ಕವಿತೆ
ಬಣ್ಣಗಳೇ ಎಲ್ಲಿ ಹೋದಿರಿ?
ರಾಜಶ್ರೀ ಟಿ ರೈ ಪೆರ್ಲ
ಭೋರೆಂದು ಸುರಿವ ಮಳೆಯ ದಿನ ಹಾದಿಬೀದಿಯ ತುಂಬಾ ಕೊಡೆ ಹೂವಿಗಂಟುವವರು
ಮದುವೆ, ಹುಟ್ಟುಹಬ್ಬ ಎಂದು ಮನೆಮನೆಯ ಅಂಗಳದಿ ನೆರೆವ
ಜರಿ ನೆರಿಗೆ ಚೆಲುವನಿತ್ತವರು
ಕಚೇರಿಗೆ, ಶಾಲೆಗೊಂದು ಯುನಿಫಾರ್ಮ್, ಗೊಂಚಲುಗಳಿಗೆ
ಜೋತು ಬೀಳುವವರು.
ಅವನು ಕೂಲಿ, ಇವನು ಮಾಲಿ
ಮಹಲಿನವ,ಸೂರಿಲ್ಲದವನೆಂದು
ನೋಟದಲ್ಲೇ ಗುರುತು ಇಟ್ಟವರು
ಒಳ ರಸ್ತೆ ಹೈವೆಗೆ ಹಾಸಿದ ಹರಿದಾಡುವ ಇಂಟರ್ಲಾಕು ಗಾಡಿಗಳಿಗೆ ಪೂಸಿಕೊಂಡವರು.
ಅಲ್ಲಿ ದೇವಗುಡಿಗಳೆದುರು ಹಬ್ಬಕೆ ಕೇಸರಿ, ಹಸಿರು, ನೀಲಿಯ ರಾಶಿ ರಾಶಿ ಸುರುವಿದವರು.
ಆ ಪಕ್ಷ ಈ ಪಕ್ಷ ಎಂಬ ಕಿತ್ತಾಟದ ಹೊತ್ತು ಶಾಂತಿಯ ಬಾವುಟಕೆ ರಕ್ತ ಚಿಮುಕಿಸಿದವರು.
ಮಾಲ್ಗಲ ಒಳಗೆ ಕತ್ತಿಗೆ ಗುರುತಿನ ಮಾಲೆ ಹಾಕಿಕೊಂಡವರ ಪರಿಚಯಕೆ ಮೆತ್ತಿಕೊಂಡವರು
ಬೆಳಕಿಗೆ ಹೊಸ ಮೆರುಗು ತಂದವರು
ಹೊತ್ತಿಗೆ ರಂಗಾದವರು
ಕತ್ತಲಿಗೆ ಗುರುತು ಮರೆತವರು
ಕಳೆದು ಹೋದಿರಿ ನೀವು,
ಕಾಯಿಲೆಯ ಕರಿ ಛಾಯೆಯಲಿ
ಬನ್ನಿ, ಮಂದಿ ಕಾತರಿಸುತಿಹರು
****
ಚೆನ್ನಾಗಿದೆ. ವಾಸ್ತವದ ಕಟು ಸತ್ಯದ ಅನಾವರಣ ಮಾಡಿದ್ದೀರಿ
ವಂದನೆಗಳು ಸರ್
ಸದ್ಯದ ಸ್ಥಿತಿ..ವಾಸ್ತವ ತೆರೆದಿಡುವ ಚೆಂದದ ಕವಿತೆ. ಅಭಿನಂದನೆಗಳು ರಾಜಶ್ರೀ