ಆಕಾಶದಾವರೆ

ಕವಿತೆ

ಆಕಾಶದಾವರೆ

ಲಕ್ಷ್ಮೀದೇವಿ ಪತ್ತಾರ

Lotus, Flower, Bud, Petals, Water Lily

ಆಕಾಶಗಂಗೆಯಲ್ಲಿ
ಪ್ರತಿದಿನ ಬೆಳಗಿನ ಜಾವದಲ್ಲಿ
ಅರಳುವದೊಂದು ಅಸದಳದ ತಾವರೆ ಹೂವು

ಮುಂಜಾವಿನಲ್ಲಿ ಕೆಂದಾವರೆ
ಮಧ್ಯಾಹ್ನ ನೀಲ್ದಾವರೆ
ಮತ್ತೆ ಸಂಜೆ ಹೊನ್ನದಾವರೆ
ಅಪರಿಮಿತ ಚೆಲುವಿನ
ಅಪರೂಪದ ಹೂವು

ಬಗೆ ಬಗೆ ಬಣ್ಣ ಧರಿಸುತಾ
ಮುದಗೊಳಿಸುವ ತಾವರೆ
ಹೊಂಗಿರಣದ ಸುಗಂಧವ
ಎಲ್ಲೆಡೆ ಚೆಲ್ಲಿ ಚೈತನ್ಯ ಉಕ್ಕಿಸುವ ತಾವರೆ ಹೂವು

ಯಾರು ಮುಟ್ಟದ ತಾವರೆ
ಯಾರು ಮುಡಿಯದ ತಾವರೆ
ಅರಳಿದರೆ ಭೂರಮೆಗೆ ಬೆಳಗು ಸೊಬಗು ಗೆಲುವು ತರುವ ತಾವರೆ ಹೂ

ಜೀವಿಗಳ ಜೀವ ಜೀವನ
ಬಾನಿಗೆ ಶೋಭೆ ಈ ಭಾನು
ನಮಗಾಗಿ ಹೂವಾಗಿ ಅರಳಿದ ದೇವರು
ಆದಿತ್ಯನೆಂಬೊ ಅವಿನಾಶಿ ತಾವರೆ ಹೂವು


Leave a Reply

Back To Top