ಕವಿತೆ
ಆ…..’ಅದ’ಕ್ಕಾಗಿ.
ಅಬ್ಳಿ,ಹೆಗಡೆ
ಆ….’ಅದ’ಕ್ಕಾಗಿಯೇ
ಈ..ಎಲ್ಲ ರಾಧ್ಧಾಂತ.
ಬಾಂಬು,ಗನ್ನುಗಳೊಟ್ಪಿಗೆ
‘ಸ್ಲೋಗನ್ನು’ಗಳ ಮೊರೆತ,
ಚಾಕು,ಚೂರಿಗಳ ಇರಿತ.,
ನೆತ್ತರ ಹೊಳೆ,
ಹಿಂಸೆಯ ಬೆಳೆ ಸಮ್ರದ್ಧ.
ಭೀಬತ್ಸ..ರಣರಂಗ-
ಹಾರಾಟ,ಹೋರಾಟ,
ಚೀರಾಟ,ನರಳಾಟ.ನಡುವೆ-
ಚದುರಂಗದಾಟ.
ಈ..ಎಲ್ಲ..
ಆ…ಅದೊಂದಕ್ಕಾಗಿಯೆ.
ಕಾವಿಯ ಕರಾಮತ್ತು,
ಅದರೊಟ್ಟಿಗೆ
ಧರ್ಮದ ಮತ್ತು,
ಮತ್ತೂ..ಮತ್ತೂ ತಲೆಗೇರೆ
ಅನಾಮತ್ತು ರಕ್ತಚರಿತ್ರೆ.
ಎಲ್ಲ ಮುಗಿದ ಮೇಲೆ
ದೇವದೂತನ ಆಗಮನ.
ಬಲಿಪೀಠದೆದುರು
ಶಾಂತಿ ಮಂತ್ರ ಪಠಣ.
ಮೈಕುಗಳೆದುರು
ಮಾತಿನ ಬಲೂನುಗಳ
ಚಿಮ್ಮುವಿಕೆ
ಆಪ್ಯಾಯಮಾನ.
ಗದ್ದುಗೆಗಾಗಿ ಗುದ್ದಾಡುವ
ಬಧ್ಧವೈರಿಗಳೆಲ್ಲ
ಬುಧ್ಧ,ಏಸು,ರಾಮ,ಕ್ರಷ್ಣರಾಗಿ
ಕ಼ಣಾರ್ದದಲ್ಲಿ….
ಪರಿವರ್ತನ.
ಮೇಲೆ ಮುಗಿಲೆತ್ತರದಲ್ಲಿ
ಶ್ವೇತ ಪಾರಿವಾಳಗಳ
ಹಾರಾಟವಂತೂ
ನಯನ ಮನೋಹರ.
ಈ..ಎಲ್ಲ ಸಂಬ್ರಮಗಳ
ಕೊನೆಮಾತ್ರ,
ತುಂಬಾನೇ ರೋಚಕ,
ಉದಾತ್ತಕೂಡಾ—
ಕಾನೂನಿನ
ಒಂಟಿ ಕೊಂಬೆಗೆ
ನೇತಾಡುವ,
ಬಡವರ,ಅನ್ನದಾತರ,
ದೇಶವಾಸಿಗಳ…
ಸಾಲು,ಸಾಲು…ಹೆಣ.
ಬೆಂಕಿಯಲ್ಲಿ ಹೂ
ಅರಳಿಸುವ ಸಾಹಸ
ಮಾತ್ರ ನಿರಂತರ.
ಈ….ಇದೆಲ್ಲ.
ಆ….’ಅದ’ಕ್ಕಾಗಿಯಷ್ಟೇ
ಇಂದು.
*************************************