ಗಜಲ್
(ಸಂಪೂರ್ಣ ಮತ್ಲಾ ಗಜಲ್)
ಸಿದ್ಧರಾಮ ಹೊನ್ಕಲ್
ನನ್ನ ಸಖಿ ಈ ಜಗದಿ ಅಪರೂಪ ಏನನೂ ಬೇಡಳು
ಕೊಡುವೆ ಅಂದಾಕ್ಷಣವೇ ಕೋಪದಿ ಕ್ಷಣ ಮುನಿವಳು
ಏನು ಕೊಟ್ಟರು ಕಡಿಮೆ ಅವಳಿಗೆ ಅಂತಹ ಗುಣದವಳು
ಮುಳ್ಳು ತರಚುವ ಮೃದು ಮಧುರ ಗುಲಾಬಿ ಅಂಥವಳು
ಬೇಡ ಕೊಟ್ಟಷ್ಟು ಆಸೆ ಬೆಳಿವವು ಅಂದು ಕೊಂಡಿಹಳು
ಆಸೆಯೇ ಇಲ್ಲದ ಅಪ್ಪಟ ಬಂಗಾರು! ನನಗೆ ಸಿಕ್ಕಿಹಳು
ತಾ ಕೊಡುವದರಲು ಹೀಗೆ ಬಲೂ ಕಂಜೂಸಿ ಮನದವಳು
ಮಾತೇ ಮುತ್ತಾಗಿಸಿದವಳು ಬೇಗ ಮುತ್ತು! ಸಹ ನೀಡಳು
ಅಭಿಮಾನದಿ ಪ್ರೀತಿ ಪ್ರೇಮದ ಹೊಳೆಯ ಹರಿಸುವಳು
ಹೊಟ್ಟೆ ಬಟ್ಟೆ ದೇಹ ಬದುಕು ಬರಹ ಚೆಂದ ಮಾಡಿಹಳು
ನೋವುಗಳ ನುಂಗಿಬಿಟ್ಟು ಬರೀದೆ ನಗು ನಟಿಸುವಳು
ಆಗಾಗ ಸಿಟ್ಟು ಸೆಡವು ಹುಸಿ ಕೋಪವು ತೋರುವಳು
ಬದುಕಲಾರೆ ಬಿಟ್ಟಿರಲಾರೆ ಈ ಜೀವದ ಜೀವವವಳು
ಎಲ್ಲಿಯದೋ ಈ ಬಂಧ ಅನುಬಂಧ ಆಗಿಸಿದವಳು
ಇದ್ದಲ್ಲೆ ಕಡು ಒಲವಿನ ಮೋಹದ ಮಳೆ ಸುರಿಸುವಳು
ಹೊನ್ನಸಿರಿ’ಮನ ಸರೋವರದಿ ಶಾಂತ ಇರಿಸುವಳು
*******************