ಗಜಲ್
ತೇಜಾವತಿ ಹೆಚ್.ಡಿ.
ಅನುಭವಿಸುವಿಯಾದರೆ ನನ್ನೆಲ್ಲಾ ನೋವುಗಳೂ ನಿನ್ನರಸಿ ಬಳಿಬರುವವು ಸಖ
ದೂಷಿಸುವಿಯಾದರೆ ನನ್ನೊಲವಿನ ಕ್ಷಣಗಳೂ ನಿನ್ನನ್ನು ತೊರೆದೋಡುವವವು ಸಖ
ರಕ್ಷಿಸುವಿಯಾದರೆ ನಿನ್ನ ತೋಳ್ತೆಕ್ಕೆಯಲಿ ಅಲುಗಾಡದೆ ಸ್ತಬ್ಧವಾಗಿರುವೆನು
ಭಕ್ಷಿಸುವಿಯಾದರೆ ನನ್ನಿರುವಿಕೆಯ ಸುಳಿವುಗಳೂ ಹಿಂಬಾಲಿಸದಿರುವವು ಸಖ
ಪೂಜಿಸುವೆಯಾದರೆ ಪಯಣದುದ್ದಕ್ಕೂ ನಿನ್ನಡಿಗಳಿಗೆ ಮೆಟ್ಟಿಲಾಗಿ ನಿಲ್ಲುವೆನು
ಧಿಕ್ಕರಿಸುವಿಯಾದರೆ ನನ್ನಡಿಯ ಧೂಳು ಕಣಗಳೂ ಸೋಕದಿರುವವು ಸಖ
ಗೌರವಿಸುವಿಯಾದರೆ ಮನದ ಮೂಲೆಯಾದರೂ ಸಾಕು ಅಸ್ತಿತ್ವಕ್ಕೆ
ಅವಮಾನಿಸುವಿಯಾದರೆ ನೆನಪುಗಳು ಹೃದಯದಿಂದಲೇ ಬೇರುಸಹಿತ ಕಿತ್ತೊಗೆಯುವವು ಸಖ
ಪ್ರೇಮಿಸುವಿಯಾದರೆ ನೂರು ದಿನದ ಬದುಕು ಮೂರೇ ಕ್ಷಣವಾದರೂ ತೃಪ್ತಿ ‘ತೇಜ’
ದ್ವೇಷಿಸುವಿಯಾದರೆ ಸಹಸ್ರ ವರ್ಷಗಳೂ ಕೂಡ ಸಂಕೋಲೆಯ ತೊಡಿಸುವವು ಸಖ
ನಯವಾದ ಹಂಗಿನ ಮಾತು ಕಿವಿಯ ಪೊಟರೆಯ ಹರಿಯುತಿದೆ ಸಾಕಿ
ದ್ವೇಷಭರಿತ ನೋಟದ ಈಟಿ ಹೃದಯದ ಗೂಡನು ಇರಿಯುತಿದೆ ಸಾಕಿ
ನಾಲಿಗೆ ತುದಿಯಲ್ಲಿನ ವ್ಯಂಗ್ಯ ನುಡಿಗಳು ಬೆಂಕಿಯ ಕಿಡಿಗಳಾಗಿವೆ ಈಗ
ತಣ್ಣನೆಯ ಹಿಮವು ತನ್ನ ಗುಣವ ತೊರೆದು ಬಿಸಿಯೇರುತಿದೆ ಸಾಕಿ
ಮಮಕಾರದ ಮಾಯೆ ಸರಿತಪ್ಪುಗಳ ದಾರಿಯನ್ನೇ ಕತ್ತಲಾಗಿಸಿದೆ
ದೀಪ ತಾನುರಿದು ಬೆಳಕನೂಡುತ್ತಾ ಛಾಯೆಯಲಿ ಮರೆಯಾಗುತಿದೆ ಸಾಕಿ
ಸಂಬಂಧದ ಬೇರುಗಳ ನಂಬಿಕೆಗಳು ಮಣ್ಣು ಪಾಲಾಗಿವೆ ಇಂದು
ಸಮಯಸಾಧಕತನ ಚಳಿಗೆ ತನ್ನ ಮೈ ಕಾಯಿಸುತಿದೆ ಸಾಕಿ
ತುಟಿಯಂಚಿನ ಅಣುಕು ನಗೆ ಮುಖವಾಡದ ರಹಸ್ಯವನ್ನು ತೆರೆದಿಡುತ್ತಿದೆ ಇಲ್ಲಿ
ಉಸಿರಾಡುತ್ತಿರುವ ದುರ್ಗಂಧ ಮನಸ್ಸಿನ ಕೋಣೆಯನ್ನು ಮಲಿನಗೊಳಿಸುತಿದೆ ಸಾಕಿ
ತುಂಬಿರುವ ಸಿರಿಸಂಪತ್ತಿನಲ್ಲೂ ಏಕಾಂಗಿಭಾವ ಇಣುಕಿ ನೋಡುತ್ತಿದೆ ‘ತೇಜ’
ಹತ್ತಲು ನೆರವಾದ ಏಣಿ ಗೆದ್ದಲಿಡಿದು ಭೂಮಿಯೊಳಗೆ ಲೀನವಾಗುತಿದೆ ಸಾಕಿ
****************************************