ಗಜಲ್
ಪ್ರಭಾವತಿ ಎಸ್ ದೇಸಾಯಿ
ವಿರಹದುರಿಗೆ ಜೀವವು ಪತಂಗದಂತೆ ಸುಟ್ಟು ಶವವಾಗಲಿ ರಾತ್ರಿ
ಕಂಡ ಕನಸ ಹೂ ದಳಗಳು ಉದುರಿ ಉಸಿರು ಸಮಾಧಿಯಾಗಲಿ ರಾತ್ರಿ
ಎದೆಭಾರವಾಗಿದೆ ನೆನಪಿನ ಗಂಟು ಹೊತ್ತು ಬಂಡಿ ಸಾಗಲಿ ರಾತ್ರಿ
ಬದುಕು ಹಗುರಾಗಲು ಬೆಂದು ಉರಿವ ದೇಹಕೆ ತಂಬೆಳಕಾಗಲಿ ರಾತ್ರಿ
ದಣಿದ ಕಣ್ಣ ರೆಪ್ಪೆಗಳು ನಿಂತು ನಿದ್ದೆಗೆ ಬೇಲಿಯಾಗಲಿ ರಾತ್ರಿ
ಮಧುರ ಗಳಿಗೆಗಳ ಕಾಯುವ ಹೃದಯಗಳು ಒಲಿದು ಒಂದಾಗಲಿ ರಾತ್ರಿ
ಮನದಾಳದಲ್ಲಿ ಎದ್ದ ಪ್ರಶ್ನೆಗಳಿಗೆ ಉತ್ತರವಾಗಲಿ ರಾತ್ರಿ
ನೊಂದ ಜೀವಿಗಳಿಗೆ ಜಗದ ಎಲ್ಲ ಸುಖವು ಅನುಭವವಾಗಲಿ ರಾತ್ರಿ
ಅಗಲಿಕೆ ನೋವು ಹೊದ್ದ ಮೌನ ಸರಿಯಲು ತಂಗಾಳಿಯಾಗಲಿ ರಾತ್ರಿ
ಅಲೆವ ಜೋಗಿಗೆ ಚಂದಿರ”ಪ್ರಭೆ”ಮುಗಿಲ ಪಲ್ಲಂಗವಾಗಲಿ ರಾತ್ರಿ
ಉಸಿರು ಉಸಿರಲಿ ಬೆರೆಸಿ ನಾದ ಹೊರಡಿಸಿದವನೆ ಎಲ್ಲಿ ಮರೆಯಾದೆ
ಒಲಿದ ಹೃದಯ ವೀಣೆ ಮೀಟಿ ಭಾವತುಂಬಿದವನೆ ಎಲ್ಲಿ ಮರೆಯಾದೆ
ಯಮುನೆಯ ಅಲೆಗಳು ಎದೆ ಉಸಿರಾಟ ಏರಿಳಿತ ಎಣಿಸುತಿವೆ ನೋಡು
ವಿರಹ ತಾಪದಲಿ ಮನ ಕಮಲ ಬಾಡಿಸಿದವನೆ ಎಲ್ಲಿ ಮರೆಯಾದೆ
ಯುಗ ಯುಗಗಳಿಂದ ರಾಧೆ ಯಂತೆ ಆರಾಧಿಸುತಿರುವೆ ನಿನ್ನನ್ನು
ಜನುಮ ಜನುಮದ ಪ್ರೀತಿ ಬೆಸುಗೆ ಕಳಚಿದವನೆ ಎಲ್ಲಿ ಮರೆಯಾದೆ
ಅನುರಾಗದ ಎಳೆ ಎಳೆಯಿಂದ ಹೆಣೆದ ಒಲವಿನ ಶಾಲು ಹೊದ್ದಿರುವೆ
ಪ್ರೇಮಿಗಳನು ಜನ ದೂರುವಂತೆ ಮಾಡಿದವನೆ ಎಲ್ಲಿ ಮರೆಯಾದೆ
ಪ್ರೇಮದ ಹಣತೆ ಬತ್ತಿ ಕ್ಷೀಣಿಸದಂತೆ ಕಾಯಬೇಕು ಬಾಳಿನಲಿ
ಒಲವ ತೈಲ ಹಾಕದೆ “ಪ್ರಭೆ” ನಂದಿಸಿದವನೆ ಎಲ್ಲಿ ಮರೆಯಾದೆ
**************************
ಸುಂದರವಾದ ಗಜಲ್ ಮಾ ಮತ್ತೇ ಓದಿಸುವ ಹುಚ್ಚು ಹಚ್ಚುವ ಗಜಲ್..
ಗಜಲ್ ಚೆನ್ನಾಗಿವೆ..
ಚೆಂದ ಭಾವದ ಗಜಲ್ ಗಳು
ಸುಂದರವಾಗಿದೆ
ಬಹಳ ಸೊಗಸಾದ ಗಜಲ್ ಗಳು ಮೆಡಮ್