ಕವಿತೆ
ನೆನಪೊಂದು ರಮಿಸುತ್ತದೆ.
ರಾಜೇಶ್ವರಿ ಎಂ.ಸಿ.
ಇಲ್ಲಿ ಕೀಲಿ ಮಣೆ ಎದುರು ಕೂತು ಇದ್ಯಾವುದೋ ಗದ್ದಲದ ನಡುವೆ ನನ್ನ ನಾ ಕಳೆದುಕೊಂಡವಳಂತೆ,
ನಿತ್ಯ ಮಿಥ್ಯಗಳ ಹುಡುಕಾಟದಲ್ಲಿರುವಾಗ,
ಅಲ್ಲಿ ನನ್ನೂರಿನ ಬೆಟ್ಟದ ಮೇಲೆ
ಬೆಳಗಿಳಿದು, ಸೂರ್ಯಕಾಂತಿಗೆ
ಮಿನುಗುವ ತನ್ನ ಕರ್ತವ್ಯದಲಿ ಪೂರ್ತಾ ತೊಡಗಿಸಿಕೊಂಡ
ಹುಲ್ಲು ಗರಿಕೆಯ ಮೇಲಿನ ಹಿಮ ಮಣಿ ಯೊಂದು
ಸದ್ದಿಲ್ಲದೆ ಕರಗುತಿರುತ್ತದೆ.
ಈ ಊರಿನ ಸಂದಣಿಯಲಿ
ಭರಪೂರ ಕೊಚ್ಚಿಹೋದ ನನ್ನ,
ನೆನಪೊಂದು ರಮಿಸುತ್ತದೆ.
ಕನಸುಗಳೂ ಬೀಳದ ರಾತ್ರಿಗಳಿವೆ.
ಅಷ್ಟು ಚಂದ ನಿದ್ರಿಸಿದೆನೆಂದಲ್ಲ..
ನಿದ್ರಿಸದೆ ಉಳಿದಿರುವೆ ನೀನೆಂದು
ನಳ ನಳಿಸುತ್ತಿದ್ದ ಪುಟ್ಟ ಹುಲ್ಲುಗರಿಕೆಯೊಂದು
ತಂಗಾಳಿಗೆ ಓಲಾಡಿ ನನ್ನ ಕರೆಯುತ್ತದೆ.
ಹಗಲ ರವಿ
ಇರುಳ ಶಶಿ
ಇಬ್ಬರನೂ ನನ್ನೂರಿನ ಬೆಟ್ಟ
ತಬ್ಬಿ ಮುದ್ದಿಸುತ್ತದೆ.
ಅದ ನೆನೆವ ನನ್ನ ಮನವ ಕುಣಿಸುತ್ತದೆ
***********************************