ಕವಿತೆ
ನಾವು ನಿಮ್ಮ ಭಕ್ತರು
ಶಿವರಾಜ್.ಡಿ
ನಾವು ನಿಮ್ಮ ಭಕ್ತರು
ನೀವು ಕಟ್ಟುವ ಪುತ್ಥಳಿಗಳಿಗೆ,
ಕ್ರೀಡಾಂಗಣಗಳಿಗೆ,ಮಹಲುಗಳಿಗೆ
ದೇಶಭಕ್ತರ ಹೆಸರಿಡಲು
ಹೋರಾಟ ಮಾಡುತ್ತೇವೆ.
ನಾವು ನಿಮ್ಮ ಭಕ್ತರು
ನಿಮ್ಮ ದೇಶಭಕ್ತಿಯ ಮಾತುಗಳಿಗೆ
ಅಚ್ಚೆ ದಿನದ ಆಡಂಬರದ ಸುದ್ದಿಗಳಿಗೆ
ಬಂಗಾರದ ಕಿವಿಯಾಗುತ್ತೇವೆ.
ನಾವು ನಿಮ್ಮ ಭಕ್ತರು
ಪೆಟ್ರೋಲ್, ಡೀಸೆಲ್, ದಿನಸಿ
ಧಾನ್ಯಗಳ ಬೆಲೆ ಏರಿದರೂ
ದುಬಾರಿ ಜಿಎಸ್ಟಿ ತೆರಿಗೆ ಕಟ್ಟುತ್ತೇವೆ.
ನಾವು ನಿಮ್ಮ ಭಕ್ತರು
ಚಪ್ಪಾಳೆ ತಟ್ಟುತ್ತೇವೆ,
ಗಂಟೆ ಬಡಿಯುತ್ತೇವೆ
ಕ್ಯಾಂಡಲ್ ಹಚ್ಚಿ ಕರೋನಾ ಓಡಿಸುತ್ತೇವೆ.
ನಾವು ನಿಮ್ಮ ಭಕ್ತರು
ಆಕ್ಸಿಜನ್ ಕೊರತೆಯಾದರೂ
ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಹೋದರು
ನಗು ನಗುತ್ತಾ ಸಾಯುತ್ತೇವೆ.
ನಾವು ನಿಮ್ಮ ಭಕ್ತರು
ನಿಮ್ಮ ಮನದ ಮಾತು ಕೇಳುತ್ತಾ
ನಿಮ್ಮನ್ನು ಆರಾಧಿಸುತ್ತೇವೆ
ನೀವು ಸುಮ್ಮನೇ
ಮಾತಾಡಿ …
ಮಾತಾಡಿ …
ಮಾತನಾಡುತ್ತಲೇ ಇರಿ..
*************************************