ಪ್ರೇಮ ಪತ್ರ
ಸ್ಮಿತಾ ರಾಘವೇಂದ್ರ
ಕಣ್ಣಿಗೊಂದು ಕನ್ನಡಕ ಏರಿಸಿಕೊಂಡು
ಅದರ ಪ್ರೇಮ್ ಹಿಡಿದು
ಮೇಲೆ ಕೆಳಗೆ ಮಾಡುತ್ತ
ಹಳೆಯ ಟ್ರಂಕಿನ ಬಂಗಾರದ
ಭದ್ರತೆಯಿಂದ ಹೊರಬಂದ
ಓಲೆ.
ಕೊರಳ ಸುತ್ತಿ ಎದೆಯ ಮಿದುವಿನಲಿ
ಮಿಸುಕಾಡಿ
ಆಗಾಗ ಚುಚ್ಚಿ ಕೊಳ್ಳುವ ಸರ
ಮತ್ತೆ,,,
ಜೊತೆಯಾದ ಪ್ರೇಮ.
ಎಂದೋ ಸಿಕ್ಕ ಮತ್ತೀಗ
ಸಿಗಬೇಕಾದ ಪ್ರತೀಕ್ಷೆ.
ಜೀಕುವ ಉತ್ಸಾಹದಲಿ
ಆಗ ತಾನೇ ಕಣ್ ಬಿಟ್ಟ ಕರು
ಅದುರುವ ಕಾಲುಗಳು
ಜಾರಿ ಮುಗ್ಗರಿಸಿ,
ಏನು ಬೇಕಾದರೂ ಘಟಿಸಬಹುದು,
ಕ್ಷಣದ ಕವಲಿನಲಿ
ಹಾಲು ಹಾಲಾಹಲ.
ಕೇರಿ ಕೆರೆ ಕುಂಟೆಗಳಲಿ
ಸುಳಿದಾಡಿದ ಒಲವ ಘಮ,
ಊರ ಕೊನೆಯ ಬಸ್ಸಿನಲಿ
ಬಂದಿಳಿದ ನೆನಪುಗಳು-
ತುಂಬಿಕೊಂಡ ಜೋಳಿಗೆಯ
ತುದಿಗೊಂದು ತೂತು.
ಕೊರೆದಿದ್ದು ಯಾರು!?
ಆರೋಪ ಪ್ರತ್ಯಾರೋಪ,
ಹೆಕ್ಕಿಕೊಂಡರು ಯಾರೋ
ಉಳಿದದ್ದು ಮೌನ.
ಅದೆಂತಹ ವಿಧಾಯ ಹೇಳು
ಮತ್ತೆ ಮತ್ತೆ ಸೇರಿಕೊಳ್ಳುವ
ಶರಧಿ,ನದಿ ನಡುವೆ.
ಕೈಲಿಟ್ಟ ಕೊನೆಯ ಓಲೆಯಲಿ
ಏನಿತ್ತು!
ತುರುಕಿ ನಡೆದಾಗ ಎದುರಾಗಿದ್ದು
ಯಾರದ್ದೋ ಶಾಪ,
ಒಲವಿನೋಲೆಯಂತೆ ಮನಸೂ ಮುದುಡಿ,
ಅದೇ ತಿರುವಿನ
ಹರಿವ ತೊರೆಯಲಿ ಎಸೆದ
ಪ್ರೇಮ ಪತ್ರ,
ಖಾತ್ರಿಯಿಲ್ಲ ಕಡಲು ಸೇರಿದ್ದಕ್ಕೆ.
ಇಂದು ನೀನೇ ಇದ್ದಿದ್ದರೆ!
ಇರಬೇಕಿತ್ತು ನೀನೇ,,
ಎಂದು ಕೊನೆಯಾಗುವ ಪ್ರತಿಕ್ಷಣದ ಭಾವ.
ನವಿಲು ಗರಿ ಸವರಿ ಕೊಟ್ಟ ಪತ್ರಕ್ಕೆ
ಆಗಾಗ ಗರಿ ಬಿಚ್ಚುವಗಳಿಗೆ
ಭಯದ ನೆರಳಿನಲಿ,
ಕೊಚ್ಚಿ ಹೋದ ಅಕ್ಷರಗಳ
ಹುಡುಕಾಟದಲಿ
“ಅದಿನ್ನೂ ಜೀವಂತ”..
***************
nice
ಧನ್ಯವಾದಗಳು
ನವಿಲು ಗರಿ ಸವರಿ ಕೊಟ್ಟ ಪತ್ರಕ್ಕೆ….
ಪ್ರೇಮವೇ ಹೀಗೆ..
ಚಂದ ಇದೆ ಸ್ಮಿತಾಜಿ
ಧನ್ಯವಾದಗಳು ಸಂಗೀತಾ ಮೆಮ್ ❤
ಅದ್ಭುತ ಸ್ಮಿತಾ..
Thanku ❤