾಗಿದೆ. ಪ್ರೀತಿಗೆ ಮೋಸ ಮಾಡಿದ್ದಕ್ಕೆ ತಕರಾರು ಎತ್ತುವ ಕವಯತ್ರಿ ತನ್ನ ಆಕ್ರೋಶವನ್ನು ಆ ಮೂಲಕ ಹೊರಹಾಕಿದ್ದಾರೆ. ಇಲ್ಲಿ ಕವಯತ್ರಿಗೆ ಭಾಷಾ ಹಿಡಿತವಿದ್ದು ಸೊಗಸಾದ ಪದ

ಭಾವ ಸಂಯೋಜನೆಯ ಮೂಲಕ ಕಲಾತ್ಮಕ ಕಲೆಗಾರಿಕೆ ತೋರಿದ್ದಾರೆ.

ಇಲ್ಲಿ ಕವಿತೆ ನೇರವಾಗಿ ಏನನ್ನು ಹೇಳದೆ ಮಾರ್ಮಿಕವಾಗಿ ಒಡಲಾಳದ ಪ್ರೀತಿಯನ್ನು ಎಳೆಎಳೆಯಾಗಿ ಬಿಡಿಸುತ್ತಾ ಸಾಗಿದ್ದಾರೆ. ಕಳೆದುಹೋದ ದಿನಗಳನ್ನು ಕನವರಿಸುತ್ತ ಅದನ್ನು ಪಡೆಯಲಾಗದೆ ಎಂದು ಹಂಬಲಿಸುತ್ತಾರೆ.

ಈ ಕವಿತೆ ಸೂಕ್ಷ್ಮವಾದ ಹೊಳಹುಗಳನ್ನು ಹೊಂದಿದ್ದು ಓದಿದ ಕಂಗಳನ್ನು ಒದ್ದೆಯಾಗಿಸುತ್ತದೆ .ಇವರು ಉತ್ಸಾಹಿ ಕವಯತ್ರಿ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಮೋಸ ವಿರಹ ಭಾವಗಳಿವೆ.ಒಟ್ಟಾರೆ ವಿರಹಕ್ಕಿಂತ ಪ್ರೇಮದ ಕಗ್ಗೊಲೆ ಸ್ಥಾಯಿಯಾಗಿದೆ. ಒಲವಿಲ್ಲಿ ಮಸಣವಾಗುವ ಪರಿಯನ್ನು ಕವಯತ್ರಿ ಎಲ್ಲರಿಗೂ ಅರ್ಥವಾಗುವಂತೆ ರಚಿಸಿದ್ದಾರೆ.

ನನ್ನ ಇಂದಿನ ಕವಿ ಕಾವ್ಯ ಪರಿಚಯ ನಿಮಗೆಲ್ಲಾ ಓದಿನ ತೃಪ್ತಿಯನ್ನು ನೀಡಿದೆ ಎಂದು ಭಾವಿಸಿರುವೆ.

ಮುಂದಿನ ವಾರ ಮತ್ತೊಂದು ಕಾವ್ಯ ವಸ್ತುವಿನೊಂದಿಗೆ ನಿಮ್ಮ ಓದಿನ ನಿರೀಕ್ಷೆ ಹೊತ್ತು ನಾ ಬರುವೆ.


ಅನುಸೂಯ ಯತೀಶ್

ಅನುಸೂಯ ಯತೀಶ್ ಇವರು ನೆಲಮಂಗಲದ ನಿವಾಸಿ. ಸ್ನಾತಕೋತ್ತರ ಪದವೀಧರೆಯಾದ ಇವರು ಮಾಗಡಿ ತಾಲ್ಲೂಕಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರು ಶಿಕ್ಷಣ ಇಲಾಖೆಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸರ್ಕಾರಿ ನೌಕರರ ಸಂಘದಿಂದ ಸೇವಾರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಾಹಿತ್ಯ ವಿಮರ್ಶೆ, ಕಥೆ, ಕವನ,ಗಜಲ್, ಲೇಖನ,ಛಂಧೋಬದ್ದ ಕವನಗಳ ರಚನೆ ಸೇರಿದಂತೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ರಚಿಸುತಿದ್ದಾರೆ

Leave a Reply

Back To Top