ಗಜಲ್

ರತ್ನರಾಯ ಮಲ್ಲ

Valentine'S Day, Valentine, Love, Coffee

ಎಣ್ಣೆ, ಬತ್ತಿಗಳು ಬಜಾರಿನಲ್ಲಿ ಬಿಕರಿಯಾಗುತ್ತಿವೆ ಗಾಲಿಬ್
ದೀಪ ಹಚ್ಚುವ ಮನಸ್ಸುಗಳು ಮರೆಯಾಗುತ್ತಿವೆ ಗಾಲಿಬ್ .

ನಮ್ಮ ಮನೆಗಳು ಕಂಗೊಳಿಸುತ್ತಿವೆ ಬಣ್ಣ ಬಣ್ಣದ ಬೆಳಕಿನಲ್ಲಿ
ಮನಗಳು ಕತ್ತಲೆಯ ಗೂಡಾಗಿ ಕೊಳೆಯಾಗುತ್ತಿವೆ ಗಾಲಿಬ್

ಬುದ್ಧಿವಂತಿಕೆಯ ನೆರಳಲ್ಲಿ ಗುಲಾಮಿಯು ಚಿಗುರೊಡೆಯುತಿದೆ
ಭವ್ಯ ಚಿಂತನೆಯ ಆಪ್ತ ಕನಸುಗಳು ಪರಾರಿಯಾಗುತ್ತಿವೆ ಗಾಲಿಬ್

ಆಡಂಬರದ ಆಲಯವೇ ಈ ಸಮಾಜವನ್ನು ನಿಯಂತ್ರಿಸುತಿದೆ
ಸಂತೃಪ್ತಿ-ಸರಳತೆಯ ದಿನಗಳು ಮರಿಚೀಕೆಯಾಗುತ್ತಿವೆ ಗಾಲಿಬ್

‘ಮಲ್ಲಿ’ ಯ ಮನವು ಆರದ ಬೆಳಕಿಗಾಗಿ ಕನವರಿಸುತಿದೆ ಇಂದು
ಪರಸ್ಪರ ಪ್ರೀತಿಸುವ ಹೃದಯಗಳು ಒಂಟಿಯಾಗುತ್ತಿವೆ ಗಾಲಿಬ್..


Heart, Herzchen, Love, Romance, Luck

ನಿನ್ನೊಂದಿಗೆ ಮಾತನಾಡುತ ಮಸಣವನ್ನು ಚುಂಬಿಸುವ ಆಸೆ
ನಿನ್ನಯ ಹೆಗಲ ಮೇಲೆ ಅರೆ ಘಳಿಗೆಯಾದರೂ ಮಲಗುವ ಆಸೆ

ಸ್ಮಶಾನಕ್ಕೂ ಭವ್ಯವಾದ ಪರಂಪರೆಯಿದೆ ನಮ್ಮ ಈ ನಾಡಿನಲ್ಲಿ
ನನ್ನ ನೋಡುವ ನಿನ್ನ ಕಂಗಳಲ್ಲಿ ಸಂತೋಷವನ್ನು ಅರಸುವ ಆಸೆ

ನಾನು ತಲೆ ಇಡುವ ನೆಲವು ಸಮತಟ್ಟಾಗಿದೆ ನಿನ್ನಯ ದೆಸೆಯಿಂದ
ಪ್ರೇಮಗೀತೆಯನ್ನು ಕೇಳದ ಕಿವಿಗಳಿಗೆ ‌ಚರಮಗೀತೆ ಆಲಿಸುವ ಆಸೆ

ಮಣ್ಣಿನ ಹೆಂಟೆಗಳನ್ನು ಎಸೆಯದೆ ನನ್ನೆದೆಯ ಮೇಲೆ ಜೋಡಿಸು
ಮಣ್ಣು ಮುಚ್ಚುವವರೆಗೆ ನಿನ್ನ ಸಾಂಗತ್ಯದ ಸವಿ ಪಡೆಯುವ ಆಸೆ

ದಪ್ಪ ಕಲ್ಲುಗಳಿಂದ ‘ಮಲ್ಲಿ’ ಗೆ ಗೋರಿ ಕಟ್ಟಬೇಡ ನೋವಾಗುವುದು
ಸಸಿಯನ್ನಾದರೂ ನೆಡು ನೆರಳಲ್ಲಿ ನಿನ್ನ ನೆನೆಸುತ್ತ ಜೀವಿಸುವ ಆಸೆ

*************************************

Leave a Reply

Back To Top