ಗಜಲ್
ಶಾಲಿನಿ ಆರ್.
ಅನುರಾಗ ಆರಾಧನೆಯಿದೆ ಕಣ್ಣಂಚಿನ ಕೊನೆಯಲಿ ಮಿಂಚು ಸುಳಿದಿದೆ ನಾ ನಿನ್ನೆನೆವಾಗ/
ಮನದಾಳದ ಮಾತಲ್ಲಿ ನವಿರಾದ ಭಾವೋತ್ಕರ್ಷ ಸಂಚು ಅಡಗಿದೆ ನಾ ನಿನ್ನ ನೆನೆವಾಗ//
ನೆನೆದಷ್ಟು ಮನ ಮೃದುಲತೆಯ ತವರು,ಪೇಮ ಫಲದ ಗೊಂಚಲು/
ರಾಗದೊಲವ ಎಲರು ಹಾದಿಗುಂಟ ತೂಗುತಿದೆ ನಾ ನಿನ್ನ ನೆನೆವಾಗ//.
ಬಾನಲಿ ಹೊಳೆವ ತಾರೆಗಳ ಕಾಂತಿಗೆ ನಿನ್ನ ವದನ ಚಂದಿರನ ಪ್ರತಿಫಲನವು/
ಆಹಾ! ಮನವದು ನಿಲುಕದೆ ಒಲವಿನಂಕಣಕ ಬರೆಯುತಿದೆ, ನಾ ನಿನ್ನ ನೆನೆವಾಗ//
ತಂಪೆಲರ ಒಲವಿಗೆ ಮನವು ಆರ್ದ್ರಗೊಂಡು ಕರಗುತಿದೆ/
ತನುವದು ಮುದದಿ ತಣಿದುಚರ್ವಿತ ಒಲವು ಹೊನಲಾಗಿದೆ, ನಾ ನಿನ್ನ ನೆನೆವಾಗ//
ಭಾವಲೋಕದೀ ಸರಿತ ಸಲ್ಲಲಿತ ಕವನ ಮರುಳಿರಿಸಿ ಹರಿಯುತಿದೆ /
ಶಾಲಿನಿಯ ಬಂಧದಲೀ ಒಲವ ಸಿಂಚನ ಕಚಗುಳಿಯಿಡುತಿದೆ ನಾ ನಿನ್ನ ನೆನೆವಾಗ//
********************************************************