ಕವಿತೆ
ಮೌನದೋಣಿಯಲಿ ಮನ್ಮಥನ ಹುಟ್ಟು
ಬೆಂಶ್ರೀ ರವೀಂದ್ರ
ಅವಳು
ನಸು ನಗುತ್ತಲೆ ಒಳಗೆ ಕರೆದುಕೊಂಡಳು
ನಸುಬೆಳಕಿನಲಿ ಮಂದಹಾಸದ ಚಿಮ್ಮು
ನವಿರಾಗಿ ಹರಡಿಕೊಂಡ ಸುಗಂಧ
ಚೆಲ್ಲಿದ್ದ ಮಲ್ಲಿಗೆಯ ಮುಗುಳು
ತೆಳುಪರದೆಯ ಸುಂಯಾಟದ ನುಲಿವು
ಕಿರುಗೆಜ್ಜೆಯ ಕಿಣಕಿಣದಲಿ ಬೆರೆತಿತ್ತು
ಅವಳು
ಕಣಕಣವ ಮುಚ್ಚಿಡದೆ ಎಲ್ಲವನೂ ತೆರೆದಳು
ಹಾಲು ಜೇನು ಚೆಲ್ಲಾಡಿ ಹೋಯಿತು
ಸಂಕೋಚ ಬಿಗುವಿಲ್ಲದ ಸಮ್ಮಾನ ಸುಮ್ಮಾನ
ಮೌನದೋಣಿಯಲಿ ಮನ್ಮಥನ ಹುಟ್ಟು
ಸುಖಸಾಗರದಿ ಅನಂತ ಪಯಣ
ಹಣೆಯಲಿ ಮಡುಗಟ್ಟಿದ ಬೆವರಬನಿ
ಜಾರಿ ಕಣ್ಣೊಳಗೆ ಒಗರ ರುಚಿ
ಪಟಪಟನೆ ಆಡಿದ ರೆಪ್ಪೆಯೊಳಗೆ
ಬೆಳಕು ಮುದುಡಿದ ಮಂಜು
ನಕ್ಷತ್ರಗಳು ಕಣ್ಣು ಹೊಡೆದವಲ್ಲಾ!
ಬುವಿಗೇನು!!
ಆದರೆ ಇಂದು ಹುಣ್ಣಿಮೆ
ನಕ್ಷತ್ರಗಳು ಕಾಣುವುದಿಲ್ಲ
ಅವುಗಳದು ಕಣ್ಣುಮುಚ್ಚಾಲೆಯಾಟ.
ಸಮುದ್ರದ ಭರತವು ಏರುತ್ತಿದೆ
ಇಂದು ಚಂದ್ರನಿಗೆ ಸೋಬಾನ ಗೀತ
ದೇವತೆಗಳಿಗೆ ಸೋಮಪಾನ ; ಸವಿಯೂಟ
ಹಿಂದೆಂದೂ ಅನುಭವಿಸದ ಅನುಭವ
ಉದ್ರೇಕದೇರಿಳಿತ ತಣಿವಂತ ತಂಪು
ಉಚ್ವಾಸ ನಿಶ್ವಾಸ ಪ್ರಕೃತಿಯ ಜಾಲ
ಬೆಸೆದಬಂಧ
ಅವನಿಗೀಗ ಮಂಪರು ಮಂಪರು
ಸೆರಗಿನಲಿ ಬೀಸಿ ಗಾಳಿ ; ಮುಖವರಸಿ
ಹೂ ಮುತ್ತನಿತ್ತವಳಿಗೆ
ಕಣ್ಣಾಲಿಗಳು ತುಂಬಿದ್ದವು; ಕನಸು ಒಡೆದಿತ್ತು
ಬಿಕ್ಕು ಬಿಕ್ಕುಗಳು ಮರಮರಳಿದಾಗ
ಅದೆ ಸೆರಗಿನಲಿ ಬಾಯಿ ಮುಚ್ಚಿಕೊಂಡಳು
ನಿದ್ದೆ ಕೆಡಬಾರದಲ್ಲ.
ಅವಳಿಗೀಗ ಮಂಪರು ; ಯಾರೋ ಎದೆ ಬಗೆಯುತ್ತಿದ್ದಾರೆ
ಹುದುಗಿದ ಚಿತ್ರಗಳ ಮರುಕಳಿಕೆ
ಮುಸುಕು ಮಸುಕಾದ ಮೆರವಣಿಗೆ
ಮತ್ತೆಲ್ಲೋ
ಕನಸುಗಳು ಪಟಪಟನೆ ಒಡೆಯುತ್ತಿರುವ ಕ್ಷೀಣದನಿ…
ಹತ್ತಿರ ಹತ್ತಿರ ಬಂದು ಆಸ್ಪೋಟ
ಕಿವಿ ತಮಟೆ ಹರಿದು
ಇವಳು
ಬೆವರಿನ ಸಾಗರದಲಿ ತೇಲತೊಡಗಿದಳು.
*************
..
ಅಭಿನಂದನೆಗಳು
ಹಲವು ಅರ್ಥಸಾಧ್ಯತೆಗಳನ್ನು ಬಿಂಬಿಸುವ ಸುಂದರ ಕವಿತೆ. ಅಭಿನಂದನೆಗಳು
ಅನುಬಂಧ ಸುಗಂಧ.
ಚೆನ್ನಾಗಿದೆ.
ಗಂಡು ಹೆಣ್ಣಿನ ಸುಂದರ ಮಿಲನದ ಕ್ರಿಯೆಯನ್ನು ,ಎಲ್ಲೂ ಅಶ್ಲೀಲತೆ ನುಸುಳದಂತೆ ಸೊಗಸಾಗಿ ಮಜಲು ಮಜಲುಗಳಲ್ಲಿ ಉತ್ತುಂಗಕ್ಕೆ ಒಯ್ದಿರುವ ಕವನ ಕವಿಯ ಜಾಣ್ಮೆಯನ್ನೂ,ಅದ್ಭುತ ಉಪಮಾ ಕೌಶಲ್ಯ ಮತ್ತು ಪದ ಚಮತ್ಕಾರವನ್ನೂ ತೋರುತ್ತದೆ.
ಕವನದ ಶೀರ್ಷಿಕೆಯೇ ಇದಕ್ಕೆ ಅತ್ಯುತ್ತಮ ನಿದರ್ಶನ.
ಮಿಲನ ಒಂದು ಪ್ರಕೃತಿ ಸಹಜ ಕ್ರಿಯೆ ಎನ್ನುವಂತೆ ಸಮುದ್ರ ದ ಭರತ ಮತ್ತು ಕಾರಣವಾಗುವ ಹುಣ್ಣಿಮೆ ಚಂದ್ರನನ್ನು ಕವಿ ಉಲ್ಲೇಖಿಸುತ್ತಾರೆ.ಚಂದ್ರ ಮನೋಕಾರಕನೂ ಹೌದು. ಸಮದ್ರದ ಭರತವಿಲ್ಲಿ ಉದ್ರೇಕದೇರಿಳಿತ. ಪ್ರಕೃತಿಯ ಜಾಲ ಬೆಸೆದ ಸಂಬಂಧ .
ಆದರೆ ಕೊನೆಯ ಎರಡು ಚರಣ ಕವನಕ್ಕೆ ಅನಿರೀಕ್ಷಿತ ತಿರುವು ನೀಡಿದೆ.
ಕವನದ ಮೊದಲ ಸಾಲೇ ಇಲ್ಲಿನ
ಬಿಕ್ಕುಗಳಿಗೆ ಸುಳಿವು ನೀಡುತ್ತದೆ.
ಇದು ತುಳಸಿ..ಅಹಲ್ಯೆ..ಅಥವಾ ಅಂತಹಾ ದುಡುಕಿದ ,ಪ್ರಮಾದದ ಅರಿವಾದ ಯಾವುದೇ ಹೆಣ್ಣಾಗಿರಬಹುದು.
ಉತ್ತಮ ಕವನ.ಯಾವುದೇ ಪೂರ್ವಾಗ್ರಹವುಲ್ಲದೇ ,ಸರಿ ತಪ್ಪಿನ ನಿರ್ಣಯವಿಲ್ಲದೆ,ಕ್ರಿಯೆಯನ್ನು ಕ್ರಿಯೆಯಾಗಿ ಮಾತ್ರ ನೋಡಿರುವ ಕವನ.
ಚೆನ್ನಾಗಿದೆಅಭಿನಂದನೆಗಳು
ಮಾರ್ಮಿಕವಾಗಿದೆ ಕವನ. ಹೇಳಬೇಕಾಗಿರುವುದನ್ನು ಸೂಚ್ಯವಾಗಿ ಮುನ್ನೆಲೆಗೆ ತರಲಾಗಿದೆ. ಅಶ್ಲೀಲತೆಯ ಸೋಂಕು ತಗುಲದಂತೆ ಚಿತ್ರಿಸಲಾದ ವಸ್ತು ಮನ ಸೆಳೆಯುತ್ತದೆ. ಸ್ತ್ರೀ ಸಹಜ ಗುಣವನ್ನೂ ಸಹ ಎತ್ತಿ ಹಿಡಿಯಲಾಗಿದೆ
ಉಚ್ಛ್ವಾಸ ಸರಿ.