ಗಜಲ್
ಪ್ರತಿಮಾ ಕೋಮಾರ
ವೈಷಮ್ಯದ ಮನಸುಗಳ ಪ್ರೀತಿಯ ಮಾತಿನಿಂದ ಸೆಳೆಯಬೇಕು ನಾವು
ಒಡೆದ ಕನಸುಗಳ ಬೆಳಕಿನ ದೀಪವಿಟ್ಟು ಹೊಸೆಯಬೇಕು ನಾವು
ತಾಳ್ಮೆಯಿಲ್ಲದ ಬದುಕು ಸರಿಯ ದಡ ಸೇರುವುದೇ?
ವೃಕ್ಷದ ಫಲ ಹಣ್ಣಾಗಿ ಮಾಗುವವರೆಗೆ ಕಾಯಬೇಕು ನಾವು
ಸುಖ ದುಃಖಗಳು ಎಲ್ಲರ ಜೀವನದ ಇಬ್ಬದಿಗಳು
ನೋವ ಕಂಗಳ ಸಾಂತ್ವನದ ಹಾಡಿನಿಂದ ನಗಿಸಬೇಕು ನಾವು
ಸಾಧನೆಯ ಹಾದಿಯಲಿ ಮಲ್ಲಿಗೆಯ ಹಾಸಿರದು ಎಂದಿಗೂ
ಎಡರು ತೊಡರುಗಳನ್ನು ಹಠದಿಂದ ಮೀರಿ ಜಯಿಸಬೇಕು ನಾವು
ಹುಟ್ಟಿದ ಎಲ್ಲಾ ಜೀವಿಗಳು ಬಾಳ ಸವೆಸಿ ಹೋಗುವುವು
ಬಾಡಿದ “ಪ್ರತಿ “ಬದುಕ ಮಾಣಿಕ್ಯವಾಗಿಸಲು ಪ್ರಯತ್ನಿಸಬೇಕು ನಾವು
ಶೂನ್ಯ ಹೃದಯವ ಹದವಾಗಿ ಪ್ರೀತಿಯೆರೆದು ತುಂಬಿಸುವವ ನೀನು
ಪಕ್ಕಕ್ಕಿಟ್ಟ ಕನಸುಗಳ ಹೊಸದಾಗಿ ಹೊಸೆದು ಬಿತ್ತುವವ ನೀನು
ಧರೆಗೆ ಬಿದ್ದ ಬೀಜ ಮೊಳೆಯಲು ತೇವ ಬೇಕಲ್ಲವೇ?
ಕೊನರಿದ ಆಸೆಗಳಿಗೆ ಉದಕವೆರದು ಚಿಗುರಿಸುವವ ನೀನು
ಕಾವು ಹೆಚ್ಚಾದಂತೆ ಚಿಮ್ಮುವ ಚಿಲುಮೆಯು ಕೂಡಾ ಬತ್ತುವುದು
ಬದುಕ ಬಡಿದಾಟದಲ್ಲಿ ಭರವಸೆಯೆರೆದು ಬೇರಿಳಿಸುವವ ನೀನು
ನಂಬಿಕೆಯೇ ನಾಶವಾದರೆ ನಡೆಗೆಲ್ಲಿಹುದು ಗತ್ತು
ಪ್ರತಿ ಹೆಜ್ಜೆಗೂ ಧೈಯ೯ ತುಂಬಿ ನೇಹವೆರದು ನಡೆಸುವವನು ನೀನು
ಹೃದಯಗಿಡಕಿ ತೆರೆದಿದ್ದರೆ ತಾನೇ ಗಾಳಿ,ಬೆಳಕು,ಗಂಧ
ಮುಚ್ಚಿದ ಕವಾಟವ ಹಗುರಾಗಿ ಸರಿಸಿ ಚೈತನ್ಯವೆರೆದು ಬದುಕಿಸುವವ ನೀನು
***********************************