ಕವಿತೆ
ಹುನ್ನಾರವೇನು?
ರಾಜೇಶ್ವರಿ ಭೋಗಯ್ಯ
ತೊರೆಯಬೇಕೆಂದುಕೊಂಡಾಗಲೆಲ್ಲಾ ನಿನ್ನ…
ಬಂದು ಪೊರೆದುಬಿಡುವೆಯಲ್ಲಾ ನನ್ನಾ
ಮುಟ್ಟಬೇಕೆಂದುಕೊಂಡಾಗಲೆಲ್ಲಾ ನಿನ್ನ…
ತಪ್ಪಿಸಿ ನನ್ನ ಬೆಟ್ಟದ ಮೇಲೇ ಕೂತಿರುವೆಯಲ್ಲಾ
ಮಾತನಾಡಬೇಕು ಎಂದುಕೊಂಡಾಗಲೆಲ್ಲಾ ಜೊತೆ ನಿನ್ನ…
ಮುನಿಸಿಕೊಂಡೇ ಇರುವೆ ಬದುಕೆಲ್ಲಾ
ಪ್ರೇಮದಿ ಮೀಯಿಸಬೇಕು ಎಂದುಕೊಂಡಾಗಲೆಲ್ಲಾ ನಿನ್ನ…
ಅದಾಗಲೇ ಮಡಿಯ ಬಟ್ಟೆ ತೊಟ್ಟಿರುವೆಯಲ್ಲಾ
ನೈವೇಧ್ಯವ ಅರ್ಪಿಸಬೇಕು ಎಂದುಕೊಂಡಾಗಲೆಲ್ಲಾ ಹಸಿವಿಗೆ ನಿನ್ನ… ಬಿಂಕದ ನೋಟ ಕಾಣುವುದಲ್ಲಾ
ವಿಹಾರಕ್ಕಾದರೂ ಹೋಗಿಬರೋಣ ಎಂದುಕೊಂಡಾಗಲೆಲ್ಲಾ ಕೂಡಿ ನಿನ್ನ…
ವಾಹನಗಳ ಮೇಲೆ ನಿರಂತರ ಸಂಚಾರದಲ್ಲಿರುತ್ತೀಯಲ್ಲಾ
ಪದಗಳನ್ನಾದರೂ ಜೋಡಿಸೋಣ ಎಂದುಕೊಂಡಾಗಲೆಲ್ಲಾ ಹಳಿಯಲು ನಿನ್ನ…
ನಿಂದನೆಯ ಅಕ್ಷರಗಳನ್ನೆಲ್ಲಾ ಪೆಟ್ಟಿಗೆಯಲ್ಲಿ ಇಟ್ಟುಕೊಂಡಿರುವೆಯಲ್ಲಾ
ಮನವಿಗೂ ಇಲ್ಲ ,ತನುವಿಗೂ ಇಲ್ಲ ತೊರೆದುಬಿಡುವುದೇ ನಿನ್ನ… ಸಮಂಜಸ ಎನ್ನಿಸಿದಾಗಲೊಮ್ಮೆ
ತಟ್ಟನೆ ಬಂದು ಪೊರೆದುಬಿಡುವೆಯಲ್ಲಾ
ಮಾಯವಾಗುವುದು…ಕಲ್ಲಾಗುವುದು..ಪ್ರತ್ಯಕ್ಷವಾಗುವುದು…
ಜೀವತಳೆಯುವುದು…
ಯುಗಾಂತರಗಳಿಗೊಮ್ಮೆ ಬಂದು
ಯಾವುದೋ ರೂಪದಲಿ ನಿಂದು
ಅಭಯ ಹಸ್ತವ ನೀಡಿ
ಮಂಕರನ್ನಾಗಿಸುವ ಮೋಡಿ ಮಾಡುವವ
ನೀನು ದೇವರೇನಾ ?
ನಮ್ಮನ್ನೆಲ್ಲಾ ದಾಸರನ್ನಾಗಿಸುವ ಹುನ್ನಾರವೇನಾ ?
*************************************