ಕಾಡುವ ಕಾಮೋಲ

ಪುಸ್ತಕ ಸಂಗಾತಿ

ಕಾಡುವ ಕಾಮೋಲ

ಕಾಮೋಲ

ಕಥಾಸಂಕಲನ

ಡಾ. ಅಜಿತ್ ಹರೀಶಿ

ಅಕ್ಷಯ ಪ್ರಕಾಶನ

ವೃತ್ತಿಯಲ್ಲಿ ಆಯುರ್ವೇದ ಡಾಕ್ಟರ್, ಪ್ರವೃತ್ತಿಯಲ್ಲಿ ಲೇಖಕ, ಕವಿ ಡಾ. ಅಜಿತ್ ಹರೀಶಿ ಒಳ್ಳೆಯ ಓದುಗ ಮತ್ತು ಓದಿದ ಪುಸ್ತಕಗಳ ಬಗ್ಗೆ ತಪ್ಪದೇ ಅಭಿಪ್ರಾಯ ಹಂಚಿಕೊಳ್ಳುವ ಸಹೃದಯಿ. ಅದು ಪ್ರೂವ್ ಆಗಿದ್ದು ಅವರ ” ಕಾಮೋಲ” ಎರಡನೆಯ ಕಥಾಸಂಕಲನದ ಸ್ಮರಣಿಕೆಯ ಪಟ್ಟಿ ನೋಡಿದಾಗ. ಇಲ್ಲಿ ನಾನು ಗಮನಿಸಿದ್ದು ಅವರ ಕೃತಜ್ಞತಾ ಮನೋಭಾವ ಮತ್ತು ಪ್ರತಿಯೊಂದನ್ನು ಗಮನಿಸುವ, ಗುರುತಿಸುವ ಗುಣ. ಕಥೆಗಳನ್ನು ಓದಿದಾಗ ಅವರಲ್ಲಿನ ಜೀವಸೆಲೆ, ಅವರ ಪರಿಸರದ ಮತ್ತು ವೃತ್ತಿಯ ಅನುಭವಗಳು, ಅವರಿಷ್ಟದ ಮನೋವೈಜ್ಞಾನಿಕ ಅಥವಾ ಮನಸ್ಸೆಂಬ ವಿಚಿತ್ರ, ಕೌತುಕ ಲೋಕದ ಚಿತ್ರಗಳು ಕುತೂಹಲಕಾರಿಯಾಗಿ ತೆರೆದುಕೊಳ್ಳುತ್ತವೆ. ಬಹುಮಾನ ಪಡೆದ ಕೆಲವು  ಕಥೆಗಳು ಇಲ್ಲಿವೆ.

“ಕನ್ನಡಿಗಂಟದ ಬಿಂದಿ” ಒಬ್ಬ ಅದೃಷ್ಟಹೀನ ಹೆಣ್ಣಿನ ಜೀವನದ ಪ್ರತಿ ಹಂತದಲ್ಲಿ ಗಂಡಸರಾಡುವ ಕ್ರೌರ್ಯದ ಆಟ ಅವಳ ಮನೋದೈಹಿಕ ಆರೋಗ್ಯದ ಮೇಲೆ ಬೀರುವ ಪರಿಣಾಮಗಳನ್ನು ಕಟ್ಟಿಕೊಡುತ್ತಲೇ, ವಿಷಾದವೊಂದನ್ನು ಹುಟ್ಟು ಹಾಕುತ್ತಲೇ, ದೌರ್ಬಲ್ಯಗಳ ತನ್ನದೇ ರೀತಿಯಲ್ಲಿ ಸಂತೈಸಿಕೊಳ್ಳುವ ಶಕ್ತಿಯನ್ನೂ ಪರಿಚಯಿಸಿದೆ. ಆತಂಕವಾಗಿ ಬಂದ ಹಾವು ಹಾನಿ ಮಾಡದೆ ದೂರಾದ ಹಾಗೆ, ಮತ್ತೊಂದು ಆಗಬಹುದಾಗಿದ್ದ ಅವಾಂತರ ತಪ್ಪಿದ ಹಾಗೆ, ಆತ್ಮಾನುಸಂಧಾನದ ಜೊತೆಯಿಂದ ಎಲ್ಲ ಗೊಂದಲ ಕಳೆದ ಹಾಗೆ..ತೆರಣಿಯ ಹುಳು ತನ್ನ ನೂಲು ತನ್ನನ್ನೇ ಸುತ್ತಿ ಸಾಯುವುದನ್ನು ಹೇಗೋ ತಪ್ಪಿಸಿಕೊಂಡ ಹಾಗೆ.

.

“ಗುಪ್ತಗಮನ”ದಲ್ಲಿ ಒಂದು ‘ಪುರುಷೋತ್ತಮ ಪಾತ್ರ ಸೃಷ್ಟಿ’ ಯಿಂದಾಗಿ ಅತ್ಯಂತ ಸಾಧಾರಣ ಅನೈತಿಕ ಸಂಬಂಧವೊಂದು ಮಾತ್ರ ಆಗಬಹುದಾದ ಸಾಧ್ಯತೆ ಕಳಚಿಬಿದ್ದಿದೆ.  ಪವಿತ್ರ ಆತ್ಮಬಂಧುವಿನ ಭರವಸೆಯಿಂದಾಗಿ, ಮೆಂಟಲ್ ಡಿಸಾರ್ಡರ್, ಖಿನ್ನತೆ ಏನೆಲ್ಲ ಹೆಸರಿನ ಕಾಯಿಲೆ ಓಟಕಿತ್ತಿದೆ.  ಮನಸ್ಸಿಗೆ ಬೇಕಿರುವುದು ಒಂದು ಸಣ್ಣ ನಂಬಿಕೆ, ಒಂದು ಬದಲಾವಣೆ, ಒಂದು ಸ್ವಚ್ಛ ಸ್ನೇಹ..ಇದು ಬಹುಶಃ ಅವರ ವೃತ್ತಿ ಕೊಟ್ಟ ಅನುಭವವಿರಬೇಕು.

” ಸೆಲೆ” ಕವಿತೆಯೋ, ಅನ್ನವೋ ಯಾವುದು? ಋಷಿ ಎಂದರೆ ಕವಿಯೋ, ಕರ್ಮಯೋಗಿಯೋ ಯಾರು? ಎಂಬ ಪ್ರಶ್ನೆ ಹುಟ್ಟುಹಾಕುತ್ತಲೇ ಗ್ರಾಮೀಣ ಪರಿಸರವೊಂದರ ಸಹಜ ಚಿತ್ರಣವನ್ನು ಕಟ್ಟಿಕೊಡುತ್ತದೆ.

“ಕಾಮೋಲ” ಅತಿ ಮುಖ್ಯವಾದ, ಕುತೂಹಲಕರವಾದ ಕಥೆ. ಮನುಷ್ಯನ ಎರಡು ಮುಖಗಳ ಅನಾವರಣ. ನೆನಪು-ವಾಸ್ತವ, ಉನ್ಮಾದ-ಪ್ರಜ್ಞೆ, ಆಂತರ್ಯ-ಬಾಹ್ಯಗಳ ನಡುವಿನ ಯುದ್ಧ. ಭೂತವೊಂದು ಆತ್ಮಸಾಕ್ಷಿಯ ರೂಪದಲ್ಲಿ ಕಾಡುತ್ತಿರುವುದಾ? ಸಭ್ಯ ಸುಸಂಸ್ಕೃತ ದೇಹದಲ್ಲಿರುವ ಮೃಗೀಯ ಕಾಮ-ಮೋಹದ ಹೃದಯವಾ? ಪ್ರಶ್ನೆಗಳನ್ನು ಉಳಿಸಿಬಿಡುತ್ತದೆ. ಕಥೆ ಕಟ್ಟಿದ ರೀತಿ, ಭಾಷೆ ಒಂದು ಹೊಸ ಅನುಭವ.

“ಹುತ” ಆತ್ಮಹತ್ಯೆಯ ಮನಸ್ಥಿತಿಯಿಂದ ಹತ್ಯೆಯೆಡೆಗೆ ತಿರುಗುವ ಮನುಷ್ಯನ ಮಾನಸಿಕ ಸ್ಥಿತಿ, ಸೇಡಿಗೆ ಕಾರಣವಾಗುವ ವಂಚನೆ, ಮೋಸಕ್ಕೆ ಕಾರಣವಾಗುವ ಯಾಂತ್ರಿಕ ಬದುಕು, ಯಾಂತ್ರಿಕತೆಗೆ ಕಾರಣವಾಗುವ ಹಣ, ಅಂತಸ್ತೆಂಬ ಬದುಕಿನ ಹಪಾಹಪಿಗಳು, ಕೊನೆಗೂ …ಊಹೆ ನಮಗೇ ಬಿಟ್ಟಿದ್ದು ಬಹಳಷ್ಟು ಇಲ್ಲಿನ ಕಥೆಗಳಂತೇ..

“ಸ್ಟಿಲ್” ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಂತೆ ಭಾಸವಾದರೆ,” ಸೆಲೆಕ್ಟ್ ಆಲ್ ಡಿಲೀಟ್” ಪ್ರೀತಿಯನ್ನು ಹೇಳಿಬಿಡಬೇಕು ಎಂಬ ತೀವ್ರತೆಯ ಸ್ಥಿತಿಯ ಒಂದು ಉತ್ಕಟ ಸುಖಕ್ಕಾಗೇ ಜೀವನದ ಕೊನೆಯವರೆಗೂ ಹೇಳದೇ ಉಳಿದುಬಿಡುವ ಪ್ರೇಮದ ಸಹಸ್ರಮುಖದ ಪರಿಚಯ..

“ವಿಮೋಚನೆ” ಪ್ರೇಮ, ತ್ಯಾಗ, ಮೋಸ, ಹತ್ಯೆಯ ಸಿನಿಮೀಯ ಮಾದರಿಯ ಕಥೆಯಾದರೆ, ‘ಮಗ್ದಷ್ಟೇ ಬದ್ಕು’, ‘ಸಾಬೀತು’ ಸಿರಸಿ, ಧಾರವಾಡದ ವಿಶಿಷ್ಟ ಪ್ರಾದೇಶಿಕ ಭಾಷೆಯ ಸೊಗಡಿಗಾಗಿ ಓದಿಸಿಕೊಳ್ಳುವ ಕಥೆಗಳು..ಕೇತಕಿ, ಗೂಡು, ಆಯಿ ಸಹ ಉತ್ತಮ ಕಥೆಗಳು..

ಮನುಷ್ಯನ ದುರ್ಬಲ ಮನಸ್ಸಿನ ವಿಕಾರ ರೂಪಗಳನ್ನು ತೋರಿಸುತ್ತಲೇ ಅದನ್ನು ಮೀರುವ ಪ್ರಯತ್ನವನ್ನೂ ಪಾತ್ರಗಳು ಇಲ್ಲಿ ಮಾಡುತ್ತವೆ. ಒಳ್ಳೆಯ ಅಥವಾ ಕೆಟ್ಟ, ಸ್ವಾರ್ಥ- ಪರಮಾರ್ಥ ಎಂಬುದರ ನಡುವಿನ ಸಣ್ಣ ರೇಖೆ ಇಲ್ಲಿನ ವಿಚಾರಗಳಾಗಿ ಕಂಡಿದೆ. ಕುತೂಹಲ, ವಿಚಿತ್ರ, ರೋಚಕ, ಗೊಂದಲ ಎಂಬ ವಿಶೇಷಣಗಳನ್ನು ಸೇರಿಸಬಹುದೇನೋ. ಒಟ್ಟಿನಲ್ಲಿ ಇದೊಂದು ವಿಭಿನ್ನ ಪ್ರಯತ್ನ, ಇಲ್ಲಿ  ನಮ್ಮ ಕಲ್ಪನೆಗೂ ಒಂದಷ್ಟು ಕೆಲಸ ಕೊಟ್ಟಿದ್ದಾರೆ ಲೇಖಕ ಡಾ. ಅಜಿತ್.

*******************************

ಅಮೃತಾ ಮೆಹಂದಳೆ

Leave a Reply

Back To Top