ಸಾಧ್ಯ ಅಸಾಧ್ಯಗಳ ನಡುವೆ

ಪುಸ್ತಕ ಸಂಗಾತಿ

ಸಾಧ್ಯ ಅಸಾಧ್ಯಗಳ ನಡುವೆ

‘ ಸಾಧ್ಯ ಅಸಾಧ್ಯಗಳ ನಡುವೆ ‘
ಕಾದಂಬರಿ ಪರಿಚಯ
ಲೇಖಕರು:ಪ್ರಮೋದ್ ಕರಣಂ
ಪ್ರಕಾಶಕರು :ಶಾಶ್ವತ ಪಬ್ಲಿಕೇಶನ್
ಬೆಲೆ : ರೂ 180-00 ಅಂಚೆ ವೆಚ್ಚ ಉಚಿತ
ದೊರೆಯುವ ಸ್ಥಳ :9743224892

   ಲೇಖಕರ ಚೊಚ್ಚಲ ಕಾದಂಬರಿ ಇದಾಗಿದ್ದು,  ದಿನಾಂಕ:17-12-2020 ರಂದು ಕಲ್ಬುರ್ಗಿಯಲ್ಲಿ ಈ ಭಾಗದ ಖ್ಯಾತ ಸಾಹಿತಿಗಳಾಗಿರುವ ಪ್ರೊಫೆಸರ್ ವಸಂತ ಕುಷ್ಟಗಿ ರವರ ಅಮೃತ ಹಸ್ತದಿಂದ ಲೋಕಾರ್ಪಣೆಗೊಂಡ ಸಂದರ್ಭದಲ್ಲಿ,ಪ್ರೊಫೆಸರ್ ವಸಂತ ಕುಷ್ಟಗಿ ರವರು “ನಾನು ಓದಿದ ಕಾದಂಬರಿಗಳಲ್ಲಿ ತ ರಾ ಸು ರವರ ಮಸಣದ ಹೂವು ಕಾದಂಬರಿ ನನಗೆ ತುಂಬ ಇಷ್ಟವಾಗಿದ್ದು, ಅದರ ನಂತರ ಇದೇ ಕಾದಂಬರಿ ನನಗೆ ತುಂಬ ಇಷ್ಟವಾಗಿದೆ ” ಎಂಬ ಮೆಚ್ಚುಗೆಯ ನುಡಿಗಳೊಂದಿಗೆ  ಹಾರೈಸಿರುತ್ತಾರೆ.

      ಈಗಿನ ಯುವ ಪೀಳಿಗೆ ದುಶ್ಚಟಗಳಿಗೆ ಬಲಿಯಾಗುತ್ತಿರುವುದು. ಅದರಲ್ಲಿಯೂ ಹೆಣ್ಣುಮಕ್ಕಳು ಈ ಒಂದು ದುಶ್ಚಟಗಳಿಗೆ ಬಲಿಯಾಗುತ್ತಿರುವುದು. ಸಮಾಜ ಯಾವ ದಿಕ್ಕಿನ ಕಡೆ ಹೋಗ್ತಾ ಇದೆ ಅಂತ ಯೋಚಿಸೋ ಹಾಗೆ ಮಾಡಿದೆ. ಇಂದಿನ ತಲೆಮಾರಿನ ಯುವಕ-ಯುವತಿಯರ ಬದುಕಿನ ಚಿತ್ರಣವನ್ನು ಆಪ್ತಶೈಲಿಯಲ್ಲಿ ತೆರೆದಿಡುವ ಲೇಖಕರು ತಾವು ಕಂಡುಂಡ ಚಿತ್ರಗಳನ್ನೇ ಕಾದಂಬರಿ ರೂಪದಲ್ಲಿ ಕಟ್ಟಿ ಕೊಟ್ಟಿರುವುದರಿಂದ, ಕಾದಂಬರಿ ನೈಜವಾಗಿದೆ ಮತ್ತು ನಮ್ಮೆಲ್ಲರ ಅನುಭವದಂತೆಯು ಕಾಣುತ್ತದೆ.

     ಹೊಸಪೇಟೆ ಹಾಗೂ ಕಲ್ಬುರ್ಗಿಯಲ್ಲಿ ಕೌಟುಂಬಿಕ ಕಟ್ಟುಪಾಡುಗಳ ನಡುವೆ ದುಶ್ಚಟಗಳ ಬಲೆಗೆ ಬೀಳದೆ ವಿದ್ಯಾಭ್ಯಾಸ ಮುಗಿಸಿ, ನೌಕರಿಗಾಗಿ ಬೆಂಗಳೂರಿಗೆ ಬರುವ ಲೇಖಕರಿಗೆ ಅಲ್ಲಿ ಕೆಲವು ಯುವತಿಯರು ಸಾರ್ವಜನಿಕ ಸ್ಥಳಗಳಲ್ಲಿ ಯುವಕರೊಂದಿಗೆ ಯಾವುದೇ ಮುಚ್ಚುಮರೆ ಸಂಕೋಚ ಹಾಗೂ ಹಿಂಜರಿಕೆಯಿಲ್ಲದೆ ಸಿಗರೇಟು ಸೇದುವುದನ್ನು ನೋಡಿ ದಂಗಾಗಿ,  ಮುಂದೆ ಅದೇ ಕಾದಂಬರಿಯ ಕಥೆಗೆ ಬುನಾದಿಯಾಗಿದೆ ಎಂದು ಲೇಖಕರು ಹೇಳಿದ್ದಾರೆ.

         ಹಾಗೂ ಲೇಖಕರು ಹೇಳುವಂತೆ

“ಯತ್ರ ನಾರ್ಯಸ್ತು ಪೂಜ್ಯಂತೆ         ರಮಂತೆ ತತ್ರ ದೇವತಃ ”   ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ.

 ಕೆಟ್ಟ ಮಗನನ್ನು ನೋಡಿದ್ದೇವೆ

 ಕೆಟ್ಟ ಮಗಳನ್ನು ನೋಡಿದ್ದೇವೆ

 ಕೆಟ್ಟ ತಂದೆನು ನೋಡಿದ್ದೇವೆ

 ಆದರೆ

 ಕೆಟ್ಟ ತಾಯಿ ಇರುವುದು ಅಸಾಧ್ಯದ ಮಾತು ಎಂದುಕೊಳ್ಳುತ್ತಿರುವಾಗಲೇ, ಈಗಿನ ತಲೆಮಾರಿನ ಯುವತಿಯರು ದುಶ್ಚಟಗಳಿಗೆ ಬಲಿಯಾಗಿರುವುದನ್ನು ಹಾಗೂ ಬಲಿಯಾಗುತ್ತಿರುವುದನ್ನು  ನೋಡಿದರೆ, ಮುಂದೆ ಇವರೇ ತಾಯಂದಿರಾದಾಗ, ಭವಿಷ್ಯದಲ್ಲಿ ಆ  ಅಸಾಧ್ಯದ ಮಾತು ಸಾಧ್ಯವಾಗಿ, ಕೆಟ್ಟ ತಾಯಿಯನ್ನು ನೋಡುವ, ಕೆಟ್ಟ ದಿನಗಳು ಬರಬಹುದೇ? ಎಂಬ ಆಲೋಚನೆ ಈ ಕಾದಂಬರಿ ಓದಿದ ನಂತರ ಖಂಡಿತಾ ಬರುತ್ತದೆ.

       ವಿದೇಶಿ ಸಂಸ್ಕೃತಿಯ ಬಿರುಗಾಳಿ ನಮ್ಮ ಸಂಸ್ಕೃತಿಗಳನ್ನು ನಿಧಾನವಾಗಿ ನುಂಗುತ್ತಾ ಸರ್ವನಾಶ ಮಾಡುತ್ತಿದೆಯಾ? ಎನ್ನುವ ಪ್ರಶ್ನೆ ಕೂಡ ಕೃತಿಯನ್ನು ಓದುವಾಗ ಕಾಡದೇ ಇರದು.

         ಇನ್ನು ಈ ಕಾದಂಬರಿಯ ಬಗ್ಗೆ ಹೇಳುವುದಾದರೆ,  ಕಥಾನಾಯಕ ಗಣೇಶ್ ದುಶ್ಚಟಗಳಿಗೆ ಬಲಿಯಾಗಿರುವ ಪ್ರಕೃತಿ ಎಂಬ ಯುವತಿಯನ್ನು ಭೇಟಿಯಾಗುತ್ತಾನೆ. ಮಾತನಾಡಿಸುತ್ತಾ ತಿಳಿಯುತ್ತೆ ಪ್ರಕೃತಿಯ ದುಶ್ಚಟಗಳಿಗೆ ಅವಳ ಕನಸು ನನಸಾಗದೆ ಇರುವುದು ಹಾಗೂ ಆ ಕನಸುಗಳಿಗೆ ಅಡ್ಡಿಪಡಿಸಿದ್ದು ಅವರ ಮನೆಯವರು ಎನ್ನುವುದು.

         ಮತ್ತೆ ಇನ್ನೊಂದು ಶಾಕಿಂಗ್ ಅಂದರೆ ಪ್ರಕೃತಿಗೆ ಡ್ರಗ್ಸ್  ನೀಡಿ ತೆಗೆದುಕೊಳ್ಳಲು ಪ್ರೋತ್ಸಾಹಿಸಿದ್ದು, ಗಣೇಶನ ಜೊತೆಯಲ್ಲಿಯೇ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ಹಾಗೂ ಇನ್ನೋರ್ವ  ಡ್ರಗ್ಸ್ ಅಡ್ಡಿಕ್ಟ್ ಯುವತಿ ರುಚಿ.

         ಹೀಗೆ ಪ್ರಕೃತಿ ಡ್ರಗ್ಸ್ ನಿಂದ ಡಿಅಡಿಕ್ಟ್ ಆಕ್ತಾಳ, ಅವಳ ಕನಸುಗಳು ನನಸಾಗುತ್ತವೆಯೇ?  ಹಾಗೂ ರುಚಿಗೆ ಏನಾಗುತ್ತದೆ?  ಬದುಕಿನ ಸಾಧ್ಯ ಅಸಾಧ್ಯ ಗಳ ನಡುವಿನ ಪೈಪೋಟಿಯಲ್ಲಿ ಸಾಧ್ಯತೆ ಕಡೆಗೆ ಹೆಜ್ಜೆ ಊರುವ ಗಣೇಶನ ಪ್ರಯತ್ನ ಸಫಲವಾಗುವುದೇ? ಇವರೆಲ್ಲರ ಬದುಕು ಯಾವ ತಿರುವು ಪಡೆಯುತ್ತದೆ ಎನ್ನುವುದು ಕತೆಯ ಅಂತರಾಳ.

        ಒಂದೇ ದಿನದಲ್ಲಿ ಓದಬಹುದಾದ ಉತ್ತಮ ಪರಿಕಲ್ಪನೆಯ ಕೃತಿಯೇ ಇದಾಗಿದ್ದು ಸಾಮಾಜಿಕ ಪಿಡುಗನ್ನು ಕೇಂದ್ರವಾಗಿಟ್ಟುಕೊಂಡು ಕಥೆ ಹೆಣೆದಿರುವ ಲೇಖಕರ ಪ್ರಯತ್ನ ಮೆಚ್ಚುಗೆಯಾಗುತ್ತದೆ. ಪ್ರತಿಯೊಬ್ಬರು ಓದಿ ಸಂಗ್ರಹಿಸಿಟ್ಟು ಕೊಳ್ಳ ಬೇಕಾದಂತಹ ಕಾದಂಬರಿ ಇದಾಗಿದೆ.

****************************

 ರಾಜಶ್ರೀ ಆರ್.

Leave a Reply

Back To Top