ಕಾವ್ಯಯಾನ
ಸಂಶ್ಲಿಷ್ಟ ಪ್ರೇಮ
ಶಂಕರಾನಂದ ಹೆಬ್ಬಾಳ
ನೀಲಿ ನಿಶ್ಯಬ್ದ
ಮೋಡಗಳು ಕಡಲಿನ
ಆಶ್ಲೇಷಕ್ಕೆ ಹಾತೊರೆದಿವೆ
ಸಂಶ್ಲಿಷ್ಟ ಮನಸುಗಳಲಿ
ಭಾವಬುಗ್ಗೆ ಹರಿಯುತಿದೆ….
ರೇಖೆಯಂತ ಕೋಲ್ಮಿಂಚು
ಕ್ಲಿನ್ನವಾದ ದಡ
ಕಾಂತೆಯ ನೆನೆ ನೆನೆದು
ಒಡಲು ಕ್ಷತಿಯಲ್ಲಿ
ಕೊರಗಿ ಸೊರಗುತಿದೆಯೇಕೆ…
ಕ್ಲುಪ್ತ ಚುಂಬನದ ಅಭಿಪ್ಸೆ
ಬೇಡಿದ ಸವಿಗಳಿಗೆ
ತೃಪ್ತ ಭಾವದ ಮನೋವಿಹಾರ
ಚಲಿಸುತ್ತಿದೆ ಗಡಿಯಾರದ
ಮುಳ್ಳಂತೆಯೆ
ತನಗೆ ತಾನೆ ಅಹರ್ನಿಶಿ….
ಆಷಾಢ ಮಾಸಕಳೆದು
ಶ್ರಾವಣದ ಸಿರಿಗೆ ಕಾಯುವೆಯೇಕೆ
ಪಯೋಧಿಯ ಸೇರುವಲ್ಲಿ
ಬೀಭತ್ಸ ರಾಗವೇಕೆ ಗೆಳೆಯ
ಅನುರಾಗದಿ ಅನುಮಾನ
ಮೂಡಿಸದೆ ಅನುಗಾಲ
ಜೊತೆಯಾಗು ಬಾ ಎನ್ನ ಬಳಿಗೆ….
***********************