ಅಂಕಣ ಸಂಗಾತಿ
ಸಕಾಲ
ನಮ್ಮಒಡನಾಡಿಗೊಂದುಷ್ಟುಕಾಳಜಿ..
ಚಿಂವ್ ಚಿಂವ್ ಗುಬ್ಬಿ
ಮನದೊಳಗೆ ಹಬ್ಬಿ
ಪುರ್ ಪುರ್ ಎಂದು
ಹಣ್ಣು ಕಾಳು ತಿಂದು
ಸರತಿಯ ಸಾಲಲಿ ಕುಂತು
ಗುಟ್ಟನು ಹೇಳುವುದೆಂತೂ…
ಶಿವಲೀಲಾಮೃತ
ಒಗ್ಗಟ್ಟಿನಲ್ಲಿ ಬಲವಿದೆಯೆಂಬಂತೆ ಸಾಲುಸಾಲಾಗಿ ವಿದ್ಯುತ್ ತಂತಿಯ ಮೇಲೆ ಕುಳಿತು ಸಾವಿರ ಮಾತುಗಳ ಮೂಲಕ ಎಲ್ಲರ ಚಿತ್ರವನ್ನು ತನ್ನತ್ತ ಸೆಳೆಯುವ ಆ ಪುಟಾಣಿ ಲೈಟ್ ವೇಟ್ ಚಿನ್ಕುಳಿಗಳ ನೆನೆದಾಗೊಮ್ಮೆ ಆಹ್ಲಾದಕರ ವಾತಾವರಣ ನಿರ್ಮಾಣ.ಗುಬ್ಬಚ್ಚಿ ಗೂಡುಗಳು, ಅವುಗಳ ಚಿಲಿಪಿಲಿ ನಾದಕೆ ಮನಸೋಲದವರಾರು? ಬಾಲ್ಯದಲ್ಲಿ ಕಂಡ ಗುಬ್ಬಿಗಳು ಇಂದು ತುಂಬಾ ವಿರಳ.ಅವರ ಪೂರ್ವಜರು ಇದ್ದರೆಂದು ಇತಿಹಾಸ ಹೇಳಿದರೂ ಅದನರಿತು ಮುನ್ನಡೆವ ಗುಬ್ಬಿಗಳು ನಮ್ಮಂತೆ ಕಲಿತವರಾ? ಕಲಿತವರಿಂದಾದ ವಿನಾಶಕ್ಕೆ ಬಲಿಯಾದ ಮುಗ್ಧ ಜೀವಿಗಳು.
ಮೊಟ್ಟ ಮೊದಲ ಬಾರಿಗೆ 2010 ಮಾರ್ಚ್ 20 ರಂದು ಗುಬ್ಬಚ್ಚಿ ದಿನವನ್ನು ಆಚರಿಸಲಾಯಿತು. ಇದಾದ ಮೇಲೆ ಭಾರತ ಸೇರಿದಂತೆ ಎಲ್ಲಾ ದೇಶಗಳಲ್ಲಿ ಪ್ರತೀ ವರ್ಷ ಮಾರ್ಚ್20 ರಂದು ಗುಬ್ಬಿ ದಿನವನ್ನಾಗಿ ಆಚರಿಸುತ್ತಾರೆ ಭಾರತದ “ನೇಚರ್ ಫಾರೆವರ್ ಸೊಸೈಟಿಯನ್ನು ಭಾರತೀಯ ಸಂರಕ್ಷಣಾವಾದಿ ಮೊಹಮ್ಮದ್ ದಿಲವಾರ್ ಸ್ಥಾಪನೆ ಮಾಡಿ,ಗುಬ್ಬಚ್ಚಿಯ ಸಂರಕ್ಷಣೆಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಲವಾರು ವರ್ಷಗಳಿಂದ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ.ಗುಬ್ಬಿಗಳಿಗೆ ಹಿಡಿಕಾಳು,ದಣಿದ ದೇಹಕೆ ನೀರುಣಿಸದೆ ಇರಲು ಆದಿತೆ?
2021 ಗುಬ್ಬಚ್ಚಿ ದಿನದ ಥೀಮ್ I love Sparrows. ಇದೇ ಹಿನ್ನೆಲೆಯಲ್ಲಿ ಗುಬ್ಬಿಗಳ ಸಂತತಿಯನ್ನು ರಕ್ಷಣೆ ಮಾಡುವುದರ ಜೊತೆ ಜೀವ ವೈವಿದ್ಯತೆಯನ್ನು ಉಳಿಸಿಕೊಂಡು ಮತ್ತು ಬೆಳೆಸಿಕೊಂಡು ಹೋಗುವುದೇ ಈ ವರ್ಷದ ಗುಬ್ಬಿ ದಿನದ ಧ್ಯೇಯವಾಗಿದೆ. ಮಾನವ ಮತ್ತು ಗುಬ್ಬಿಗಳ ನಡುವಿನ ಬಾಂಧವ್ಯ ಸುಮಾರು 10,000 ವರ್ಷಗಳಿಂದ ಇದೆ.ಮನುಷ್ಯನ ಒಡನಾಡಿ ಆದರೂ ಅವುಗಳ ಸಂರಕ್ಷಣೆಯತ್ತ ಹೆಜ್ಹೆಯಿಡುವ ಪ್ರಯತ್ನ ಅಲ್ಪಸ್ವಲ್ಪ ಪ್ರಮಾಣದಲ್ಲಿ ಮಾಡಿದರೆ ಅವು ಬದುಕಿರಲು ಸಾಧ್ಯವಾ?ಮೂಲ ಉದ್ದೇಶ ಗುಬ್ಬಚ್ಚಿಗಳ ರಕ್ಷಣೆ ಮಾಡುವ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ
ಕಳೆದ ಕೆಲವು ವರ್ಷಗಳ ಹಿಂದೆ ಗುಬ್ಬಚ್ಚಿಯು ಮನೆ ಚಪ್ಪರದಲ್ಲಿ ಗೂಡು ಕಟ್ಟಿಕೊಂಡು ಸ್ವತಂತ್ರವಾಗಿ ಬದುಕುತ್ತಿತ್ತು.ಕೆಲವು ಬಾರಿ ಮನೆಯ ಒಳಗಡೆ ಬಂದು ಸದ್ದು ಮಾಡುತ್ತ ಬದುಕುತ್ತಿತ್ತು.ಆದ್ರೆ ದಿನಗಳೆದಂತೆ ಶಬ್ದ ಮಾಲಿನ್ಯ ಹೆಚ್ಚಾಗುತ್ತಿದ್ದು ಅದರ ಪರಿಣಾಮ ಗುಬ್ಬಿಯ ಸಂತತಿ ಹಂತಹಂತವಾಗಿ ಕ್ಷೀಣಿಸುತ್ತಿದೆ.
ಎಲ್ಲರ ಮನದಲ್ಲಿ ಈ ಪುಟಾಣಿಗಳ ಬದುಕು ಈ ಜೀವ ಸಂಕುಲಕ್ಕೆ ಅನಿವಾರ್ಯತೆ ಇದೆ ಎಂಬುದನ್ನು ಮನಗಂಡು “ವಿಶ್ವ ಗುಬ್ಬಚ್ಚಿ” ದಿನವನ್ನು ಭಾರತದ ನೇಚರ್ ಫಾರೆವರ್ ಸೊಸೈಟಿ, ಇಕೋ-ಸಿಸ್ ಆಕ್ಷನ್ ಫೌಂಡೇಶನ್ (ಫ್ರಾನ್ಸ್) ಮತ್ತು ಪ್ರಪಂಚದಾದ್ಯಂತದ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಸಹಯೋಗದೊಂದಿಗೆ ಗುಬ್ಬಚ್ಚಿ ಮತ್ತು ಇತರ ಪಕ್ಷಿಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರಾರಂಭಿಸಲಾಗಿದೆ.ಈ ಮೂಲಕ ನಾವು ಗೂಡುಗಳನ್ನು ನಿರ್ಮಿಸಿ, ಬೇಸಿಗೆಯಲ್ಲಿ ಗುಬ್ಬಚ್ಚಿಗಳಿಗೆ ನೀರಿನ ವ್ಯವಸ್ಥೆ ಮಾಡುವುದು ಅನಿವಾರ್ಯ.ಅವು ಎಲ್ಲಿ ಹೋಗಬೇಕು? ಅವುಗಳಿಗೆ ಸುರಕ್ಷಿತ ವಾಸಸ್ಥಳವಿಲ್ಲ.ಹೀಗಾಗಿ ಮಾನವೀಯ ಮೌಲ್ಯಗಳನ್ನು ಮಾತಾಡುವ ನಾವುಗಳು ಪಕ್ಷಿಗಳನ್ನು ರಕ್ಷಿಸಲು ಪುಟ್ಟ ಉದ್ಯಾನ ಸಿದ್ದ ಮಾಡುವುದು ಜೊತೆಗೆ,ನಮ್ಮ ನಮ್ಮ ಮನೆಗಳ ಚಾವಣಿ ಮೇಲೆ ಪಕ್ಷಿಗಳು ವಾಸಿಸಲು ಅನುವು ಮಾಡುಕೊಡುವುದು.ಪರೋಕ್ಷವಾಗಿ ಸಹಾಯ ಸಲ್ಲಿಸಿದಂತೆ.
ನಮ್ಮ ಸಣ್ಣ ಪ್ರಯತ್ನವಿಷ್ಟೆ.ಕೈ ತೋಟಗಳಲ್ಲಿ ವೈವಿದ್ಯಮಯ ಹೂವಿನ ಗಿಡಗಳನ್ನು ಬೆಳೆಸಿದ್ದರೆ, ಅಲ್ಲಿಯೇ ಗುಬ್ಬಿಚ್ಚಿಗಳಿಗೆ ತಿನ್ನಲು ಸಿರಿಧ್ಯಾನಗಳಬೌಲ್ ಹಣ್ಣು ಮತ್ತು ಕುಡಿಯಲು ನೀರನ್ನು ಮಣ್ಣಿನ ಪಾತ್ರೆಯಲ್ಲಿ ಅಥವಾ ಅಗಲದ ವೃತ್ತಾಕಾರದ ಪಾತ್ರೆಗಳಲ್ಲಿ ಇಡುವುದರಿಂದ ಅವು ಸ್ವತಂತ್ರವಾಗಿ ಅವು ಬಂದು ವಾಸಿಸುತ್ತ ಅಲ್ಲಿಯೇ ತಳವೂರುತ್ತವೆ. ಅದರ ಫಲವಾಗಿ ಅವು ಗಿಡಗಳಿಗೆ ಬರುವ ಹುಳುಗಳನ್ನು ಸಹಾ ಅವು ತಿನ್ನುತ್ತವೆ.ಸುರಕ್ಷಿತ ಭಾವನೆ ಮತ್ತು ಆಹಾರ ಲಭ್ಯತೆ ಅವುಗಳಿಗೆ ಇಲ್ಲಿ ಸಂತಾನಭಿವೃದ್ಧಿ ಮಾಡಲು ಪ್ರೇರಣೆಯಾಗುವುದಕ್ಕೆ ಸಹಕರಿಸಿದ ಪುಣ್ಯ ನಮ್ಮದಾಗಬೇಕು.ಪುಟ್ಟ ಗುಬ್ಬಿ ಚಿಂವ್ ಚಿಂವ್ ಅನ್ನುವ ಧ್ವನಿ ಕೇಳಲು ಎಷ್ಟು ಸುಮಧುರ.ಅವುಗಳ ಹಾರಾಟ ಮಕ್ಕಳ ಮನಸ್ಸನ್ನು ಹಿಡಿದಿಡಲು ಸಹಕಾರಿ.
ತುಂಗಭದ್ರಾ ಬಡಾವಣೆಯಲ್ಲಿ ಅತಿ ಹೆಚ್ಚು ಗುಬ್ಬಚ್ಚಿಗಳು ಕಂಡು ಬಂದವು ಎಂಬ ಸುದ್ದಿ ಓದಿದ್ದಿದೆ. ಕಾರಣ ಅಲ್ಲಿ ಒಂದು ಮನೆಯವರು ತೆಂಗಿನ ಚಿಪ್ಪಿನಲ್ಲಿ ಗೂಡು ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ. ಸುತ್ತಲೂ ಕೃಷಿ ಭೂಮಿ ಇರುವುದು ಸಹ ಅನುಕೂಲ. ಹಾಗಾಗಿ ಸ್ವಲ್ಪ ಜಾಗವಿರುವವರು ಮಣ್ಣಿನ ಅಥವಾ ಮರದ ಪೆಟ್ಟಿಗೆಯ ಗೂಡುಗಳನ್ನು ತಮ್ಮ ಮನೆಯ ಚಾವಣಿಗಳಲ್ಲಿ ಇಡಬಹುದು.ಇಂತಹ ಗೂಡುಗಳು ಆನ್‌ಲೈನ್‌ನಲ್ಲಿ ಸಹ ಲಭ್ಯವಿದೆ. ಇತ್ತೀಚಿನ ವರದಿಯಂತೆ ಗುಬ್ಬಚ್ಚಿಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚುತ್ತಿದೆಯೆಂಬ ಅಂಶ ಖುಚಿಕೊಟ್ಟರೂ ಜವಾಬ್ದಾರಿ ಯಾರ ಮೇಲಿದೆಯೆಂಬುದನು ಅರಿತರೆ ಒಳಿತು.ಬರಿ ಚಿತ್ರಗಳಲ್ಲಿ ತೋರಿಸುವ ಹವ್ಯಾಸ ಬಿಟ್ಟು ನೈಜತೆಗೆ ಅವುಗಳ ಉಳಿವಿನತ್ತ ಗಂಭೀರವಾದರೆ ಎಲ್ಲವೂ ಸೂಕ್ತ. ಶಬ್ದ ಮಾಲಿನ್ಯ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲು ಕಾನೂನು ಬೇಡ ನಾವು ಪಕ್ಷಿಗಳ ಸಂರಕ್ಷಣೆ ನಮ್ಮ ಹೊಣೆಯೆಂದು ಭಾವಿಸಿದಾಗ ಮಾತ್ರ ಸಾಧ್ಯ.
ಗುಬ್ಬಚ್ಚಿಗಳಿಗೆ ಮಾಲಿನ್ಯಗೊಂಡ ಪರಿಸರದಲ್ಲಿ ಉಸಿರಾಡಲು ಕಷ್ಟ ಪಡಬೇಕು.ಅವುಗಳಿಗೆ ಬದುಕುವ ವಾತಾವರಣ ಮರು ಸೃಷ್ಟಿಯಾಗಬೇಕಾಗಿದ್ದು ಹಿಂದಿಗಿಂತ ಇಂದಿಗೆ ಪ್ರಸ್ತುತ.ಶಾಲೆ ಕಾಲೇಜುಗಳಲ್ಲಿ ಅರಿವು ಜಾಗೃತಿ ಮೂಡಿಸಿ, ಸಂರಕ್ಷಿಸುವ ಮನೋಭಾವ ಮಾತ್ರ ವಿಶ್ವ ಗುಬ್ಬಿ ದಿನಕ್ಕೆ ನಾವು ಸಲ್ಲಿಸುವ ಗೌರವ.ಪುನಃ ನಮ್ಮ ಮಕ್ಕಳಿಗೆ ಗುಬ್ಬಿಗಳ ಸಂತತಿಯನ್ನು ವರ್ಗಾವಣೆ ಮಾಡಿದಂತೆ.ಬದುಕು ನಮ್ಮೊಬ್ಬರದೇ ಅಲ್ಲ,ಜಗತ್ತಿನಲ್ಲಿ ವಾಸಿಸುವ ಎಲ್ಲರದು ಬದುಕೇ…ಅವುಗಳ ಉಳಿವು,ಅಳಿವು,ಅರಿವು ಮೂರು ನಮಗಿರಬೇಕು.ಪ್ರಕೃತಿ ಸಮತೋಲನ ಕಾಯ್ದುಕೊಂಡಷ್ಟು ನಾವುಗಳು ಸುರಕ್ಷಿತ. ಅಸಮತೋಲನಕ್ಕೆ ನಿರಪರಾಧಿಗಳು ಬೆಲೆ ತೆತ್ತಬೇಕಾಗಿದ್ದು ವಿಪರ್ಯಾಸ..ಹಾಗಾಗದಂತೆ ಮುನ್ನಡೆಯುವ ಸಂಕಲ್ಪ ನಮ್ಮದಾರೆ ಒಳಿತೆಂಬ ಭಾವ
ಶಿವಲೀಲಾ ಹುಣಸಗಿ
ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ…
ಗುಬ್ಬಚ್ಚಿ ಸಂತತಿ ಬೆಳೆಯಬೇಕು. ಎಲ್ಲರೂ ಅವುಗಳಿಗೆ ಬದುಕಲು ಆಶ್ರಯ ಮಾಡಿಕೊಡಬೇಕು. ಅಭಿನಂದನೆಗಳು
ಚೆಂದ ವಿಷಯ.
ಬೇಸಿಗೆಯ ಬೇಗೆಯಲ್ಲಿ ಓದಿದ ಮನಸ್ಸಿಗೆ ತಂಪೆರಿಯುವ ಲೇಖನ
ಗುಬ್ಬಚ್ಚಿಗಳಿಗೆ ನೀರೂಣಿಸುವ ಕಾರ್ಯದ ಲೇಖನ ಸೂಪರ್
ಗುಬ್ಬಚ್ಚಿಯ ವಿಶೇಷ ಸುಂದರ ಲೇಖನ ಮೇಡಂ
ಕಾಣೋ ಪುಟ್ಟ ಗುಬ್ಬಿಯ ವಿಶೇಷ ವನ್ನು ವಿಸ್ತಾರತೆಯನ್ನು ಮನ ಮುಟ್ಟುವಂತೆ ಬರೆದ ತಮ್ಮ ಸಾಹಿತ್ಯ ಕೌಶಲ್ಯ ಕ್ಕೆ ಶರಣು ಶರಣು ಮೇಡಂ ರೀ
ಗುಬ್ಬಚ್ಚಿ ಈಗ ಅಪರೂಪ….ಅವುಗಳ ಸಂರಕ್ಷಣೆ ಹಾಗೂ ನೀರು,ಆಹಾರ ಇಡುವ ಚಿಂತನೆ ಪ್ರಸ್ತುತ ಸುಂದರ ಲೇಖನ…