ದೊಂದಿ….

ಕವಿತೆ

ದೊಂದಿ….

ಕಗ್ಗಲ್ಲನ್ನೂ ಮೃದುವಾಗಿ
ಕೊರೆದು ಬೇರೂರಿ ನಿಂತು
ತೀಡುವ ತಂಗಾಳಿಯ ಸೆಳೆತಕೆ
ಬಾಗಿ ಬಳುಕುವ
ಬಳ್ಳಿಯ ಕುಡಿಯಲ್ಲಿ
ನಿನ್ನ ನಡಿಗೆಯ ಸೆಳಕು ಕಂಡು
ನನ್ನ ಕಣ್ಣುಗಳು ಮಿನುಗುತ್ತವೆ….

ಬೆಳದಿಂಗಳಿಗೆ ಬೇಡವಾದ
ಕಾಡಿಗೆ ಕಪ್ಪಿನ ರಾತ್ರಿಯಲಿ
ದೂರದಿ ಮಿನುಗುವ
ಕೋಟಿ ನಕ್ಷತ್ರಗಳ ವದನದಲಿ
ನಿನ್ನ ನಗೆಯ ಬೆಳಕು ಚೆಲ್ಲಿದಂತಾಗಿ
ನನ್ನ ಮನಸ್ಸು ಮುದಗೊಳ್ಳುತ್ತದೆ….

ಬಿಸಿಲ ಬೇಗೆಯಲಿ
ಬಸವಳಿದವನಿಗೆ ಬಯಲಿನಲಿ ನಿಂತ
ಒಂಟಿ ಮರದ ತಣ್ಣನೆಯ ನೆರಳಿನಂತೆ
ಬಾಳ ಬೇಗೆಯಲಿ ಬಸವಳಿದವನಿಗೆ
ನಿನ್ನ ಮಡಿಲು ನೆನಪಾಗಿ
ನನ್ನ ಹೃದಯ ಪುಳಕಗೊಳ್ಳುತ್ತದೆ…

ಹೀಗೇ….. ನೀ ಧಿಕ್ಕರಿಸಿ
ಚೆಲ್ಲಿ ಹೋದ ಸುಡುಸುಡುವ
ನೆನಪಿನ ಕಿಡಿಗಳನು
ಹೆಕ್ಕಿ ದೊಂದಿ ಮಾಡಿಕೊಳ್ಳುತ್ತಿದ್ದೇನೆ
ಬದುಕಿನ ಕತ್ತಲೆಗಿರಲೆಂದು…!

ಮತ್ತೆ ಕನಸು ಕಾಣುತ್ತಿರುವೆ
ನಾವು ಅಪರಿಚಿತರಾಗಿದ್ದ
ತಿರುವಿನಿಂದ ಯಾನ ಶುರುವಾದರೆ
ಸುಂದರವಾಗಬಹುದು ಬದುಕು…!


ಕಾಂತರಾಜು ಕನಕಪುರ


Leave a Reply

Back To Top