ಅಂಕಣ ಬರಹ

ಸೋತು ಗೆದ್ದ ಮನುಷ್ಯ

ಸೋತು ಗೆದ್ದ ಮನುಷ್ಯ
ತೆಲುಗು ಮೂಲ : ಮಲ್ಲಾರೆಡ್ಡಿ
ಅನುವಾದ : ಕಸ್ತೂರಿ
ಪ್ರ : ನವಕರ್ನಾಟಕ ಪಬ್ಲಿಕೇಷನ್ಸ್
ಪ್ರಕಟಣೆಯ ವರ್ಷ : ೨೦೧೭
ಬೆಲೆ : ರೂ.೧೦೪ ¥
ಪುಟಗಳು :೧೫೨

ಇದು ತೆಲುಗು ಮೂಲದ ಮಲ್ಲಾರೆಡ್ಡಿಯವರ ಆತ್ಮಕಥೆ. ವಿಷಮ ಪರಿಸ್ಥಿತಿಗಳು ತಂದ ನೋವು-ಸಂಕಷ್ಟಗಳಿಂದಾಗಿ ಮಾನಸಿಕವಾಗಿ ನೊಂದು ಬದುಕಿನಲ್ಲಿ ಭರವಸೆಯನ್ನೇ ಕಳೆದುಕೊಂಡು ಮಾನಸಿಕವಾಗಿ ಅಸ್ವಸ್ಥನಾದ ವ್ಯಕ್ತಿಯೊಬ್ಬ ತನ್ನ ಎಲ್ಲಾ ಅನುಭವಗಳನ್ನು ಇಲ್ಲಿ ವಿವರವಾಗಿ ಮನಮುಟ್ಟುವಂತೆ ಹೇಳುತ್ತಾನೆ. ತೀರಾ ಎಳೆಯ ಹುಡುಗನಾಗಿದ್ದಾಗಲೇ ಸೂಕ್ಷ್ಮ ಸಂವೇದನೆಯುಳ್ಳವನಾಗಿದ್ದರಿಂದ ತನ್ನ ಸುತ್ತ ಮುತ್ತ ನಡೆಯುವ ಎಲ್ಲಾ ವಿದ್ಯಮಾನಗಳನ್ನು ಆತ ತಣ್ಣಗೆ ಗಮನಿಸುತ್ತಾನೆ. ಅವನದ್ದು ಅವಿಭಕ್ತ ಕುಟುಂಬ. ಅವನು ತಂದೆಗೆ ಎರಡನೆಯ ಹೆಂಡತಿಯ ಮಗ. ತನ್ನ ತಂದೆ ತನ್ನ ತಾಯಿಗೆ ಹೆಚ್ಚು ಪ್ರೀತಿಯನ್ನು ಕೊಟ್ಟು ಮೊದಲ ಹೆಂಡತಿಯನ್ನು ಕಡೆಗಣಿಸುವುದನ್ನು ಪುಟ್ಟ ಹುಡುಗ ನೋಡುತ್ತಾನೆ. ಮುಂದೆ ಮೊದಲ ಹೆಂಡತಿ ತನ್ನ ಪಾಲಿನ ಆಸ್ತಿಯನ್ನು ಕೇಳಿ ಕುಟುಂಬವನ್ನು ಬಿಟ್ಟು ತನ್ನ ಮಕ್ಕಳೊಂದಿಗೆ ಬೇರೆಡೆಗೆ ಹೋಗಿದ್ದು ಅವನನ್ನು ಅಪಾರವಾಗಿ ನೋಯಿಸುತ್ತದೆ. ಅವನು ದೊಡ್ಡಮ್ಮನ ಮಗನನ್ನು ಅಪಾರವಾಗಿ ಪ್ರೀತಿಸಿದ್ದ . ಚಿಕ್ಕವನಾಗಿದ್ದಾಗ ನೆರೆಮನೆಯ ರಾಮು ಅವನ ಆತ್ಮೀಯ ಗೆಳೆಯನಾಗಿದ್ದ. ಆದರೂ ಅವನಿಗೆ ಗೊತ್ತಿಲ್ಲದೆಯೇ ಅವನು ಒಮ್ಮೆ ರಾಮುವಿನ ಪೆನ್ನನ್ನು ಕದ್ದಿದ್ದ. ಮುಂದೆ ಹೈಸ್ಕೂಲು ಮುಗಿಸಿ ಹೈದರಾಬಾದಿನಲ್ಲಿ ಕಾಲೇಜು ಶಿಕ್ಷಣಕ್ಕಾಗಿ ಅವನು ಹೋಗುತ್ತಾನೆ. ಅಲ್ಲಿ ಸೀಟು ಸಿಕ್ಕದೆ ಅವನು ತುಂಬಾ ಅಡೆತಡೆಗಳನ್ನು ಅನುಭವಿಸಬೇಕಾಗುತ್ತದೆ. ಅದರ ಪರಿಣಾಮವಾಗಿ ಅವನು ಮನೋರೋಗಕ್ಕೆ ತುತ್ತಾಗುತ್ತಾನೆ. ಆರಂಭದಲ್ಲಿ ವೈದ್ಯರ ಬಳಿಗೆ ಹೋಗಲು ಯಾವುದೋ ಕೀಳರಿಮೆಯಿಂದಾಗಿ ಅವನು ಹಿಂದೇಟು ಹಾಕುತ್ತಾನೆ. ಆದರೆ ಸರಿಯಾದ ಸಮಯಕ್ಕೆ ಯಾರದ್ದೋ ಉಪದೇಶದಿಂದ ಸೂಕ್ತ ಚಿಕಿತ್ಸೆ ಪಡೆದು ಗುಣಮುಖನಾಗುತ್ತಾನೆ .


ದೈಹಿಕವಾಗಿ ಗಟ್ಟಿಮುಟ್ಟಾಗಿದ್ದ ಅವನು ಮುಂದೆ ತನ್ನ ಶಿಕ್ಷಣವನ್ನು ಮುಂದುವರೆಸಿ ಭಾರತದ ವಿವಿಧ ರಾಜ್ಯಗಳಲ್ಲಿ ಮಾತ್ರವಲ್ಲದೆ ಅಲ್ಜೀರಿಯಾಗೂ ಹೋಗಿ ಅಲ್ಲಿ ಇಂಗ್ಲಿಷ್ ಅಧ್ಯಾಪಕನಾಗಿ ಉದ್ಯೋಗ ಗಳಿಸಿ ಜೀವನದಲ್ಲಿ ಯಶಸ್ವಿಯಾಗುತ್ತಾನೆ.


ಅನೇಕರು ತಮಗೆ ರೋಗವಿದೆಯೆಂದು ಗೊತ್ತಿದ್ದೂ ಮಾನಸಿಕ ತಜ್ಞರನ್ನು ಭೇಟಿಯಾಗಲು ಹಿಂದೇಟು ಹಾಕಿ ತಮ್ಮ ರೋಗ ಉಲ್ಬಣಗೊಳ್ಳುವುದಕ್ಕೆ ತಾವೇ ಕಾರಣರಾಗುತ್ತಾರೆ, ಅಂಥವರಿಗೆ ಮಾರ್ಗದರ್ಶನ ನೀಡುವಂಥ ಒಂದು ಕೃತಿಯಿದು.


ಕೃತಿಯ ವಸ್ತು ಪ್ರಸ್ತುತತೆಯುಳ್ಳದ್ದಾಗಿದೆ. ಭಾಷೆ, ನಿರೂಪಣಾ ಶೈಲಿಗಳು ಸರಳವೂ ಸುಲಲಿತವೂ ಆಗಿದ್ದು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.

********************************

ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Leave a Reply

Back To Top