ಗಜಲ್
ಶ್ರೀಲಕ್ಷ್ಮಿ ಆದ್ಯಪಾಡಿ.
ಕಣ್ಣ ಜಗತ್ತಿನಲ್ಲೇ ಸಾವಿರ ಸಾವಿರ ನಕ್ಷತ್ರಗಳ ಚಿಮ್ಮಿಸಿದವನು ಅವನಿರುವುದೇ ಹಾಗೆ
ಮೀಸೆಯ ತುಂಟ ನಗೆಯಲ್ಲೇ ಸಾವಿರ ಕನಸುಗಳ ಹೊಮ್ಮಿಸಿದವನು ಅವನಿರುವುದೇ ಹಾಗೆ
ಮೌನವನ್ನಪ್ಪಿದ್ದ ನನ್ನೆದೆಯ ತಂತಿಯನ್ನು ಮತ್ತೆ ಬಿಗಿದು ಹೊಸ ರಾಗ ಮೀಟಿದನು
ನನ್ನದೆಯ ಪ್ರತಿ ಬಡಿತದಲ್ಲೂ ನಲಿವಿನ ರಾಗಗಳ ಬೆರೆಸಿದವನು ಅವನಿರುವುದೇ ಹಾಗೆ
ಕುದಿಯುತ್ತಿದ್ದ ತಪ್ತ ಎದೆಗೆ ತಂಪಿನ ಹನಿ ಬೆರೆಸಿ ಬದುಕಿನಲ್ಲಿ ಹೊಸ ಕನಸ ಬಿತ್ತಿದನು
ಕಮರಿ ಹೋಗಿದ್ದ ಕನಸುಗಳಿಗೆ ಮತ್ತೆ ಹೊಸ ಜೀವ ತುಂಬಿದವನು ಅವನಿರುವುದೇ ಹಾಗೆ
ಮೊರೆಯುತ್ತಿದ್ದ ಕಡಲಿಗೇನು ಗೊತ್ತಿತ್ತು ತನಗಾಗಿ ಹಂಬಲಿಸುವ ನದಿ ಎಲ್ಲಿದೆಯೆಂದು
ಕಾಯುವ ಬದುಕಿಗೇ ವಿದಾಯ ಹೇಳಿ ಒಲವಿನಿಂದ ನಲಿದು ಬಂದವನು ಅವನಿರುವುದೇ ಹಾಗೆ
ಕಾರ್ಗತ್ತಲ ಗೂಡಿನೊಳಗೆ ಒಂಟಿತನದ ನೋವಿನಲ್ಲೇ ಕೊರಗುತ್ತಿದ್ದ ಪುಟ್ಟ ಹಕ್ಕಿಯಾಗಿದ್ದೆ
ಹಾರಲು ಪ್ರೇಮದ ವಿಶಾಲ ಆಗಸವಿದೆಯೆಂದು ತೋರಿ ರೆಕ್ಕೆಯಾದವನು ಅವನಿರುವುದೇ ಹಾಗೆ
**********************************************
ಚೇತೋಹಾರಿ ಭಾವ !