ಗಜಲ್
ಪ್ರಭಾವತಿ ಎಸ್ ದೇಸಾಯಿ
ಮುಂಗಾರು ಮುಗಿಲೇ ಆರ್ಭಟಿಸುತ ಮಳೆ ಸುರಿಸದಿರು ಇನಿಯ ಬರುವ
ಆಷಾಡದ ಬಿರುಸು ಗಾಳಿಯೇ ಮಣ್ಣು ತೂರದಿರು ಇನಿಯ ಬರುವ
ನೂರು ಕನಸುಗಳ ಜಾತ್ರೆ ಮಾಡಿಸುವ ಮೋಜಗಾರ ಅವನು
ಮುದ್ದಿನ ಗಿಳಿ ಸವಿಮಾತಿನಲಿ ಹಾದಿಯ ಕಟ್ಟದಿರು ಇನಿಯ ಬರುವ
ವಿರಹದ ದಳ್ಳುರಿ ಆರಿಸುವ ಸುಂದರ ಶೀತಲ ಕುಮಾರ ಅವನು
ಬನದ ನವಿಲೆ ಗರಿಗಳ ಬಿಚ್ಚಿ ದಾರಿ ತಪ್ಪಿಸದಿರು ಇನಿಯ ಬರುವ
ಬೆಂದ ಹೃದಯಕೆ ಒಲವಿನ ಅಧರ ಮುಲಾಮ ಹಚ್ಚುವ ವೈದ್ಯ ಅವನು
ಕೆಂಡ ಸಂಪಿಗೆ ಘಮ ಹರಡಿ ನಿನ್ನ ಕಡೆ ಸೆಳೆಯದಿರು ಇನಿಯ ಬರುವ
“ಪ್ರಭೆ” ಎದೆಯಲಿ ಅನುರಾಗದ ಕಡಲನು ಉಕ್ಕಿಸುವ ಚಂದಿರ ಅವನು
ಚಕೋರ ಬೆಳದಿಂಗಳ ನುಂಗಿ ಕತ್ತಲು ಮಾಡದಿರು ಇನಿಯ ಬರುವ.
*******