ಹುಡುಕಾಟಗಳು ನಿಂತಿಲ್ಲ

ಕವಿತೆ

ಹುಡುಕಾಟಗಳು ನಿಂತಿಲ್ಲ

ವಸುಂಧರಾ ಕದಲೂರು

White Petaled Flower

ತುಮುಲದ ಅಲೆ ದಡ ಮುಟ್ಟಿ
ತಣಿದು, ಹಿಂದೆ ಸರಿವಾಗ
ಅಲೆಯೊಡನೆ ಬೆರೆತು ನಾ
ಹುಡುಕಾಟದ ಸುಳಿಯಲಿ
ಸುತ್ತುತ್ತಾ ಆಳಕ್ಕಿಳಿದಿರುತ್ತೇನೆ.

ಆ ಸ್ವಚ್ಛ ನೀಲಿ ಆಗಸ ದಟ್ಟಮಳೆ
ಸುರಿದು, ಬೆಟ್ಟಸಾಲು ತಣಿಸಿ,
ಇಳೆ ಎದೆಯಲಿ ಹಸಿಯೊಲವು
ಬಿತ್ತಿದ ನೆನಪುಗಳಿಗಾಗಿ ಹುಡುಕುತ್ತಾ..

ಕುಡಿಯೊಡೆದ ಬೀಜ; ಹಸಿರಾಗಿ
ನಳನಳಿಸಿ, ಮೊಗ್ಗು – ಹೂವಾಗಿ-
ಕಾಯಾಗಿ; ಬಿಳಿ-ಹಳದಿ- ಕೆಂಪು
ರೂಪಾಂತರಿಸುವ ಸೋಜಿಗವ
ಹುಡುಕುತ್ತಾ…

ನನ್ನನಿನ್ನಾಸೆ ಒಂದಾಗಿ,ನಲುಮೆ
ಮಗುವು ನಗುವಾಗಿ ನಲಿದಾಡಿದ
ಸಂಭ್ರಮದ ಹೊತ್ತಿನಲಿ ‘ಅರೆ
ಎಲ್ಲಿತ್ತಿದೆಲ್ಲಾ!’ ಎಂದು ಹುಡುಕುತ್ತಾ..

ನಿರಂತರದ ದುಡಿಮೆ ನಡುವೆ
ವಿಶ್ರಾಂತಿ ಬಯಸಿ ಜೀವ;
ಥಟ್ಟನೆದ್ದು ಮರೆಯಾದಾಗ, ಎತ್ತ
ಸಾಗಿತೆಂಬ ದಿಗ್ಭ್ರಮೆಯಲಿ
ಅನಂತದಲಿ ಚೈತನ್ಯವನು
ಅರಸುತ್ತಾ…

ಈ ಯಾವ ಹುಡುಕಾಟಗಳೂ
ಇನ್ನೂ ನಿಂತಿಲ್ಲ…

*******************************

Leave a Reply

Back To Top