ಕವಿತೆ
ಹೊಸವರುಷದ ಸಂಜೆ
ವೈ.ಎಂ.ಯಾಕೊಳ್ಳಿ
ಆಡಿ ಬೆಳೆದ ಹೊಲ
ತಿಂದ ಮುಟಿಗೆ ಉಂಡಿ
ಕಾದ ದನ,ಹಿಂಡಿ ಕಾಸದೆ ಕುಡಿದ ಹಾಲು
ಕಳೆದ ಏಸೋ ಕಂಟಿ ಮರೆಯ ನೆನಪುಗಳು
ಆಗಾಗ ಕಾಡಿ
ಅಣಕಿಸುತ್ತವೆ ಈ ಕೃತ್ರಿಮದ ಬದುಕನ್ನು
ಜೋಳದ ಸಿಹಿತೆನಿ ತಿಂದ ಗಿಡಗಡಲೆ
ಸುಟ್ಟ ಸೆಂಗಾ…ಒಂದೇ ಎರಡೇ
ನೆನಪುಗಳ ಬೋರ್ಗರೆತ
ಕಾಟಮಳ್ಳೇ ಕಪಾಟಮಳ್ಳೆ
ಗುರ್ಜಿ ಆಟಗಳ ಗುಂಗು
ಕಿವಿಯಲ್ಲಿ ಗುಣುಗುಣಿಸಿ
ಈಗ
ಯಾವ ಚಾನಲ್ಕಿನ ಬಟನ್ನು ಒತ್ತಿದರೂ
ಅದೇ ಅರೆಬರೆ ನಗ್ನತೆಯ ದರ್ಶನ ಬೇಸರವಾಗಿ
ಆಗುತ್ತದೆ ಇಡಿ ಬದುಕಿನ ಬಟನ್ನೇ ಆಫ್ ಆದಂತೆ
ಓಡುತ್ತಿದ್ದ ಬಂಡಿಯ ಬೆನ್ನು ಹತ್ತಿ
ಹಿಡಿಯಲೆಳಸಿದ ಆದ ಮಂಡಿಗಾಯಕ್ಕೆ
ಯಾವುದೊ ರಸದ ಎಲೆಯ ಹಿಂಡಿದ್ದು
ಪಕ್ಕದ ಬದುವಿನ ಎಳೆಯ ಸೆರಗು
ಕಿಸಕ್ಕನೆ ನಕ್ಕಿದ್ದು
ನೆನೆದು
ಜೀವ ರೋಮಾಂಚನಗೊಳ್ಳುತ್ತದೆ
ಎಲ್ಲಿ ಹೋದಾವೊ ಗೆಳೆಯಾ
ಕಾಡಿದ ಕವಿಯ ಸಾಲಿನ ಗುಂಗು
ಕಣ್ಣಿಗೆ ಕುಕ್ಕುವ ಬಣ್ಣಬಣ್ಣದ
ಮಂದಬೆಳಕಿನ ನಡುವೆ
ನೆನಪುಗಳ ಹಗೆಯೊಳಗೆ
ಅನಂತ ದೀಪ ಮಿಣಕ್ ಮಿಣಕ್
ಉರಿದು ಹಂಗಿಸುತ್ತದೆ
ದಾರಿ ಕಾಣದ ನಾನು ಬಗೆಬಗೆಯ ಬಣ್ಣದ
ದ್ರವಗಳಲಿ
ತೇಲುವವರ ನಡುವೆ
ಮೂಲೆ ಸೇರುತ್ತೇನೆ
ಜೀವಯಾನದ ಮತ್ತೊಂದು ವರುಷ
ಕಡಿತಗೊಂಡದ್ದಕ್ಕೆ
ವಿಷಾದಿಸುತ್ತ
*********************************
Aapthavenisuva kavithe ..chennagi baredhidderi .Abhinandhanegalu