ಗಜಲ್
ಪ್ರೇಮಾ ಹೂಗಾರ
ಅಳು ಬಂದರೂ ಅಳಲಾರೆ ಆ ಹನಿಯಲ್ಲಿ ಜಾರಿಹೋಗುವೆ ಎಂಬ ಸಂಕಟ
ನಗು ಬಂದರೂ ನಗಲಾರೆ ಆ ನಗುವಿನೊಂದಿಗೆ ಕಳೆದುಹೋಗುವೆ ಎಂಬ ಸಂಕಟ
ನಿನ್ನ ಗಜಲ್ ಸಾಲಿನಲ್ಲಾದರೂ ಜೀವಂತ ಇರುವೆನಲ್ಲ ಎಂಬುದೇ ಸಮಾಧಾನ
ಹಾಡು ಬಂದರೂ ಹಾಡಲಾರೆ ಆ ಹಾಡಿನೊಂದಿಗೆ ಹಾರಿಹೋಗುವೆ ಎಂಬ ಸಂಕಟ
ಅಕ್ಷರಗಳ ಜೊತೆಗೇ ಒಂದಾಗಿ ಬೆರೆತೆವು ನಲಿದೆವು ಮುನಿಸ ತೋರಿದೆವು ರೋದಿಸಿದೆವು
ಬರೆಯಬೇಕೆಂದರೂ ಬರೆಯಲಾರೆ ಆ ಬರಹದೊಂದಿಗೆ ಖಾಲಿಯಾಗುವೆ ಎಂಬ ಸಂಕಟ
ಬದುಕಿನ ಪ್ರತಿ ಕ್ಷಣದಲೂ ಜೊತೆಯಾದೆವು ಪ್ರತಿ ಕ್ಷಣವನು ಹಂಚಿಕೊಂಡೆವು
ನಡೆಯಬೇಕೆಂದರೂ ನಡೆಯಲಾರೆ ಆ ನಡೆಯೊಂದಿಗೆ ಕಾಣೆಯಾಗುವೆ ಎಂಬ ಸಂಕಟ
ಬದುಕಿನ ಸುದೀರ್ಘ ಪಯಣದಲಿ ಪ್ರೇಮಳ ಜೊತೆಯಾದೆ ಒಲವಿನಲಿ ಬಂದಿಯಾದೆ
ಮರೆಯಬೇಕೆಂದರೂ ಮರೆಯಲಾರೆ ಆ ಮರೆವಿನೊಂದಿಗೇ ಕಂಬನಿಯಾಗುವೆ ಎಂಬ ಸಂಕಟ
ನಾಟಿ ಹೋದ ನೆನಪುಗಳೆಲ್ಲ ಮತ್ತೆ ಮೊಳಕೆ ಒಡೆಯುತ್ತಿವೆ
ತೇಲಿ ಬಿಟ್ಟ ದೋಣಿಗಳೆಲ್ಲ ಮತ್ತೆ ಜಗಕೆ ಕರೆಯುತ್ತಿವೆ
ನೀನುಡಿಸಿದ ಕೆಂಪು ಸೀರೆಯ ನೆರಿಗೆಗಳು ಇನ್ನೂ ನಾಚುತಿವೆ ಸಾಕಿ
ನೋಟ ಕಸಿದ ಕಾಡಿಗೆಯೊಳಗೆ ಹೊಸ ಬಯಕೆ ಚಿಮ್ಮುತಿವೆ
ನಗುವ ಗೋರಿಯ ಮೇಲೆ ನೇಪಥ್ಯದ ಪ್ರೇಮದ ನೆಪಬೇಡ
ಹೊಣೆಯಿಲ್ಲದ ಕನಸುಗಳಿಗೆ ಚಂದ್ರನ ಕಟ್ಟಿ ನೊಗಕೆ ಜರೆಯುತ್ತಿವೆ
ಗೋಧೂಳಿಯು ಹೊತ್ತು ತರುವ ನಂಜಿನ ಆ ಮಹಾಮೌನ………..
ಸಾಕು ಸಾಕಿನ್ನು ಮುನಿದ ತೋಳುಗಳು ನೀ ಬರುವ ಹರಕೆ ಬಯಸುತ್ತಿವೆ
ನೀ ತುಳಿದು ಹೋದ ಅಂಗಳದ ರಂಗವಲ್ಲಿಯೂ ನನ್ನ ಅಣಕಿಸುತಿದೆ
ಈ ಹೊಸ್ತಿಲು ತಲೆಬಾಗಿಲು ನಮ್ಮ ಪ್ರೀತಿ ಸಾರಲು ಯುಗಕೆ ಕನವರಿಸುತ್ತಿವೆ
ಪ್ರೇಮಾ ಕಾದ ಎಲ್ಲ ಘಳಿಗೆಗಳಿಗೂ ಪಂಚಭೂತಗಳೇ ಸಾಕ್ಷಿ
ಹೇಳು ಯಾವ ಕಟ್ಟೆ ಕಟ್ಟಲಿ ನೀನಿರದ ಕಣ್ಣೀರು ಈ ಲೋಕಕೆ ಹರಿಯುತ್ತಿವೆ
**********************************
ವ್ಹಾ…ಅದ್ಬುತವಾದ ಗಜಲ್ ಮೇಡಂ
Tq sir