ಗಜಲ್
ಪ್ರಭುಲಿಂಗ ನೀಲೂರೆ
ಬಿಗಿ ಸಾಮೀಪ್ಯ ಇಲ್ಲದೆಯೂ ನೀ ನನ್ನ ಪ್ರಾರ್ಥನೆಯೊಳಗೆ ಅಡಗಿರುವೆ ಮುದ್ದು
ದೇಹ ಬೇರೆಯಾದರೂ ನೀ ನನ್ನ ಉಸಿರೊಳಗೆ ಬೆರೆತಿರುವೆ ಮುದ್ದು
ಎಲ್ಲಿ ನೋಡಿದರಲ್ಲಿ ನಿನ್ನದೆ ಬಿಂಬ ನಾ ಕಾಣುತಿರುವೆ ನನಗೇನಾಗಿದೆ ಹೇಳು
ನಿನ್ನ ಕಂಡಂದಿನಿಂದ ಶಾಶ್ವತವಾಗಿ ನೀ ನನ್ನ ಕಣ್ಣೊಳಗೆ ನೆಲೆಸಿರುವೆ ಮುದ್ದು
ನಮ್ಮ ದೇಹಗಳು ಹತ್ತಿರವಿಲ್ಲದಿದ್ದರೂ ಹೃದಯಗಳು ಎಂದೋ ಒಂದಾಗಿವೆ
ದೂರವಿದ್ದರೂ ಪ್ರತಿಕ್ಷಣ ಮನಸ್ಸಿನೊಳಗೆ ಓಡಾಡುತಿರುವೆ ಮುದ್ದು
ತಲೆ ಬಾಚಿದಾಗಲೆಲ್ಲ ನಿನ್ನ ಬೆರಳುಗಳ ಓಡಾಟ ಕಂಡು ನಾಚಿ ನೀರಾಗುತ್ತೇನೆ
ಬೆಳದಿಂಗಳಲಿ ನೀ ನೀಡಿದ ಮುತ್ತಿಗೆ ಸಾಕ್ಷಿಗೆ ಚಂದಿರನಿಗೆ ಹೇಳಿರುವೆ ಮುದ್ದು
ನಿನ್ನ ಬೆರಳ ತುದಿಯಲಿರುವ ಜಾದುವಿಗೆ ನಾನೇ ಮೈಮರೆತು ಹೋದೆನಲ್ಲ
ಬದುಕುಪೂರ್ತಿ ಹೀಗೆ ಇದ್ದು ಬಿಡು ನಿನ್ನ ಪ್ರೀತಿಗೆ ಸೋತಿರುವೆ ಮುದ್ದು
ಸಮುದ್ರದ ಅಲೆಗಳಂತೆ ಎಡೆಬಿಡದೆ ಎದೆ ಮಿಡಿತ ನಿನ್ನದೇ ಹೆಸರಲ್ಲಿದೆ
ಅದ ಕೇಳಲು ನನ್ನೆದೆಗೆ ತಲೆಯಿಟ್ಟು ಮಲಗಲು ನೀನೆಂದಿಗೆ ಬರುವೆ ಮುದ್ದು
ಎಂದೂ ಪ್ರಭುವಿನ ಕನಸಲ್ಲಿ ಬರಬೇಡ ಎದ್ದ ಕೂಡಲೇ ನೀ ದೂರಾಗುವ ಭಯ
ಸಾವಿರ ಜನುಮಕೂ ನೆನಪುಗಳ ಹೊತ್ತೇ ನಿನಗೆ ಕಾಯುತಿರುವೆ ಮುದ್ದು
ನಾ ಮರೆತರೂ ಆ ನಿನ್ನ ಸಾಲು ಮರೆಯಲು ಬಿಡುತ್ತಿಲ್ಲ ಸಾಕಿ
ಬರೆಯುವ ಪ್ರತಿ ಅಕ್ಷರದಲ್ಲೂ ನೀನೇ ಇಣುಕುವೆಯಲ್ಲ ಸಾಕಿ
ನಡೆದ ದಾರಿಯಲಿ ಜೋಡಿ ಹೆಜ್ಜೆ ಗುರುತು ಕಥೆ ಹೇಳುತಿದೆ ಕೇಳು
ಆಡಿದ ಪ್ರತಿ ಮಾತು ಪ್ರತಿಧ್ವನಿಯಾಗಿ ರಿಂಗಣಿಸುತಿದೆಯಲ್ಲ ಸಾಕಿ
ಅದರಕೆ ಜೇನಿನ ರುಚಿ ತೋರಿ ಮತ್ತೇರಿಸಿದ ಕ್ಷಣ ಕಾಡುತಿದೆ ನೋಡು
ನಿನ್ನ ಕೈ ಕುಂಚವಾಗಿ ಶೃಂಗಾರದ ಚಿತ್ರ ಬಿಡಿಸುವಾಗ ಮೈಮರೆತೆನಲ್ಲ ಸಾಕಿ
ಕನಸಲೂ ನಿನ್ನದೆ ದರ್ಶನ ಹಗಲಿಗಿಂತ ಇರುಳು ಹಿತವೆನಿಸುತಿದೆ
ಮತ್ತೆ ಒಂದಾಗುವ ಕ್ಷಣಕೆ ಕಾಯುತಿರುವೆ ಕೊಟ್ಟ ಭಾಷೆ ಮರೆತಿಲ್ಲ ಸಾಕಿ
ಬದುಕಿನ ಕಾದಂಬರಿಯಲಿ ಪ್ರೀತಿಯ ಅಧ್ಯಾಯ ನೀನಾಗಬೇಕಿದೆ ಒಲವೇ
ಪ್ರಭುವಿನ ಜೊತೆ ಜೀವನಪೂರ್ತಿ ಹೀಗೆಯೇ ಇದ್ದು ಬಿಡು ಪ್ರೀತಿಗೆ ಸಾವಿಲ್ಲ ಸಾಕಿ
***************************
ಈ ಗಜಲ್ ಗಳು ಅದಮ್ಯ ಪ್ರೀತಿಯನ್ನು ವ್ಯಕ್ತಪಡಿಸುತ್ತವೆ, ಭಾವಪೂರಿತ ಸೊಗಸಾದ ಗಜಲ್ ಗಳು
Thumbha chenagidhe
thank u