ಕವಿತೆ
ವಾಸನೆ
ಗಂಗಾಧರ ಬಿ ಎಲ್ ನಿಟ್ಟೂರ್
ಬೆಳ್ಳುಳ್ಳಿ ವಾಸನೆಗೆ ಬಾಗಿಲ ಬಡಿದು
ಬಡಕಲಾಯಿತು ಬಡ ಜೀವ
ಹಸಿ ಶುಂಠಿಯ ಘಮಲಿಗೆ
ಈರುಳ್ಳಿಯ ಖಾರದ ಪಿತ್ತ
ನೆತ್ತಿಗೇರಿದರೂ ರುಚಿಗೆ ಸೋತು
ಕಣ್ಣೆಲ್ಲಾ ರಾಡಿ ಮನವೆಲ್ಲಾ ಬಿಸಿ
ಕೆಸರೊಳಗೆ ಬಿದ್ದು ಬಾಯಿ ಬಿಡದಂತೆ
ಹೊಂಚು ಹಾಕುವ ಶುನಕದಂತೆ
ಬಾಲ ನೆಕ್ಕುವ ಶ್ವಾನದಂತೆ ಪರದಾಡಿ
ಹುಸಿ ನಗೆಯ ಬೀರಿ
ಹಸಿ ಮಾಂಸಕೆ ಅಲೆದಾಡಿ
ಸಿಕ್ಕವರ ಮೇಲೆರಗಿ
ಜಯಗಳಿಸಲು ಹೆಣಗಾಡಿ
ತರಚಿದ ಗಾಯಗಳ ತೊಳೆದರೂ
ಅಳಿದುಳಿದ ಕಲೆಗೆ
ನೆಪದ ಲುಂಗಿಯ ತೊಡಿಸಿ
ಕಾಲವ ನೂಕಿತ್ತು
ಎರಗುವ ಹುನ್ನಾರ ಬೆಂಬಿಡದೆ ಕಾಡಿ
ಬೆನ್ನು ಬಾಗಿ ಊರುಗೋಲಿಗೆ
ಮೊರೆ ಹೋದರೂ
ಒಳಗಿನ್ನೂ ಉಸಿರಾಡಿತ್ತು ಹಸಿ ವಾಸನೆ
*************************************
ಅನಂತ ಧನ್ಯವಾದಗಳು ಸರ್