ಕವಿತೆ
ಹೋದಾರೆ.. ಹೋದ್ಯಾರು..!
ಆಶಾ ಆರ್ ಸುರಿಗೇನಹಳ್ಳಿ
ಹೋದಾರೆ ಹೋದ್ಯಾರು
ತೊರೆದು ಹೋದವರು..
ಕಣ್ಮರೆಯಾಗಿ ನಲಿವವರು
ಮರೆಮಾಚಿ ನಿಂತವರು
ಕಲ್ಲಾಗಿ ಮರೆತವರು
ಹೋದಾರೆ ಹೋಗಲಿ..
ಅವರವರ ಅನುಕೂಲ..
ನೆನಪುಗಳ ಮೂಟೆಯೊರಿಸಿ
ಮೌನತಳೆದು ಹೋದ್ಯಾರ
ತ್ರಾಣವಿಲ್ಲದ ಮನವು
ಅಂಜುತಿದೆ ದಿನವೂ..
ಹೋದಾರೆ ಹೋದ್ಯಾರು
ಹೆಸರಿಲ್ಲದೆ, ಉಸಿರಿನ ಹಂಗಿಲ್ಲದೆ
ಕಿರುನಗೆಯಲಿ ಬಿದ್ಯಾರ..
ಎನಗೊಂದು ವಿಷಾದದ
ನಗೆಯ ಉಳಿಸ್ಯಾರ..
ಬೆಲೆಬಾಳುವ
ಮುಗ್ಧನಗೆಯನೇ ಕದ್ದೊಯ್ದಾರ..
ಹೋದಾರು ಹೋದ್ಯಾರು
ನೆನಪುಗಳ ಹೊತ್ತೊಯ್ದು
ಉಪಕರಿಸಬೇಕಿತ್ತು..
ಕನಸುಗಳ ಚಿವುಟಿ
ಕ್ರೂರಿಗಳಾಗಬೇಕಿತ್ತು..
ಮನಸನು ಕೊಂಚ
ಕಲ್ಲಾಗಿಸಬೇಕಿತ್ತು..
ತೊರೆದು ಮತ್ತೆ ಮತ್ತೆ
ತೆರೆದುಕೊಳ್ಳುವುದ ಕಲಿಸಬೇಕಿತ್ತು..
ಹೋದಾರ ಹೋದ್ಯಾರು
ಮರೆತು ಬಾಳೋದನ್ನೇ
ಕಲಿಸದೆ ಹೋದ್ಯಾರೆ?
ಕಣ್ಣಹನಿಗಳನ್ನು
ಉಡುಗೊರೆಯಾಗಿ ಕೊಟ್ಯಾರಾ..!
ನಗೆಯ ಪೊಳ್ಳು ಭರವಸೆಯನ್ನ
ಮೊಗೆ ಮೊಗೆದು ಕೊಟ್ಯಾರಾ..
ಹೋದಾರೆ ಹೋಗಲಿ
ಸುಮಧುರ ಭಾವಗಳು
ಗೆಜ್ಜೆಕಟ್ಟಿ ಕುಣಿದಾವ
ಪದೇ ಪದೆ
ಹಳೆಯ ರಾಗವ ನೆನಸುತಾ
ಹಾಡ್ತಾವಾ
ಮೂಕ ರಾಗದಿ
ನೊಂದ ಮನವೂ ಕುಣಿದು
ಅಂತರವನ್ನ ಮರೆತಾವ..
ಇರುವಿಕೆಯನ್ನೇ ಅಳೆದು ತೂಗ್ಯಾವ
ಸ್ವಾರ್ಥವಿಲ್ಲದ ಮನವು,
ಹರುಷದಿಂದ ನಲಿದು,
ನೆನಪುಗಳ ಬರಸೆಳೆದ್ಯಪ್ಪಾವ..
ಭಾರ ಹಗುರಾಗ್ಯಾವ..
ಬದುಕಿಗೆ ಸ್ಪೂರ್ತಿ ಸಿಕ್ಯಾವ..
ದುಗುಡಗಳೆಲ್ಲಾ ಮರೆಯಾಗಿ
ನಿಂತ್ಯಾವ..
ಹೋದಾರೆ ಹೋದ್ಯಾರು
ಹೋದನೆಂಬ ಭ್ರಮೆಯಲ್ಲಿ ಬದುಕ್ಯಾರ
ಇದ್ದೆನೆಂಬ ನಿಜವ ಮರೆತ್ಯಾರ?
ಹೊಸತೊಂದು ಬದುಕ
ಕಲಿಸಿಕೊಟ್ಯಾರಾ..!
ಉಸಿರ ಕೊನೆಯವರೆಗೂ
ಜೊತೆಯಾಗಿ ನಿಂತ್ಯಾರ..
ನೆನಪುಗಳ ಮೆರವಣಿಗೆಯಲಿ
ಸವಿಕನಸಿನ ತೇರನ್ನ ಎಳೆದ್ಯಾರ..
ಹೆಸರಿಲ್ಲದ ಬದುಕಿಗೆ
ಹೊಸ ಮುನ್ನುಡಿ ಬರೆದ್ಯಾರ..
ನೆನಪಿನ ನಕ್ಷತ್ರಗಳ ನಡುವಲಿ
ನನ ನೋಡಿ ನಗತ್ಯಾರ..
ನಗುವ ತಂಬೆಳಕೆನ್ನ
ಕಂಗಳಲಿ ಪ್ರತಿಫಲಿಸ್ಯಾವ..
ಬೆಳಕ ಪಲುಕಿಗೆ
ಬಾಳು ಬೆಳಗ್ಯಾವ..!
*********************************
ಅರ್ಥ ಪೂರ್ಣ ಕವಿತೆ ಆಶಾ