ಕವಿತೆ
ಕನಸಿನ ಕೊನೆ
ನೀ.ಶ್ರೀಶೈಲ ಹುಲ್ಲೂರು
ಬೇಗುದಿಯ ಬೆಂಗೊಡದ
ಕರಿಕಾಯದೀ ಕಥೆಗೆ
ನೂರೆಂಟು ಕನಸು…
ಅವಳ ಮುಡಿಗೆ ಚಿನ್ನದ ಹೂ
ಕೊರಳಿಗೆ ಮುತ್ತಿನ ಹಾರ
ಮೈಗೆ ಅಂದದ ರೇಷ್ಮೆ ಸೀರೆ
ಬತ್ತಿದೆದೆಗೊಂದು ಚೆಂದದ ರವಿಕೆ!
ಮಕ್ಕಳಾಟಕೆ ಬುಗುರಿ ಪೀಪಿ
ತೂಗುಕುದುರೆ ಓಡಲೊಂದು
ಕಬ್ಬಿಣದ ಗಾಲಿ
ಪಡೆವಾತುರಕೋ ಒಡಲ ತುಂಬ
ಆಸೆಗಳ ನೂರು ಕಟ್ಟು!
ಅಂದವಾದ ಈ ಮೈಕಟ್ಟಿ
ನೊಡೆಯನ ತುಡಿತಕೆ
ಯಾವಾಗಲೂ ಚಿಗುರು!
ಧಣಿಯ ದಪ್ಪ ಚರ್ಮದ
ಮೇಲೂ ಅದೆಂಥದೋ ಮಮತೆ
ಬಿಡಿಗಾಸು ನೀಡದವನ
ಅಡಿದಾಸನಾಗಿ ಹರೆಯ
ಸವೆಸುವ ಅಪೂರ್ವ ಸಂತಸ
ಅವಳಿತ್ತ ಬೇಡಿಕೆಯ
ಅಕ್ಷಯಾಂಬರಕೆ ಬೆನ್ನು ತಿರುಗಿಸಿ
ದುಡಿಯುವ ನಗ್ನ ಸತ್ಯ!
ಸಂಜೆ ಮನೆಯ ದಾರಿಯಲಿ
ಕಸುವು ಕಳೆದುಕೊಂಡ ದೇಹದ
ಜೊತೆಗೆ ಅದೇ ಖಾಲಿ ಕೈ
ಜೋಮುಗೊಂಡ ಕಾಲಿಗೆ ಬುದ್ಧಿ
ಹೇಳಿ ಹೊಡೆಯುತ್ತಾನೆ ಜೋಲಿ
ಓಣಿಯ ತುಂಬಾ ಕೊಳೆತು
ಸೀತು ಹೋದ ಚರ್ಮದ ದುರ್ನಾತ
ತಿಪ್ಪೆಗುಂಡಿಯ ಸಂಗ ಮಾಡಿದ
ನೀರು ನಿಂತು ಮಲೆತ ಕೆಸರ ಕುಂಡ!
ಎಲುಬೆಣಿಸುವ ತನ್ನ ಪ್ರೀತಿ ನಾಯಿಯ
ಮೈತುಂಬಾ ಕಜ್ಜಿ ಗಾಯ ಕೀವು
ಅರಿಷಿಣ ಸವರಲು ಬಿಡದ ಅದರ
ರೋಷಕೆ ಇವನು ತಬ್ಬಿಬ್ಬು
ಮಕ್ಕಳ ರೆಪ್ಪೆ ತುಂಬಾ ಪಿಚ್ಚು
ಸೋರುತಿಹ ಕಟಬಾಯಿ ಜೊಲ್ಲು
ಗುಂಡು ಹಾಕಲು ಅಂಗಡಿಯವನ
ಜೊತೆ ಮಾಡಿದ ಗಿಲೀಟು ಠುಸ್!
ಝಗಮಗಿಸುವ ಈ ಕಾಲದಲೂ
ಮನೆ ಕತ್ತಲೆಯ ಕೂಪ
ಎಣ್ಣೆಯನ್ನು ಬಿಡದೆ ಬಾಟಲಿಯ
ಚಿಮಣಿಯನ್ನೂ ನುಂಗಿದ ಬೆಂಕಿ ಬತ್ತಿ
ಇಲ್ಲಗಳನೆಲ್ಲ ಎದೆಯ ಮೇಲೇ
ಹೇರಿಕೊಂಡು ನಡೆದವನ ಹಿಂದೆ
ಹೊರಟರು ಕೇರಿಯ ಜನ
ಅನ್ನುತ್ತಿದ್ದರು
ಏನೋ ಮಣಮಣ!
ಉಳಿದ ಅವಳೆದೆ ಮಾತ್ರ
ಈಗಲೂ ಭಣಭಣ!!
*******************************************