ಮಹಾತ್ಮಾ ಗಾಂಧೀಜಿಯವರ ಅಸಹಕಾರ ಚಳುವಳಿ ಉತ್ತರ ಕರ್ನಾಟಕ ಭೇಟಿಗೆ ಶತಮಾನ

ಲೇಖನ

ಮಹಾತ್ಮಾ ಗಾಂಧೀಜಿಯವರ ಅಸಹಕಾರ ಚಳುವಳಿ ಉತ್ತರ ಕರ್ನಾಟಕ ಭೇಟಿಗೆ ಶತಮಾನ

ಡಾ. ಎಸ್.ಬಿ. ಬಸೆಟ್ಟಿ

ಒಂದು ಶತಮಾನದ ಹಿಂದಿನ ಕಾಲ ಬ್ರಿಟಿಷ್ ಆಳ್ವಿಕೆಯ ಅತಿರೇಕಗಳಿಂದ ಇಡೀ ಭಾರತವೇ ರೋಸಿಹೋಗಿತ್ತು. ಕಳೆದ ಶತಮಾನದ ಪೂರ್ವಾರ್ಧದಲ್ಲಿ ಪ್ಲೇಗ್, ಕಾಲರಾ, ಸಿಡುಬು, ಸ್ಪಾನಿಶ್ ಪ್ಲೂ ಇತ್ಯಾದಿ ಸಾಂಕ್ರಾಮಿಕ ಸೋಂಕುಗಳು ಜಗತ್ತನ್ನು ಕಂಗೆಡಿಸಿದ್ದವು. ಪ್ಲೇಗ್, ಕಾಲರಾ, ಸಿಡುಬು ಆಗಾಗ ಬರುತ್ತಲೇ ಇದ್ದರೂ ಸ್ಪಾನಿಶ್ ಪ್ಲೂ ಮಾತ್ರ ೧೯೧೮-೧೯ ರ ವೇಳೆ ಒಮ್ಮೆಲೆ ವ್ಯಾಪಕವಾಗಿ ಹರಡಿತು. ಇದು ಹರಡಿದ್ದು ಒಂದನೇ ಮಹಾಯುದ್ಧದಲ್ಲಿ ಪಾಲ್ಗೊಂಡ ಸೈನಿಕರು ಮುಂಬಯಿ ಮೂಲಕ ಹಡಗಿನಲ್ಲಿ ೨೯ನೇ ಮೇ ೧೯೧೮ ರಂದು ಬಂದಾಗ. ಆಗ ಪೋಲಿಸರು, ಮಿಲ್‌ಗಳಲ್ಲಿ ಕೆಲಸ ಮಾಡುವವರು ಸರಕಾರಿ ನೌಕರರು ತೀವ್ರ ಅಸ್ವಸ್ಥರಾದರು. ಎಲ್ಲರೂ ಒಂದೇ ದಿನ ಚಳಿ,ಜ್ವರ, ಮೈಕೈನೋವು ಇತ್ಯಾದಿಗಳಿಂದ ರಜೆ ಹಾಕಬೇಕಾಗಿ ಬಂತು. ಆಗ ರೈಲು ಮಾರ್ಗದಲ್ಲಿ ಸಂಚರಿಸುವವರ ಮೂಲಕ ವೈರಸ್ ಮದ್ರಾಸ್ ಪ್ರಾಂತ್ಯ, ಮುಂಬಯಿ (ಈಗಿನ ಉತ್ತರ ಕರ್ನಾಟಕ), ಹೈದರಾಬಾದ್ ಪ್ರಾಂತ್ಯಗಳಿಗೆ (ಹೈದರಾಬಾದ್ ಕರ್ನಾಟಕ) ಹಬ್ಬಿತು. ರೈಲು ಮೂಲಕ ಕರಾವಳಿಗೂ ತಲುಪಿತು. ಇನ್ನೊಂದೆಡೆ ಧಾರವಾಡ ಕಡೆಯಿಂದಲೂ ಬಂತು. ಕರಾವಳಿ ಕರ್ನಾಟಕದಲ್ಲಿ ಹೊಳೆ ದಾಟಿ ಹೋಗಬೇಕಾಗಿದ್ದು ನೇರ ರಸ್ತೆ ಮಾರ್ಗಗಳಿಲ್ಲದ ಕಾರಣ ವೈರಸ್ ಬೇರೆ ಕಡೆಯಷ್ಟು ತೀವ್ರವಾಗಿ ಬಾಧಿಸಲಿಲ್ಲ. ಆದರೂ ಜನಸಂಖ್ಯೆಯ ಶೇ. ೨% ರಷ್ಟು ಮಂದಿ ಸಾವಿಗೀಡಾಗಿದ್ದರೆಂದು ಅಂದಾಜಿಸಲಾಗಿದೆ. ದೇಶದಲ್ಲಿ ೧ ಕೋಟಿಗೂ, ಜಗತ್ತಿನಲ್ಲಿ ೫ ಕೋಟಿಗೂ ಅಧಿಕ ಜನರು ಸಾವಿಗೀಡಾಗಿದ್ದರು.

            ಪ್ರಥಮ ವಿಶ್ವ ಯುದ್ಧದ ತರುವಾಯ ಭಾರತದ ಜನತೆ ೧೯೧೮-೧೯ರ ಸ್ಪ್ತಾನಿಶ್ ಪ್ಲೂ ಎಂಬ ವಿಶ್ವವ್ಯಾಪಿ ಮಹಾಮಾರಿಯಿಂದ ತತ್ತರಿಸಿ ಹೇಗೋ ಚೇತರಿಕೊಳ್ಳುತ್ತಿರುವಂತೆಯೇ ೧೯೧೯ ರ ಕರಾಳವಾದ ರೌಲೆಟ್ ಕಾಯ್ದೆಯು ಜನತೆಯ ಸ್ವಾತಂತ್ರ್ಯ ವನ್ನು ಮತ್ತಷ್ಟು ಮೊಟಕುಗೊಳಿಸಿತ್ತು. ಆ ವೇಳೆಗೆ ಗಾಂಧೀಜಿ ರೌಲೆಟ್ ಕಾಯ್ದೆಯ ವಿರುದ್ಧವಾಗಿ ೬ನೇ ಎಪ್ರಿಲ್ ೧೯೧೯ ರಂದು ದೇಶವ್ಯಾಪಿ ಸತ್ಯಾಗ್ರಹವನ್ನು ನಡೆಸಿದರು. ಬ್ರಿಟಿಷ್ ಸರಕಾರದ ಆಳ್ವಿಕೆಯಲ್ಲಿನ ದಬ್ಬಾಳಿಕೆಯ ಪರಮಾವಧಿ ಎಂಬಂತೆ ೧೩ನೇ ಎಪ್ರಿಲ್ ೧೯೧೯ ರಂದು ಜನರಲ್ ಡೈಯರನು ಎಸಗಿದ ಜಲಿಯನ್ ವಾಲಾಬಾಗ್ ಹತ್ಯಾಕಾಂಡವು ಮಾನವತೆಯ ಸಾಕ್ಷೀಪ್ರಜ್ಞೆಯನ್ನೇ ಅಲುಗಾಡಿಸಿ ಹಾಕಿತ್ತು. ಈ ಘಟನೆಯಿಂದ ಭಾರತದ ಮೂಲೆ ಮೂಲೆಗಳಲ್ಲಿ ಜನರು ಶೋಕ ತಪ್ತರಾದರು. ಹಾಗೂ ಬ್ರಿಟಿಷ್ ಆಳ್ವಿಕೆಯನ್ನು ಕೊನೆಗಾಣಿಸಲು ಹೊಸದಾಗಿ ಚಳುವಳಿಯನ್ನು ನಡೆಸಲು ದೃಢವಾದ ಸಂಕಲ್ಪವನ್ನು ಮಾಡಿದರು. ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ಬ್ರಿಟೀಷ್ ಸರಕಾರ ಯಾವ ಮಟ್ಟಕ್ಕೂ ಇಳಿದು ಪಾಶವೀಕೃತ್ಯಗಳನ್ನು ಹಾಗೂ ಅನಾಚರಗಳನ್ನೂ ಮಾಡಬಲ್ಲದು ಎಂದು ಗಾಂಧೀಜಿಯ ಮನಸ್ಸಿನಲ್ಲಿ ಅಹಿಂಸಾತ್ಮಕವಾದ ಅಸಹಕಾರ ಚಳುವಳಿಯ ಯೋಜನೆಯು ಮೂಡಿತು. ಅವರು ಅದನ್ನು ಅವರ ಸತ್ಯಾಗ್ರಹದ ಪಥದಲ್ಲಿ ಹಂತಹಂತವಾಗಿ ರೂಪಿಸಿದರು.

            ಈ ಚಳುವಳಿಯು ೧ನೇ ಅಗಸ್ಟ್ ೧೯೨೦ ರಂದು ಆರಂಭವಾಗುವ ಹೊತ್ತಿನಲ್ಲಿ ಲೋಕಮಾನ್ಯ ತಿಲಕರು ಕಾಲವಾದರು. ದೇಶವು ಶೋಕದಲ್ಲಿ ಮುಳುಗಿದ್ದರೂ, ಲೋಕಮಾನ್ಯರ ಸ್ಮರಣೆಯೊಂದಿಗೆ ಗಾಂಧೀಜಿಯ ನಾಯಕತ್ವದಿಂದ ಜನತೆಯಲ್ಲಿ ಮಹಾಜಾಗೃತಿಯು ಉಂಟಾಯಿತು. ಹಿಂದೂಗಳು ಹಾಗೂ ಮುಸಲ್ಮಾನರು ಅಲ್ಲದೇ ಎಲ್ಲಾ ಮತಧರ್ಮದವರೂ ಒಂದಾಗಿ ಅಸಹಕಾರ ಚಳುವಳಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದರು. ಅಸಹಕಾರದ ಮೊದಲ ಹೆಜ್ಜೆಯಾಗಿ ಗಾಂಧೀಜಿ ತಮಗೆ ಸರಕಾರ ಕೊಟ್ಟಿದ್ದ ಕೈಸರ್-ಎ-ಹಿಂದ್ ಮತ್ತಿತರ ಪದಕಗಳನ್ನು ಹಿಂತಿರುಗಿಸಿದರು. ಅಖಿಲ ಭಾರತ ಮಟ್ಟದಲ್ಲಿ ಯಾವುದೇ ಭೇದ ಬಂಧವಿಲ್ಲದೇ ಮಹಿಳೆಯರು ಮಕ್ಕಳೂ ಸೇರಿದಂತೆ ಎಲ್ಲಾ ವರ್ಗಗಳ ಜನರು ಈ ಚಳುವಳಿಯಲ್ಲಿ ಸಹಜವಾಗಿ ಭಾಗವಹಿಸಲು ಅವಕಾಶ ಇದ್ದಿತು.

ದೇಶ ಕಟ್ಟುವ ಕೆಲಸಕ್ಕಾಗಿ ಧನ – ಜನ ಸಂಗ್ರಹಿಸಲು ಮತ್ತು ನಿದ್ರಿಸುತ್ತಿದ್ದ ಭಾರತವನ್ನು ಎಚ್ಚರಿಸಲು ಗಾಂಧೀಜಿ ದೇಶದ ಉದ್ದಗಲಕ್ಕೂ ಉತ್ಸಾಹದ ಚಿಲುಮೆಯಂತೆ ಓಡಾಡುತ್ತಿದ್ದರು. ವಿಮಾನಯಾನ ಹೊರತುಪಡಿಸಿ ಉಳಿದೆಲ್ಲ ಸಂಪರ್ಕ ಸಾಧನಗಳಾದ ಕಾಲ್ನಡಿಗೆ, ಎತ್ತಿನಬಂಡಿ, ಕುದುರೆಗಾಡಿ, ರೈಲು, ದೋಣಿ ಹಾಗೂ ಹಡಗುಗಳಲ್ಲಿ ಸಂಚರಿಸಿದರು. ಹಾಗೆಯೇ ಕರ್ನಾಟಕಕ್ಕೂ ಗಾಂಧೀಜಿ ಹಲವು ಸಲ ಬಂದರು. ಕರ್ನಾಟಕದ ಉದ್ದಗಲಕ್ಕೂ ಅವರ ಅಭಿಮಾನಿಗಳು, ಆತ್ಮೀಯ ಸ್ನೇಹಿತರು ಹಾಗೂ ಕಾರ್ಯಕರ್ತರು ಹರಡಿದ್ದರು. ಉತ್ತರ ಕರ್ನಾಟಕ ಜನರು ಭಾರತದ ಸ್ವಾತಂತ್ರ್ಯ  ಚಳುವಳಿಯಲ್ಲಿ ಗಾಂಧೀಜಿಯವರಿಗೆ ಹೆಗಲಿಗೆ ಹೆಗಲು ಕೊಟ್ಟವರು. ಸ್ವಾತಂತ್ರ್ಯ  ಆಂದೋಲನ ಸಂಪೂರ್ಣ ಜಯದಲ್ಲಿ ಉತ್ತರ ಕರ್ನಾಟಕ ಜನರು ಪಾಲು ಇದೆ. ಅಂತೆಯೇ ಗಾಂಧೀಜಿ ಯುಗದ ಪ್ರಥಮ ಮಹಾ ಆಂದೋಲನವಾದ ಅಸಹಕಾರ ಚಳುವಳಿಯ ಉತ್ತರ ಕರ್ನಾಟಕದಲ್ಲಿ ಶತಮಾನದ ನೆನಪನ್ನು ಕೂಡಾ ಈ ವರ್ಷ (೨೦೨೦) ಮಾಡಿಕೊಳ್ಳುತ್ತಿದ್ದೇವೆ. ಆ ನೆನಪಿನಲ್ಲಿ ಗಾಂಧೀ ಹೆಜ್ಜೆಯನ್ನು, ಚಿಂತನೆಯನ್ನೂ ಸ್ಮರಿಸೋಣ.

 ಗಾಂಧೀಜಿ  ಕರ್ನಾಟಕಕ್ಕೆ ಐದನೇ ಭೇಟಿ (೮, ೯, ೧೦, ೧೧ನೇ ನವ್ಹಂಬರ್ ೧೯೨೦ರಲ್ಲಿ) :

            ಕರ್ನಾಟಕದ ಮೊದಲನೆ ಮುಕ್ಕಾಂ ನಿಪ್ಪಾಣಿ ಎಂದು ಗೊತ್ತಾಗಿತ್ತು. ನಿಪ್ಪಾಣಿ ಅಲ್ಲಿಂದ ಚಿಕ್ಕೋಡಿ, ಹುಕ್ಕೇರಿ, ಸಂಕೇಶ್ವರಗಳ ಪ್ರವಾಸ ಮುಗಿಸಿಕೊಂಡು ಬೆಳಗಾವಿಗೆ ಬಂದರು. ಈ ಬೆಳಗಾವಿ ಭೇಟಿ ಮುಂದಿನ ೧೯೨೪ ಅಧಿವೇಶಕ್ಕೆ ಪೀಠಿಕೆಯಾಯಿತು.

 ನಿಪ್ಪಾಣಿ ಭೇಟಿ(೮ನೇ ನವೆಂಬರ್ ೧೯೨೦ರಲ್ಲಿ) :

            ಬೆಂಗಳೂರು ಪ್ರವಾಸದ ಎರಡೂವರೆ ತಿಂಗಳ ನಂತರ ಅಂದರೆ ೮ನೇ ನವೆಂಬರ್ ೧೯೨೦ ರಂದು ನಿಪ್ಪಾಣಿಗೆ ಬಂದ ಗಾಂಧೀಜಿ ಚಿಕ್ಕೋಡಿ, ಹುಕ್ಕೇರಿ ಹಾಗೂ ಸಂಕೇಶ್ವರದ ಮೂಲಕ ಬೆಳಗಾವಿ ತಲುಪಿದರು.  ಆಗ್ಗೆ ಬ್ರಾಹ್ಮಣ-ಬ್ರಾಹ್ಮಣೇತರ ಎಂಬ ಭಾವನೆ ಬೆಳೆದು ಅಲ್ಲಲ್ಲಿ ವಾತಾವರಣ ಕದಡಿತ್ತು. ನಿಪ್ಪಾಣಿಯ ಸಾರ್ವಜನಿಕ ಸಭೆಯಲ್ಲಿ ಮಾರುತಿರಾಯ ಎಂಬುವರು ಈ ವಿಷಯವನ್ನು ಎತ್ತಿದರು. ಗಾಂಧೀಜಿ ಈ ಬಗ್ಗೆ ಮಾತನಾಡುತ್ತಾ ಹೇಳಿದ ಅರ್ಥ ಹೀಗಿದೆ:

ಇಡೀ ಬ್ರಾಹ್ಮಣ ಸಮಾಜವನ್ನು ದ್ವೇಷಿಸಿ ಅವರಿಂದ ದೂರ ಇರುವುದು ಆತ್ಮಘಾತಕತನ. ನಮ್ಮಲ್ಲಿರುವ ಯಜ್ಞ, ತ್ಯಾಗ, ತಪಸ್ಸು ಮುಂತಾದ ಅಭಿಪ್ರಾಯಗಳೆಲ್ಲ ನಮಗೆ ಬಂದ್ದು ಬ್ರಾಹ್ಮಣರಿಂದಲೇ. ಪ್ರಪಂಚದಲ್ಲಿ ಬ್ರಾಹ್ಮಣರಷ್ಟು ತ್ಯಾಗ ಮಾಡಿದರು ಬೇರೆ ಯಾರೂ ಇಲ್ಲ.  ಈ ಮಾತು ಈ ಕಲಿಯುಗದಲ್ಲಿಯೂ ಅನ್ವಯಿಸುವಂತಿದೆ. ಕುಡಿಯುವ ಹಾಲಿನಲ್ಲಿ ಏನಾದರೂ ಕೊಳೆ ಇದ್ದರೆ ಕೂಡಲೇ ಕಾಣುತ್ತದೆ. ಅದೇ ಕೊಳಕು ಪದಾರ್ಥದಲ್ಲಿ ಎಷ್ಟಿದ್ದರೂ ತಿಳಿಯುವುದಿಲ್ಲ. ಆದ್ದರಿಂದ ಅವರಲ್ಲಿ ಏನೇ ಲೋಪದೋಷ ಇದ್ದರೂ ಕೂಡಲೇ ನಮ್ಮ ಗಮನವನ್ನು ಸೆಳೆಯುತ್ತದೆ. ಬ್ರಾಹ್ಮಣರ ಅಲ್ಪ ದೋಷಗಳನ್ನು ದೊಡ್ಡದು ಮಾಡಿ ಹೇಳುವುದೇ ಅವರ ಯೋಗ್ಯತೆಗೆ ಸಾಕ್ಷಿ ಎಂದು ನನ್ನ ಭಾವನೆ. ಬ್ರಾಹ್ಮಣರಷ್ಟು ತಪಸ್ಸು ಮಾಡಿದವರು ಯಾವ ದೇಶದಲ್ಲಿಯೂ ಇಲ್ಲ. ಆದ್ದರಿಂದ ಬ್ರಾಹ್ಮಣರ ತಪ್ಪು ಎಣಿಸುವಾಗ ವಿವೇಕ ಇರಬೇಕು. ಅವರೊಂದಿಗೆ ಅಸಹಕಾರ ಎಂದರೆ ಆತ್ಮನಾಶವೇ. ಜಗತ್ತಿಗೆ ಅವರು ಮಾಡಿದ ಸೇವೆಯನ್ನು ಒಪ್ಪಿಕೊಂಡು ಅವರೊಡನೆ ಸಹಕರಿಸುವುದೇ ಸರಿಯಾದ ದಾರಿ ಇತ್ಯಾದಿಯಾಗಿ ಹೇಳಿದರು ಎಂದು  ಶ್ರೀ ಮಹಾದೇವ ದೇಸಾಯಿ ವರದಿ ಮಾಡಿದ್ದಾರೆ.

ಬೆಳಗಾವಿ ಭೇಟಿ(೯ನೇ ನವೆಂಬರ್ ೧೯೨೦ರಲ್ಲಿ) :

ಗಾಂಧೀಜಿ ನಿಪ್ಪಾಣಿಯಿಂದ ಬೆಳಗಾವಿಗೆ ಬಂದರು. ಮರುದಿವಸ (೦೯-೧೧-೧೯೨೦) ಅಂದಿನ ಸಭೆಯ ವ್ಯವಸ್ಥೆ ವಹಿಸಿಕೊಂಡಿದ್ದವರು ಮಳಗಿ ಗೋವಿಂದರಾಯರು. ೧೫ ಸಾವಿರಕ್ಕೂ ಮೇಲ್ಪಟ್ಟು ಜನ ಆ ಸಭೆಗೆ ಆಗಮಿಸಿದ್ದರು. ಅಷ್ಟು ದೊಡ್ಡ ಸಭೆ ಆವರೆಗೆ ಅಲ್ಲಿ ನಡೆದಿರಲಿಲ್ಲ. ಮೌಲಾನ ಶೌಕತ್ ಅಲಿಯವರಿಗೂ ಮತ್ತು ಗಾಂಧೀಯವರಿಗೂ ಬೆಳ್ಳಿಯ ಕರಂಡಕದಲ್ಲಿ ಮಾನ ಪತ್ರ ಅರ್ಪಿಸಲಾಯಿತು.  ಸಭೆಯಲ್ಲಿ ಒಂದು ಸಾವಿರ ರೂಪಾಯಿ ನಿಧಿ ಕೂಡಿತು. ನಂತರ ಅಲ್ಲಿನ ಮಾರುತಿ ಗುಡಿಯಲ್ಲಿ ಮಹಿಳೆಯರ ಸಭೆ ನಡೆಯಿತು.

ಬೆಳಗಾವಿಯಲ್ಲಿ  ಮಹಿಳೆಯರ ಸಭೆ (೯ನೇ ನವ್ಹಂಬರ್ ೧೯೨೦)  :

            ಮಹಿಳೆಯರ ಸಭೆ ಮಾರುತಿ ಗುಡಿಯಲ್ಲಿ ನಡೆಯಿತು. ಸಭೆಯಲ್ಲಿ ಗಾಂಧೀಜಿ ಹೀಗೆ ಹೇಳಿದರು : ಈ ಗುಡಿಯಲ್ಲಿ ನಿಮ್ಮೆಲ್ಲರ ದರ್ಶನದಿಂದ ನಾನು ಪುನೀತನಾದೆ. ಎಲ್ಲಕ್ಕಿಂತ ನನಗೆ ಹೆಚ್ಚು ಸಂತೋಷ ನನ್ನ ಗೆಳೆಯ ಶೌಕತ್ ಅಲಿಯನ್ನು ನೀವು ನೋಡಬಯಸಿದ್ದು. ಅವರು ದಣಿದು ಸ್ವಲ್ಪ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ನೀವು ನೋಡಬಯಸಿದ ಕಾರಣ ಆತನಿಗೆ ಹೇಳಿಕಳುಹಿಸಿ ಕರೆದುಕೊಂಡು ಬಂದೆ. ಈ  ನಿಮ್ಮ ಸದ್ಭಾವನೆಯಲ್ಲಿ ಭಾರತದ ಗೆಲುವು ಅಡಗಿದೆ. ನಮ್ಮ ಹಿಂದೂ ಹೆಂಗಸರೂ ಮುಸ್ಲಿಂರನ್ನು ಅಣ್ಣ-ತಮ್ಮಂದಿರೆಂದು ಎಲ್ಲಿಯವರೆಗೆ ತಿಳಿಯುವುದಿಲ್ಲವೋ ಅಲ್ಲಿಯವರೆಗೆ ನಮ್ಮ ದುರದೃಷ್ಟ  ನೀಗದು. ಈ ದೇವಸ್ಥಾನದಲ್ಲಿ ಕುಳಿತು ನಿಮ್ಮ ಮನಸ್ಸನ್ನೂ ನೋಯಿಸಲು ನನಗೆ ಇಷ್ಟವಿಲ್ಲ. ನಾನು ಒಬ್ಬ ಸನಾತನಿ ಹಿಂದೂ. ಬೇರೆ ಯಾವ ಧರ್ಮವನ್ನೂ ತಿರಸ್ಕರಿಸಬಾರದೆಂದು ಅಗೌರವದಿಂದ ಕಾಣಬಾರದೆಂದು ನನ್ನ ಹಿಂದೂಧರ್ಮ ನನಗೆ ಹೇಳಿಕೊಟ್ಟಿದೆ. ಎಲ್ಲಿಯವರೆಗೆ ನಾವು ಇತರ ಮತದವರನ್ನು ಪ್ರೀತಿಸುವುದಿಲ್ಲವೋ ನಮ್ಮ ನೆರೆಹೊರೆಯವರನ್ನೂ ಪ್ರೀತಿಸುವುದಿಲ್ಲವೋ ಅಲ್ಲಿಯವರೆಗೆ ನಮ್ಮ ದೇಶ ಕ್ಷೇಮ ಸಾಧ್ಯವಾಗದು ಎಂದು ನನಗೆ ಗೊತ್ತಾಗಿದೆ. ನಮ್ಮ ರೂಢಿಗಳನ್ನು ಬದಲಾಯಿಸಿ, ಮುಸಲ್ಕಾನರ ಜೊತೆಗೆಯಲ್ಲಿ ಊಟಮಾಡಿ ಅವರನ್ನು ಮದುವೆ ಮಾಡಿಕೊಳ್ಳಿ ಎಂದು ಹೇಳಲು ನಾನು ಇಲ್ಲಿಗೆ ಬಂದಿಲ್ಲ. ಆದರೆ ಪ್ರತಿಯೊಬ್ಬ ಮನುಷ್ಯನನ್ನೂ ಪ್ರೀತಿಸಬೇಕು ಎಂದು ಹೇಳಲು ಬಂದಿದ್ದೇನೆ. ಇತರ ಮತಗಳ ಜನರನ್ನು ಪ್ರೀತಿಸಬೇಕೆಂದು ನಿಮ್ಮ ಮಕ್ಕಳಿಗೆ ಹೇಳಿಕೊಡಲು ಬೇಡುತ್ತೇವೆ.

            ದೇಶಧ ಆಗುಹೋಗುಗಳನ್ನು ರಾಷ್ಟ್ರೀಯ ವಿದ್ಯಮಾನಗಳನ್ನು ಅರಿತುಕೊಳ್ಳಬೇಕೆಂದು ನಿಮ್ಮನ್ನು ಪ್ರಾರ್ಥಿಸುತ್ತೇನೆ. ಇದಕ್ಕಾಗಿ ನೀವು ಉನ್ನತ ವಿದ್ಯಾ ವ್ಯಾಸಂಗ ಮಾಡಬೇಕಾದ್ದಿಲ್ಲ. ದೊಡ್ಡ ಗ್ರಂಥಗಳನ್ನು ಓದಬೇಕಾಗಿದ್ದಿಲ್ಲ. ನಮ್ಮ ಸರಕಾರ ರಾಕ್ಷಸಿ ಸರಕಾರ ಎಂದು ಹೇಳುತ್ತೇನೆ. ಸರಕಾರ ನಮ್ಮ ಮುಸ್ಲಿಂ ಸೋದರರ ಭಾವನೆಯನ್ನು ತುಂಬಾ ಗಾಸಿಗೊಳಿಸಿದೆ.

            ಪಂಜಾಬಿನಲ್ಲಿ ಸ್ತ್ರೀ-ಪುರುಷರ ಮೇಲೆ, ಮಕ್ಕಳ ಮೇಲೆ ಮಾಡಿದ ಭಯಂಕರ ಅತ್ಯಾಚಾರಗಳನ್ನು ಹೇಳಲು ಸಾಧ್ಯ ಇಲ್ಲ. ಈ ಸರಕಾರ ತನ್ನ ತಪ್ಪನ್ನು ಒಪ್ಪಿಕೊಳ್ಳದು. ಪರಿತಾಪ ಪಡೆದು ನಮ್ಮನ್ನೇ ತಿರುಗಿ ಕೇಳುತ್ತದೆ. ಈ ಕ್ರೌರ್ಯವನ್ನೆಲ್ಲ ಮರೆತು ಬಿಡಿ ಎಂದು ಆದ್ದರಿಂದಲೇ ಇದನ್ನು ರಾಕ್ಷಸಿ ಸರಕಾರ ಎನ್ನುತ್ತೇನೆ. ಈಗ ನಮ್ಮ ಜನರು ಎಲ್ಲರೂ ಅಸಹಕಾರ ಮಾಡಬೇಕು. ರಾವಣನೊಂದಿಗೆ ಸೀತೆ ಅಸಹಕರಿಸಲಿಲ್ಲವೇ ? ರಾಮಚಂದ್ರ ಅಸಹಕರಿಸಲಿಲ್ಲವೇ ? ರಾವಣ ಎಷ್ಟು ಪ್ರಲೋಭನಗೊಳಿಸಿದ ಸೀತೆಯನ್ನು ಮತ್ತು ರತ್ನಗಳನ್ನು ಕಳಿಸಿದ ಸೀತೆ ಅದು ಯಾವುದನ್ನೂ ಕಣ್ಣೆತ್ತಿ ಕೂಡ ನೋಡದೆ, ರಾವಣನ ಹಿಡಿತದಿಂದ ತಪಿಸಿಕೊಳ್ಳಲು ಕಟ್ಟು ನಿಟ್ಟಾದ ತಪಶ್ಚರ್ಯೆ ಮಾಡಿದಳು. ಮುಕ್ತಳಾಗುವವರೆಗೆ ಒಳ್ಳೆಯ ಬಟ್ಟೆ ಉಡಲಿಲ್ಲ. ಒಡವೆ ತೊಡಲಿಲ್ಲ. ರಾಮ-ಲಕ್ಷ್ಮಣರಿಬ್ಬರೂ ಎಷ್ಟು ತಪಸ್ಸು ಮಾಡಿದರು. ಅವರ ಇಂದ್ರಿಯ ಸಂಯಮ ಎಷ್ಟು ? ಬರೀ ಹಣ್ಣು ಹಂಪಲು ತಿನ್ನುವ ಬ್ರಹ್ಮಚರ್ಯ ವ್ರತನಿಷ್ಠರಾಗಿ ಕಾಲ ಕಳೆದರಲ್ಲ. ಈ ದಬ್ಬಾಳಿಕೆಯ ಸರಕಾರ ನಮ್ಮ ಬೆನ್ನಿನಮೇಲೆ ಸವಾರಿ ಮಾಡುತ್ತಿರುವವರೆಗೆ ಗಂಡಸಿಗಾಗಲಿ, ಹೆಂಗಸಿಗಾಗಲಿ ಒಳ್ಳೆಯ ಬಟ್ಟೆ ಬರೆ ಉಡಲು ಒಳ್ಳೆಯ ಒಡವೆ  ತೊಡಲು ಅಧಿಕಾರವೇ ಇಲ್ಲ. ಭಾರತ ಸ್ವಾತಂತ್ರ್ಯ  ಆಗುವವರೆಗೆ, ಮುಸಲ್ಮಾನರ ಗಾಯಗಳು ಮಾಯುವವರೆಗೆ ನಾವೆಲ್ಲರೂ ಫಕೀರರ ಹಾಗೆ ಇರಬೇಕು. ಕಷ್ಟ-ಸಹನೆಯ  ಬೇಗೆಯಲ್ಲಿ ನಮ್ಮ ಶ್ರೀಮಂತಿಕೆ ನಮ್ಮ ವಿಲಾಸ ಭೋಗಗಳನ್ನು ಸುಡಬೇಕು. ನಿಮ್ಮ ಸುಖಭೋಗಗಳನ್ನು ಬಿಟ್ಟು ಕಠಿಣ ತಪಶ್ಚರ್ಯೆಯನ್ನು ಅವಲಂಬಿಸಿ ನಿಮ್ಮ ಚಿತ್ತವನ್ನು ಶುದ್ಧವಾಗಿಟ್ಟುಕೊಳ್ಳಬೇಕೆಂದು ವಿನಯದಿಂದ ಪ್ರಾರ್ಥಿಸುತ್ತೇನೆ.

            ೫೦ ವರ್ಷಗಳ ಹಿಂದೆ ನಮ್ಮ ಎಲ್ಲರೂ ರಾಟಿ ತಿರುಗಿಸುತ್ತಿದ್ದರು. ಕೈನೂಲಿನ ಬಟ್ಟೆ ಉಡುತ್ತಿದ್ದರು. ಹೆಂಗಸರಿಗೆ ನಿಮಗೆ ಹೇಳುತ್ತೇನೆ ಎಂದು ನಾವು ಸ್ವದೇಶಿ ಧರ್ಮವನ್ನು ಕೈಬಿಟ್ಟೆವೋ ಅಂದೇ ನಮ್ಮ ಪತನ ಪ್ರಾರಂಭವಾಯಿತು. ನಾವು ಗುಲಾಮರಾದೆವು. ದೇಶದಲ್ಲಿ ಎಲ್ಲ ಕಡೆಯಲ್ಲಿಯೂ ಜನರು ಹಸಿವಿನಿಂದ ಸಾಯುತ್ತಿದ್ದಾರೆ. ಉಡಲು ಬಟ್ಟೆ ಇಲ್ಲದೆ ಬೆತ್ತಲೆ ಹೋಗುತ್ತಿದ್ದಾರೆ. ಪರಿಸ್ಥಿತಿ ಹೀಗಿದೆ. ನೀವು ಪ್ರತಿಯೊಬ್ಬರೂ ದಿನವೂ ಒಂದು ಗಂಟೆ ಹೊತ್ತು ನೂತು ಆ ನೂಲನ್ನು ದೇಶಕ್ಕೆ ದಾನ ಕೊಡಬೇಕು ಎಂದು ಬೇಡುತೇನೆ. ಕೆಲವು ಕಾಲ ನಿಮಗೆ ಸೊಗಸಾದ ಬಟ್ಟೆ ಸಿಗಲಿಕ್ಕಿಲ್ಲ. ಆದರೆ ಸೊಗಸಾದ ನೂಲನ್ನು ನೂಲಲು ಕಲಿತರೆ ಆಗ ಅದು ಸಿಕ್ಕೇ ಸಿಗುತ್ತದೆ. ಆದರೆ ದೇಶ ಗುಲಾಮಗಿರಿಯಲ್ಲಿರುವ ತನಕ ಒಳ್ಳೆ ಬಟ್ಟೆಯನ್ನು ಉಡುವ ಯೋಚನೆಯನ್ನೇ ಮಾಡಬಾರದು. ಒಳ್ಳೆಯ ನೂಲನ್ನು ನೂಲಲು ಸಮಯ ಬಹಳ ಬೇಕು. ಈಗಲೋ ನಮಗೆ ಘಳಿಗೆ ಘಳಿಗೆಯೂ ಅತ್ಯಮೂಲ್ಯ.

            ನಿಮಲ್ಲಿ ಸ್ವಾರ್ಥತ್ಯಾಗವನ್ನು ನಾನು ಪ್ರಚೋದಿಸಬಲ್ಲೆನಾದರೆ ದೇಶಕ್ಕಾಗಿ ನಿಮ್ಮ ಕೈಮೇಲಿರುವ ಎಲ್ಲ ಒಡವೆಗಳನ್ನು ಸುಲಿದುಕೊಳ್ಳಲು ನಾನು ಹಿಂಜರಿಯೆ. ಆದ್ದರಿಂದ ಬಂದ ಹಣವನ್ನು ದೇಶಪಾಂಡೆ ಗಂಗಾಧರರಾಯರು ರಾಷ್ಟ್ರೀಯ ವಿದ್ಯಾಭ್ಯಾಸಕ್ಕೆ ಸ್ವದೇಶಿ ಪ್ರಚಾರಕ್ಕೆ ಉಪಯೋಗಿಸುತ್ತಾರೆ. ಈ ದೇವಾಲಯಕ್ಕೆ ಹಣ ಹೇಗೆ ನೀಡುತ್ತೀರೋ ಅದೇ ಭಾವನೆಯಿಂದ ದೇಶಕ್ಕಾಗಿ ನೀಡಿ. ಕಟುಕನ ಕೈಗೆ ಸಿಕ್ಕ ಬಡ ಹಸುವಿನಂತೆ ಆಗಿದೆ ಭಾರತ. ಅದನ್ನು ಬಿಡಿಸುವುದು ನನ್ನ ಕರ್ತವ್ಯ ನಿಮ್ಮ ಕರ್ತವ್ಯ.

            ಕಟ್ಟಕಡೆಯಲ್ಲಿ ನಿಮ್ಮನ್ನು ಒಂದು ಮಾತು ಕೇಳುತ್ತೇನೆ. ಶೌಕತ್ ಅಲಿ, ಗಂಗಾಧರ ರಾಯರು, ನಾನು ಯಾವ ಕೆಲಸ ಮಾಡುತ್ತಿದ್ದೇವೋ ಅದನ್ನು ಹರಸಿ, ಯಾರೂ ಯಾವ ತಂಗಿಯೂ ಏನೋ ದಾಕ್ಷಿಣ್ಯಕ್ಕೊಳಗಾಗಿ ತನ್ನ ಆಭರಣವನ್ನು ಕಳಚಿಕೊಡದೇ ಇರಲಿ. ನಿಮ್ಮ ಮನಸ್ಸಿನಲ್ಲಿ ಇದು ಪವಿತ್ರ ಕಾರ್ಯ. ಇದು ಕರ್ತವ್ಯ ಎನಿಸಿದರೆ ಮಾತ್ರ ನೋಡಿ. ದೇವರು ನಿಮಗೆ ಧೈರ್ಯವನ್ನು ಪರಿಶುದ್ಧತೆಯನ್ನು ಕೊಟ್ಟು, ದೇಶಕ್ಕಾಗಿ ತ್ಯಾಗ ಮಾಡುವ ಮನೋಭಾವನೆಯನ್ನು ಕೊಡಲಿ.     

            ಅಂದಿನ ಮಹಿಳೆಯರ ಸಭೆಯಲ್ಲಿ ಎರಡು ಸಾವಿರ ರೂಪಾಯಿಗೆ ಕಡಿಮೆಯಿಲ್ಲದೆ ಆಭರಣಗಳು ಬಂದವು. ಜೊತೆಗೆ ಸ್ವಲ್ಪ ನಗದು ಹಣವೂ ಬಂತು.

ಬೆಳಗಾವಿಯಲ್ಲಿ ಬಹಿರಂಗ ಸಭೆ  (೯ನೇ ನವ್ಹಂಬರ್ ೧೯೨೦)  :

            ಈ ಸಾರ್ವಜನಿಕ ಬಹಿರಂಗ ಸಭೆಯಲ್ಲಿ  ಗಾಂಧೀಜಿ ಹೀಗೆ ಹೇಳಿದರು : ಮಾರುತಿ ಗುಡಿಯಲ್ಲಿ ನಾನು ಕಂಡ ದೃಶ್ಯದಿಂದ ನನ್ನ ಮೇಲಾದ ಪ್ರಭಾವವನ್ನು ಶಬ್ದಗಳಿಂದ ವರ್ಣಿಸಲಾರೆ. ಪೂನಾದಲ್ಲಿಯೂ ನನಗೆ ಇಂಥದೇ ಅನುಭವ ಆಗಿತ್ತು. ಜನ ತಮ್ಮ ಪ್ರೀತಿಯನ್ನು ತಮ್ಮ ಒಡವೆಗಳನ್ನು ನನ್ನ ಮೇಲೆ ಮಳೆಗರೆದರು. ಅವರಿಗೆ ಗೊತ್ತು ರಾಮರಾಜ್ಯ ಪಡೆಯಲು ಸ್ವರಾಜ್ಯ ಸಂಪಾದಿಸಲು ನಾನು ಒಡವೆಗಳನ್ನು ಕೇಳಿದ್ದೇನೆ. ನಮ್ಮ ಕೋಟೀಶ್ವರರು ಇದಕ್ಕೆ ಸಮನಾಗಿ ಏನೂ ಕೊಟ್ಟಿಲ್ಲ. ಅವರ ಕಾಲಿಗೆ ಬಿದ್ದು ದಾನ ಕೇಳಿದಾಗ ಸ್ವಲ್ಪ ಅವರ ಮನಸ್ಸು ಕರಗಬಹುದು ಅಷ್ಟೇ. ಹೆಂಗಸರಿಗೆ ನಾನು ಏನೂ ಭಿನ್ನಹ ಮಾಡಬೇಕಾಗಲಿಲ್ಲ. ಸ್ವಯಂ ಪ್ರೇರಣೆಯಿಂದ ಪ್ರೀತಿಯಿಂದ ನಾನು ಕೇಳಿದ್ದೇನ್ನೆಲ್ಲ ಕೊಟ್ಟರು. ಈ ಪ್ರೀತಿಯ ಕಾಣಿಕೆಗೆ ಕೋಟಿಗಟ್ಟಲೇ ದಾನ ಸಮ ಅಲ್ಲ.

            ಶಹಾಪುರದಲ್ಲಿ ಜನರು ನಿಧಿ ಅರ್ಪಿಸಿದ್ದು. ಆನಂತರ ಖಾನಾಪುರ, ನಂದಗಡ, ಅಳ್ನಾವರ, ಹಳ್ಯಾಳಗಳ ಪ್ರವಾಸ ಮುಗಿಸಿಕೊಂಡು ಮರುದಿವಸ ೧೦ನೇ ನವ್ಹಂಬರ ೧೯೨೦ರಂದು ಗಾಂಧೀಜಿ ಧಾರವಾಡಕ್ಕೆ ತೆರಳಿದರು.

 ಧಾರವಾಡ ಭೇಟಿ (೧೦ನೇ ನವ್ಹಂಬರ ೧೯೨೦ರಂದು):

            ಧಾರವಾಡಕ್ಕೆ ೧೦ನೇ ನವ್ಹಂಬರ ೧೯೨೦ರಂದು ಆಗಮಿಸಿ ವಿಶ್ರಾಂತಿಗ್ರಹದಲ್ಲಿ ತಂಗಿದ್ದರು. ಮರುದಿನ ಧಾರವಾಡದಿಂದ ಹುಬ್ಬಳ್ಳಿಗೆ ೧೧ನೇ ನವ್ಹಂಬರ ೧೯೨೦ರಂದು ಪ್ರವಾಸಕೈಕೊಂಡರು.

ಧಾರವಾಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ೧೧ನೇ ನವ್ಹಂಬರ ೧೯೨೦ರಂದು ಶ್ರೀ ಸಿದ್ಧಾರೂಡ ಸ್ವಾಮೀಜಿಗೆ ಖಾದಿ ತೊಡಿಸಿದ ಗಾಂಧೀಜಿ :

 ಧಾರವಾಡ ಜಿಲ್ಲೆಯಲ್ಲಿ ಗಾಂಧೀಜಿ ಹೆಜ್ಜೆಗುರುತು,  ೧೯೨೦ರಲ್ಲಿ ಶ್ರೀ ಸಿದ್ಧಾರೂಢ ಸ್ವಾಮೀಜಿಗೆಖಾದಿ ತೊಡಿಸಿದ ಬಾಪೂಜಿ. ಸದಾ ಕಡಿಮೆ ಬಟ್ಟೆ ತೊಟ್ಟು ಬದುಕಿ ಬಾಳಿದ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರಿಗೆ ಮಹಾತ್ಮಾ ಗಾಂಧೀಜಿ ತಮ್ಮ ಪ್ರೀತಿಯ ಖಾದಿ ತೊಡಿಸುವ ಮೂಲಕ ಗೌರವ ಸಲ್ಲಿಸಿದರಲ್ಲದೇ ಆ ಎರಡು ಅಪ್ರತಿಮ ಮೇರು ವ್ಯಕ್ತಿತ್ವಗಳು ಒಂದಾದ ಕ್ಷಣವನ್ನು ಕಣ್ತುಂಬಿಕೊಳ್ಳುವ ಭಾಗ್ಯ ಹಲವಾರು ಹುಬ್ಬಳ್ಳಿಗರಿಗೆ ಒಲಿದು ಬಂದಿತ್ತು. ೧೯೨೦ ರಲ್ಲಿ ಹುಬ್ಬಳ್ಳಿಗೆ ಮಹಾತ್ಮಾ ಗಾಂಧೀಜಿ ಆಗಮಿಸಿದಾಗ ಕಾಂಗ್ರೆಸ್ ಸಭೆಗೆ ಅಧ್ಯಕ್ಷರನ್ನಾಗಿ ಯಾರನ್ನು ನೇಮಿಸಬೇಕು ಎಂದು ಇಡೀ ಊರಿನಲ್ಲಿ ಚರ್ಚೆ ನಡೆಯಿತು. ಆಗ ಎಲ್ಲರೂ ಶ್ರೀ ಸಿದ್ಧಾರೂಢ ಸ್ವಾಮೀಜಿ ಅವರೇ ಇದಕ್ಕೆ ಅರ್ಹ ಸೂಕ್ತ ವ್ಯಕ್ತಿ ಎಂದು ಹಲವರು ಸಲಹೆ ನೀಡಿದರು. ಆಗ ಹೆಚ್ಚಿನವರು ಈ ಮಾತನ್ನು ಒಪ್ಪಿಕೊಂಡು ಶ್ರೀ ಸಿದ್ಧಾರೂಢರ ಬಳಿ ಹೋಗಿ ಅವರನ್ನು ಒಪ್ಪಿಸಿದರು.

ಆಗ ಸಭೆಯ ದಿನ ಹುಬ್ಬಳ್ಳಿಗೆ ಆಗಮಿಸಿದ ಮಹಾತ್ಮಾ ಗಾಂಧೀಜಿ ಅವರು ಶ್ರೀ ಸಿದ್ಧಾರೂಢ ಎಂದರೆ ಯಾರು? ಅವರನ್ನು ನಾನು ನೋಡಬೇಕು ಎಂದರು. ಮಠಕ್ಕೆ ಬಂದಾಗ ನೂರಾರು ಭಕ್ತರೊಂದಿಗೆ ಅರೆಬೆತ್ತಲೆಯಾಗಿ ಮಠದ ಊಟದ ಹಾಲಿನಲ್ಲಿ ಪ್ರಸಾದ ಸ್ವೀಕರಿಸುತ್ತಿದ್ದ ಶ್ರೀ ಸಿದ್ಧಾರೂಢರನ್ನು ‘ಇವರೇ ಸಿದ್ಧಾರೂಢರು’ ಎಂದು ಗಾಂಧೀಜಿ ಅವರಿಗೆ ಜನರು ಪರಿಚಯಿಸಿದರು. ಶ್ರೀ ಸಿದ್ಧಾರೂಢರೊಂದಿಗೆ ಮಾತುಕತೆ ನಡೆಸಿದ ಗಾಂಧೀಜಿ ಹೆಚ್ಚು ಕಡಿಮೆ ತಮ್ಮದೇ ಜೀವನ ಶೈಲಿಯನ್ನು ಅಳವಡಿಸಿಕೊಂಡಿದ್ದ ಸಿದ್ಧಾರೂಢರನ್ನು ಭೇಟಿ ಮಾಡಿದ್ದಕ್ಕೆ ತುಂಬಾ ಸಂತಸಗೊಂಡಿದ್ದರು. ಆದರೆ ಗಾಂಧೀಜಿ ಅವರಿಗೆ ಒಂದು ಸಮಸ್ಯೆ ಎದುರಾಗಿತ್ತು. ಸದಾ ಅರೆಬೆತ್ತಲೆಯಾಗಿರುವ ಇಂತಹ ದೊಡ್ಡ ವ್ಯಕ್ತಿಗೆ ಖಾದಿ ತೊಡಿಸುವುದು ಹೇಗೆ? ಎಂದು ಪ್ರಶ್ನಿಸಿದರು. ಆಗ ಶ್ರೀ ಸಿದ್ಧಾರೂಢರ ಬಳಿ ಜನರು ಹೋಗಿ ಈ ಸಮಸ್ಯೆ ಹೇಳಿಕೊಂಡಾಗ ನಾನು ಗಾಂಧೀಯಂತಹ ವ್ಯಕ್ತಿಗಾಗಿ ಖಾದಿ ತೊಡುವುದಷ್ಟೇಅಲ್ಲ, ದೇಶಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧನಿದ್ದೇನೆ. ನಾನು ಸನ್ಯಾಸಿಯಾದ ಮಾತ್ರಕ್ಕೆ ನನಗೆ ದೇಶ ಬೇಡವೇ? ಎಂದು ಪ್ರಶ್ನಿಸಿದ್ದರು.

ಅಂತಿಮವಾಗಿ ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯಲ್ಲಿರುವ ಸಂಯುಕ್ತ ಕರ್ನಾಟಕ ಪತ್ರಿಕೆ ಕಚೇರಿಯ ಆವರಣದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಭಾಗವಹಿಸಿದ್ದ ಶ್ರೀ ಸಿದ್ಧಾರೂಢರು ದೇಶಕ್ಕಾಗಿ ಗಾಂಧೀಜಿಯಂತಹ ಶ್ರೇಷ್ಠ ವ್ಯಕ್ತಿಯೊಂದಿಗೆ ಎಲ್ಲರೂ ಹೆಜ್ಜೆ ಹಾಕಬೇಕು ಎಂದು ಕರೆಕೊಟ್ಟಿದ್ದರು. ಈ ಎಲ್ಲ ಮಾಹಿತಿಯನ್ನು ಶ್ರೀ ಸಿದ್ಧಾರೂಢ ಮಠದ ಆಡಳಿತ ಮಂಡಳ ಸಂಗ್ರಹಿಸಿಟ್ಟುಕೊಂಡಿದೆ.

            ಧಾರವಾಡದಿಂದ ೧೧ನೇ ನವ್ಹಂಬರ ೧೯೨೦ರಂದು ಹುಬ್ಬಳ್ಳಿ ಗದಗಗೆ ಆಗಮಿಸಿದರು.  ಈ ಎರಡು ಊರುಗಳಲ್ಲಿ ೧೨ ಸಾವಿರ ರೂಪಾಯಿ ಕೂಡಿತು. ಗದಗಿನಿಂದ ಬಾಗಲಕೋಟೆಗೆ ಮತ್ತು ಬಿಜಾಪುರಕ್ಕೆ ಹೋಗುವ ಕಾರ್ಯಕ್ರಮವಿತ್ತು. ಆದರೆ ದೇವಲ್ಸ್ ಸರ್ಕಸ್‌ನ ಮಾಜಿ ವ್ಯವಸ್ಥಾಪಕರಾದ ರಾಮಭಾವು ಪಟವರ್ಧನ ಎಂಬುವರು ಗಾಂಧೀಜಿಯವರನ್ನು ಕಂಡು “ಸಾಂಗ್ಲಿಯ ಜನ ಲೋಕಮಾನ್ಯರ ಸ್ಮಾರಕಕ್ಕೆ ಒಂದು ಲಕ್ಷ ರೂಪಾಯಿ ಕೂಡಿಸಿದ್ದಾರೆ” ಎಂದು ಹೇಳಿ ಗಾಂಧಿಯವರನ್ನು ೧೨ನವ್ಹಂಬರ ೧೯೨೦ರಂದು ಸಾಂಗ್ಲಿಗೆ ಕರೆದೊಯ್ದರು. ನಿಪ್ಪಾಣಿ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಗದಗಗಳ ಪ್ರವಾಸದ ಒಂದು ಮಹತ್ವದ ಘಟನೆ ಎಂದರೆ ಎರಡು-ಮೂರು ರಾಷ್ಟಿçÃಯ ಶಾಲೆ ಮತ್ತು ಖಾದಿ ಅಂಗಡಿಗಳ ಪ್ರಾರಂಭ.

            ಆ ಕಾಲದಲ್ಲಿ ಸುಮಾರಾಗಿ ೧೯೧೮-೧೯೧೯ ರ ಕಾಲದಲ್ಲಿ ಕರ್ನಾಟಕವೂ ಸೇರಿದಂತೆ ಇಡೀ ಭಾರತವನ್ನೂ ಜಾಗತೀಕವಾಗಿ ಹಬ್ಬಿದ ‘ಸ್ಪಾನಿಶ್ ಪ್ಲೂ’ ಎಂಬ ಸಾಂಕ್ರಾಮಿಕ ಮಹಾ ಮಾರಿಯಿಂದ ನರಳಿತ್ತು. ಹಾಗೆಯೇ ಬ್ರಿಟಿಷರ ಸರಕಾರದ ಸಾಮ್ರಾಜ್ಯ ವಿಸ್ತರಣವಾದ ಹಾಗೂ ದುರಾಡಳಿತದಿಂದ ದೇಶದ ಸಂಪತ್ತೆಲ್ಲಾ ಬರಡಾಗುವುದರ ಜೊತೆಗೆ ಸ್ಥಳೀಯ ಕರಕುಶಲತೆಗಳೂ, ಗ್ರಾಮೀಣ ಗುಡಿ ಕೈಗಾರಿಕೆಗಳೂ ಅವನತಿಯ ಹಂತವನ್ನು ತಲುಪಿತ್ತು. ಇಂತಹ ಅತ್ಯಂತ ಜಟಿಲವಾದ ಪರಿಸ್ಥಿತಿಯಲ್ಲಿ ಗಾಂಧೀಜಿ ತಮ್ಮ ನೇತೃತ್ವದ ಮೂಲಕ ನವ ಚೈತನ್ಯದ ಬೆಳಕನ್ನು ನೀಡಿದ್ದರು. ಸರ್ವಧರ್ಮ ಸಮಭಾವ, ಐಕ್ಯತೆ, ಸೋದರತೆ, ಸ್ವದೇಶಿ ಹಾಗೂ ಸತ್ಯಾಗ್ರಹದ ಅರಿವನ್ನು ನೀಡಿ ಗಾಂಧೀಜಿ ಜನರಲ್ಲಿ ಆತ್ಮವಿಶ್ವಾಸವನ್ನು ಮುಡಿಸಿದ್ದರು. ಇದರಿಂದಾಗಿಯೇ ಗಾಂಧೀಯುಗದ ಮಹಾ ಚಳುವಳಿಯಾಗಿ ಅಸಹಕಾರದ ಆಂದೋಲನವು ಗಾಢವಾದ ಪರಿಣಾಮಗಳನ್ನುಂಟು ಮಾಡಿತು.

            ಈಗ ಅದೇ ಗಾಂಧೀಜಿ ಅಸಹಕಾರ ಆಂದೋಲನದ (೧೯೨೦ರಿಂದ೨೦೨೦ಕ್ಕೆ) ಶತಮಾನದ ನೆನಪಿನಲ್ಲಿ ನಾವಿದ್ದೇವೆ. ಈಗ ಭಾರತವನ್ನು ಹಾಗೂ ಮಾನವತೆಯನ್ನು ಕೋವಿಡ್-೧೯  ಎಂಬ ಮಹಾಮಾರಿಯು ವಿಶ್ವವ್ಯಾಪಿ ಕಾಡುತ್ತಾ ಇದೆ. ಭಾರತ ಗಡಿಯಲ್ಲಿ ಚೀನಾದ ವಿಸ್ತರಣಾವಾದಿ ಯುದ್ದೋನ್ಮಾದವು ನಡೆದಿದೆ. ಇದಲ್ಲದೆಯೇ ಚೀನಾದೇಶದ ವಸ್ತುಗಳು, ತಂತ್ರಾAಶಗಳು ಹಾಗೂ ಉಧ್ಯಮಗಳು ನಮ್ಮ ದೇಶದಲ್ಲಿರುವ ಅವಕಾಶಗಳನ್ನೂ, ಆರ್ಥಿಕತೆಯನ್ನೂ ಕಬಳಿಸುವ ಹಂತದಲ್ಲಿವೆ. ಈ ಎಲ್ಲಾ ಸಂದಿಗ್ಧತೆಗಳ  ಸಂದರ್ಭದಲ್ಲಿ ನಮಗೆ ಗಾಂಧೀಜಿ ತೋರಿಸಿ ಕೊಟ್ಟಿರುವ ಅಭಯ ಪ್ರಜ್ಞೆಯ ಸಹಿತವಾದ ಮಾನವೀಯತೆ, ಸತ್ಯಾಗ್ರಹ, ಸ್ವದೇಶಿ, ಸ್ವಸಹಾಯ, ಸ್ವಾವಲಂಭನೆ, ಸಮಭಾವ, ನೈರ್ಮಲ್ಯ, ಆರೋಗ್ಯಮಯ ಜೀವನ ಹಾಗೂ ಸರ್ವೋದಯಗಳ ಕಾಯಕದ ಮಾರ್ಗ, ಶ್ರಮ, ಸಂಸ್ಕೃತಿಯ ಮೌಲ್ಯವನ್ನು ಉದ್ದೀಪನಗೊಳಿಸಿದ್ದರು. ಇವು ನಮಗೆಲ್ಲಾ ದಾರಿದೀಪವಾಗಬೇಕು. “ಮುಂಬರುವ ತಲೆಮಾರುಗಳ ಜನ, ರಕ್ತ, ಮಾಂಸಗಳಿಂದಾದ ಇಂತಹ ವ್ಯಕ್ತಿಯೊಬ್ಬ ಈ ಭೂಮಿಯ ಮೇಲೆ ನಡೆದಾಡಿದ್ದನೆಂಬುದನ್ನು ಬಹುಶಃ ನಂಬಲಾರರು” ಎಂದು ಖ್ಯಾತ ವಿಜ್ಞಾನಿ ಅಲ್ಬರ್ಟ ಐನ್‌ಸ್ಟೀನ್ ಮಹಾತ್ಮಾ ಗಾಂಧೀಯವರನ್ನು ಕುರಿತು ಹೇಳಿದ್ದರು. ‘ my life is my message”’ ಎಂಬ ಮಾತನ್ನು ಸ್ವತಃ ಗಾಂಧೀಜಿ ಹೇಳಿದ್ದರು. ‘ನನ್ನ ಬದುಕೇ ನನ್ನ ಸಂದೇಶ’ ವೆಂದು ಪ್ರಾಯಶಃ ಗಾಂಧೀಜಿಯವರ ಸಮಕಾಲೀನರಿಗಾರಿಗೂ ಹೇಳಲು ಸಾಧ್ಯವಾಗುತ್ತಿರಲಿಲ್ಲ. ಅಂಥ ಬದುಕನ್ನು ಬದುಕಿದವರು ಗಾಂಧೀಜಿ. ಭಯೋತ್ಪಾದನೆ, ಯುದ್ಧದ ಕಾರ್ಮೋಡಗಳು ಕವಿಯುತ್ತಿರುವ ಇಂದಿನ ಸಂದರ್ಭದಲ್ಲಿ ಗಾಂಧೀ ಚಿಂತನೆಯ ಪ್ರಸ್ತುತತೆ ಮತ್ತೊಮ್ಮೆ ಮುನ್ನೆಲೆಗೆ ಬರುತ್ತಿದೆ.

*********************

Leave a Reply

Back To Top