ಇತಿಹಾಸ ಬರೆಯುತ್ತೇವೆ ನಾವು

ಕವಿತೆ

ಇತಿಹಾಸ ಬರೆಯುತ್ತೇವೆ ನಾವು

ಅಲ್ಲಾಗಿರಿರಾಜ್ ಕನಕಗಿರಿ

ಇತಿಹಾಸ ಬರೆಯುತ್ತೇವೆ ನಾವು
ಇಂದಲ್ಲ ನಾಳೆ ಹೊಲ ಗದ್ದೆಗಳ ಸಾಲು ಸಾಲಿನಲ್ಲಿ.
ಒಂದೊಂದು ಬೀಜದ ಹೆಸರಿನಲ್ಲಿ.

ನೀವು ಸುಮ್ಮನೆ ಮುಳ್ಳಿನ ಕಥೆ ಹೇಳಬೇಡಿ.
ಅಲ್ಲೊಂದು ನಗುವ ಹೂವಿನ ಬದುಕಿದೆ ಮರೆಯಬೇಡಿ.
ಒಂದೇ ಒಂದು ಸಾರೆ ನಿಮ್ಮ ಮೈ ಮನಸ್ಸಿಗೊಮ್ಮೆ ಕೇಳಿನೋಡಿ.
ನೀವು ಉಂಡ ಅನ್ನ ಯಾರದೆಂದು?
ಅಸ್ಥಿಪಂಜರಗಳ ಕೈಯಿಂದ ಬರೆಸಿದ ಕಾಯ್ದೆ ಏನೆಂದು.

ರಾಜಿಯಾಗದೆ ರಾಜಧಾನಿಯ ಗಡಿ ಮುಚ್ಚಿಕೊಂಡಿದ್ದೀರಿ.
ಹೇಸಿಗೆ ಆಗುತ್ತಿದೆ ನಮಗೆ, ನಮ್ಮದೇ ಮತದಾನಕ್ಕೆ.

ಸರ್ಕಾರ ಎಂದರೆ ನೋಟು ತಿಂದು ಮಲಗುವುದಿಲ್ಲ ನೆನಪಿರಲಿ.
ರೈತರು ನಾವು ಇನ್ನೂ ನೇಗಿಲು ಹೊತ್ತಿದ್ದೇವೆ ಶಿಲುಬೆಯನ್ನಲ್ಲ.

ನಾವು ಇಂದಲ್ಲ ನಾಳೆ ಇತಿಹಾಸ ಬರೆಯುತ್ತೇವೆ.
ಹೊಲ ಗದ್ದೆಗಳನ್ನು ನೆತ್ತರಿನಿಂದ ಹಸಿಮಾಡಿ.
ಸಾಲು ಸಾಲಿನಲ್ಲಿ ಒಂದೊಂದು ಬೀಜದ ಹೆಸರಿನಲ್ಲಿ.
ನಮ್ಮ ಅನ್ನ ಉಂಡ ನಿಮ್ಮ ನಾಲಿಗೆ ಓದಿ ಪಾವನವಾಗಲಿ.

ಇತಿಹಾಸ ಬರೆಯುತ್ತೇವೆ ನಾವು
ಇಂದಲ್ಲ ನಾಳೆ… ಇಂದಲ್ಲ ನಾಳೆ.
ಆಗ ನಿಮಗೆ ಅರಿವಾಗಬಹುದು.
ಅನ್ನದಾತನ ಸಂಕಟ ಸಾವು ಯಾಕೆಂದು!

****************************

One thought on “ಇತಿಹಾಸ ಬರೆಯುತ್ತೇವೆ ನಾವು

  1. ವಾಸ್ತವ…. ರೈತನ ಸಂಕಟ ಅನ್ನ ಸವಿಯುವ ಎಲ್ಲಾ ನಾಲಿಗೆಯ ಮನಕೆ ಅರಿವಾಗಲಿ… ಅನ್ನದಾತಗೆ ಶುಭವಾಗಲಿ…

Leave a Reply

Back To Top