ಪ್ರೀತಿಯ ಸಂಗಾತಿ ಬಳಗವೇ

ಪ್ರೀತಿಯ ಸಂಗಾತಿ ಬಳಗವೇ

ಸಂಗಾತಿ ಮೂರನೇ ವರ್ಷಕ್ಕೆ ಕಾಲಿಡುತ್ತಿದೆ. ಸಂಗಾತಿ ಎಂಬ ಪುಟ್ಟ ಗಿಡ ಬೆಳೆಯುತ್ತಾ , ಬೆಳೆಯುತ್ತಾ ನೆರಳು ನೀಡುವ ಮರವಾಗುತ್ತಿದೆ…

ಈ ಸಂದರ್ಭದಲ್ಲಿ ನಮ್ಮ

ಸಂಗಾತಿಗೆ ಬರೆಯುವ ಲೇಖಕಿ, ಲೇಖಕರ ಹಾಗೂ ಸಹೃದಯರ  ಕುರಿತು  ಒಂದೆರಡು ಮಾತು …

ನಾವೇಕೆ ಬರೆಯುತ್ತೇವೆ ಹಾಗೂ ಸಾಹಿತ್ಯ ಎಂಬ ಅಕ್ಷರ ಜಗತ್ತನ್ನು  ಸಂಗಾತಿ ಯಾಕೆ ಪ್ರಕಟಿಸುತ್ತಿದೆ…ಏನಿದರ ಮರ್ಮ ಎಂದು ನಾವು ಒಮ್ಮೆ ಪ್ರಶ್ನಿಸಿಕೊಳ್ಳಬೇಕು‌ .

ಇಲ್ಲಿ ಬರೆಯುವ ಬರಹಗಾರರಿಗೆ  ಮತ್ತು ಪ್ರಕಟಿಸುವ ಪ್ರಧಾನ ಸಂಪಾದಕರಿಗೆ ಏನು

ಉದ್ದೇಶವಿದೆ ?

ಅದು ಒಂದೇ ಉದ್ದೇಶ : ಮಾನವೀಯ ಮನಸುಗಳನ್ನು ಬೆಸೆಯುವುದು‌. ಅಕ್ಷರದ ಕೆಲಸ ವ್ಯಾಪಾರವಲ್ಲ.‌ ಅಕ್ಷರದ ಕೆಲಸ ಮನಸುಗಳನ್ನು ಕೂಡಿಸುವುದು. ಹಿತವನ್ನು, ಹಿಗ್ಗನ್ನು, ಸಂತೋಷವನ್ನು ಹಂಚುವುದು ‌ ಹಾಗೂ ನೊಂದ ಮನಸುಗಳ ಕಣ್ಣೀರು ಒರೆಸುವುದು ಹಾಗೂ ಬದಲಾವಣೆ ತರುವುದು.

ಬರಹಗಾರರಿಗೆ ರಾಜಕೀಯ ಪ್ರಜ್ಞೆ ಅತ್ಯಂತ ಅವಶ್ಯಬೇಕು‌ . ರಾಜಕೀಯ ಪ್ರಜ್ಞೆ ಇಲ್ಲದ ಬರಹಗಾರ , ಉಡಾಫೆಗೀಡಾಗುತ್ತಾನೆ . ತನ್ನ ಸುತ್ತಣ ತಲ್ಲಣಗಳಿಗೆ ತೆರೆದುಕೊಳ್ಳದ ಲೇಖಕ ಲೇಖಕನೇ ಅಲ್ಲ. ಹಾಗೆ ಬರೆಯುವವರು ( ಕೆಲವರು ನಾನು ನನ್ನ ಸಂತೋಷಕ್ಕೆ ಬರೆಯುವೆ. ಇತರರನ್ನು ಖುಷಿಪಡಿಸಲು ಬರೆಯುವೆ ಎನ್ನುವವರು ಇದ್ದಾರೆ‌ ‌) ಕಾಲದ ಕಸದ ಬುಟ್ಟಿಗೆ ಸೇರುತ್ತಾರೆ. ಅನುಕೂಲ ಸಿಂಧು ಬರಹ ಬಹಳ ದಿನ ಬದುಕಲಾರದು.‌ ಒಬ್ಬ ಲೇಖಕಿ/ಲೇಖಕ  ಕಣ್ಣು ತೆರೆದಿದ್ದರೆ,  ತನ್ನ ಸುತ್ತಣ ಜಾತಿಯ ಕ್ರೌರ್ಯವನ್ನು, ಅನ್ಯಾಯವನ್ನು, ಬಡವರ ಬದುಕನ್ನು  ಗ್ರಹಿಸಿದ್ದರೆ, ಶೋಷಣೆಯ ಮುಖಗಳು ಅವನಿಗೆ  ಅರ್ಥವಾಗಿದ್ದರೆ, ಬರಹದಲ್ಲಿ ತಾನಾಗಿಯೇ  ಸಾಮಾಜಿಕ ಕಾಳಜಿ, ಜವಾಬ್ದಾರಿ ಬರಹದಲ್ಲಿ  ಕಲಾತ್ಮಕ ಅಭಿವ್ಯಕ್ತಿಯ ಜೊತೆ ಜೊತೆಗೆ ಕಾಣಿಸಿಕೊಂಡಿರುತ್ತದೆ.‌ ಕಲೆ, ಸಾಹಿತ್ಯ, ಸಂಗೀತದ ಕೆಲಸವೇ ಅದು.

ಅದು ನಲ್ಲೆಯಂತೆ, ತಾಯಿಯಂತೆ ಓದುಗನನ್ನು ತಟ್ಟಿ ಬದಲಾವಣೆಗೆ ಅಣಿಗೊಳಿಸುತ್ತದೆ.

ವಚನ ಸಾಹಿತ್ಯ ಜನರೊಂದಿಗೆ ಬೆರೆತು ಜನ ಭಾಷೆಯಲ್ಲಿ ಅಭಿವ್ಯಕ್ತವಾದ ಕಾರಣ ಒಂದು ಚಳುವಳಿಗೆ ಕಾರಣವಾಯಿತು. ಕನ್ನಡದ ಬಹುತೇಕ ಲೇಖಕರು,ಲೇಖಕಿಯರು ವಚನ ಸಾಹಿತ್ಯದ ಒಗಟು ಅರಿತರೂ ,  ಮಾತಾಡುವ ಗೋಜಿಗೆ ಹೋಗುವುದಿಲ್ಲ. ಕಾಲಮಾನ ಹಾಗಿದೆ. ಪ್ರಭುತ್ವದ ವಿರುದ್ಧ ಸೆಣಸಾಡುವುದು ಇವತ್ತು ಯಾರಿಗೂ ಬೇಕಿಲ್ಲ. ಇವತ್ತಿನ ಬಹುತೇಕ ಬರಹಗಾರರು ಸೇಫರ್ ಝೊನ್ ನಲ್ಲೇ ನಿಂತಿದ್ದಾರೆ. ಕಾರಣ ಪ್ರಭುತ್ವದ ಕ್ರೌರ್ಯ. ಪ್ರಭುತ್ವ ಟೀಕಿಸಿದರೆ, ಎಲ್ಲಿ ಅನಾಹುತವಾದೀತು,  ಸೆರೆಮನೆ ವಾಸ  ಅನುಭವಿಸಬೇಕಾದೀತು ಎಂಬ ಭಯ ಅನೇಕರನ್ನು ಕಾಡುತ್ತಿದೆ.

‘ನರಬಲಿ’  ಕವಿತೆ ಬರೆದು ಬ್ರಿಟಿಷರ ಕೆಂಗಣ್ಣಿಗೆ ಗುರಿಯಾದ ಬೇಂದ್ರೆ ಸೆರೆವಾಸ ಅನುಭವಿಸಿದರು. ಅಂತರ್ ಜಾತಿ ವಿವಾಹ ಮಾಡಿಸಿದ  ಬಸವಣ್ಣ , ಬಿಜ್ಜಳನ ಎದುರು ಹಾಕಿಕೊಂಡ. ಪುರೋಹಿತಶಾಹಿ ಕೆಂಗಣ್ಣಿಗೆ ಗುರಿಯಾಗಿ  ಬಹುದೊಡ್ಡ ನೋವು, ಆತಂಕ ಎದುರಿಸಿದ. ಪರಿಣಾಮ  ಶರಣರನ್ನು  ಆನೆ ಕಾಲಿಗೆ ಕಟ್ಟಿ ತುಳಿಸಲಾಯಿತು.

ನಮ್ಮ ಕಣ್ಣ ಮುಂದಿನ ದಿನಗಳಲ್ಲಿ  ಡಾ.ಎಂ.ಎಂ.‌ಕಲಬುರ್ಗಿ, ಗೌರಿ ಲಂಕೇಶರನ್ನು ಹತ್ಯೆ ಮಾಡಲಾಯಿತು. ಇವೆಲ್ಲಾ ನಿಷ್ಠುರ ಬರಹದ ಕಾರಣವಾಗಿ. ‌ನೆನಪಿಡಿ.  ಸಾಹಿತ್ಯ ಅಕ್ಷರ ಬರಹ ಕೇವಲ ಉಲ್ಲಾಸಕ್ಕಾಗಿ ಅಲ್ಲ. ಬದಲಾವಣೆಗಾಗಿ. ಬದುಕಿನ ಬದಲಾವಣೆಗಾಗಿ. ಸಾಮಾಜಿಕ ಸಮಾನತೆಗಾಗಿ.  ಮನುಷ್ಯರ ಬೆಸುಗೆಗಾಗಿ. ಕವಿ,‌ಕತೆಗಾರ ನೀರಿನಂತೆ,ಬೆಳಕಿನಂತೆ, ಗಾಳಿಯಂತೆ ಜೀವಪರವಾಗಿರಬೇಕು. ಇದೇ ಸಂಗಾತಿ ಪತ್ರಿಕೆಯ ಉದ್ದೇಶ.

ಅನೇಕ ಹೊಸ ಬರಹಗಾರರು ಇದನ್ನು ಗಮನಿಸಬೇಕು. ಸಂಗಾತಿ ಮಾನವೀಯತೆಯ ಇಜಂ ಇಟ್ಟುಕೊಂಡು ಬೆಳೆದಿದೆ.ಹಾಗೆ ಇದರ ಧೋರಣೆ ಮುಂದುವರಿಯಲಿದೆ‌ . ” ಮನುಷ್ಯ ಜಾತಿ ತಾನೊಂದೇ ವಲಂ” ಎಂಬ ಪಂಪನ ಮಾತಿನಂತೆ  ನಡೆದುಕೊಂಡು ಬಂದಿದೆ.

ಕುವೆಂಪು ಕಂಡ ಕರ್ನಾಟಕದಂತೆ ಸರ್ವ ಜನಾಂಗದ ಶಾಂತಿ ತೋಟವನ್ನು  ಕಟ್ಟ ಬಯಸಿದೆ.

ಸಮಾನತೆ, ಸ್ವಾತಂತ್ರ್ಯ , ಸಹೋದರತೆಯ ತತ್ವದಲ್ಲಿ ಸಂಗಾತಿ ನಿಂತಿದೆ.‌ ಇದು ನಿಮ್ಮದೇ ಪ್ರಣತಿ. ನೀವೇ ಹಚ್ಚಿದ ದೀಪವನ್ನು ನೀವೇ ಬೆಳಗಿ , ಕಾಪಾಡಿಕೊಂಡು ಹೋಗಿ  ಎಂದು ವಿನಯದಿಂದ ಕೇಳಿಕೊಳ್ಳುತ್ತೇವೆ.

ಇವತ್ತು ಕರ್ನಾಟಕದಲ್ಲಿ ಫ್ಯಾಸಿಸ್ಟ ಚಹರೆಗಳು  ತಲೆ ಎತ್ತುತ್ತಿವೆ. ರಕ್ಷಕರ ತಲೆಯನ್ನು ಸಹ ಉಜ್ಜಲಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಲೇಖಕಿಯರ/ ಲೇಖಕರ ಜವಾಬ್ದಾರಿ ದೊಡ್ಡದು.‌ ಅಕ್ಷರದ ಕ್ರಾಂತಿ ಮಾನವೀಯತೆಯೆಡೆಗೆ ಎಂಬ ತತ್ವ ಇದ್ದರೆ ಸಾಕು…ಫ್ಯಾಸಿಸ್ಟ್‌ಗಳನ್ನು ಎದುರಿಸಬಹುದು. ಅಧಿಕಾರ ಕೇಂದ್ರವನ್ನು ಬಗ್ಗಿಸಬಹುದು. ಅಂತಹ ಶಕ್ತಿ ಒಂದು ಕತೆ, ಕವಿತೆಗೆ ಇದೆ. ಇಂತಹ ಶಕ್ತಿ ಸಂಗಾತಿ ಬಳಗದ ಲೇಖಕರು, ಕವಯಿತ್ರಿಯರಿಂದಾಗಲಿ.

ವಂದನೆಗಳೊಂದಿಗೆ…

ಸಂಪಾದಕೀಯ ಬಳಗ


3 thoughts on “ಪ್ರೀತಿಯ ಸಂಗಾತಿ ಬಳಗವೇ

  1. ಸಂಗಾತಿಗೆ ಉಜ್ವಲ ಭವಿಷ್ಯ ಹಾರೈಸುವೆ. ನಿಷ್ಪಕ್ಷಪಾತಿಯಾಗಿ ಮುಂದುವರೆಯಲಿ.

  2. ಸಂಗಾತಿ ಬಳಗಕ್ಕೆ ಅಭಿಮಾನದ ಅಭಿನಂದನೆಗಳು ಮತ್ತು ಶುಭಾಶಯಗಳು.

  3. ಸಂಗಾತಿ ಬಳಗಕ್ಕೆ ಹೃತ್ಪೂರ್ವಕ ಅಭಿನಂದನೆಗಳು . ಪ್ರಥಮ ಸಂಚಿಕೆಯಿಂದಲೂ ಇದರೊಡನೆ ಇರುವ ಸಂತಸ ಹೆಮ್ಮೆ ನನ್ನದು .ಹೀಗೆ ಸರ್ವತೋಮುಖ ಯಶಸ್ಸು ಗಳಿಸುತ್ತೆಸಂಗಾತಿ ಮತ್ತಷ್ಟು ಬಿಳಲುಗಳನ್ನು ಹರಡಿಕೊಂಡು ಬೆಳೆಯಲಿ ಎಂಬ ಹಾರ್ದಿಕ ಶುಭ ಹಾರೈಕೆಗಳು .

    ಸುಜಾತಾ ರವೀಶ್

Leave a Reply

Back To Top