ನಿಯತ್ತು

ಕಥೆ

ನಿಯತ್ತು

ಎಂ. ಆರ್.ಅನಸೂಯ

Human hands open palm up worship Praying hands with faith and belief in God of an appeal to the sky. Concept Religion and spirituality with believe Power of royalty free stock photo

ಹೊರಗಡೆ ಯಾರೋ ಬೆಲ್ ಮಾಡಿದರು,ಆಗ  ಅಡುಗೆ ಮನೆಯಲ್ಲಿದ್ದ ಜಾನಕಿ ಅಲ್ಲಿಂದಲೇ ಮಗಳಿಗೆ” ನೋಡೇ ಸುಧಾ ಅದ್ಯಾರು”. ಬಾಗಿಲು ತೆಗೆಯದೆ ಕಿಟಕಿಯಿಂದಲೇ ಹೊರಗಡೆ ನಿಂತಿದ್ದವರನ್ನು ಸುಧಾ “ಯಾರು ಬೇಕಿತ್ತು” 

ಎಂದು ಕೇಳಿದಳು. ಸುಮಾರು ಐವತ್ತು ವರ್ಷದ  ಅವರು

“ನನ್ನ ಹೆಸರು ಇಸ್ಮಾಯಿಲ್. ನಿಮ್ಮ ತಾಯಿಯವರ ಹತ್ರ

ಮಾತಾಡ ಬೇಕಿತ್ತು . ಸ್ವಲ್ಪ ಕರೆಯಮ್ಮ’ ಎಂದರು.  ಒಳಗೆ  ಬಂದು ” ಅಮ್ಮ, ಅದ್ಯಾರೊ  ಇಸ್ಮಾಯಿಲ್ ಅಂತೆ ನಿನ್ನತ್ರ

ಮಾತಾಡಬೇಕಂತೆ” ಎಂದಾಗ ಯಾರಪ್ಪ ಅವ್ರು ಎನ್ನುತ್ತಾ

ಬಂದು ಅವರನ್ನು  ನೋಡುತ್ತಿದ್ದಂತೆಯೇ ” ಓ ನೀವಾ”

ಎಂದರು. ಆ ವ್ಯಕ್ತಿ ಕೈ ಮುಗಿದು ನಮಸ್ಕರಿಸುತ್ತ ” ಒಳಗೆ

ಬರಬಹುದೇನ್ರಮ್ಮ” ಎಂದು ಕೇಳುತ್ತ ಅಲ್ಲೇ ನಿಂತಿದ್ದರು.

ಆಗ ಜಾನಕಿ ಇಷ್ಟವಿಲ್ಲದಿದ್ದರೂ “ಬನ್ರಿ”ಎನ್ನ ಬೇಕಾಯ್ತು.

ಜಾನಕಿ ಕುಳಿತುಕೊಳ್ಳಿ ಎಂದು ಕುರ್ಚಿ ಕಡೆ ತೋರಿಸಿದರು 

ಕುಳಿತ ಮೇಲೆ “ನಿಮಗೆ ನನ್ನ ಮೇಲೆ ಸಿಟ್ಟೈತೆ. ಬೇಜಾರ್

ಮಾಡ್ಕಬೇಡ್ರಿ. ನಿಮಗೆ ಸಿಟ್ಟು ಬರಂಗೆ ನಡ್ಕಂಡಿದೀನಮ್ಮ

ಏನೋ ಕೆಟ್ಟ ಕಾಲ. ಇವತ್ತು ನಿಮ್ಮ ಋಣ ತೀರಿಸೊ ಕಾಲ

ಬಂತ್ರಮ್ಮ. ತಗೊಳ್ರಿ ನೀವು ಕೊಟ್ಟ ಐವತ್ತು ಸಾವಿರವನ್ನ

ಅಸಲಷ್ಟೆ ಕೊಡ್ತಿರೋದು. ನನ್ನ ಕೈಲಾಗದು ಇಷ್ಟೇನಮ್ಮ

ಮುಂದೆ ಆ ಅಲ್ಲಾ ಶಕ್ತಿ ಕೊಟ್ರೆ ಬಡ್ಡೀನು ತೀರಿಸಿ ಬಿಡ್ತೀನಿ” 

ಎನ್ನುತ್ತಾ ಟೇಬಲ್ ಮೇಲೆ ನೋಟುಗಳ ಕಂತೆಯಿಟ್ಟರು.

ಆಗ ಜಾನಕಿ ದುಡ್ಡನ್ನು ತೆಗೆದುಕೊಳ್ಳುತ್ತ “ಈ ದುಡ್ಡು ಮತ್ತೆ     ವಾಪಸ್ ಬರುತ್ತೆ ಅನ್ಕೊಂಡೇ ಇರಲಿಲ್ಲ. ಅದರ  ಆಸೇನ ನಾವು ಯಾವತ್ತೋ ಕೈ ಬಿಟ್ಟು ಸುಮ್ಮನಾಗಿದ್ವಿ. ಏನೋ ನಿಮಗೆ  ಆ ದೇವರು ಒಳ್ಳೆ ಬುದ್ದಿ ಕೊಟ್ನಲ್ಲ. ನಾವು ನಿಮ್ಮ ಸ್ಥಿತಿ ಅರ್ಥ ಮಾಡ್ಕಂಡು ವಿಧಿಯಿಲ್ಲದೆ ಸುಮ್ಮನಾಗಿ ಬಿಟ್ವಿ  ಆ ದುಡ್ಡು ನಮ್ಮದಾಗಿದ್ದರೆ ನಮಗೆ ಸಿಗುತ್ತೆ ಇಲ್ಲದಿದ್ದರೆ ಇಲ್ಲಾ ಅಂತ” ಎಂದು ಹೇಳಿ ಸುಧಾಳಿಗೆ ಟೀ ಮಾಡಲು ಹೇಳಿದರು.ಟೀ ಕುಡಿಯುವಾಗ ” ನೀವು ಎಲ್ಲಿದೀರಿ ಈಗ” ಎಂದು ಜಾನಕಿ ಕೇಳಿದರು”ನಾನು ಬೆಂಗ್ಳೂರಲ್ಲೆ ಇದೀನಿ ನಾನವತ್ತು ನಿಮ್ಮನೆಗೆ ಬಂದಿದ್ನಲ್ಲ ಅದರ  ಮಾರನೆಯ ದಿನವೇ ಬೆಂಗ್ಳೂರಿಗೆ  ಹೋಗ್ಬಿಟ್ಟೆ. ಸಾಲ ಕೊಟ್ಟವರು  ಸುಮ್ಮನೆ ಬಿಡ್ತಾರಾ. ಸಾಲಗಾರರ ಕಾಟ  ತಡೀಲಾರದೆ ಅಂಗಡಿಯಲ್ಲಿದ್ದ ಸಾಮಾನು ಮಾರಿ ಅಂಗಡಿ ಮನೇನ

ಅಡವಿಟ್ಟು ಸಾಲ ತೀರ್ಸಿದೆ ಬಾಡಿಗೆಯನ್ನು  ಮತ್ತೊಬ್ಬ ಸಾಲಗಾರನಿಗೆ ಬರೆದು ಕೊಟ್ಟುಬಿಟ್ಟೆ. ಮಗ ಓದ್ತಿದ್ದ. ಮನೆ ನಡಿಬೇಕಲ್ಲ. ಬೆಂಗಳೂರಲ್ಲಿದ್ದ ನನ್ನ ಹೆಂಡ್ತಿ ಅಣ್ಣನೆ ನಿಮ್ಮಂಥಾ ದೊಡ್ಡ ವ್ಯಾಪಾರಸ್ಥರ ಹತ್ರ ಸ್ಟೋರ್ ಕೀಪರ್  ಕೆಲ್ಸ ಕೊಡಿಸಿದ. ನನ್ನ ಕೆಲಸ ಅವ್ರಿಗೆ ಇಷ್ಟ ಆಯ್ತು. ಅವ್ರೇ ರಾತ್ರಿ ವಾಚ್ಮನ್ ಕೆಲಸನೂ ನನಗೆ ಕೊಟ್ರು.ಇರಕ್ಕೆ ಒಂದು ರೂಂ  ಕೊಟ್ರು. ಎರಡೂ  ಕೆಲ್ಸಕ್ಕೂ ಸೇರಿ  ಮೂವತ್ತು ಸಾವಿರ ಕೊಡ್ರಿದ್ರು. ಮನೆಗೆ ಹದಿನೈದು ಸಾವಿರ ಕೊಟ್ಟರೆ. ಸಾಲಕ್ಕಂತ ಹತ್ತು ಸಾವ್ರ ಹೋಗಿ ನನ್ನ ಖರ್ಚಿಗೆ  ಐದು ಸಾವಿರ ಇಟ್ಕಂತಿದ್ದೆ. ನಮ್ಮಮ್ಮನೂ ನನ್ನ ಹೆಂಡ್ತಿ ಮನೇಲಿ ಸುಮ್ನೆ ಇರದೆ ಹೂ ಕಟ್ಟಿ ಸಂಪಾದನೆ ಮಾಡಿದ್ರು. ಈಗ ಮಗನಿಗೆ ಕೆ.ಇ.ಬಿ. ನಲ್ಲಿ ಕೆಲಸ ಸಿಕ್ಕಿತು ಶಿವಮೊಗ್ಗದಲ್ಲಿ ಮನೆ ಮಾಡಿ ವರ್ಷ ಆಯ್ತು. ಎಲ್ಲರೂ ಅಲ್ಲೆ ಇದ್ದಾರೆ.ಮಗನು ದುಡಿದು ಸಾಲ ತೀರಿಸ್ತಿದಾನೆ.ಮನೆನೂ ಬಾಡಿಗೆ ಕೊಟ್ಟು ಅದರ ದುಡ್ಡನ್ನು ಸಾಲಕ್ಕೆ ಕಟ್ತಾ ಇದೀವಿ. ಸಾಲ ತೀರಿದ  ಮೇಲೆ ಮಗನಿಗೆ ಮದ್ವೆ ಮಾಡಿ ನಾನು ಕೆಲ್ಸ ಬಿಟ್ಬಿಟ್ಟು ಬಂದು ಎಲ್ಲಾರೂ ಒಂದತ್ರ ಇರ್ತಿವಿ. ಈ ಐವತ್ತು ಸಾವಿರ ನಾನು ದುಡಿದಿರ  ದುಡ್ಡು. ನಾನು ಊರು ಬಿಟ್ಟೋಗಿ ಎಂಟು ವರ್ಷ ಆಯ್ತು ವನವಾಸ ಆದಂಗಾಯ್ತು ಮಗನಿಗೆ ಕೆಲಸ ಸಿಕ್ಕಿದ ಮೇಲೆ ನೆಮ್ಮದಿಯಾಗಿ ನಿರಾಳವಾಯ್ತು”ಎಂದು ಹೇಳಿ ಮುಗ್ಸಿದ.  ಸುಧಾಳನ್ನು ನೋಡಿ “ಎಲ್ಲಾ ಅವರಜ್ಜಿ ಇದ್ದಂಗೆ” ಎಂದು ಹೇಳಿ ಜಾನಕಿಯವರ ಅತ್ತೆ ಕಮಲಮ್ಮನವರನ್ನು ಕೇಳಿದ  ಅವರು ತಮ್ಮ ಮಗಳ ಮನೇಲೀ ನಾಲ್ಕೈದು ದಿನ ಇದ್ದು ಬರಲು ಹೋಗಿದ್ದಾರೆ ಎಂದಾಗ ಅವರ ಕೈ ರುಚಿಯನ್ನು ಕೊಡುತ್ತಿದ್ದ ಊಟತಿಂಡಿಯನ್ನು ನೆನೆದು ಹೊಗಳಿದರು ಜಾನಕಿಯ ಗಂಡ ಪ್ರಕಾಶಣ್ಣನು ಬೆಂಗಳೂರಿಗೆ ಹೋದ ವಿಚಾರ ತಿಳಿದು ಮತ್ತೊಮ್ಮೆ ಬಂದಾಗ ಮಾತಾಡಿಸ್ತೀನಿ ಎನ್ನುತ್ತ ಹೊರಡುವಾಗ ಮತ್ತೆ ನಡೆದ ವಿಷಯಗಳಿಗೆಲ್ಲ ಬೇಸರ ಮಾಡಿ ಕೊಳ್ಳಬಾರದೆಂದುಹೇಳಿದರು. ಅವರು ಹೋದ ಮೇಲೆ ಸುಧಾ ” ಯಾರಮ್ಮ ಇವ್ರು ನನಗೀಗ ಇವರನ್ನು ನೋಡಿದ ನೆನಪಾಯ್ತು” ಎಂದು  ಕೇಳಿದಾಗ ಜಾನಕಿ “ಅದೊಂದು ದೊಡ್ಡ ಕತೆ” ಎನ್ನುತ್ತಲೇ ಅಡುಗೆ ಮನೆಯತ್ತ ನಡೆದರೆ ಸುಧಾ ಸಹಾ ಅವರ ಹಿಂದೆಯೇ

ಹೊರಟಳು. ಜಾನಕಿ ಕಥೆಯ ಪೀಠಿಕೆ ಶುರು ಮಾಡಿದಳು

“ಈಗ ಬಂದಿದ್ದಲ್ಲ ಇಸ್ಮಾಯಿಲ್ ಅವ್ರ ತಂದೆ ಇಬ್ರಾಹಿಂ

ಹಾಗು ನಿಮ್ಮ ತಾತ ಚಿಕ್ಕಂದಿನಿಂದ್ಲೂ ಒಳ್ಳೆಯ ಸ್ನೇಹಿತರು

ಇಬ್ಬರ ನಡುವೆ ಹಣಕಾಸಿನ ವ್ಯವಹಾರವೂ ಇತ್ತು. ಅದು

ನಂಬಿಕೆ ಹಾಗೂ ನಿಯತ್ತಿನಿಂದ ಕೂಡಿತ್ತು. ಆ ಸ್ರೇಹ ಹಾಗೆ

ಮುಂದುವರಿಯುತ್ತ ಅವರ ಮಕ್ಕಳ ಕಾಲಕ್ಕೂ ಬಂದಿತ್ತು ಎರಡು ಕುಟುಂಬಗಳ ನಡುವಿನ ವಿಶ್ವಾಸಕ್ಕೆ ಯಾವುದೇ  ಭಂಗ ಬರದೆ ಎಲ್ಲವು ಚೆನ್ನಾಗೆ ಇತ್ತು. ಇಬ್ರಾಹಿಂರವರು ಸಣ್ಣಕಿರಾಣಿ ಅಂಗಡಿ ಇಟ್ಟಿದ್ದರು. ಅವರಪ್ನ ತೀರಿಕೊಂಡ

ಮೇಲೆ ಇಸ್ಮಾಯಿಲ್ ನಡೆಸಿಕೊಂಡು ಹೋಗುತ್ತಿದ್ದರು. ಅಂಗಡಿಯ ಜೊತೆಗೆ ತೆಂಗಿನಕಾಯಿಯ ಹೋಲ್ ಸೇಲ್

ವ್ಯಾಪಾರ ಮಾಡುವ ಉತ್ಸಾಹದಿಂದ ಶುರುಮಾಡಿದರು.  ತಾವು ಕೂಡಿಟ್ಟ ಹಣದೊಂದಿಗೆ ಸ್ಟಲ್ಪ ಸಾಲವನ್ನು ಮಾಡಿ ಹಣ ಹೊಂದಿಸಿಕೊಂಡು ಹೊಸ ವ್ಯವಹಾರಕ್ಕೆ ಹಾಕಿದ್ದರು ಯಾಕೋ ಏನೋ ಹೊಸ ವ್ಯವಹಾರದಲ್ಲಿ ಏಳ್ಗೆಯಾಗದೆ  ನಷ್ಟವಾಗ ತೊಡಗಿತು. ಹೊಸ ವ್ಯವಹಾರದ ಆಸಕ್ತಿಯ

ಫಲವಾಗಿ ಕಿರಾಣಿ ಅಂಗಡಿಯೂ ಸರಿಯಾಗಿ ನಡೆಯದೆ 

ಅದರಲ್ಲೂ ಆದಾಯ ಕಡಿಮೆಯಾಯಿತು.ಅಂದುಕೊಂಡ

ಹಾಗೆ ಏನೂ ನಡೆಯದೆ ಎಲ್ಲವೂ ಏರುಪೇರಾಗಿ ಬಿಟ್ಟಿತು ಒಟ್ನಲ್ಲಿ ಗ್ರಹಚಾರ ಕೆಟ್ಟ ಪರಿಣಾಮವೋ ಏನೋ ಅವರ ಕೆಟ್ಟ ದಿನಗಳು ಪ್ರಾರಂಭವಾದವು. ಅದು ಸಾಲದೆಂಬಂತೆ  ಆಗಲೇ ಅವರ ತಾಯಿಗೆ ಅನಾರೋಗ್ಯದಿಂದಾಗಿ ಆಸ್ಪತ್ರೆ

ಸೇರಬೇಕಾಯ್ತು. ಹೊಸ ವ್ಯವಹಾರದಲ್ಲಾದ ನಷ್ಟ ಮತ್ತು ಆಸ್ಪತ್ರೆ ಖರ್ಚಿಗಾಗಿ ಮತ್ತೆ ಸಾಲಮಾಡದೆ ಬೇರೆ ದಾರಿಯೆ ಇರಲಿಲ್ಲ ಆಗ ನಮ್ಮ ಹತ್ರ ಒಂದು ಲಕ್ಷ ರೂಪಾಯಿ ಸಾಲ ತೆಗೆದರು. ಅವರ ತಾಯಿ ಆರೋಗ್ಯವಂತರಾಗಿ ಮನೆಗೇ  ಬಂದರೂ ಹಣಕಾಸಿನ ಪರಿಸ್ಥಿತಿ ಮಾತ್ರ ತೀರ ಹದಗೆಟ್ಟು ಹೋಗಿತ್ತು ಸಾಲಗಾರರ ಕಾಟದಿಂದಾಗಿ ಮರ್ಯಾದೆಗೆ

ಹೆದರಿ ಅವರದೆ ಸ್ವಂತ ಅಂಗಡಿ ಮನೆಯನ್ನು ಭೋಗ್ಯಕ್ಕೆ

ಹಾಕಿ ಅರ್ಧ ಸಾಲ ತೀರಿಸಿ ಹೆಂಡತಿಯ ಒಡವೆಗಳನ್ನೂ

ಮಾರಿದರು. ಆಗ ನಿಮ್ಮಪ್ಪ ಸಾಲದ ದುಡ್ಡು ಕೇಳಿದರು. ಆಗ ಅವನಲ್ಲಿದ್ದ ಐವತ್ತು ಸಾವಿರ ಕೊಟ್ಟು “ಉಳಿದ ಹಣ

ಈಗಲೇ ಕೊಡಕ್ಕೆ ಆಗಲ್ಲ. ಬೇರೆ ಕಡೆ ಇನ್ನೂ ಸಾಲ ಐತೆ

ನೀವು ಈಗಲೇ ಕೊಡಬೇಕು ಅಂದ್ರೆ ನೇಣು ಹಾಕ್ಕಂಡು

ಸಾಯದು ಬಿಟ್ರೆ ಇನ್ನೇನೂ ಮಾಡಕ್ಕಾಗಲ್ಲ. ನನಗೆ ಸ್ಟಲ್ಪ

ಟೈಂ ಕೊಡ್ರಿ ನಿಮ್ಮ ಋಣ ಇಟ್ಕೊಂಡು ಸಾಯಲ್ಲ” ಎಂದು

ಕೈ ಮುಗಿದು ಕೇಳ್ಕಂಡಿದ್ದರು. ಆಗ ನಿಮ್ಮಅಜ್ಜಿ ನಿಮ್ಮಪ್ಪನ

ಹತ್ರ “ಪ್ರಕಾಶ, ಒತ್ತಡ ಹಾಕ್ಬೇಡ. ನಿಯತ್ತಿನ ಮನುಷ್ಯನೇ

ಪಾಪ.ಲೇಟಾದ್ರು ದುಡ್ಡು ಬರುತ್ತೆ”ಎಂದುಹೇಳ್ಬಿಟ್ಟಿದ್ದರು.   ಮಾರನೇ ದಿನವೇ ಇಸ್ಮಾಯಿಲ್ ಊರು ಬಿಟ್ಟಿದ್ದ. ಆಗ

ನಿಮ್ಮಪ್ಪ ಹಣ ವಾಪಸ್ ಬರುವ ಆಸೆಯನ್ನೇ ಕೈ ಬಿಟ್ಟರು

“ಅದಾದ ಮೇಲೆ ಇವತ್ತೇ ನಾನು ನೋಡ್ತಿರೋದು. ಇನ್ನು

ಮುಂದಿನ ಕತೆನೆಲ್ಲಾ ಅವನೇ ಹೇಳಿದನಲ್ಲ. ಅಂತು ಅವ್ರ ನಿಯತ್ತು ಮೆಚ್ಚಬೇಕು.ಅದಕ್ಕೆ ಅಲ್ವೇ ಹೇಳೋದು ದುಡ್ಡು

ಶಾಶ್ವತ ಅಲ್ಲ ಅಂತ “ಎಂದು ಜಾನಕಿ ಹೇಳಿದರೆ ” ಎಂಟು ವರ್ಷ ಆದ ಮೇಲೆ ಅವರಾಗೇ ಬಂದು ದುಡ್ಡು ಕೊಟ್ಟು ಸಾಲ ತೀರ್ಸಿದಾರೆ.ಅವ್ರು ನಿಜವಾಗ್ಲೂ ಈಗಿನ ಕಾಲಕ್ಕೇ ಗ್ರೇಟ್ ಕಣಮ್ಮ”ಎಂದು ಸುಧಾ ಸಹಾ ಹೊಗಳಿದಳು.

…….

Leave a Reply

Back To Top