ಕವಿತೆ
ಆಶಾ ಜಗದೀಶ್
ನಾವಿಬ್ಬರೂ ನೆಡಲು ಹೊರಟದ್ದು
ಮಲ್ಲಿಗೆ ಬಳ್ಳಿಗಳನ್ನೇ
ಇಬ್ಬರ ಕೈಯಲ್ಲೂ ಸಸಿಗಳಿದ್ದವು
ನೆಟ್ಟೆವು ಎಷ್ಟೊಂದು ನಿರೀಕ್ಷೆಗಳ
ನೀರೆರೆದು
ನಾವಿಬ್ಬರೂ ನಮ್ಮ ನಡುವೆ
ಸಣ್ಣದೊಂದು ಅಂತರಕ್ಕೆ
ಇರಲು ಜಾಗ ಕೊಟ್ಟು
ಮಲ್ಲಿಗೆ ಬಳ್ಳಿಯ ಬದಿಯ
ಕಲ್ಲುಬೆಂಚಿನ
ಇತ್ತ ನಾನು ಅತ್ತ ನೀನು…
ಕೂತ ಬೆಂಚು ಒಂದೇ ತಾನೇ!?
ಅಂತರವೆಂಬ ವಾಮನನಿಗೆ
ಅಷ್ಟೇ ಸಾಕಿತ್ತು!
ಬೆಳೆದ ಮಲ್ಲಿಗೆ ಬಳ್ಳಿಗಳ
ಕಾಂಡ ಎಲೆ ಹಸಿರು ಕುಡಿ
ಎಲ್ಲವೂ ಬೇರೆ ಬೇರೆ
ಬೆಳೆದ ಅಂತರ ನೂಕಿದ ರಭಸಕ್ಕೆ
ಬಿದ್ದೆವು
ಅತ್ತ ನೀನು ಇತ್ತ ನಾನು
ವಾಮನನಿಗೆ ಬೆಳೆಯಲು
ಎಷ್ಟು ಹೊತ್ತು ತಾನೆ ಬೇಕಿತ್ತು…
ಈಗ ಹೂಗಳ ಸರದಿ
ನಮಗೀಗ ಜ್ಞಾನೋದಯವೇ ಆಯಿತು
ನಾನು ನೆಟ್ಟದ್ದು ದುಂಡು ಮಲ್ಲಿಗೆ ಬಳ್ಳಿ
ಮತ್ತು ನೀನು ಸೂಜುಮಲ್ಲಿಗೆ
ನನ್ನ ಮೈಮರೆಸುವ
ನಿನ್ನ ಚುಚ್ಚುವ
ಆಲೋಚನೆಗಳು
ಕೆಂಬಣ್ಣದ ಹೂಗಳಾಗಿ
ಉದುರಿದವು..
ನೀನು ಸೆಟೆದು ಅಡ್ಡಾದೆ
ನಾನೂ ನಿನ್ನ ಮಗ್ಗುಲಲ್ಲಿ…
ಮಲ್ಲಿಗೆ ಬಳ್ಳಿಗಳ ಕಿತ್ತೊಗೆದು
ಒಂದೇ ಗುದ್ದಿನಲ್ಲಿ ನಮ್ಮಿಬ್ಬರನ್ನೂ
ಕೆಡವಿ ಮಣ್ಣುಮುಚ್ಚಿ ಹೋದರು