ಕಥೆ
ತೆರೆದಿಟ್ಟ ದೀಪ
ಯಮುನಾ.ಕಂಬಾರ
ಅದು ಮಧ್ಯಾಹ್ನದ ಸಮಯ. ಸೂರ್ಯ ತನ್ನ ಕಿರಣಗಳನ್ನು ಭಗವತಿಯ ಮುಂದಿನ ಗಿಡದ ಮೇಲೆ ಚೆ ಲ್ಲಿದ್ದ. ಗಿಡದ ಮೇಲೊಂದು ಪಕ್ಷಿ ಅತ್ತ ಇತ್ತ ನೋಡುತ್ತಾ ಕುಳಿತುಕೊಂಡಿತ್ತು. ಪಕ್ಢಿಯನ್ನು ಗಿಡವನ್ನು ವೀಕ್ಷಿಸುತ್ತಾ ಇದ್ದ ಭಗವತಿಯ ಕಣ್ಣುಗಳು ಪಲ್ಲಟಗೊಂಡು ದಾರಿಯತ್ತ ಹರಿದವು.ಅವಳು ದಾರಿಯಲ್ಲಿ ಬರುವ ಹೆಣ್ಣು ಮಗಳನ್ನು ನೋಡಿದೊಡನೆ ತನ್ನ ನೆನಪುಗಳನ್ನು ಒತ್ತಿ ನೋಡ ತೊಡಗಿದಳು. ಹೌದು ಅವಳು ಅವಳೇ……ಈಗ್ಯ ಹದಿನಾಲ್ಕು ವರ್ಷಗಳ ಹಿಂದೆ ತನ್ನ ಮನೆಯಲ್ಲಿ ಮುಸುರೆ ತಿಕ್ಕುತ್ತಿದ್ದ ಮಾಬೂಬಿ.ಭಗವತಿಗೆ ಅವಳನ್ನು ನೋಡಿ ಮನಸ್ಸು ಹಬ್ಬವಾಯಿತು.
ಕೆಂಪು ತಿಳಿಯ ಶೀರೆ, ಸೆರಗನ್ನು ಉದ್ದವಾಗಿ ಬಿಟ್ಟು ತಲೆ ಮೇಲೆ ಹೊದ್ದು ಹೊಟ್ಟೆಯಲ್ಲಿ ಸಿಕ್ಕಿಸಿಕೊಂಡಿದ್ದಳು. ಭರ ಭರ ಬರುವಾಗ ನೆರಿಗೆ ಸಿಕ್ಕು ಬಿದ್ದೇನೆಂದು ಶೀರೆಯ ನೆರಿಗೆಗಳನ್ನು ನಡದಲ್ಲಿ ತುರುಕಿದ್ದಳು. ಬಗಲಲ್ಲಿ ಒಂದು ಹಸಿರು ಹರಕು ಚೀಲ ಹಿಡಿದುಕೊಂಡು ದುಡುದುಡುನೇ ಬರುತ್ತಿದ್ದಳು. ಭಗವತಿಯ ಮಿಂಚು ಕಣ್ಣುಗಳಿಗೆ ಸಿಕ್ಕುಕೊಂಡ ಮಾಬೂಬಿ ” ಯಾಕ್ರಿ….. ಊಟಾತ್ರ್ಯಾ…….? ಎಂದು ಭಗವತಿಯನ್ನು ಕೇಳಿದಳು.
ಭಗವತಿ ಹೂಂ ಗುಟ್ಟುತ್ತಾ…” ಯಾಕ ….ಇಲ್ಲಿ ಮಾಡತ್ತೀ ಏನ …..ಕೆಲಸ ..” ಎಂದು ವಿಚಾರಿಸಿದಳು. “ಮಾಲಾ….. ಏನ ಮಾಡ್ತಾಳ …..? ” ಎಂದು ಮತ್ತೊಂದು ಪ್ರಶ್ನೆಯನ್ನೂ ಇಟ್ಟಳು.
ಮಾಲಾ ಮಾಬೂಬಿಗೆ ಒಬ್ಬಳೇ ಮಗಳು.ಆಗ ಅವಳು ಇನ್ನೂ ಹೈಸ್ಕೂಲ ವಿಧ್ಯಾರ್ಥಿನಿ. ತಾಯಿ ಕೆಲಸಕ್ಕೆ ಚಕ್ಕರ ಕೊಟ್ಟಾಗಲೆಲ್ಲಾ ಮಗಳು ಮಾಲಾ ಬಂದು ಮುಸುರೆ ತಿಕ್ಕಿಕೊಟ್ಟು ಹೋಗುತ್ತಿದ್ದಳು. ಮಾಲಾ ಎಂಥಹ ಚೆಲುವೆ ನೀಳವಾದ ಮೂಗು ತೆಳ್ಳನೆಯ ಬಳುಕುವ ಮೈ ಕಪ್ಪಾಗಿದ್ದರೂ ಮೋಹಕಳಾಗಿದ್ದಳು. ಒಂದು ದಿನ ಮಾಬೂಬಿ ಬೋಗುಣಿ ತಿಕ್ಕುತ್ತಾ : ” ನಮ್ಮ ಮಾಲಾ ಬೆಂಗಳೂರಿಗೆ ಹೋದಳ್ರಿ ” ಅಂದಾಗ ಭಗವತಿಯ ಮೈ ಕಂಪಿಸಿತ್ತು. ಮಾಬೂಬಿಗೇನು ಹುಚ್ಚು ಹಿಡಿತಾ….! ? ಎಂದು ಗೊಣಗುಟ್ಟಿದಳು. ಅದನ್ನು ತೋರ್ಪಡಿಸಿಕೊಳ್ಳದೇ ಕೈಯಲ್ಲಿಯ ಪುಸ್ತಕವನ್ನು ಟಿ.ವಿ.ಮುಂದೆ ಇಟ್ಟು ಓಡಿ ಬಂದು : “ಆಂ ……ಏನಂದೆ ಮಾಬೂಬಿ ನಿನ್ನ ಮಗಳು ಬೆಂಗಳೂರಿಗೆ ಹೋದ್ಳಾ……! ?” ಎಂದು ಭಗವತಿ ಕೇಳಿದಳು. ಹೂನ್ರಿ…..ಯಾಕ ಬಡುರ ಮಕ್ಕಳು ಹೋಗಬಾರ್ದಾ….” ಎಂದು ಭಗವತಿಗೆ ಸವಾಲನ್ನೇ ಎಸೆದಿದ್ದಳು. ಪಾಪ ಮಾಬೂಬಿಗೆ ಗೊತ್ತಿಲ್ಲ….ಬೆಂಗಳೂರು . ಅವಳು ಎಷ್ಟಾದರೂ ಚಿಕ್ಕ ಪಟ್ಟಣದಲ್ಲಿ ಕಸ ಮುಸುರೆ ತಿಕ್ಕುತ್ತಾ ಬದುಕಿದವಳು.
” ಆಕಿಗೆ ಬೆಂಗಳೂರಾಗ MB ಅ~ಏನ ಅಂತಾರಲ್ರೀ ಅದು ಸಿಕ್ಕೈತ್ರಿ” ಎಂದು ಬೋಗುಣಿ ತಿಕ್ಕುತ್ತಾ ಭಗವತಿಯತ್ತ ನೋಡುತ್ತಾ ಹೇಳಿದಳು. ಭಗವತಿ ಬೆರಗುಗಣ್ಣಿನಿಂದ ಮಾಬೂಬಿಯನ್ನು ನೋಡಿದಳು. ಮಾಬೂಬಿಯ ಎದೆ ತುಂಬಿ ಬಂದಿತ್ತು. ಮುಖ ಕಳೆ ಏರಿ ಗೆಲುವಾಗಿತ್ತು.ಕಣ್ಣುಗಳು ಕನಸುಗಳ ಮಿಂಚಿನಿಂದ ಹೊಳೆದಿದ್ದವು.ಅವಳ ಮೈ ಧಣಿವು ಕಳೆದುಕೊಂಡು ಹಗುರಾಗಿತ್ತು. “ಹೌದು, MBA ಕೋರ್ಸ್ಸನ್ನು ಸ್ವಲ್ಪು ಕಾಳಜಿಯಿಂದ ಮಾಲಾ ಕಲಿತರೆ ಸಾಕು ಅವಳಿಗೆ ಕಂಪನಿಯವರು ಕರೆದು ನೌಕರಿ ಕೊಡುವ ಸಾಧ್ಯತೆ ಇತ್ತು. ಭಗವತಿ ಕಾಳಿಕಾ ಪ್ಗೋಟೋದ ಮುಂದೆ ಹಚ್ಚಿದ ದೀಪ ಕಾಂತಿ , ಶಾಂತಿಯಿಂದ ಉರಿಯುತ್ತಿದ್ದದ್ದು ಒಮ್ಮೆಲೆ ತೊಲಬಾಗಿಲಿನಿಂದ ಬರ್ರೆಂದು ಬಂದ ಗಾಳಿಗೆ ಓಲಾಡತೊಡಗಿತು.ಭಗವತಿ ಕಂಪಿಸಿದಳು. ” ದೇವಿ , ಬಡವರ ಬಾಳ್ವೆ ಕಾಯವ್ವ ” ಎಂದು ದೀನ ಕಣ್ಣುಗಳಿಂದ ದೇವಿ ಫೋಟೋವನ್ನು ದಿಟ್ಟಿಸಿದಳು. ಮಾಲಾ ತೆರೆದಿಟ್ಟ ದೀಪವಾಗಿದ್ದಳು. ಮೊಬೈಲ್ , ಇಂಟರನೆಟ್ ಫೇಸಬುಕ್ಕ , ವ್ಯಾಟ್ಸಾಪದಂತಹ ಬಿರುಗಾಳಿಗಳನ್ನು ಎದುರಿಸಿ ಗೆಲ್ಲುವ ಸವಾಲು ಅವಳ ಎದುರಿತ್ತು.
“ಏನೈತ್ರಿ……ಮಾಡುದು , ಅದೊಂದು ಫೋನಾಗೇತಿ ಎದ್ದ್ರು ಕುಂತ್ರು ……ಅದೊಂದಿದ್ದ್ರ ಏನೂ ಬ್ಯಾಡ್ರಿ…..ನಾ ಅಲ್ಲಿ ಥೇಕುದ~ ಇಲ್ಲೀ ಥೇಕುದ್~ ~ ನನ್ನ ಹಣೆಬರಾ ಏನ ಬದಲ್ ಆಗಲಿಲ್ಲ… ” ಮಾಬೂಬಿಯ ಮುಖ ವಿಷದಿಂದ ನಂಜೇರಿದಂತಾಗಿತ್ತು.
ಅಂದ್ರ ಮಾಲಾಳ ಮೇಲೆ ಪರೋಕ್ಷವಾಗಿ ಆರೋಪ ಹೊರಿಸಿದಂತಿತ್ತು. ಅದನ್ನು ಗುರುತಿಸಿದ ಭಗವತಿ ” ಹೋಗ್ಲಿ ಬಿಡು , ನಾಳೆ ಗಂಡನ ಮನಿಯಾಗ ಮಾಡುದು ಇದ್ದ~ ಇರತೈತಿ , ಅಲ್ಲಿ ಅವ್ನ ಬಿಡಸವ್ವರ್ರು ಯಾರು……! ? ಹೊಟ್ಯಾಗ ಹಾಕ್ಕೊ…..ತಾಯಿ ಅಲ್ಲಾ…..ನೀನು…..,!! ” ಭಗವತಿ ಸಮಾಧಾನ ಹೇಳಿದಳು. ” ಯಾವದ …..ಯಾವದ ಹೊಟ್ಯಾಗ ಹಾಕ್ಕೊಲಿ ಅವ್ವಾರ ಹಾಕ್ಕೊಳ್ಳುದು ಹಾಕ್ಕೋತೇನಿ ಹಾಕ್ಕೊಳ್ಳಾರದ್ದು ಹೆಂಗ ಹಕ್ಕೋಲಿ ……….!! ? ” ಮಾಬೂಬಿ ನೋವಿನಿಂದ ತತ್ತರಿಸಿದರೂ ಮಾತಿನ ಮೇಲೆ ಹಿಡಿತವಿಟ್ಟಿದ್ದಳು.ಭಗವತಿಗೆ ಮಾಬೂಬಿಯ ಸ್ಥೈರ್ಯ ” ಅಬ್ಬಾ !!” ಎನಿಸಿತು. ಭಗವತಿ ಮತ್ತೆ ” ಅಂದರೆ …….ಮಾಬು……????” ಎನ್ನುತ್ತಾ ಅವಳ ಕಣ್ಣುಗಳಲ್ಲಿ ಇನುಕಿದಳು.ಅವಳ ಕಣ್ಣುಗಳು ಅಟ್ಲಾಂಟಿಕ್ ಸಾಗರದ ಭೋರ್ಗರೆವ ಪ್ರವಾಹವಾಗಿತ್ತು.
“ಮದುವಿ ಮಾಡಿ ಬಿಡು , ತ್ರಾಸ ತಗೋಬ್ಯಾಡ ” ಭಗವತಿ ಉಪಾಯ ಸೂಚಿಸಿದಳು.
“ಯಾರಿಗೆ ಮಾಡ್ಲಿರಿ ಮದುವಿ ……!!!!!!!!???????? ” ಅವಳ ಕಣ್ಣಿನ ಕಟ್ಟೆಯೊಡದಿತ್ತು.
” ಮಾಲಾಗ ” ಭಗವತಿ ಅಂದಳು.
“ಆಗುದಿಲ್ಲಂತ್ರಿ ಆಕಿ ……” ಮಾಬೂಬಿ ಉತ್ತರಿಸುತ್ತಿದ್ದಂತೆ …. ಗಿಡದಲ್ಲಿಯ ಪಕ್ಷಿ ಬರ್ರನೇ ಹಾರಿ ಬಂದು ನೆಲದ ಮೇಲೆ ಬಿದ್ದ ಅಕ್ಕಿಕಾಳುಗಳನ್ನು ಆಯತೊಡಗಿತು. ಅದನ್ನು ನೋಡಿದ ಭಗವತಿ ಮಾಬೂಬಿಯರ ಮೈಗಳು ಕಂಪಿಸತೊಡಗಿದವು.
***********************************