ಗಜಲ್
ಅಲ್ಲಾಗಿರಿರಾಜ್ ಕನಕಗಿರಿ.
ಒಮ್ಮೆ ಯೋಚಿಸು ನೋಡು ಗಂಟು ಬಿದ್ದರೆ ಬಿಚ್ಚುವುದಿಲ್ಲ ಬದುಕು.
ಒಮ್ಮೆ ಮನಸ್ಸಿಗೆ ಕೇಳಿ ನೋಡು ಮೈಗೆ ಮೈ ಉಂಡರೆ ಅಗಲುವುದಿಲ್ಲ ಬದುಕು.
ಈ ಸುಖ ದುಃಖಗಳ ಆಟವೇ ಹೀಗೆ ಕಾಡಿಸಿ ಕೂಡಿಸಿ ಜೀವನ ಮುಗಿಸುತ್ತವೆ.
ಒಮ್ಮೆ ಕನಸಿ ಕರೆದು ನೋಡು ಕತ್ತಲಿಗೂ ಸುಳಿವು ನೀಡುವುದಿಲ್ಲ ಬದುಕು.
ದಿನಗಳು ಕಳೆದಂತೆ ಭಾರವಾಗುತ್ತದೆ ಜೀವನ ಸಾವಿನ ಎದುರು.
ಒಮ್ಮೆ ಆತ್ಮ ಹೊರಗಿಟ್ಟು ನೋಡು ಹಗಲಿಗೆ ಅರ್ಥವಾಗುವುದಿಲ್ಲ ಬದುಕು.
ಎಲ್ಲ ಸುಳ್ಳು ಮನೆ ಮಾತು ಬಂಧು ಬಳಗ ಮರಣ ಒಂದೇ ದಾಖಲೆ.
ಒಮ್ಮೆ ಹೆಣವಾಗಿ ನೋಡು ಯಾರ ಹೆಗಲಿಗೂ ಭಯವಾಗುವುದಿಲ್ಲ ಬದುಕು.
ಒಮ್ಮೆ ಯೋಚಿಸಿ ನೋಡು ಮನಸು ತಳುಕು ಬಿದ್ದ ಮೇಲೆ ಬಿಡುವುದಿಲ್ಲ ಬದುಕು
ಒಮ್ಮೆ “ಗಿರಿರಾಜ”ನ ಒಳಗೆ ಬಂದು ನೋಡು ಎದ್ದು ಹೋಗಲು ದಾರಿ ಬಿಡುವುದಿಲ್ಲ ಬದುಕು.
ನೀವು ಮುಳ್ಳಿನ ಗಿಡ ನೆಟ್ಟು ಖುಷಿ ಪಡಬೇಡಿ.
ಅಲ್ಲಿ ಒಂದು ಹೂ ಸುಗಂಧ ಬೀರುತ್ತದೆ ಮರೆಯಬೇಡಿ.
ನೀವು ಪ್ರೇಮವನ್ನು ದೇಹದೊಡನೆ ಸೇರಿಸಿಕೊಂಡು ಸುಖ ಪಡಬೇಡಿ.
ಅಲ್ಲಿ ಒಂದು ಆತ್ಮ ತೊಟ್ಟು ಪ್ರೀತಿ ಬಯಸುತ್ತದೆ ಮರೆಯಬೇಡಿ.
ನೀವು ಶೃಂಗಾರವನ್ನು ಹೆಣ್ಣಿಗೆ ಮೀಸಲೆಂದು ಆಡಿಕೊಳ್ಳಬೇಡಿ.
ಅಲ್ಲಿ ಒಂದೊಂದು ಕಣ್ಣುಗಳು ನಿಮ್ಮ ಮನಸ್ಸಿನೊಳಗೇ ಕದ್ದು ನೋಡುತ್ತವೆ ಮರೆಯಬೇಡಿ.
ನೀವು ಪ್ರೇಮಿಯಾಗಲು ಹೋಗಿ ವಿರಹದ ಮಧುಶಾಲಾ ಸೇರಬೇಡಿ.
ಅಲ್ಲಿ ಒಂದು ಮತ್ಲಾ ಸಾವಿರ ಗಜಲ್ ಆಗುತ್ತದೆ ಮರೆಯಬೇಡಿ.
ನೀವು ಸಾವಿಗಂಜಿ ಬಯಲ ಮುಂದೆ ಕಥೆ ಕಟ್ಟಬೇಡಿ.
ಅಲ್ಲಿ ಒಂದು ಜೀವ “ಗಿರಿರಾಜ”ನಿಗಾಗಿ ಮುಪ್ಪಾಗಿ ಹೆಪ್ಪಾಗಿ ಉಪ್ಪಾಗುತ್ತದೆ ಮರೆಯಬೇಡಿ.
***********************************
ವ್ಹಾ…ಉಸ್ತಾದ್ ಶರಣು ನಿಮಗೆ
ಅರ್ಥಗರ್ಭಿತ , ಮತ್ಲಾ ಮನಸ್ಸಿಗೆ ಮೆಚ್ಚುಗೆಯಾಯಿತು ಸರ್