ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಕ್ರಾಂತಿ ಕಾವ್ಯ ಸುಗ್ಗಿ

ಬಿಟ್ಟು ಯೋಚಿಸಬಹುದೇ..?

ಸ್ಮಿತಾ ಅಮೃತರಾಜ್. ಸಂಪಾಜೆ

five black rocks

ದಿನದ ಕನಸುಗಳೆಲ್ಲಾ
ಗುಲಾಬಿ ಬಣ್ಣ ಮೆತ್ತಿದ
ಬೊಂಬಾಯಿ ಮಿಠಾಯಿ
ಸವಿಯುವ ಮುನ್ನವೇ ಕರಗಿ
ಬರೇ ಅಂಟು ಜಿನುಗಷ್ಟೇ
ಉಳಿಯುವ ನಂಟು.

ಈ ಹೊತ್ತಲ್ಲದ ಹೊತ್ತಿನಲ್ಲಿ
ನೀ ಬಂದು ಮೈದಡವಿ ತಲೆ
ನೇವರಿಸದೇ ಇರುತ್ತಿದ್ದರೆ..
ನಾಳೆಯ ಕನಸುಗಳಿಗೆ ಬಣ್ಣ
ಬಳಿಯಲು ನನ್ನ ಬಳಿ ರಂಗು
ಉಳಿಯುತ್ತಿತ್ತೇ?

ಕಣ್ಣಾಲಿ ತೆರೆದಷ್ಟೂ
ಸಂತೆ ನೆರೆಯುವ ಬಿನ್ನಾಣ ಲೋಕ
ಹೊರಗೆ ತೆಳ್ಳಗೆ ಹಚ್ಚಿದ ಬೆಡಗಿನ ಲೇಪ
ಲೋಪವೇ ಇಲ್ಲದ ಬದುಕಿದೆ ಒಳಗೆ
ಬಗೆದು ಕಂಡವರಿಲ್ಲ ಪಾಪ!

ಆಳದಲ್ಲೆಲ್ಲೋ ಛಳಕ್ ಎಂದ ನೋವು
..ಹೊತ್ತಿಗೆ ನೀ ಬಂದು ಮುಲಾಮು
ಹಚ್ಚದೇ ಹೋಗುತ್ತಿದ್ದರೆ..
ಗಾಯವೇನೋ ಮಾಯುತ್ತಿತ್ತು.
ನೋವು ಮಾಸುತ್ತಿತ್ತೇ..?

ಮುದುಡಿಕೊಂಡಷ್ಟೂ ರೆಕ್ಕೆ ಬಿಚ್ಚಿ
ಆಗಸಕ್ಕೆ ಬೆಟ್ಟು ನೆಟ್ಟು ಹಾರಲು
ಕಲಿಸುತ್ತಿರುವೆ.
ಮರೆತಷ್ಟೂ ಮತ್ತೂ ಮತ್ತೂ
ಗಾಳಿಯಂತೆ ಬೀಸುತ್ತಿರುವೆ.

ಈ ಕ್ಷಣ ಪಕ್ಕಕ್ಕಿಟ್ಟು ನಿನ್ನ
ಬಿಟ್ಟು ಯೋಚಿಸಬಹುದೇ..?
ನಾನು ಆಲೋಚಿಸುತ್ತಿರುವೆ.

ಧ್ಯಾನಕ್ಕೆ ಯಾರ ಕಾವಲೂ ಇಲ್ಲ
ಅಪ್ಪಣೆಗೆ ಕಾಯಲೂ ಬೇಕಿಲ್ಲ
ಕವಿತೆಯೇ..ಈಗ ಹೇಳು
ಅರೆ ಕ್ಷಣ ನಿನ್ನ ಬಿಟ್ಟು ನಾ
ಯೋಚಿಸಬಲ್ಲೆನೇ…?
ಇನ್ನು ನೀನೂ………..?!


This image has an empty alt attribute; its file name is WhatsApp-Image-2021-01-12-at-1.07.54-PM.jpeg

About The Author

8 thoughts on “”

  1. Poornima suresh

    ಎಷ್ಟು ಚೆಂದ ಬರೆದಿದ್ದಿ ಸ್ಮಿತಾ..ಅಭಿನಂದನೆಗಳು

  2. ಮಹಾದೇವ ಕಾನತ್ತಿಲ

    ದೇಹದೊಳಗೆ ಜೀವಪ್ರಜ್ಞೆಯೂ, ಹೊರಗೆ ನಿಂತು ಸಾಕ್ಷೀಪ್ರಜ್ಞೆಯೂ ಆಗಿ ಮಾತಾಡುವ,ಕಾಡುವ ಕವಿತೆ.
    ಚೆನ್ನಾಗಿದೆ ಸ್ಮಿತಾ ಅವರೇ

  3. Nagaraj Harapanahalli

    ಕವಿತೆ ಸಹೃದಯನಲ್ಲಿ ಬೆಳೆಯಬೇಕು . ಹಾಗೆ ಬೆಳೆದಿದೆ. ಇನಿ ಮುದ್ದು ಎಂಬಂತಿದೆ.‌
    ಕವಿತೆ ಇಷ್ಟವಾಯಿತು.

Leave a Reply

You cannot copy content of this page

Scroll to Top