ಗಜಲ್
ಜುಲ್ ಕಾಫಿಯಾ
ಸ್ಮಿತಾ ರಾಘವೇಂದ್ರ
ನಿನ್ನ ಒಂದು ಕುಡಿ ನೋಟಕ್ಕಾಗಿ ನೂರು ನೋಟಗಳ ಎದುರಿಸಬೇಕು
ನಿನ್ನ ದಿವ್ಯ ಪ್ರೀತಿಗಾಗಿ ಹಲವು ನೋವುಗಳ ಹುದುಗಿಸಬೇಕು
ನೀ ಸಿಗುವೆ,ಸಿಗಬೇಕು ಎನ್ನುವ ತಪನೆ ಮತ್ತು ನಿರೀಕ್ಷೆ
ಇದ್ದೂ ಇರದಂತಾದ ಭೂತ ಭವಿಷ್ಯಗಳ ಮರೆಯಬೇಕು
ಜಗದ ಆದಿಯಲ್ಲೇ ಜಾರಿಯಾದ ಪ್ರೇಮಕ್ಕೂ ಮುಗಿಯದ ಭಯ
ನಿನ್ನ ನೆರಳಾಗಿ ಹಿಂಬಾಲಿಸಲು ಗಡಿ ಗೆರೆಗಳ ಮೀರಬೇಕು
ಒಲವೆನ್ನುವುದು ಅಗಲಿಕೆಯಲ್ಲೇ ಮುಗಿವ ಮಾತೇನು?
ಅರೆಗಳಿಗೆಯಾದರೂ ಜೊತೆಯಾಗುವ ಕನಸುಗಳ ಹಿಡಿಯಬೇಕು.
ಎಷ್ಟೊಂದು ಹಾತೊರೆಯುತ್ತದೆ ಈ ಜೀವ,ಭಾವ”ಮಾಧವ”
ನಿನ್ನೊಳಗೇ ಸೇರಿ ಐಕ್ಯವಾಗಲು ಅದೆಷ್ಟು ಜನ್ಮಗಳ ಕಳೆಯಬೇಕು
************************************************
ಚಂದ