ಗಜಲ್

ಸ್ಮಿತಾ ಭಟ್

Red Rose, Lost Love, Snow, Winter

ಎದೆಯ ಮಾತುಗಳು ಮೊರೆಯುತ್ತಿದೆ ನನಗೂ ನಿನಗೂ/
ಅಂತರಂಗದ ಆಹ್ವಾನ ಹಿತನೀಡುತ್ತಿದೆ ನನಗೂ ನಿನಗೂ/

ಕಣ್ಣ ಗೊಳದಲಿ ನೂರಾರು ಕನಸುಗಳ ಚಲನವಲನ
ನಭವ ತೋರಿಸಿ ಹಗುರಾಗಬೇಕಿದೆ ನನಗೂ ನಿನಗೂ/

ಆತುಕೊಂಡೇ ಬದುಕುವ ಹಂಬಲ ಕೆರಳುತ್ತದೆ ಕೆಲವೊಮ್ಮೆ
ಸಾಕೆಂದು ಸರಿಸದೆ ಒಳಗೊಳ್ಳುವುದಿದೆ ನನಗೂ ನಿನಗೂ/

ಮೋಹದ ಸೆಳೆತಕೆ ಮನಸೋತ ವಾಂಛೆಯಲ್ಲವಿದು ಗೆಳೆಯಾ
ಈಗಷ್ಟೇ ಹನಿಯಾಗಿದ್ದೇನೆ ಕಡಲಾಗುವುದಿದೆ ನನಗೂ ನಿನಗೂ/

ಪಯಣದ ತಿರುವುಗಳಿಗೆ ಹೆಸರಲಿಗೆಯ ಹಂಗೇಕೆ ದೊರೆಯೇ
ಮರೆಯದೇ ಸರಿ ದಾರಿಯಲಿ ಕೂಡುವುದಿದೆ ನನಗೂ ನಿನಗೂ/

ಮೌನವಾಗಿದ್ದೇ ಮುನ್ನುಡಿ ಬರೆದಾಗಿದೆ ಬದುಕಿಗೆ ಓದಿ ಬಿಡು
ಇಲ್ಲಬಿಡು ಮಾತಾಗಿ ಮನಕದಡುವ ಇರಾದೆ ನನಗೂ ನಿನಗೂ/

ನಿಶ್ಚಿತವಾಗಿದೆ ಕಾಯಲೇಬೇಕೆಂಬ ತಪನೆ “ಮಾದವಾ”
ಕೊಸರದಿರು ಜನ್ಮ ಜನ್ಮದ ಬೆಸುಗೆಯಿದೆ ನನಗೂ ನಿನಗೂ/


ನಿನ್ನ ಅಸಹನೆಯ ಒಂದು ತುಣುಕು ಸಾಕು ಬದುಕು ಸಾಕೆನಿಸಲು/
ನಿನ್ನ ಒಲವಿನ ಒಂದು ಬಿಂದು ಸಾಕು ಕನಸು ತುಂಬಿಕೊಳ್ಳಲು/

ಪ್ರತಿ ಚಣವೂ ನಗುವೇ ಸ್ಪುರಿಸಬೇಕೆಂಬುದು ಅತಿಯಾಯಿತೇನು
ನಿನ್ನ ಇರುವಿಕೆಯ ಒಂದು ಛಾಯೆ ಸಾಕು ನಡೆದು ಸಾಗಲು/

ಮನವೇಕೆ ಸದಾ ತಹತಹಿಸುತ್ತದೆ ನಿನ್ನ ಅನುಪಸ್ಥಿತಿಯಲ್ಲಿ
ಕಳೆದು ಹೋಗುವ ಒಂದು ಮಾತು ಸಾಕು ಮನಸು ಒಡೆಯಲು/

ಮುಗಿಲಿಗೆ ಹಗ್ಗ ಕಟ್ಟಿ ಜೀಕುವ ಹುಚ್ಚು ಸಾಹಸವೇಕೆ ಬೇಕು
ಭರವಸೆಯಲಿ ಚಾಚಿದ ಮರದ ಒಂದು ರೆಂಬೆ ಸಾಕು ಗೂಡು ಕಟ್ಟಲು/

ಅಂತರಂಗದ ಗಾಯಕ್ಕೆ ಒಲವ ಸವರುತ್ತಿರು “ಮಾಧವ”
ನಿನ್ನದೊಂದು ಕುಡಿನೋಟ ಸಾಕು ಮೌನ ಮುರಿಯಲು/

*********************************

2 thoughts on “

Leave a Reply

Back To Top