ಕವಿತೆ
ಪುಟತಿರುಗಿಸುವ ಮುನ್ನ
ನೂತನದೋಶೆಟ್ಟಿ
ಅವನಿಗೆ ಗೊತ್ತುಇದುಕೊನೆಯಿರದ ನಾಳೆಯೆಂದು
ದಿನವೂ ಓಕುಳಿಯಾಡುತ್ತ ಬರುತ್ತಾನೆ
ಕಾಮನಬಿಲ್ಲನ್ನು ಗುರುತಿಗಿರಿಸಿ ತೆರಳುತ್ತಾನೆ
ಎಂದಾದರೂ ಒಂಟಿಯಾಗಿಸುತ್ತಾನೆಯೇ?
ಚಂದ್ರತಾರೆಯರನ್ನು ಕಳಿಸುತ್ತಾನೆ
ಕತ್ತಲೆಗೆ ಹೊಳಪ ತುಂಬಲು
ಕಾಯಿಸುತ್ತಾನೆ ಪ್ರೇಮಿಯಂತೆ
ವಿರಹವಿರದ ಬಂಧುರದಿಂದ
ಗಿಡ, ಮರ, ಹಕ್ಕಿಗಳಿಂದ ಕಲಿಸುತ್ತಾನೆ
ನಲಿವು, ನೋವು, ಹಸಿವು, ನಿದ್ದೆ
ಪ್ರೇಮ, ಸ್ನೇಹ
ಎಂಥ ಮಾಯಗಾರನೋ ನೀನು
ಏನು ಕನಸುಗಾರ !
ಕಳೆದ ದಿನಗಳ ನೆನಪಿಸದೆ
ಪಡೆಯಲುಕನವರಿಸದೆ
ಕೊಡುವ ನಿರಂತರತೆಯಲ್ಲಿ
ಧನ್ಯನಾಗುತ್ತೀಯಲ್ಲ !
ನಾವು ಕಲಿತದ್ದಾದರೂ ಏನು!
ದಿನಗಳ ಲೆಕ್ಕ,
ಕೊಡುವ ಕೊಂಬ ಸಂಚು !
ವರುಷ ವರುಷಗಳ ಹಪಹಪಿ
ಮತ್ತೆ ನಾಳೆ ಬಂದೇ ಬರುತ್ತಾನೆ
ಅದೇ ಬೆಳಕು, ಬಣ್ಣ, ಅಂದ
ಹೊಸತೆಂಬ ಪರದೆಯನ್ನು
ಕಣ್ಣಿಗಂಟಿಸಿಕೊಂಡು
ನೋಡುವ ನಾವು
ಪುಟತಿರುಗಿಸುತ್ತೇವೆ
ಭ್ರಮೆಯಲ್ಲಿ.
————————-