ಗಜಲ್

ಸಿದ್ಧರಾಮ ಕೂಡ್ಲಿಗಿ

silhouette of man standing on rock near body of water during daytime

ನನಸಾದ ಕನಸುಗಳು ಮತ್ತೆ ಕನಸಾದವಲ್ಲ ಅದೆಂಥ ನೋವು
ಕಂಬನಿಯೆಲ್ಲ ಮುತ್ತಾಗಿ ಮತ್ತೆ ಕಂಬನಿಯಾದವಲ್ಲ ಅದೆಂಥ ನೋವು

ಇರುಳ ಕನವರಿಕೆಗಳೆಲ್ಲ ನೆನಪಿನೊಂದಿಗೆ ಉರಿವ ಚಿಕ್ಕೆಗಳಾದವು
ತಣ್ಣಗಿದ್ದ ಚಂದಿರ ಮತ್ತೆ ಉರಿಗೋಳವಾದನಲ್ಲ ಅದೆಂಥ ನೋವು

ನೀ ನಡೆದು ಹೋದ ಹಾದಿಯ ಹೂಗಳೆಲ್ಲ ಮುಖ ಬಾಡಿಸಿದವು
ಮುಳ್ಳುಗಳೆಲ್ಲ ಹೂವಾಗಿ ಮತ್ತೆ ಮುಳ್ಳಾದವಲ್ಲ ಅದೆಂಥ ನೋವು

ಉಲ್ಲಾಸದಿಂದಿದ್ದ ತಂಗಾಳಿಯೂ ಸಹ ಚಂಡಮಾರುತವಾಯಿತು
ತಣ್ಣನೆಯ ಮಳೆಯೂ ಕೆಂಡದ ಮಳೆಯಾಯಿತಲ್ಲ ಅದೆಂಥ ನೋವು

ನಿನ್ನೆದುರು ನಲಿಯುತ್ತಿದ್ದ ಸಿದ್ಧನ ಹೃದಯ ಮಿಡಿತವನ್ನೇ ಮರೆತಿದೆ
ಸಂತಸದಿಂದಿದ್ದ ಉಸಿರು ವೇದನೆಯ ಉಸಿರಾಯಿತಲ್ಲ ಅದೆಂಥ ನೋವು


4 thoughts on “

Leave a Reply

Back To Top