ಅಂಕಣ ಸಂಗಾತಿ

ಕಾವ್ಯದರ್ಪಣ

ಭಾವ ತರಂಗ

ಆಳದ ಅನುಭವವನ್ನು

 ಮಾತು ಕೈ ಹಿಡಿದಾಗ

 ಕಾವು ಬೆಳಕು ಆದಾಗ

 ಮೂಡುವುದು ಕವನ

–  ಕೆ.ಎಸ್. ನರಸಿಂಹ ಸ್ವಾಮಿ

ಕಾವ್ಯ ಪ್ರವೇಶಿಕೆಯ ಮುನ್ನ

ಭಾರತೀಯ ಸಾಹಿತ್ಯ ಲೋಕಕ್ಕೆ ಬಹಳ ಹಿಂದಿನಿಂದಲೂ ಅಭೂತಪೂರ್ವವಾದ ಕೊಡುಗೆ ನೀಡುತ್ತಾ ಬಂದಿರುವುದು ನಮ್ಮ ಕನ್ನಡ ಕಾವ್ಯಪರಂಪರೆಯ ಹೆಗ್ಗಳಿಕೆಯಾಗಿದೆ. ಇಂತಹ ಅಪಾರವಾದ ಕಾವ್ಯದ ಸೃಷ್ಟಿಕರ್ತ ಕವಿ.

“ಕವಿಯು ತನಗೆ ಹೇಗೆ ರುಚಿಸುವುದೊ ಹಾಗೆ ವಿಶ್ವವನ್ನು ಪರಿವರ್ತಿಸುತ್ತಾನೆ” ಎಂದು ಆನಂದವರ್ಧನ ಹೇಳುತ್ತಾರೆ. ಸಾಮಾನ್ಯ ಜನರಿಗೆ ನಿಲುಕದ ಅದೆಷ್ಟೋ ಹೊಳಹುಗಳು ಕವಿ ಮನಸ್ಸಿಗೆ ಗೋಚರಿಸುತ್ತವೆ. ಹಾಗಾಗಿಯೇ “ರವಿ ಕಾಣದ್ದನ್ನು ಕವಿ ಕಂಡ” ಎಂದು ಹಾಡಿರುವುದು. “ಸಾಮಾನ್ಯರು ಒಂದು ವಸ್ತುವಿನ ಬಾಹ್ಯ ಸತ್ಯವನ್ನಷ್ಟೇ ಗ್ರಹಿಸಿದರೆ ಕವಿ ಅದರ ಅಂತಃಸತ್ವವನ್ನು ಗ್ರಹಿಸುತ್ತಾನೆ. ಇತರರಿಗೆ ಖಂಡ ಸತ್ಯ ಮಾತ್ರ ಗೋಚರಿಸಿದರೆ, ಕವಿಗೆ ಪೂರ್ಣ ಸತ್ಯ ಗೋಚರಿಸುತ್ತದೆ. ಕವಿಯಾದವನು ಒಳಹೊಕ್ಕು ವಸ್ತುಗಳ ಜೀವಾಳವನ್ನು ದರ್ಶಿಸುತ್ತಾರೆ” ಎನ್ನುವ ವಿಲಿಯಂ ವರ್ಡ್ಸ್ ವರ್ತ್ ಮಾತುಗಳು ಇತರರು ಇಳಿಯಲಾರದ ಆಳಗಳಿಗೆ ಕವಿ ಇಳಿಯಬಲ್ಲ. ಏರಲಾರದ ಎತ್ತರದ ತಾಣಗಳಿಗೆ ಕವಿ ಏರಬಲ್ಲ. ವಿವಿಧತೆಯಲ್ಲಿ ಸಾದೃಶ್ಯವನ್ನು ಗುರುತಿಸಬಲ್ಲವನಾಗಿದ್ದಾನೆ ಎಂದು ರುಜುವಾತು ಮಾಡುತ್ತವೆ.

ಕಾವ್ಯರಚನೆಗೆ ಸಾರ್ಥಕತೆ ದಕ್ಕುವುದು ಓದುಗರನ್ನು ತಲುಪಿ ಅವರ ಹೃದಯವನ್ನು ಸಂತೈಸಿ ಅವರ ಬದುಕಿನಲ್ಲಿ ಏನಾದರೂ ಸಕಾರಾತ್ಮಕ ಬದಲಾವಣೆಯಾದಾಗ ಎಲ್ಲರ ಮನದಲ್ಲಿ ಕಾವ್ಯ ಚಿರಸ್ಥಾಯಿಯಾಗಿ ಉಳಿಯುವುದು. ಅಂತಹ ಕಾವ್ಯರಚನೆ ಕವಿಮನದಿಂದ ಹೊರಹೊಮ್ಮಬೇಕು. ಅದಕ್ಕಾಗಿಯೇ”ಖಡ್ಗಕ್ಕಿಂತ ಲೇಖನಿ ಹರಿತವಾದದ್ದು” ಎಂದು ವಾಲ್ಟೇನ್ ಹೇಳಿರುವುದು. ಇಡಿ ಸಮಾಜವನ್ನು ಬದಲಾಯಿಸುವ ಶಕ್ತಿ ಈ ಕಾವ್ಯಕ್ಕಿದೆ.

ಯಾವುದೇ ಕಾವ್ಯಕ್ಕಾದರೂ ಸೃಜನಶೀಲತೆಯ ಜೊತೆಗೆ ಜನಪದ ನುಡಿಯಾಗುವ ಸಾಮಾಜಿಕ ಪ್ರಜ್ಞೆ ಪ್ರಧಾನವಾಗಿರಬೇಕು. ಕಾವ್ಯ ಸುಖಾಸುಮ್ಮನೆ ಹುಟ್ಟುವಂತದ್ದಲ್ಲ. ಕಾವ್ಯವೆಂದರೆ ನಮ್ಮ ಮನದೊಳಗಿನ ಭಾವಗಳ ಅಭಿವ್ಯಕ್ತಿ. ತೊರೆಯಾಗಿ ಹರಿದು ಅದು ಕವಿಮನಕೆ ಸ್ಪೂರ್ತಿಯಾಗಿ ಕಾವ್ಯ ಸ್ಪುರಿಸಬೇಕು. ಈ ಪ್ರೇರಣೆಗೆ ಬಾಹ್ಯ ಮತ್ತು ಆಂತರಿಕವಾಗಿರುತ್ತದೆ. ನಾವಿರುವ ಸ್ಥಳ ಘಟನೆಗಳು ವಿಷಯಗಳು ಕಾವ್ಯಕ್ಕೆ ವಸ್ತುವಾಗುತ್ತವೆ. ಅದಕ್ಕಾಗಿ ಕವಿಯಾದವನು ಸಮುದಾಯದಲ್ಲಿನ ಸಂವೇದನೆಗಳಿಗೆ ಸ್ಪಂದಿಸಿ ಕಾವ್ಯ ರಚಿಸಬೇಕು. ಆಗ ಅದು ಜನಪರ ಕಾವ್ಯವಾಗಿ ಸಾಮಾಜಿಕ ಕಳಕಳಿಯ ಬರಹವಾಗಿ ಎಲ್ಲಾ ಕಾಲಮಾನದಲ್ಲೂ ಪ್ರಸ್ತುತವಾಗಿರುತ್ತದೆ.

ನಮ್ಮೊಳಗಿನ ಮೌನ ಮುರಿದು ಅಂತರ್ಗತವಾಗಿರುವ ಭಾವಗಳಿಗೆ ಜೀವ ತುಂಬುವ ಮಾರ್ಗ ಕಾವ್ಯವಾಗಿದೆ. ಕವಿತೆ ಎಲ್ಲರೆದೆಯೊಳಗೂ ಅಡಗಿರುತ್ತದೆ.ಸಮಯ, ಸಂದರ್ಭ, ಅವಕಾಶಗಳಿಗೆ ಅನುಗುಣವಾಗಿ ಅದು ತೆರೆದುಕೊಳ್ಳುತ್ತದೆ. ಅದನ್ನೇ “ಕವಿತೆ ಹುಟ್ಟುವ ಗಳಿಗೆ” ಎನ್ನುವುದು. ಕೆಲವರಿಗೆ ಕೆಲವು ತಾಣಗಳು ಕವಿತೆಗೆ ಸ್ಫೂರ್ತಿ ನೀಡಿದರೆ, ಮತ್ತೆ ಕೆಲವು ಕವಿಗಳು ಪ್ರಕೃತಿಯ ಮಧ್ಯೆ ಕುಳಿತು ಅದನ್ನು ಆಸ್ವಾದಿಸಿ ಕವಿತೆ ಕಟ್ಟುತ್ತಾರೆ,ಮತ್ತೆ ಹಲವರು ತನ್ನ ಸುತ್ತ ಮುತ್ತಲಿರುವ ಸೌಂದರ್ಯವನ್ನು ಕಂಡು ವರ್ಣಿಸುತ್ತಾರೆ. ಮಗದಷ್ಟು  ಮಂದಿ ಏಕಾಂತದಲ್ಲಿ ಮುಳುಗಿ, ಕಲ್ಪನಾ ಲೋಕದಲ್ಲಿ ವಿಹರಿಸಿ, ಕವನ ರಚಸಿದರೆ ಬಹುತೇಕರು‌ ಸಮಾಜದ  ನಡುವೆ ಇದ್ದು ಅಲ್ಲಿನ ವಿಷಯ, ಘಟನೆಗಳು ಮತ್ತು ತಕ್ಷಣದ ಸ್ಪಂದನೆಗಳಿಗೆ ಪ್ರತಿಕ್ರಿಯಿಸಿ ಕವಿತೆ ರೂಪಿಸುತ್ತಾರೆ.

ಕವಿ ಪರಿಚಯ

” ಭಾವತರಂಗ” ಎಂಬ ಕಾವ್ಯನಾಮದಿಂದ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ಲಕ್ಷ್ಮಿ ಹೆಚ್.ಪಿ. ಅವರು ಬಿಕಾಂ ಪದವೀಧರರಾಗಿದ್ದು ಪ್ರಸಕ್ತ ಕರೆಸ್ಪಾಂಡೆನ್ಸ್ ನಲ್ಲಿ ಎಂ.ಬಿ.ಎ. ಕೋರ್ಸ್ ಮಾಡುತ್ತಿದ್ದಾರೆ ಬಿ.ವಿ.ವಿ.ಎಸ್. ಅಮೃತ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ ಸೈನ್ಸ್ ನಲ್ಲಿ ಅಡ್ಮಿನ್ ಆಗಿ ಕಳೆದ ೧೨ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕಥೆ,ಕವನ ಬರೆಯುವ ಜೊತೆಗೆ ಓದುವ ಅಪಾರ ಅಭಿರುಚಿ ಇರುವ ಲಕ್ಷ್ಮಿ ‌ಅವರು ಭಾವಗೀತೆ ಮತ್ತು ಭಕ್ತಿ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ ಹವ್ಯಾಸ ಹೊಂದಿರುವರು.

ಕವಿತೆಯ ಆಶಯ

  “ಕವಿತ್ವ ಬೀಜಂ ಪ್ರತಿಭಾನಂ

            – ವಾಮನ

ಕವನವು ಗದ್ಯಕ್ಕಿಂತ ಭಿನ್ನವಾಗಿ ವಾಚಿಸಲು ಅಥವಾ ಹಾಡಲು ಯೋಗ್ಯವಾದ ಭಾವಗೀತಾತ್ಮಕ ಶೈಲಿಯಲ್ಲಿ ರಚಿತವಾಗುವ ಸಾಹಿತ್ಯಪ್ರಕಾರವಾಗಿದೆ. ಇದು ತೀವ್ರತರವಾದ ಭಾವನೆಗಳನ್ನು ಕೆರಳಿಸುತ್ತದೆ.ಕವನವು ನಮ್ಮ ಭಾವನೆಗಳ ಅಭಿವ್ಯಕ್ತಿಯಾಗಿದ್ದು ಕೆಲವೊಮ್ಮೆ ಅಳಿಸುತ್ತದೆ,ನಗಿಸುತ್ತದೆ,  ಕ್ರೋಧಗೊಳಿಸುತ್ತದೆ, ಆವೇಶಭರಿತರನ್ನಾಗಿಸುತ್ತದೆ,‌ಮಂಜುಗಡ್ಡೆಯಂತೆ ತಣ್ಣಗಾಗಿಸುತ್ತದೆ, ಕಲ್ಪನಾಲೋಕದಲ್ಲಿ ತೇಲಿಸುತ್ತದೆ. ಭಾವಕೋಶವನ್ನು ವಿಸ್ತರಿಸುತ್ತದೆ. ಕವಿಗೆ ಒಳಗಣ್ಢು ಇದ್ದು ಅದು ತೆರೆದಾಗ ಕವಿಯ ಗಮನಕ್ಕೆ ನಿಲುಕದೆ ಇರುವ ವಸ್ತುವೇ ಇಲ್ಲ. ಕಾವ್ಯ ರಚನೆ ಎಂಬುದು ಅಗಾಧವಾದ ಅಸಾಧಾರಣ ಶಕ್ತಿಯಾಗಿದೆ. ಸೊಗಸಾದ ಶಬ್ದ ಭಂಡಾರದಲ್ಲಿ ಕವಿತೆ ರಚಿಸುತ್ತಾರೆ.

ಈ ಕವಿತೆಯಲ್ಲಿ ಕವಯತ್ರಿಯ ಮನೋಗತವಿದೆ. ಕವಿಯತ್ರಿಯು ತನ್ನ ಬದುಕಲ್ಲಿ ಕಂಡು ಕೇಳಿದ ಅನುಭವದ ಅನುಭಾವವನ್ನೇ ಕಾವ್ಯವಾಗಿಸುತ್ತಾರೆ. ಅಂತರಾಳದಲ್ಲಿನ ಅನುರಾಗದಲೆಗಳನ್ನು ಓದುಗರ ಮುಂದೆ ತೆರೆದಿಡುತ್ತಾರೆ. ಅನೇಕ ಸಂಬಂಧಗಳು ಅಪ್ಪ ಅಮ್ಮನ ಒಲವು ಕವಿತೆಯಾಗಿದೆ. ನೋವು ದುಃಖದ ಅಭಿವ್ಯಕ್ತಿಯೇ ಕಾವ್ಯವಾಗಿದೆ. ನಿಸರ್ಗದ ಅಗಾಧ ನೈಸರ್ಗಿಕ ಪರಿಸರ ಇವರ ಕವಿತೆಗಳಿಗೆ ಸ್ಪೂರ್ತಿಯ ತಾಣವಾಗಿದೆ. ಧರೆಯ ತಂಪು ಧಗೆಯುರಿಗಳು ಕವಿತೆಯನ್ನು ಸೃಷ್ಟಿಸಿವೆ.

ಒಟ್ಟಾರೆ ಕವಯತ್ರಿಯ ಬದುಕಿನ ಬಹುತೇಕ ಸಂದರ್ಭಗಳು, ಸ್ಥಳಗಳು, ಪ್ರೀತಿ,ಪ್ರೇಮದ ಮೃದು ಮಧುರ ಭಾವಗಳು ಕವಿತೆಯ ವಸ್ತುವಾಗಿದ್ದು, ಇವರನ್ನು ಸೆಳೆದು ಬರೆಸಿಕೊಂಡ ಕವಿತೆಯನ್ನು ಓದುಗರ ಮುಂದಿಡುತ್ತಾರೆ. ಇದು ಆ ಕವಿತೆಯ ಪ್ರಧಾನ ಆಶಯವಾಗಿದೆ.

ಕವಿತೆಯ ಶೀರ್ಷಿಕೆ

ನನ್ನೊಳಗಿನ ಕವಿತೆ

ನನ್ನೊಳಗಿನ ಕವಿತೆಯೆಂದರೆ ನನ್ನ ಮನದೊಳಗೆ ಅಡಗಿರುವ ಭಾವಗಳ ಕಾವ್ಯಾಭಿವ್ಯಕ್ತಿಯಾಗಿದೆ. ಕವಯತ್ರಿ ಯೊಳಗಿನ ದುಃಖ,ದುಮ್ಮಾನ, ಸುಖ, ಸಂತೋಷ, ಶಾಂತಿ, ಸಹನೆ, ಪ್ರೀತಿ, ಪ್ರೇಮ, ಸರಸ,ವಿರಸದ ಪದಗಳ ಸಂಯೋಜನೆಯೇ ಕವಯತ್ರಿಯೊಳಗಿನ ಕವಿತೆಯಾಗಿದೆ.

ಕವಿಯ ಮನಕೆ ಭಾವ ತುಂಬಿದ ಪ್ರತಿ ಘಟನೆಯು,ವಸ್ತುವೂ ಕವಿತೆಯ ವಸ್ತುವಾಗಿದೆ. ಎಲ್ಲರ ಮನದೊಳಗಿನ ಕವಿತೆ ಒಂದೇ ತೆರನಾಗಿರುವುದಿಲ್ಲ. ಅವರವರ ಇಷ್ಟ, ಆಸಕ್ತಿ, ಅಭಿರುಚಿ, ಶ್ರದ್ಧೆಗಳಿಗೆ ಅನುಗುಣವಾಗಿ ಅವರೊಳಗೆ ಕವಿತೆ ಹುಟ್ಟುತ್ತದೆ. ಕೆಲವರು ಭಾವ ತುಂಬಿ ರಚಿಸಿದರೆ, ಮತ್ತೆ ಕೆಲವರು ಶಬ್ದಭಂಡಾರ ವೈಭವೀಕರಣ ಮಾಡುತ್ತಾರೆ, ಮಗದಷ್ಟು ಕವಿಗಳು ರೂಪಕಗಳ ಮೊರೆ ಹೋದರೆ,‌ ಕೆಲವರು ಸಹಜ ಸುಂದರ ಕವಿತೆ ಬರೆಯುತ್ತಾರೆ. ಪ್ರತಿಯೊಂದು ಕವಿತೆಯು ಪ್ರತಿಯೊಬ್ಬರಲ್ಲೂ ಒಂದೊಂದು ಕವಿತೆ ಅಡಗಿರುತ್ತದೆ. ಇಲ್ಲಿ ಕವಯತ್ರಿಯ ಒಳಗಿನ ಕವಿ ಭಾವವನ್ನು ತಿಳಿಯಬಹುದು.

ಕಾವ್ಯ ವಿಶ್ಲೇಷಣೆ

 “ನನ್ನೊಳಗಿನ ಕವಿತೆ

ಎಲ್ಲೋ ಕೇಳಿದ್ದು ಪ್ರಾಂಜಲವಾಗಿದ್ದು

ಮತ್ತೆಲ್ಲೋ ನೋಡಿದ್ದು ಆಂತರ್ಯಕ್ಕಿಳಿದಿದ್ದು

ಅನುಭವದ ಅನುಭಾವಾಗಳು

ಅನುರಾಗದಲಿ ಹಾಡಾಗಿದ್ದು..

ಅಂತರಾಳದಲಿ ಮಾಧುರ್ಯವಾಗಿ

ಸದಾ ಅನುರಣಿಸುತ್ತಿರುವುದು..

ಪರಿಶುದ್ಧತೆಯ ಅಕ್ಷರಗಳ ಸಾಲುಗಳೇ

ನನ್ನೆದೆಯಾಳದ ಕವಿತೆ!!

ನಾವು ಸಮಾಜದಲ್ಲಿ ಸಂಘಜೀವಿಯಾಗಿ, ಸಾಮಾಜಿಕ ವ್ಯಕ್ತಿಯಾಗಿ ಬದುಕುತ್ತೇವೆ. ಜನಸಮುದಾಯದಲ್ಲಿ ಜೀವಿಸುವಾಗ ನಮ್ಮ ಸುತ್ತಮುತ್ತಲೂ ಘಟಿಸಿದ ಹಲವಾರು ಸಂಗತಿಗಳು ನಮ್ಮ ಗಮನ ಸೆಳೆಯುತ್ತವೆ. ನಾವು ಎಲ್ಲೋ ಕೇಳಿದ ವಿಷಯಗಳು ನಮ್ಮ ಎದೆ ಹೊಕ್ಕಿ ಭಾವತರಂಗಗಳಾಗಿ ರಿಂಗಣಿಸುತ್ತವೆ. ಅವುಗಳ ಆರ್ಭಟ ಜೋರಾಗಿ ಅವು ಉಕ್ಕಿದಾಗ ಕಾವ್ಯವೊಂದು ಜನ್ಮ ತಳೆಯುತ್ತದೆ.

ಅದೇ ರೀತಿ ನಾವು ನೋಡಿದ ದೃಶ್ಯಗಳು, ಘಟನೆಗಳು ಸಾವಿರ ಕಥೆಗಳನ್ನು ಹೇಳುತ್ತವೆ. ಅವುಗಳು ನಮ್ಮ ಭಾವತೀವ್ರತೆಗೆ ಸಿಕ್ಕಿ ಹೊಸದೊಂದು ಕವಿತೆ ಹುಟ್ಟಲು ಕಾರಣವಾಗುತ್ತದೆ.

ಕವಿ ಮನಸ್ಸಿನ ವ್ಯಕ್ತಿಗೆ ಜೀವನದ ಪ್ರತಿ ವಿಷಯ ಕವಿತೆಯಾಗುತ್ತದೆ. ಅದು ನೋವಿರಲಿ, ನಲಿವಿರಲಿ, ಸುಖವಿರಲಿ, ದುಃಖವಿರಲಿ, ಪ್ರೀತಿ, ಪ್ರೇಮ, ಸ್ನೇಹ, ತ್ಯಾಗ ಯಾವುದಾದರೂ ಸರಿ ತಮ್ಮ ಲೇಖನಿಯಿಂದ ಜೀವ ಪಡೆಯಲು ತುಡಿಯುತ್ತಿರುತ್ತದೆ. ಅನೇಕ ವಿಚಾರಗಳು ಕವಯತ್ರಿಗೆ ತನ್ನದೆ ಆದ ಅನುಭವಧಾರೆಯನ್ನು ಸೃಷ್ಟಿಸಿ ಆಂತರ್ಯದೊಳಗೆ ಭಾವ ತುಂಬಿ ಅನುಭಾವದಲ್ಲಿ ಅನುರಣಿಸುತ್ತದೆ.

ಇದಕ್ಕೆಲ್ಲ ಕಾರಣ ಕವಯತ್ರಿಯ ಸಾಹಿತ್ಯ ಪ್ರೀತಿಯಾಗಿದೆ. ಒಲವಿನಿಂದ ಕಾವ್ಯವನ್ನು ಒಪ್ಪಿಕೊಂಡು ಗುನುಗಿದಾಗ ಎದೆಯೊಳಗಿನ ಹಾಡಾಗಿ ಅಂತರಾಳದಿಂದ ಮಾಧುರ್ಯ‌ ತುಂಬಿ ಪುಂಖಾನುಪುಂಖವಾಗಿ ಭಾವದಲೆಗಳನ್ನು ಅಕ್ಷರರೂಪದಲ್ಲಿ ಕವಯತ್ರಿ ಹೇಳುತ್ತಾರೆ. ಅವರ ಅನುಭವಧಾರೆಯ ಫಲಶ್ರುತಿಯಾಗಿ ಪರಿಶುದ್ಧ ಪದಭಾವವೇ ಅವರೊಳಗಿನ ಕವಿತೆ ಎನ್ನುತ್ತಾರೆ.

ಅಪ್ಪನ ಒಲವಿನಾಸರೆಯ ಆಲಿಂಗನದ ವಾತ್ಸಲ್ಯದಲಿ

ಅಮ್ಮನ ಕರುಳು ಮಿಡಿತದ  ಆರ್ದ್ರದಲಿ

ಸತ್ಯ ಮಿತ್ಯಗಳ ನಿತ್ಯ ಸಂವಹನದಲಿ

ಕೊರಳುಬ್ಬಿದ ದುಃಖದ ಬಿಕ್ಕಿನಲಿ

ಸುಡು ಬಿಸಿಲಿನ  ಬೆವರ ದಣಿವಿನಲಿ

ಏಕಾಂತದ ಮೌನ ಧ್ಯಾನದ ತಪಸ್ಸಿನಲಿ

ನನ್ನೊಳಗೆ ಹುಟ್ಟಿದಳು ಕವಿತೆ!!

ಜಗತ್ತಿನಲ್ಲಿ ಸೃಷ್ಟಿಯ ಎರಡು ಕಣ್ಣುಗಳು ಅಪ್ಪ ಮತ್ತು ಅಮ್ಮ. ಅವರನ್ನು ಶಬ್ದ ಭಂಡಾರದಲ್ಲಿ ಬಂಧಿಸಲು ಸಾಧ್ಯವಿಲ್ಲ ಎನ್ನುವುದನ್ನು ಕೇಳಿದ್ದೇವೆ. ಜೀವನ ಪರ್ಯಂತ ಬರೆದ ಸಾಹಿತ್ಯ ಎಲ್ಲಾ ಸೇರಿದರೂ ಅಮ್ಮನ ಪ್ರೀತಿ, ಪ್ರೇಮ, ಮಮತೆ, ವಾತ್ಸಲ್ಯ ತುಂಬಿ ತನ್ನ ರಕ್ತವನ್ನು ಬೆವರಾಗಿಸಿ ಧಗೆಯಲ್ಲಿ ತಾನು ಬೆಂದು  ಬೇಯಿಸುತ್ತಿದ್ದ ಆ ಒಂದು ರೊಟ್ಟಿಗೆ ಸಮನಾಗಲಾರವು ಅಂತಹ ಅದ್ಭುತ ಕವಿತೆ ಅವ್ವ.

ಅವ್ವನ ಬಗ್ಗೆ ಎಷ್ಟು ಬರೆದರೂ ಮುಗಿಯದ ಕಾವ್ಯವದು. ಮಕ್ಕಳ ಬಗ್ಗೆ ನಿತ್ಯ ಚಿಂತಿಸುವ, ಅವರ ಶ್ರೇಯಸ್ಸಿಗಾಗಿ ಹಾರೈಸುವ, ಗುರಿ ತಪ್ಪಿದಾಗ ಸರಿದಾರಿ ತೋರುವ, ಕಷ್ಟಗಳಿಗೆ ಮಿಡಿಯುವ ಕರುಳ  ತುಡಿತವು ಇಲ್ಲಿ ಕವಿತೆಯಾಗಿ ಹೊರಹೊಮ್ಮಿದೆ.

ಇಲ್ಲಿ ಕವಯತ್ರಿಗೆ ಅಪ್ಪನ ಒಲವಿನಾಸರೆ ಬಹಳ ಕಾಡಿದೆ. ಮಗಳಿಗಾಗಿ ತನ್ನೆಲ್ಲ ಆಸೆಗಳನ್ನು ಬಚ್ಚಿಟ್ಟು ಅವುಗಳನ್ನು ಮಗಳಲ್ಲಿ ನನಸು ಮಾಡಿ ಸಂತೋಷಪಡುವ ಅಪ್ಪನ ಪ್ರೀತಿಯ ಅಪ್ಪುಗೆಯೆ ಕವಿತೆಯಾಗಿದೆ. ಕವಯತ್ರಿಗೆ ಅಪ್ಪ ಆಲದ ಮರದಂತೆ ಕಂಡಿದ್ದಾರೆ. ಆಲದಮರ ಬಿಸಿಲಿಗೆ ಮೈಯೊಡ್ಡಿ ಬರುವ ದಾರಿ ಹೋಕರಿಗೆ ಆಶ್ರಯ ನೀಡಿ ಸಂತೈಸುವಂತೆ, ಅಪ್ಪನಾದವನು ಕಷ್ಟಗಳಿಗೆ ತನ್ನನ್ನು ಒಡ್ಡಿಕೊಂಡು ತನ್ನ ಕುಟುಂಬವನ್ನು ಸುಖಶಾಂತಿ ನೆಮ್ಮದಿಯಿಂದ ಇಡಲು ಸದಾ ಸನ್ನದ್ಧನಾಗಿರುವನು. ಅಂತಹ ಅಪ್ಪ ಕವಯತ್ರಿಯ ಮನದೊಳಗಿನ ಕವಿತೆಯಾಗಿದ್ದಾರೆ.

ನಮ್ಮ ಬದುಕು ಒಂದು ನಾಟಕ ರಂಗ. ಇಲ್ಲಿ ಸತ್ಯಮಿಥ್ಯಗಳ ರಂಗದಾಟ ನಡೆಯುತ್ತಿರುತ್ತದೆ. ಇಲ್ಲಿ ಸತ್ಯವನ್ನು ನಾಚಿಸುವ ಸುಳ್ಳಿನ ಆರ್ಭಟ ಜೋರಾಗಿರುತ್ತದೆ. ಸುಳ್ಳನ್ನು ಮೆಟ್ಟಿನಿಂತು ಜಗತ್ತಿಗೆ ಒಳಿತಿನ ಮಾರ್ಗ ತೋರುವ ಸತ್ಯ ನಿತ್ಯವೂ ರಾರಾಜಿಸುತ್ತದೆ. ಮಿಥ್ಯಕ್ಕೆ ಕ್ಷಣಿಕ ಗೆಲುವಾದರೂ ಶಾಶ್ವತವಾಗಿ ಸೋಲುತ್ತದೆ. ಸತ್ಯ ತಾತ್ಕಾಲಿಕವಾಗಿ ಸೋತರೂ ಶಾಶ್ವತವಾಗಿ ಗೆದ್ದು ಪ್ರಜ್ವಲಿಸುತ್ತದೆ. ನಾವು ಜಾಗೃತರಾಗಿ ಸರಿಯಾದ ಆಯ್ಕೆ ಮಾಡಬೇಕು ಎಂಬುದು ಕವಿತೆಯಾಗಿದೆ.

ಅದೇ ರೀತಿ ದುಃಖ,ದುಮ್ಮಾನಗಳು ಬದುಕಿನಲ್ಲಿ ಹಗಲು ರಾತ್ರಿಗಳಂತೆ ಸಹಜ. ಕಷ್ಟ ಬಂದಾಗ ಗದ್ಗದಿತರಾಗಿ ಅಳುತ್ತಾ ಬಿಕ್ಕಿ ಬಿಕ್ಕಿ ಅಳುತ್ತಾ ಕೂರುತ್ತೇವೆ. ಅಂತಹ ದುಃಖದಲ್ಲಿ ವಿಷಾದದ, ಹತಾಶೆಯ, ನಿರಾಸೆಯ, ಕವಿತೆಯೊಂದು ಮೂಡುತ್ತದೆ. ಕತ್ತಲೆ ಕಳೆದು ಅಂದರೆ ಅಮಾವಾಸ್ಯೆ ಮುಗಿದು ಬೆಳಕು ಮೂಡಿ ಅಂದರೆ ಹುಣ್ಣಿಮೆಯು ಬಂದೇ ಬರುತ್ತದೆ. ಅದುವರೆಗೂ ತಾಳ್ಮೆಯ ತಪವ ಮಾಡಲು ಕವಿತೆ ಆಶಿಸುತ್ತದೆ.

ಜೀವನದ ಗಾಲಿ ಉರುಳಲು ಕಾಯಕದ ದೀಕ್ಷೆ ತೊಡಲೇಬೇಕು. ಅದಕ್ಕಾಗಿ ದುಡಿಯುವ ಸಂಕಲ್ಪ ಮಾಡುತ್ತೇವೆ. ಅದು ಕಷ್ಟಕರವಾದರೂ ನಮಗೆ ಸ್ವಾಭಿಮಾನ ಗೌರವ ತಂದು ಕೊಡುತ್ತದೆ. ಜೀವನದ ಸುಲಭ ನಿರ್ವಹಣೆಗೆ ದಾರಿಯಾಗುತ್ತದೆ. ಇದಕ್ಕಾಗಿ ನಾವು ಹಗಲಿರುಳು ಶ್ರಮಿಸಬೇಕು. ಬೆವರಹನಿ ಒಳಗೆ ತೊಯ್ಯಬೇಕು. ಆಗ ಒಂದು ಕವಿತೆ ಮೂಡುತ್ತದೆ ಎಂಬುದು ಕವಯತ್ರಿಯ ದಿಟ್ಟತನದ ನುಡಿಯಾಗಿದೆ.

ಇಷ್ಟು ಮಾತ್ರವಲ್ಲ ಕವಯತ್ರಿ ಏಕಾಂಗಿಯಾಗಿ ಏಕಾಂತದಲ್ಲಿ ಕುಳಿತು ಮೌನಿಯಾಗಿ ಧ್ಯಾನ ಮಾಡಿದಾಗಲೂ ಅವಳ ಆಂತರ್ಯದೊಳಗೊಂದು ಕವಿತೆ‌ ಮೂಡುತ್ತದೆ.

ಮಧುರ ನೆನಪಿನಲೆಗಳ ತರಂಗದಲಿ

ಸಮ್ಮಿಲನದ ಮಳೆಬಿಲ್ಲಿನ ಬಣ್ಣಗಳಲಿ

ಹಕ್ಕಿಗಳು ಹಾರುವ ಮುಸ್ಸಂಜೆಯಲಿ

ಕವನದ ಸಾಲಿನ ಅಂತ್ಯದ ಪ್ರಾಸದಲಿ

ಅನೂಹ್ಯ ಅಪೂರ್ವ ಪದಗಳ ಚಿತ್ತಾರದಲಿ

ನನ್ನೀ ಮನದಿಂದ ಧ್ವನಿಯಾಗಿ 

ಹೊರಬಂದಳು ಕವಿತೆ!!

ಸವಿ ಸವಿ ನೆನಪು ಸಾವಿರ ನೆನಪು ಎಂಬ ಗೀತೆಯಂತೆ ಮೃದು ಮಧುರ ನೆನಪುಗಳ ಅಲೆಗಳು ತರಂಗಗಳಾಗಿ ಕಾವ್ಯಕ್ಕೆ ದಾರಿಯಾಗಿವೆಯೆಂದು ಕವಯಿತ್ರಿ ಹೇಳುತ್ತಾರೆ. ಮಳೆಬಿಲ್ಲಿನ ಬಣ್ಣಗಳ ಸಂಯೋಜನೆ ಕನಸುಗಳನ್ನು ತುಂಬಿ ಕವಿತೆಗೆ ಮಾರ್ಗವಾಗಿದೆ.

ಮುಸ್ಸಂಜೆಯಲಿ ಪಕ್ಷಿಗಳ ಕಲರವ ಕವಯತ್ರಿಯದೆಯಲ್ಲಿ ಕಾವ್ಯದ ಸಾಲುಗಳನ್ನು ಝೇಂಕರಿಸುವಂತೆ ಮಾಡಿದೆ. ಬಹಳ ಮುಖ್ಯವಾಗಿ ಕವಯತ್ರಿಗೆ ಪ್ರಾಸ ಅನೂಹ್ಯ ಅನುರೂಪದ ಪದಗಳು ಜೋಡಣೆಯಾಗಿ ಕಾವ್ಯಕೆ ಚಿತ್ತಾರ ಮೂಡಿಸಿ ಕವಯತ್ರಿಯ ಧ್ವನಿಯಾಗಿ ಕವಿತೆ ಬಂದಿದ್ದಾಳೆ.

ಮಳೆಯ ತುಂತುರು ಭೂಮಿಗೆ ತಂಪೆರೆದಾಗ

ದಿನಪನ ತರಣಿಯು ಬೆಳಕಾಗಿ ಜಗಕ್ಕೆಲ್ಲ ಹರಡಿದಾಗ

ನಿಶೆಯ ನಿಶ್ಶಬ್ದದಲಿ ಭುವಿ ನಭ  ಪಿಸುಗುಡುವಾಗ

ಮುಂಗತ್ತಲೆಯಲಿ ಗಿಡದಲ್ಲಿನ ಮೊಗ್ಗು ಅರಳಿದಾಗ

ಸಂಪಿಗೆಯ ಘಮಲು ಮೆಲ್ಲನೆ ಕಂಪಿಸಿದಾಗ

ನನ್ನಂತರಗದ ಕದ ತೆರೆದಳು ಕವಿತೆ!!

ಪ್ರಕೃತಿಯೇ ಕಾವ್ಯಕ್ಕೆ ಸ್ಪೂರ್ತಿಯಾಗಿದೆ.

 “ನಿಸರ್ಗದ ಚಿಂತನೆಗಳನ್ನು ಒಳಗೊಂಡು

 ದೈವಿಕ ತತ್ವಗಳನ್ನು ಹಿತಮಿತವಾಗಿ

 ಮಿಶ್ರಣ ಮಾಡುವುದೇ ಕಾವ್ಯ

 ಎಂದು ವಿಲಿಯಂ ವರ್ಡ್ಸ್ವರ್ತ್ ಹೇಳುತ್ತಾರೆ. ಪ್ರಕೃತಿಯ ಅಂಶಗಳಾದ ಮಳೆ,ಗಾಳಿ,ಚಳಿ ,ಬಿಸಿಲು ,ಸೂರ್ಯ,ಚಂದ್ರ, ನಕ್ಷತ್ರಗಳು, ನಿಶೆ, ಬೆಳದಿಂಗಳು, ನದಿ, ಬೆಟ್ಟ, ಗಿಡಮರಗಳು, ಹಣ್ಣುಗಳು, ಖಗಮೃಗಗಳು ಕವಿಮನಕೆ ಸ್ಪೂರ್ತಿಯ ಆಗರಗಳಾಗಿವೆ.ಇಲ್ಲಿ ಕವಯತ್ರಿಯ ಕಾವ್ಯಕ್ಕೆ ಮಳೆ ವಸ್ತುವಾಗಿದೆ. ತುಂತುರು ಮಳೆಗೆ ಮೂಡಿದ ಕಾವ್ಯಗಳದೆಷ್ಟೋ ಲೆಕ್ಕಕ್ಕಿಲ್ಲ. ಸಾಕಷ್ಟು ಕವನಗಳನ್ನು ಈ ಸೋನೆ ಹನಿ ಬರೆಸಿಕೊಂಡಿದೆ.

ಇಲ್ಲಿ ಕವಯತ್ರಿ ಬಳಸಿರುವ ದಿನಪನ ತರಣಿಯು ಅದ್ಭುತ ರೂಪಕವಾಗಿ  ಕವಿತೆಗೆ ಮೆರಗು ನೀಡಿದೆ. ದಿನಕರನ ಉದಯ ಕವಿಮನಕೆ ಸಾವಿರ ಭಾವಗಳನ್ನು ಸೃಷ್ಟಿಸುತ್ತದೆ. ಅವನ ಕಿರಣಗಳು ಭೂಮಿಗೆ ಜಾರುವ ವರ್ಣಮಯ ಸೌಂದರ್ಯ ಒಂದು ಕಡೆಯಾದರೆ, ನಿಶೆ ಆವರಿಸಿ ಭಾನು ಭುವಿಗಳ ವ್ಯತ್ಯಾಸ ತಿಳಿಯದಂತೆ ಅನಂತ ದಿಗಂತದಲ್ಲಿ ಪಿಸುಗುಡುವಾಗ ಕವಯತ್ರಿಯ ಮನದಲ್ಲಿ ಕವಿತೆ ಮೂಡುತ್ತದೆ.

ಹೂವು ಅರಳಿ ಸುಗಂಧ ಸೂಸುವದಕ್ಕಿಂತ ಸೊಗಸು ಕವಿ ಮನಸ್ಸಿಗೆ ಬೇಕೆ. ಕವಿಗರಿವಿಲ್ಲದಂತೆ ಕವನ ಮೂಡಿರುತ್ತದೆ ಎಂಬುದಕ್ಕೆ ಆ ಸೌಂದರ್ಯ ರಾಣಿ ಮತ್ತು ಅವಳ ಸುಗಂಧ ಸಾಲದೆ. ಪ್ರಕೃತಿಯು ಇಷ್ಟೆಲ್ಲಾ ವೈಶಿಷ್ಟ್ಯಗಳು ಕವಯತ್ರಿಯನ್ನು  ಚೆನ್ನಾಗಿ ದುಡಿಸಿಕೊಂಡು ಲೇಖನಿಗೆ‌ ಆಹಾರವಾಗಿದೆ.

ನಿತ್ಯವೂ ನನ್ನ ಬದುಕಿನಲೆಯಲಿ

ಅಲಂಕಾರ ಛಂದಸ್ಸಿಲ್ಲದೆ

ನನ್ನೆದೆಯ ಧಮನಿಯಲಿ ತೊರೆಯಾಗಿ

ಹರಿಯುತಿಹಳು ಕವಿತೆ!!

ಬದುಕೆಂಬುದು ಸಾಗರದಂತೆ.ಕಷ್ಟ ಸುಖ, ನೋವು,ನಲಿವುಗಳೆಂಬ ಅಲೆಗಳ ಏರಿಳಿತಗಳು‌ ಉಂಟು.

ಇಲ್ಲಿ ಕವಯತ್ರಿ ಕವನ ರಚನೆಗೆ ಯಾವುದೇ ಅಲಂಕಾರಗಳ ಬಳಕೆ, ಛಂದಸ್ಸಿನ ಉಪಯೋಗವಿಲ್ಲದೆ ತನ್ನ ನಿತ್ಯ ಜೀವನದಲ್ಲಿ ಎದುರಾಗುವ ಅನುಭವ ಘಟನೆಗಳು ಕಾವ್ಯವಾಗಿ ಅವರೆದೆಯಲ್ಲಿ ಹರಿವ ರಕ್ತದ ಕಣ ಕಣದಲ್ಲೂ ಕವಿತೆಯು ತೊರೆಯಾಗಿ ಹರಿಯುತ್ತದೆ ಎಂಬ ಭಾವ ವ್ಯಕ್ತಪಡಿಸುತ್ತಾರೆ.

ಇವರ ಮನದೊಳಗೆ ಮೂಡುವ ಭಾವನೆಗಳಿಗೆ ಯಾವುದೇ ಪ್ರತಿಮಗಳ ಹುಡುಕಾಟ ಮಾಡದೆ ಸಹಜವಾಗಿ ಕಾವ್ಯವಾಗಿಸಿ ಹೃದಯದಲ್ಲಿ ಹರಿದಿದ್ದಾಳೆ ಎಂದು ಕವಯತ್ರಿಯು ತನ್ನೊಳಗಿನ ಕವಿತೆಯನ್ನು ಓದುಗರ ಮುಂದಿಡುತ್ತಾರೆ.

ಕವಿತೆಯಲ್ಲಿ ನಾ ಕಂಡ ಕವಿ ಭಾವ

ಈ ಕವಿತೆಯಲ್ಲಿ ಕವಯತ್ರಿಯ ಜೀವನೋತ್ಸಾಹ ಎದ್ದುಕಾಣುತ್ತದೆ. ಕಾವ್ಯದ ಗಿಲ್ಲು ಅಂಟಿಸಿಕೊಂಡ ಕವಯತ್ರಿಯ ಬರಹದ ಮೇಲಿನ ಅತಿಯಾದ ಪ್ರೀತಿ, ಕಾವ್ಯ ಸಾಧನೆ ಕವಿತೆಗೆ ಜೀವಾಳವಾಗಿದೆ. ತನ್ನ ಬದುಕಿನ ಪ್ರತಿ ಕ್ಷಣದ ಸಂವೇದನೆಗಳಿಗೆ ಸ್ಪಂದಿಸುತ್ತಾರೆ. ಪರಿಣಾಮವಾಗಿ ಈ ಕವಿತೆ ಜನ್ಮತಾಳಿದೆ.‌ಜೀವನದ ಗಾಢ ಅನುಭವವು ಅಮೋಘ ಶಬ್ದ ಬಂಡಾರದ ಗಣಿಯಾಗಿ, ರೂಪಕಗಳು ರಾಣಿಯಾಗಿ ಕವಿತೆ ಮೂಡಿಬಂದಿದ್ದಾರೆ.

ಈ ಕವಿತೆಯಲ್ಲಿ ತನ್ನೊಳಗಿನ ತರೆವಾರಿ ಭಾವಗಳನ್ನು ವಿಸ್ತಾರವಾಗಿ, ವಿಸ್ಮ್ರುತವಾಗಿ ಕವಯತ್ರಿ ಚಿತ್ರಿಸಿದ್ದಾರೆ. ಕ್ರಮಬದ್ಧತೆಯ ಶಬ್ದ ಜೋಡಣೆ ಕವನದ ಮೆರುಗು ಹೆಚ್ಚಿಸಿದೆ. ಇಲ್ಲಿ ಕಲ್ಪನೆಯಿದೆ, ವಾಸ್ತವಿಕತೆಯಿದೆ, ಅನುಭವವಿದೆ, ಅಪೂರ್ವವಾದ ಪದಪುಂಜಗಳ ಸುಂದರ ಮಾಲೆಯಿದೆ.

ಕಾವ್ಯಾಸಕ್ತರ ಮನಸ್ಸನ್ನು ಹಿಡಿದಿಟ್ಟು ಓದಿಸುವಲ್ಲಿ ಕವಯತ್ರಿಯರ ಲೇಖನಿಯೂ ಸೊಗಸಾಗಿ ದುಡಿದಿದೆ.

 ಭಾವಗಳ ಬೆನ್ನತ್ತಿ ಅನುಭವದ ಒರತೆಯಲ್ಲಿ ತನ್ನ ಮನದ ಅಕ್ಷರದೆಳೆಗಳನ್ನು ಕುಸುರಿ ನೇಯ್ದು ಕಾವ್ಯವಾಗಿಸಿ ಓದುಗರ ಮುಂದಿಟ್ಟಿದ್ದಾರೆ. ಆದಿಯಿಂದ ಅಂತ್ಯದವರೆಗೂ ಕವಿತೆಯೆಲ್ಲು ನೀರಸ ಭಾವ‌ ತೋರದೆ,  ಆಡಂಬರದ ಅಬ್ಬರವಿಲ್ಲದೆ, ಶಬ್ದಗಳ ವೈಭವೀಕರಣವಿಲ್ಲದೆ, ಅಗತ್ಯತೆಗನುಗುಣವಾಗಿ ರೂಪಕಗಳನ್ನು ಬಳಸಿ ಇಡೀ ಜೀವಸಂಕುಲದ ವೈಶಿಷ್ಟತೆಗಳನ್ನು ಕಾವ್ಯವಾಗಿಸಿದ್ದಾರೆ.

ಈ ಕವಿತೆ ಕವಯತ್ರಿಯ ಮನದೊಳಗಿನ ಭಾವವಾದರೂ ಸಾರ್ವತ್ರಿಕ ನೆಲೆಯಲ್ಲಿಟ್ಟು ನೋಡಿದರೆ ಎಲ್ಲರ ಮನದೊಳಗಿನ ಆತ್ಮ ಕವಿತೆಯಂತೆ ಭಾಸವಾಗುತ್ತದೆ. ಇವರಿಂದ ಇಂತಹ ಮತ್ತಷ್ಟು ಕವಿತೆಗಳು ಮೂಡಲಿ. ಕನ್ನಡ ಸಾರಸ್ವತ ಲೋಕ ಮತ್ತಷ್ಟು ವಿಸ್ತಾರಗೊಳ್ಳುತ್ತಾ ಸಾಗಲಿ ಎಂದು ಆಶಿಸುವೆ.

ಸ್ನೇಹಿತರೆ ಈ ದಿನದ  ಕಾವ್ಯದರ್ಪಣ ತಮ್ಮೆಲ್ಲರಿಗೂ ಇಷ್ಟವಾಗಿದೆ ಎಂದು ಭಾವಿಸುತ್ತಾ ಮುಂದಿನ ವಾರದ ಬರಹಕ್ಕಾಗಿ ನಿಮ್ಮೆಲ್ಲರ ನಿರೀಕ್ಷೆಯಲ್ಲಿರುವೆ.

 ——————-

ಅನುಸೂಯ ಯತೀಶ್

ಅನುಸೂಯ ಯತೀಶ್ ಇವರು ನೆಲಮಂಗಲದ ನಿವಾಸಿ. ಸ್ನಾತಕೋತ್ತರ ಪದವೀಧರೆಯಾದ ಇವರು ಮಾಗಡಿ ತಾಲ್ಲೂಕಿನಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಇವರು ಶಿಕ್ಷಣ ಇಲಾಖೆಯಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸರ್ಕಾರಿ ನೌಕರರ ಸಂಘದಿಂದ ಸೇವಾರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಾಹಿತ್ಯ ವಿಮರ್ಶೆ, ಕಥೆ, ಕವನ,ಗಜಲ್, ಲೇಖನ,ಛಂಧೋಬದ್ದ ಕವನಗಳ ರಚನೆ ಸೇರಿದಂತೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ರಚಿಸುತಿದ್ದಾರೆ

2 thoughts on “

  1. ಮೆಡಮ್
    ಸುಂದರ ವಿಶ್ಲೇಷಣೆ. ಓದಿ ಖುಶಿ ಎನಿಸಿತು.
    ಕಾವ್ಯದ ಬಗೆಗಿನ ಪೀಠಿಕೆ ,ಕಾವ್ಯ‌ಮೀಮಾಂಸೆ
    ಇದೊಂದು ಉಪಯುಕ್ತ ಮಾಹಿತಿ ಪ್ರತ್ಯೆಕ ಲೇಖನವೇ ಆಗಬಹುದಿತ್ತು.
    ಋಷಿಯಾಗದವ ಕವಿಯಾಗಲಾರ.
    ಕವಿಗೆ ಬಾಹ್ಯ ವಸ್ತುಗಳ ಬಗೆಗಿನ ಸಂವೇದನೆ ತನ್ನ ಅಂತರಂಗದ ಮೂಸೆಯಲ್ಲಿ ಕಾದು ಪಾಕ ವಾದಾಗಿನ ವಿಶಿಷ್ಠ ಅನುಭವ ಹಾಗೂ ಆ ಕಾಡುವಿಕೆ ಅಕ್ಷರ ರೂಪದಿಂದ ಲಯಬದ್ಧತೆಯಿಂದ ಹೊರಬಂದಾಗ
    ಅದೊಂದು ಕಾವ್ಯ
    ತೋಚಿದ್ದು ಗೀಚಿದ್ದೆಲ್ಲ ಖಂಡಿತ ಕಾವ್ಯವಾಗಿ ಲಾರದು.
    ಭಾವತರಂಗಳ ಕವಿತೆಯ ಅವಲೋಕನ
    ಕವಿತೆಯ ಅಂತರಂಗದ ಕದ ತೆರೆದ ಸಮೀಕ್ಷೆ ತುಂಬಾ ಆಳದ ಅಧ್ಯಯನ ಎಂದರೂ ತಪ್ಪಿಲ್ಲ.
    ಆದರೆ ಒಂದಿಷ್ಟು ವಿಮರ್ಶಾತ್ಮಕ ದೃಷ್ಟಿಯಿಂದಲೂ ಗಮನಿಸಿ ವಿವರಣೆ ನಿಡಿದ್ದರೆ ಕವಿಯತ್ರಿ ಯ ಬೆಳವಣಿಗೆಗೆ ಇನ್ನಷ್ಟು ಪೂರಕ ವಾಗುತ್ತಿತ್ತು
    ಕವನ ಹುಟ್ಟು ಘಳಿಗೆ ವಿಭಿನ್ನ ಮುಖಗಳಲ್ಲಿ ಎಂಬುದಂತೂ ವೇದ್ಯವಾಯಿತು.
    ಮೆಡಮ್
    ಸುಂದರ ಕವಿತೆ ನೀಡಿದ ಭಾವತರಂಗಳಿಗೂ
    ಅವಳ ಕವಿತೆಗೆ ಭಾಷ್ಯ ನೀಡಿದ ನಿಮಗೂ
    ಅಭಿನಂದನೆಗಳು

    1. ನಿಮ್ಮ ಮನದುಂಬಿದ
      ಪ್ರೋತ್ಸಾಹದ ನುಡಿಗಳಿಗೆ
      ಧನ್ಯವಾದಗಳು ‌ಸರ್ .
      ಇದು ಕಾವ್ಯ ವಿಶ್ಲೇಷಣೆ
      ಅಷ್ಟೇ ಸರ್ ‌‌‌‌‌…….
      ವಿಮರ್ಶೆ ಆಯಾಮದಲ್ಲಿ ಮಾಡಿಲ್ಲ .
      ನಿಮ್ಮ ಸಲಹೆಗೆ ಆಭಾರಿಯಾಗಿದ್ದೇನೆ.

Leave a Reply

Back To Top