ಗಜಲ್
ಪ್ರಭಾವತಿ ಎಸ್ ದೇಸಾಯಿ
ವನವೇ ಋತುಮಾಸಕೆ ಸಂತಸದಲಿ ಚಿಗುರದಿರು ಅವನಿಲ್ಲ
ಸೂಸುವ ತಂಗಾಳಿಯೇ ಕೇದಿಗೆಯ ಕಂಪು ತರದಿರು ಅವನಿಲ್ಲ
ಮುಂಜಾವು ಒಲವಿನ ಇಬ್ಬನಿಗಳನು ಸುರಿದಿದೆ ಗರಿಕೆ ಮೇಲೆ
ತುಂಬಿ ಸ್ಪರ್ಶವಿಲ್ಲದೆ ಮೊಗ್ಗು ದಳಗಳ ಬಿರಿಯದಿರು ಅವನಿಲ್ಲ
ದಿಗಂತದಲಿ ಕಾಮನ ಬಿಲ್ಲು ಮೂಡದೆ ಮಂಕಾಗಿದೆ ಬಾನು
ಮಾಮರದಲಿ ಕುಳಿತ ಕೋಗಿಲೆಯೇ ಹಾಡದಿರು ಅವನಿಲ್ಲ
ಮೋಹನ ಮುರಳಿ ಗಾನವಿಲ್ಲದೆ ಬಿಕ್ಕುತಿವೆ ಯಮುನೆಯ ಅಲೆಗಳು
ಗೆಳತಿ ಹೋಳಿ ಹಬ್ಬವೆಂದು ಓಕುಳಿ ಎರಚದಿರು ಅವನಿಲ್ಲ
ಶಶಿಗೆ ಮೋಡಗಳು ಮುತ್ತಿಗೆ ಹಾಕಿದು ಕಂಡು ನರಳುತಿದೆ ಇರುಳು
ಮುಗಿಲೇ ಸರಿದು ಬೆಳದಿಂಗಳ “ಪ್ರಭೆ” ಯ ಹರಡದಿರು ಅವನಿಲ್ಲ
*************************
ಸುಂದರ ಗಜಲ್ ಮೇಡಂ
ತುಂಬಾ ಚೆನ್ನಾಗಿದೆ