ರೈತ ಗಜಲ್
ಬೆಳೆದ ಬೆಳೆಗೆ ಈಗಲಾದರೂ ಬೆಲೆ ಬರುವುದೆಂದು ಕಾದಿದ್ದೇನೆ
ಕಷ್ಟ ಕೋಟಲೆ ಆಗಲಾದರೂ ಕಳೆವುದೆಂದು ನಿರೀಕ್ಷಿಸಿದ್ದೇನೆ
ಸಾಲ ಶೂಲವಾಗಿ ಪ್ರತಿಕ್ಷಣ ಇರಿದಿರಿದು ನರಳಿಸುತ್ತಲೇ ಇದೆ
ಕಂಡ ಕನಸುಗಳು ನನಸಾಗುವ ಕಲ್ಪನೆಯಲಿ ಮುಳುಗಿದ್ದೇನೆ
ಹದಿಹರೆಯದ ಮಗಳ ಕಂಗಳಲಿ ನೂರಾರು ಆಸೆ ಮಿಂಚುಗಳು
ಬಿಳಿಕುದುರೆಯ ರಾಜಕುಮಾರ ಆಗಮಿಸಲೆಂದು ಬಯಸಿದ್ದೇನೆ
ಗಾಜಿನ ಬಳೆ ತೊಟ್ಟ ಸಂಗಾತಿಯ ಬಡ ಕೈಗಳು ಅಣಕಿಸುತ್ತಿವೆ
ತಪ್ತ ಮನಕೆ ತೃಪ್ತ ಭಾವ ತುಂಬುವ ಘಳಿಗೆಗೆ ಹಾತೊರೆದಿದ್ದೇನೆ
ಬಾಳಹಾದಿಯ ಕಲ್ಲು ಮುಳ್ಳು ಬದಿಗೆ ಸರಿವ ಕಾಲ ಬರಲಿ ಹೇಮ
ನೋವು, ಸಂಕಟಗಳ ಭೂತ ನೇಪಥ್ಯ ಸೇರಲೆಂದು ಹಂಬಲಿಸಿದ್ದೇನೆ
***********************************************
ಎ . ಹೇಮಗಂಗಾ